Advertisement

ಕಿದು ತೋಟದ ಬೆಳೆಗಳ ಸಂಶೋಧನ ಸಂಸ್ಥೆ ಸ್ಥಳಾಂತರ ಪ್ರಸ್ತಾವ ಇಲ್ಲ: ನಳಿನ್

12:35 PM Jul 23, 2018 | |

ಪುತ್ತೂರು: ತಾಲೂಕಿನ ಬಿಳಿನೆಲೆ ಗ್ರಾಮದ ಕಿದುವಿನಲ್ಲಿ ಕಾರ್ಯಾಚರಿಸುತ್ತಿರುವ ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆಯನ್ನು ಬೇರೆ ಕಡೆಗೆ ಸ್ಥಳಾಂತರಿಸುವ ಯಾವುದೇ ಪ್ರಸ್ತಾಪ ಕೇಂದ್ರ ಸರಕಾರದ ಮುಂದೆ ಇಲ್ಲ ಎನ್ನುವ ಕುರಿತು ಕೃಷಿ ಮಂತ್ರಾಲಯದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ತಿಳಿಸಿದ್ದಾರೆ. ಕೇಂದ್ರದ ಲೀಸ್‌ಗೆ ಸಂಬಂಧಪಟ್ಟ ಮುಂದುವರಿಕೆಯ ಪ್ರಸ್ತಾವನೆಯನ್ನು ಕರ್ನಾಟಕ ಸರಕಾರ ವಿಳಂಬವಾಗಿ ರವಾನಿಸಿದ ಪರಿಣಾಮ ಅರಣ್ಯ ಇಲಾಖೆಯ ಸ್ಥಳದಲ್ಲಿ ಈ ಕೇಂದ್ರವನ್ನು ಮುಂದುವರಿಸುವ ಲೀಸ್‌ ನವೀಕರಣಕ್ಕೆ ವಿಳಂಬವಾಗಿದೆ ಎಂದು ‘ಉದಯವಾಣಿ- ಸುದಿನ’ದ ಜತೆಗೆ ನಡೆಸಿದ ದೂರವಾಣಿ ಸಂಭಾಷಣೆಯಲ್ಲಿ ಅವರು ತಿಳಿಸಿದ್ದಾರೆ.

Advertisement

ಕೇಂದ್ರ ಮತ್ತು ಅರಣ್ಯ ಇಲಾಖೆಯ ನಡುವಣ ಲೀಸ್‌ ಒಪ್ಪಂದ ಮುಗಿದಿದೆ. ಅರಣ್ಯ ಇಲಾಖೆಯಿಂದ ಮತ್ತೆ ಲೀಸ್‌ ಮುಂದುವರಿಸುವ ಪ್ರಸ್ತಾವನೆ ಕೇಂದ್ರ ಸರಕಾರಕ್ಕೆ ರಾಜ್ಯ ಸರಕಾರದ ಮೂಲಕ ರವಾನೆಯಾಗಬೇಕು. ಈ ಪ್ರಸ್ತಾವನೆ ತಾಂತ್ರಿಕ ಕಾರಣಗಳಿಂದ ವಿಳಂಬವಾಗಿತ್ತು. ಪರಿಸ್ಥಿತಿಯ ಲಾಭವನ್ನು ಪಡೆದುಕೊಂಡು ಈ ಕುರಿತು ವದಂತಿಗಳನ್ನು ಹಬ್ಬಿಸಲಾಯಿತು.

ತೆಂಗಿನ ವಂಶಾವಳಿ ಅಭಿವೃದ್ಧಿಯ ಈ ಕೇಂದ್ರವನ್ನು ಅಭಿವೃದ್ಧಿಪಡಿಸುವ ಇರಾದೆ ಕೇಂದ್ರ ಸರಕಾರಕ್ಕೆ ಇದೆ. ಇದನ್ನು ಇಲ್ಲಿಂದ ಯಾವ ರಾಜ್ಯಕ್ಕೂ ಸ್ಥಳಾಂತರಿಸುವ ಕೆಲಸ ನಡೆಯುವುದಿಲ್ಲ. ಕೃಷಿಕರು ಯಾವುದೇ ಆತಂಕಕ್ಕೆ ಒಳಗಾಗುವ ಅಗತ್ಯ ಇಲ್ಲ ಎಂದು ನಳಿನ್‌ ಕುಮಾರ್‌ ತಿಳಿಸಿದ್ದಾರೆ.

ರೈಲೇ ಸಚಿವರ ಭೇಟಿ
ಕರಾವಳಿ ಕರ್ನಾಟಕದ ರೈಲು ಪ್ರಯಾಣಿಕರ ಹಿತದೃಷ್ಟಿಯಿಂದ ಜು. 23ರಂದು ಕೇಂದ್ರ ರೈಲ್ವೇ ಸಚಿವ ಪಿಯೂಷ್‌ ಗೋಯಲ್‌ ಅವರನ್ನು ನಾನು ಭೇಟಿ ಮಾಡಲಿದ್ದು, ಮಂಗಳೂರು -ತಿರುಪತಿ ಪ್ರಯಾಣಿಕ ರೈಲು ಸಹಿತ ಕರಾವಳಿಗೆ ಆಗಬೇಕಾಗಿರುವ ರೈಲ್ವೇ ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚೆ ನಡೆಸಲಿದ್ದೇನೆ. ಪ್ರಸ್ತಾವನೆಯ ಕುರಿತಂತೆ ಸಕಾರಾತ್ಮಕವಾಗಿ ಸ್ಪಂದಿಸಿರುವ ರೈಲ್ವೇ ಸಚಿವರು ಸೋಮವಾರ ತಮ್ಮನ್ನು ಭೇಟಿಯಾಗುವಂತೆ ತಿಳಿಸಿದ್ದಾರೆ. ಹೆಚ್ಚುವರಿ ಪ್ರಯಾಣಿಕ ರೈಲುಗಳ ಆರಂಭದ ಕುರಿತಂತೆ ಕೂಡಾ ಜಿಲ್ಲೆಯ ಜನರ ಪರವಾಗಿ ಸಚಿವರಲ್ಲಿ ಒತ್ತಡ ತರುತ್ತೇನೆ ನಳಿನ್‌ ಕುಮಾರ್‌ ಕಟೀಲು ತಿಳಿಸಿದ್ದಾರೆ.

ಡಿವಿಗೆ ಮನವಿ
ಕಡಬ : ಬಿಳಿನೆಲೆ ಸಮೀಪದ ಕಿದು ಸಿಪಿಸಿಆರ್‌ಐ ಸಂಶೋಧನ ಕೇಂದ್ರವನ್ನು ಬೇರೆಡೆಗೆ ಸ್ಥಳಾಂತರಿಸದಂತೆ ಕೇಂದ್ರ ಅಂಕಿ-ಅಂಶ ಅನುಷ್ಠಾನ ಖಾತೆ ಸಚಿವ ಡಿ.ವಿ.ಸದಾನಂದ ಗೌಡ ಅವರಿಗೆ ಬಿಳಿನೆಲೆ ಸಿಪಿಸಿಆರ್‌ಐ ಉಳಿಸಿ ಹೋರಾಟ ಸಮಿತಿಯ ವತಿಯಿಂದ ರವಿವಾರ ಪುತ್ತೂರಿನಲ್ಲಿ ಮನವಿ ಸಲ್ಲಿಸಲಾಯಿತು.

Advertisement

ಹೋರಾಟ ಸಮಿತಿಯ ಸಂಚಾಲಕ ಬಿಳಿನೆಲೆ ಸಿ.ಎ. ಬ್ಯಾಂಕಿನ ಅಧ್ಯಕ್ಷ ಬಾಲಕೃಷ್ಣ ಗೌಡ ವಾಲ್ತಾಜೆ ನೇತೃತ್ವದಲ್ಲಿ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ ವೇಳೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಅವರು, ಸಿಪಿಸಿಆರ್‌ಐ ಸಂಶೋಧನ ಕೇಂದ್ರವನ್ನು ಕಿದುವಿನಲ್ಲಿ ಉಳಿಸಿಕೊಳ್ಳುವ ಸಲುವಾಗಿ ಕೇಂದ್ರ ಕೃಷಿ ಸಚಿವರ ಜತೆ ಚರ್ಚಿಸಲಾಗುವುದು. ಸಿಪಿಸಿಆರ್‌ಐಗೆ ಸಂಬಂಧಪಟ್ಟ ಅಧಿಕಾರಿಗಳನ್ನು ಶುಕ್ರವಾರ (ಜು. 27) ಹೊಸದಿಲ್ಲಿಯ ತಮ್ಮ ಕಚೇರಿಗೆ ಕರೆಸಿ, ಮಾತುಕತೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಪುತ್ತೂರು ಶಾಸಕ ಸಂಜೀವ ಮಠಂದೂರು ಮಾತನಾಡಿ, ಈ ಸಂಬಂಧ ರಾಜ್ಯ ಸರಕಾರ ಮಾಡಬೇಕಾದ ಕೆಲಸ ಕಾರ್ಯಗಳ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು ಎಂದರು. ಮಲೆನಾಡು ಜನಹಿತರಕ್ಷಣ ವೇದಿಕೆಯ ಸಂಚಾಲಕ ಕಿಶೋರ್‌ ಶಿರಾಡಿ, ಹೋರಾಟ ಸಮಿತಿಯ ಮುಖಂಡರಾದ ದಾಮೋದರ ಗುಂಡ್ಯ, ಉದಯಕುಮಾರ್‌ ಬಿಳಿನೆಲೆ, ಚಂದ್ರಶೇಖರ ಸಣ್ಣಾರ, ಶಶಿಧರ ಬಿಳಿನೆಲೆ, ಪ್ರಕಾಶ್‌ ಕುಂಬೋಳಿ, ರಮೇಶ್‌ ವಾಲ್ತಾಜೆ ನಿಯೋಗದಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next