Advertisement

ಪ್ರತಿಷ್ಠೆಯ ಪ್ರಶ್ನೆಯೇ ಇಲ್ಲ; ಮುಕ್ತ ಚರ್ಚೆಗೆ ಸಿದ್ಧ: ಸಚಿವ ತೋಮರ್

01:13 AM Dec 11, 2020 | mahesh |

ಹೊಸದಿಲ್ಲಿ: “ಸರಕಾರ ಪ್ರತಿಷ್ಠೆ ಸಾಧಿಸುತ್ತಿಲ್ಲ. ಕೃಷಿ ಕಾಯ್ದೆಗಳ ಬಗ್ಗೆ ಏನೇ ಆತಂಕಗಳಿದ್ದರೂ, ಅದನ್ನು ಯಾವುದೇ ವೇದಿಕೆಯಲ್ಲಿ ಮುಕ್ತವಾಗಿ ಚರ್ಚಿಸಲು ನಾವು ಸಿದ್ಧ’!

Advertisement

“ತಿದ್ದುಪಡಿ ಬೇಡ, ಕಾಯ್ದೆ ಸಂಪೂರ್ಣ ರದ್ದು ಮಾಡಿ’ ಎಂದು ಹಠಕ್ಕೆ ಬಿದ್ದು, 15ನೇ ದಿನವೂ “ದಿಲ್ಲಿ ಚಲೋ’ ಕಾವು ಹಬ್ಬಿಸಿರುವ ರೈತ ಸಂಘಟನೆಗಳಿಗೆ ಕೇಂದ್ರ ಸರಕಾರ ಹೀಗೆ ಸ್ಪಷ್ಟನೆ ನೀಡಿದೆ. ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌, ಆಹಾರ- ನಾಗರಿಕ ಪೂರೈಕೆ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪಿಯೂಷ್‌ ಗೋಯಲ್‌ ಜಂಟಿಯಾಗಿ ಗುರುವಾರ ರೈತರ ಮನವೊಲಿಸಲು ಮುಂದಾಗಿದ್ದರು.

ಎಲ್ಲ ಬಿಡಿಸಿ ಹೇಳ್ತೀವಿ: ಸರಕಾರ ಕಾಯ್ದೆಗಳ ಬಗ್ಗೆ ಪ್ರತಿಷ್ಠೆ ತೋರುತ್ತಿಲ್ಲ. ನೂತನ ಕಾಯ್ದೆಗಳಲ್ಲಿ ರೈತರಿಗೆ ಸಮಾಧಾನ ನೀಡುವಂಥ ಪ್ರತಿ ಅಂಶಗಳನ್ನೂ ಬಿಡಿಸಿ ಹೇಳಲು ನಾವು ಸಿದ್ಧ. ಆದರೆ, ಮಾತುಕತೆ ಚಾಲ್ತಿಯಲ್ಲಿರುವಾಗ ಪ್ರತಿಭಟನೆ ಹೆಚ್ಚಿಸುವ ನಿರ್ಧಾರವೇಕೆ ಕೈಗೊಳ್ಳುತ್ತೀರಿ? ಎಂದು ಕೃಷಿ ಸಚಿವ ನರೇಂದ್ರ ಸಿಂಗ್‌, ಸುದ್ದಿಗೋಷ್ಠಿಯಲ್ಲಿ ರೈತ ಸಂಘಟನೆಗಳನ್ನು ಪ್ರಶ್ನಿಸಿದ್ದಾರೆ. ಆಶ್ಚರ್ಯವಾಯಿತು! “ಯಾವುದೇ ಕಾಯ್ದೆ ಸಂಪೂರ್ಣ ದೋಷಯುಕ್ತ ಆಗಿರುವುದಿಲ್ಲ. ರೈತ ಒಕ್ಕೂಟಗಳು ಪ್ರತಿಭಟನೆ ಹೆಚ್ಚಿಸುವ ಕರೆ ನೀಡಿದ್ದನ್ನು ಕೇಳಿ ಆಶ್ಚರ್ಯಪಟ್ಟೆ. ಅವರು ಆಂದೋಲನ ಹೆಚ್ಚಿಸಬಹುದು; ಆದರೆ, ಅದು ಮಾತುಕತೆ ಮುರಿದುಬಿದ್ದಾಗ ಮಾತ್ರ’ ಎಂದು ತಿಳಿ ಹೇಳಿದ್ದಾರೆ.

ಪಿಯೂಷ್‌ ಏನೆಂದರು: “ರೈತರಿಗೆ ಆತಂಕ ಹುಟ್ಟಿಸಿ ರುವ ಅಂಶಗಳನ್ನು ತಿಳಿಸಲು ಹೇಳಿದ್ದೇವೆ. ಆದರೆ, ಇದುವರೆಗೂ ಅವರು ನಿರ್ದಿಷ್ಟ ಆತಂಕಗಳನ್ನು ನಮ್ಮ ಮುಂದೆ ಇಟ್ಟಿಲ್ಲ. ಸಭೆ ಮಾತುಕತೆಯಲ್ಲಿನ ಅಂಶ ಆಧರಿಸಿ, ನಾವೇ ಲಿಖೀತ ಪ್ರಸ್ತಾವ‌ಗಳನ್ನು ಮುಂದಿಟ್ಟಿದ್ದೇವೆ’ ಎಂದು ಸಚಿವ ಪಿಯೂಷ್‌ ಗೋಯಲ್‌ ತಿಳಿಸಿದ್ದಾರೆ. “ಬೆಳೆಗಳನ್ನು ಬಲವಂತವಾಗಿ ಖಾಸಗಿ ಸಂಸ್ಥೆಗಳಿಗೆ ಮಾರಾಟ ಮಾಡಲು ಕಾಯ್ದೆ ಪ್ರೇರೇಪಿಸುತ್ತದೆ ಎಂಬುದು ಶುದ್ಧ ಸುಳ್ಳು. ಕಾಯ್ದೆಯಲ್ಲಿ ಅಂಥ ಯಾವುದೇ ಅಂಶಗಳಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

ಭಾರತ- ಪಾಕ್‌ ವಿವಾದ: ಬ್ರಿಟನ್‌
ಪ್ರಧಾನಿ ಗೊಂದಲ ಭಾರತದಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆ, ಭಾರತ- ಪಾಕ್‌ ವಿವಾದವೆಂದು ಬ್ರಿಟಿಷ್‌ ಪ್ರಧಾನಿ ಬೊರಿಸ್‌ ಜಾನ್ಸನ್‌ ತಪ್ಪಾಗಿ ಅರ್ಥೈಸಿದ್ದಾರೆ. “ದಿಲ್ಲಿ ಚಲೋ’ ಬಗ್ಗೆ ಇಂಗ್ಲೆಂಡಿನ ನಿಲುವೇನು ಎಂಬ ಸಿಕ್ಖ್ ಸಂಸದನ ಪ್ರಶ್ನೆಗೆ, “ಭಾರತ- ಪಾಕ್‌ ಮಧ್ಯೆ ನಡೆಯುತ್ತಿರುವ ಬೆಳವಣಿಗೆಗೆ ನಾವೂ ಕಳವಳ ಹೊಂದಿದ್ದೇವೆ. ಈ ವಿವಾದವನ್ನು ಅವೆರಡೂ ರಾಷ್ಟ್ರಗಳೇ ಬಗೆಹರಿ ಸಿಕೊಳ್ಳುತ್ತವೆ’ ಎಂದು ಗೊಂದ ಲದ ಹೇಳಿಕೆ ನೀಡಿದ್ದಾರೆ.

Advertisement

ಚಲೋ ಕ್ವಿಕ್‌ ಲುಕ್‌
“ದಿಲ್ಲಿ ಚಲೋ ಹಿಂದೆ ಪಾಕ್‌- ಚೀನ ಕೈವಾಡವಿದೆ’ ಎಂದಿರುವ ಕೇಂದ್ರ ಸಚಿವ ರಾವೋಸಾಹೇಬ್‌ ದಾನ್ವೆ ಅವರನ್ನು ಸಂಪುಟದಿಂದ ವಜಾಗೊಳಿಸಲು ಶಿವಸೇನೆಯ ಸಂಜಯ್‌ ರಾವತ್‌ ಒತ್ತಾಯಿಸಿದ್ದಾರೆ.
ದಿಲ್ಲಿ- ನೋಯ್ಡಾ ಸಂಪರ್ಕಿಸುವ ಪ್ರಮುಖ ರಸ್ತೆ ಗುರುವಾರ ಭಾಗಶಃ ಸಂಚಾರಕ್ಕೆ ಮುಕ್ತವಾಗಿತ್ತು.
ಸಿಂಘು ಗಡಿಯಲ್ಲಿ ಕ್ರೀಡಾಪಟುಗಳ ಗುಂಪೊಂದು, ಪ್ರತಿಭಟನನಿರತ ರೈತರ ಬಟ್ಟೆಗಳನ್ನು ಶುಚಿಗೊಳಿಸಿ, ಲಾಂಡ್ರಿ ಸೇವೆ ಕಲ್ಪಿಸಿತು.
ಬೇಡಿಕೆ ಈಡೇರದಿದ್ದರೆ ರಾಜಧಾನಿ ರೈಲ್ವೇ ಮಾರ್ಗಗಳನ್ನೂ ಬಂದ್‌ ಮಾಡುವುದಾಗಿ ರೈತ ಮುಖಂಡ ಬೂಟಾ ಸಿಂಗ್‌ ಎಚ್ಚರಿಸಿದ್ದಾರೆ.
ಸಿಂಘು ಗಡಿಯಲ್ಲಿ ಪ್ರತಿಭಟನಕಾರರಿಗೆ ಕೊರೊನಾ ಟೆಸ್ಟ್‌ ಆಯೋಜಿಸಿದ ದಿಲ್ಲಿ ಪೊಲೀಸ್‌. ಉಚಿತ ಮಾಸ್ಕ್ ಪೂರೈಕೆ.
ಕಾಯ್ದೆ ಕುರಿತು ಸುಳ್ಳು, ದಾರಿ ತಪ್ಪಿಸುವ ವದಂತಿಗಳಿಗೆ ಬಲಿ ಆಗಬಾರದೆಂದು ಸಚಿವ ಪ್ರಕಾಶ್‌ ಜಾಬ್ಡೇಕರ್‌ ಆಗ್ರ ಹಿ ಸಿದ್ದಾರೆ.
ಕೌಶಂಬಿ- ದಿಲ್ಲಿ ಮಾರ್ಗವನ್ನು ರೈತ ಪ್ರತಿಭಟನಕಾರರು ತಡೆದ ಪರಿಣಾಮ ಹಲವು ತಾಸು ಟ್ರಾಫಿಕ್‌ ಜಾಮ್‌ ಸೃಷ್ಟಿಯಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next