Advertisement
ಸತತ ಹಿನ್ನಡೆಯಿಂದ ಮಂಡಿಯೂರಿರುವ ಪಾಕಿಸ್ಥಾನ ಭಾರತ ದೊಂದಿಗೆ ಯುದ್ಧದ ಪ್ರಶ್ನೆಯೇ ಇಲ್ಲ ಎಂದು ಈಗ ಸ್ಪಷ್ಟಪಡಿಸಿದೆ. ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರೇ ಈ ಸ್ಪಷ್ಟನೆ ನೀಡಿದ್ದು, “ನಾವು ಯಾವತ್ತೂ ಯುದ್ಧ ಆರಂಭಿಸುವುದಿಲ್ಲ. ಭಾರತ ಮತ್ತು ಪಾಕಿಸ್ಥಾನ ಎರಡೂ ದೇಶಗಳು ಅಣ್ವಸ್ತ್ರಗಳನ್ನು ಹೊಂದಿವೆ. ಹಾಗಾಗಿ ಈ ದೇಶಗಳ ನಡುವೆ ಪ್ರಕ್ಷುಬ್ಧ ಸ್ಥಿತಿ ನಿರ್ಮಾಣವಾದರೆ ಇಡೀ ಜಗತ್ತಿಗೆ ಅಪಾಯ. ಒಟ್ಟಿನಲ್ಲಿ ಯಾವುದೇ ಸಮಸ್ಯೆಗೂ ಯುದ್ಧ ಪರಿಹಾರವಲ್ಲ. ಯುದ್ಧದಲ್ಲಿ ಗೆದ್ದವರು ಕೂಡ ಸೋತಂತೆಯೇ. ಏಕೆಂದರೆ, ಗೆಲ್ಲುವವರೂ ಸಾಕಷ್ಟು ನಷ್ಟ ಅನುಭವಿಸುತ್ತಾರೆ. ಅಲ್ಲದೆ, ಯುದ್ಧ ಇನ್ನಷ್ಟು ಸಮಸ್ಯೆಗಳಿಗೆ ಜನ್ಮ ನೀಡುತ್ತದೆ’ ಎಂದಿದ್ದಾರೆ.
Related Articles
Advertisement
ಸಂವಹನ ನಿರ್ಬಂಧ ಶೀಘ್ರ ತೆರವು: ಇನ್ನೊಂದೆಡೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಹೇರಲಾಗಿರುವ ಸಂವಹನ ನಿರ್ಬಂಧವನ್ನು 15 ದಿನಗಳಲ್ಲಿ ತೆರವು ಮಾಡುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೇಳಿದ್ದಾರೆ.ಮಂಗಳವಾರ ಕಾಶ್ಮೀರದ ಮೂರು ಪ್ರತ್ಯೇಕ ನಿಯೋಗಗಳ ಜತೆ ಮಾತನಾಡಿದ ಶಾ ಈ ಭರವಸೆ ನೀಡಿದ್ದಾರೆ. ಇದೇ ವೇಳೆ, ಕಣಿವೆ ರಾಜ್ಯದಲ್ಲಿ ಉಗ್ರರಿಂದ ಬೆದರಿಕೆ ಎದುರಿ ಸುತ್ತಿರುವ ಎಲ್ಲ ಪಂಚಾಯತ್ ಸದಸ್ಯರು ಹಾಗೂ ಸರಪಂಚ (ಗ್ರಾಮದ ಮುಖ್ಯಸ್ಥ)ರಿಗೆ ಪೊಲೀಸ್ ಭದ್ರತೆ ಹಾಗೂ ತಲಾ 2 ಲಕ್ಷ ರೂ.ಗಳ ವಿಮೆ ಒದಗಿಸುವುದಾಗಿ ಅಮಿತ್ ಶಾ ಘೋಷಿಸಿದ್ದಾರೆ. ಪಾಕ್‌ಗೆ ವಿಶ್ವಸಂಸ್ಥೆ ತರಾಟೆ
ಪಾಕಿಸ್ಥಾನವು ಕಣಿವೆ ರಾಜ್ಯದ ಮಾನವ ಹಕ್ಕುಗಳ ಬಗ್ಗೆ ಮಾತನಾಡುತ್ತಿದ್ದರೆ, ಅತ್ತ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನರ್ ಕಾರ್ಯಾಲಯ (ಒಎಚ್‌ಸಿಎಚ್‌ಆರ್)ವು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆ ಸಂಬಂಧ ಪಾಕಿಸ್ಥಾನವನ್ನು ತರಾಟೆಗೆ ತೆಗೆದುಕೊಂಡಿದೆ. ಪಿಒಕೆಯಲ್ಲಿ ನಡೆಯುತ್ತಿರುವ ದೌರ್ಜನ್ಯಗಳು ಗಂಭೀರ ಸ್ವರೂಪದ್ದಾಗಿದ್ದು, ಅನೇಕ ನಾಗರಿಕರು ನಿಗೂಢವಾಗಿ ನಾಪತ್ತೆಯಾಗಿದ್ದಾರೆ, ಕೈದಿಗಳನ್ನು ರಹಸ್ಯ ಪ್ರದೇಶದಲ್ಲಿ ಕೂಡಿಹಾಕಲಾಗಿದೆ ಎಂದೂ ಒಎಚ್‌ಸಿಎಚ್‌ಆರ್ ವರದಿ ತಿಳಿಸಿದೆ. ಜತೆಗೆ, ಕೂಡಲೇ ಪಾಕ್ ಸರಕಾರವು ಇಂಥ ದೌರ್ಜನ್ಯ ತಡೆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದೂ ಹೇಳಿದೆ. ಕಾಶ್ಮೀರ ನರಮೇಧ ಸಾಬೀತುಪಡಿಸುವುದು ಕಷ್ಟ
ಜಮ್ಮು-ಕಾಶ್ಮೀರದಲ್ಲಿ ನಾಗರಿಕರ ನರಮೇಧ ನಡೆಯುತ್ತಿದೆ ಎಂಬ ಪಾಕಿಸ್ಥಾನದ ಆರೋಪಕ್ಕೆ ಸೂಕ್ತ ಸಾಕ್ಷ್ಯಾಧಾರಗಳೇ ಇಲ್ಲದಿರುವ ಕಾರಣ, ಆರೋಪ ಸಾಬೀತುಪಡಿಸುವುದು ಕಷ್ಟ ಎಂದು ಅಂತಾರಾಷ್ಟ್ರೀಯ ನ್ಯಾಯಾಲಯ(ಐಸಿಜೆ)ದಲ್ಲಿನ ಪಾಕಿಸ್ಥಾನದ ನ್ಯಾಯವಾದಿ ಖವಾರ್ ಖುರೇಷಿ ಹೇಳಿದ್ದಾರೆ. ಖುರೇಷಿ ಅವರೇ ಬಹಿರಂಗವಾಗಿ ಈ ರೀತಿ ಹೇಳಿಕೆ ನೀಡಿರುವುದು ಪಾಕಿಸ್ಥಾನಕ್ಕೆ ಇರುಸುಮುರುಸು ಉಂಟುಮಾಡಿದೆ. ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿರುವ ಖವಾರ್ ಖುರೇಷಿ, “ಪಾಕ್ ಬಳಿ ಸರಿಯಾದ ಸಾಕ್ಷ್ಯಗಳೇ ಇಲ್ಲದಿರುವಾಗ, ಈ ಪ್ರಕರಣವನ್ನು ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ಒಯ್ಯುವುದರಿಂದ ಯಾವುದೇ ಲಾಭವಾಗದು’ ಎಂದಿದ್ದಾರೆ.