Advertisement

ದಸರಾ ಕ್ರೀಡಾಕೂಟಕ್ಕೆ ಪ್ರಚಾರವಿಲ್ಲ, ಕ್ರೀಡಾಪಟುಗಳಿಗೆ ಊಟವೂ ಇಲ್ಲ!

09:39 PM Sep 16, 2019 | Team Udayavani |

ಪಿರಿಯಾಪಟ್ಟಣ: ಪಟ್ಟಣದಲ್ಲಿ ಆಯೋಜಿಸಿದ್ದ ದಸರಾ ಕ್ರೀಡಾಕೂಟ ಅವ್ಯವಸ್ಥೆಯ ಆಗರವಾಗಿತ್ತು. ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡದ್ದಕ್ಕೆ ಕ್ರೀಡಾಪಟುಗಳು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ತಾಲೂಕಿನಾದ್ಯಂತ ಸೂಕ್ತ ಪ್ರಚಾರ ಕೈಗೊಳ್ಳದ ಕಾರಣ ಗ್ರಾಮೀಣ ಕ್ರೀಡಾಪಟುಗಳ ಕೊರತೆ ಎದ್ದು ಕಾಣುತಿತ್ತು. ಬೆರಳಣಿಕೆಯಷ್ಟು ಮಂದಿ ಭಾಗವಹಿಸಿದ್ದರು.

Advertisement

ಇದನ್ನು ಕಂಡು ಸ್ವತಃ ಶಾಸಕ ಕೆ.ಮಹದೇವ್‌ ಅಸಮಾಧಾನ ವ್ಯಕ್ತಪಡಿಸಿ, ಮುಂದಿನ ದಿನಗಳಲ್ಲಿ ತಾಲೂಕಿನಾದ್ಯಂತ ಹೆಚ್ಚು ಪ್ರಚಾರ ನೀಡಿ ಗ್ರಾಮಾಂತರ ಪ್ರದೇಶದ ಪ್ರತಿಭೆಗಳು ಸಹ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸುವಂತೆ ಆಯೋಜಕರಿಗೆ ತಾಕೀತು ಮಾಡಿದರು.

ಊಟವಿಲ್ಲ: ಇನ್ನು ಕ್ರೀಡಾಕೂಟದಲ್ಲಿ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡದ ಆಯೋಜಕರ ವಿರುದ್ಧ ಕ್ರೀಡಾಪಟುಗಳು ಅಸಮಾಧಾನ ವ್ಯಕ್ತಪಡಿಸಿ ಪ್ರತಿಭಟನೆಗೆ ಮುಂದಾಗಿ ಆಯೋಜಕರು ಹಾಗೂ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ವಿಷಯ ತಿಳಿದ ಸಮಗ್ರ ಸುಸ್ಥಿರ ಸಂಸ್ಥೆ ಅಧ್ಯಕ್ಷ, ಪರಿಸರ ಹೋರಾಟಗಾರ ಕೆ.ಎನ್‌.ಸೋಮಶೇಖರ್‌ ಸ್ಥಳಕ್ಕೆ ಭೇಟಿ ನೀಡಿ ಕ್ರೀಡಾಪಟುಗಳ ಮನವೊಲಿಸಿ ಆಟೋಟಗಳು ಮುಂದುವರಿಯುವಂತೆ ಮಾಡಿದರು.

ಈ ವೇಳೆ ಮಾತನಾಡಿದ‌ ಕೆ.ಎನ್‌. ಸೋಮಶೇಖರ್‌, ದಸರಾ ಕ್ರೀಡಾಕೂಟದ ಆಯೋಜಕರು ಕ್ರೀಡಾಕೂಟ ಆಯೋಜಿಸುವ ಮಾಹಿತಿಯನ್ನು ಮುಂಚಿತವಾಗಿಯೇ ತಾಲೂಕಿನಾದ್ಯಂತ ತಿಳಿಸುವ ನಿಟ್ಟಿನಲ್ಲಿ ಪ್ರಚಾರ ಕಾರ್ಯ ಕೈಗೊಳ್ಳಬೇಕು. ಯುವ ಪ್ರತಿಭೆಗಳಿಗೆ ಅವಕಾಶ ದೊರೆಯುವ ನಿಟ್ಟಿನಲ್ಲಿ ಪ್ರೋತ್ಸಾಹಿಸಬೇಕು. ಈ ನಿಟ್ಟಿನಲ್ಲಿ ಪ್ರತಿಭೆಗಳಿಗೆ ಅನ್ಯಾಯವಾದರೆ ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ಹೋರಾಟ ನಡೆಸಲಾಗುವುದು, ಮುಂದಿನ ದಿನಗಳಲ್ಲಾದರೂ ಕ್ರೀಡಾಕೂಟದ ಆಯೋಜಕರು ಪ್ರಚಾರ ಕಾರ್ಯ ಹಾಗೂ ಮೂಲಭೂತ ಸೌಕರ್ಯಗಳ ಕೊರತೆಗಳನ್ನು ನೀಗಿಸುವ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸಲಿ ಎಂದು ಆಗ್ರಹಿಸಿದರು.

ವೇದಿಕೆ ಕಾರ್ಯಕ್ರಮ: ಕ್ರೀಡಾಪಟುಗಳು ಸೋಲು ಗೆಲುವನ್ನು ಸಮಾನನಾಗಿ ಸ್ವೀಕರಿಸಿ ಕ್ರೀಡಾಸ್ಫೂರ್ತಿ ಮೆರೆಯಬೇಕು. ಸತತ ಅಭ್ಯಾಸದ ಮೂಲಕ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ತೋರಬೇಕು ಎಂದು ಶಾಸಕ ಕೆ.ಮಹದೇವ್‌ ಸಲಹೆ ನೀಡಿದರು. ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕ್ರೀಡಾ ಪ್ರಾಧಿಕಾರ ಹಾಗೂ ಸ್ವಾಮಿ ವಿವೇಕಾನಂದ ಯುವಕರ ಕ್ರೀಡಾ ಸಂಘ ನಿಲವಾಡಿ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ದಸರಾ ಕ್ರೀಡಾಕೂಟ-2019 ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಇದೇ ವೇಳೆ, ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಪ್ರಶಸ್ತಿ ಪತ್ರ ಹಾಗೂ ಬಹುಮಾನ ವಿತರಿಸಲಾಯಿತು. ವೇದಿಕೆಯಲ್ಲಿ ತಾಪಂ ಅಧ್ಯಕ್ಷೆ ಕೆ.ಆರ್‌ ನಿರೂಪ, ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಈರಯ್ಯ, ಎಂಡಿಸಿಸಿ ಬ್ಯಾಂಕ್‌ ನಿರ್ದೇಶಕ ಸಿ.ಎನ್‌ ರವಿ, ಕ್ಷೇತ್ರ ಶಿಕ್ಷಣಾಧಿಕಾರಿ ಚಿಕ್ಕಸ್ವಾಮಿ, ಎಸಿಡಿಪಿಒ ಶ್ವೇತಾ, ಅಕ್ಷರ ದಾಸೋಹ ನಿರ್ದೇಶಕ ವಿಜಯ್, ಮುಖಂಡರಾದ ರಘುನಾಥ್‌, ಪಿ.ಪಿ ಮಹದೇವ್‌, ಕ್ರೀಡಾಕೂಟ ಸಂಚಾಲಕ ಸುಂದರೇಶ್‌, ಸ್ವಾಮಿ ವಿವೇಕಾನಂದ ಯುವಕರ ಸಂಘದ ನಾಗರಾಜ್‌ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next