ಯಳಂದೂರು: ತಾಲೂಕಿಗೆ ಕಾಯಂ ತಹಶೀಲ್ದಾರ್ ಹುದ್ದೆ ನೇಮಕವಾಗದೇ ಕಳೆದ ಒಂದು ತಿಂಗಳಿಂದ ಪ್ರಭಾರ ತಹಶೀಲ್ದಾರ್ ಸೇವೆ ಸಲ್ಲಿಸುತ್ತಿದ್ದಾರೆ. ಇದರಿಂದ ನಿರೀಕ್ಷಿತ ಅಭಿವೃದ್ಧಿ ಕಾರ್ಯಗಳು ಆಮೆ ವೇಗದಲ್ಲಿ ಸಾಗುತ್ತಿವೆ. ಕಾಯಂ ತಹಶೀಲ್ದಾರ್ ನೇಮಕ ಯಾವಾಗ ಎಂಬ ಪ್ರಶ್ನೆ ತಾಲೂಕಿನ ಸಾರ್ವಜನಿಕರಲ್ಲಿ ಮೂಡಿದೆ.
ರಾಜ್ಯದಲ್ಲೇ ಅತ್ಯಂತ ಚಿಕ್ಕ ತಾಲೂಕು ಎಂದು ಯಳಂದೂರು ಗುರುತಿಸಿಕೊಂಡಿದೆ. 33 ಗ್ರಾಮಗಳನ್ನು ಒಳಗೊಂಡಿರುವ ಪುಟ್ಟ ತಾಲೂಕಿನಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ಹಿಂದುಳಿದ ಜನಾಂಗದ ಜನರೇ ಹೆಚ್ಚು ವಾಸ ಮಾಡುತ್ತಿದ್ದಾರೆ. ಆದರೆ, ಕನಿಷ್ಠ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಒಂದು ತಾಲೂಕು ಎನಿಸಿಕೊಳ್ಳಲು ಅಗತ್ಯವಿರುವ ಕನಿಷ್ಠ ಮೂಲ ಸೌಲಭ್ಯ ಇರಬೇಕು. ಆದರೆ, ಯಳಂದೂರು ತಾಲೂಕಿನಲ್ಲಿ ಮೂಲ ಸೌಲಭ್ಯ ಮರಿಚೀಕೆಯಾಗಿರುವುದು ವಿಪರ್ಯಾಸವಾಗಿದೆ.
ಅಭಿವೃದ್ಧಿ ಕಾರ್ಯಗಳಿಗೆ ತೊಂದರೆ: ಈ ಹಿಂದೆ ವರ್ಷಾ ಅವರು ಕಾಯಂ ತಹಶೀಲ್ದಾರ್ ಸೇವೆ ಸಲ್ಲಿಸಿ, ನಂತರ ಕನಕಪುರ ತಾಲೂಕಿಗೆ ಡಿ.31ರಂದು ವರ್ಗಾವಣೆಗೊಂಡರು. ತಹಶೀಲ್ದಾರ್ ಮಹೇಶ್ ಕಳೆದ ಒಂದು ತಿಂಗಳಿಂದಲೂ ಪ್ರಭಾರ ತಹಶೀಲ್ದಾರ್ ರಾಗಿ ಚಾಮರಾಜನಗರ ಹಾಗೂ ಯಳಂದೂರು ತಾಲೂಕು ಸೇರಿ ಎರಡು ಕಡೇ ಸೇವೆ ಸಲ್ಲಿಸುತ್ತಿದ್ದಾರೆ. ಇದರಿಂದಅಭಿವೃದ್ಧಿಕಾರ್ಯಕ್ಕೆ ಎರಡು ಕಡೆಗಳಲ್ಲೂ ತೊಂದರೆಯಾಗುತ್ತಿದೆ. ಜೊತೆಗೆ ಮೇ 27ರಂದು ಬಿಳಿಗಿರಿ ರಂಗನಾಥ ಸ್ವಾಮಿ ದೇವಸ್ಥಾನದ ಮಹಾ ಸಂಪ್ರೋಕ್ಷಣೆ ಕಾರ್ಯಕ್ರಮ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಗ್ರಾಮ ಪಂಚಾಯ್ತಿ ಚುನಾವಣೆ ನಡೆಯುವುದರಿಂದ ಅಗತ್ಯ ಸಿದ್ಧತೆಗಳನ್ನು ರೂಪಿಸಲು ತಹಶೀಲ್ದಾರ್ ಪಾತ್ರ ಹಿರಿದಾಗಿದ್ದು, ತೊಂದರೆಯಾಗುವ ಅಪಾಯವಿದೆ.
ಸೇವೆಗಳಿಗೆ ಆಮೆ ವೇಗ: ಜಾತಿ ಮತ್ತು ಆದಾಯ ದೃಢೀಕರಣ ಪತ್ರ, ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ, ಅಂಗವಿಕರ ಪೋಷಣಾ ಭತ್ಯೆ, ವಿಧವಾ ವೇತನ, ಭೂ ರಹಿತ ದೃಢೀಕರಣ ಪತ್ರ, ಪಹಣಿ, ವಾಸಸ್ಥಳ ಪತ್ರ, ಜನನ ಪ್ರಮಾಣ ಪತ್ರ, ಮರಣ ಪ್ರಮಾಣ ಪತ್ರ, ಭೂ ಹಿಡುವಳಿ ದೃಢೀಕರಣ ಪತ್ರ, ಆಧಾರ್ ನೋಂದಾಣಿ, ಪಡಿತರ ಚೀಟಿ ಸೇರಿದಂತೆ 100ಕ್ಕೂ ಹೆಚ್ಚು ಯೋಜನೆಗಳ ಸೌಲಭ್ಯಗಳು ತಾಲೂಕಿನ ಜನರಿಗೆ ಆಮೆವೇಗದಲ್ಲಿ ಸಾಗುತ್ತಿದ್ದು, ಇದರಿಂದ ಅಭಿವೃದ್ಧಿ ಕಾರ್ಯಗಳು ವಿಳಂಬವಾಗಿದೆ ಎಂಬ ಆರೋಪಗಳು ಸಾರ್ವಜನಿಕರಿಂದ ಕೇಳಿ ಬರುತ್ತಿವೆ.
ಭ್ರಷ್ಟಾಚಾರದ ಆರೋಪ: ಕಂದಾಯ ವಿಭಾಗದ ಆಡಳಿತ ವ್ಯವಸ್ಥೆಯಲ್ಲಿ ಕಾಯಂ ತಹಶೀಲ್ದಾರ್ ಇಲ್ಲದ ಪರಿಣಾಮ ಭ್ರಷ್ಟಾಚಾರವು ಹೆಚ್ಚಾಗಿ ಕಂಡು ಬರುತ್ತಿರುವ ಆರೋಪಗಳು ಕೇಳಿ ಬರುತ್ತಿವೆ. ಯರಿಯೂರು ಗ್ರಾಮದ ನಿವಾಸಿ ಎಸ್. ನಾಗರಾಜು ಕಳೆದ ಡಿಸೆಂಬರ್ 23ರಂದು ರಾಜಸ್ವ ನಿರೀಕ್ಷಕರ ಮೇಲೆ ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದಾರೆ. ಇವರು ಮೇಲೆ ಋಣಮುಕ್ತ ಅರ್ಜಿ ವಿಷಯಕ್ಕೆ ಸಂಬಂಧಿಸಿದಂತೆ ಲಂಚವನ್ನು ಕೇಳಿದೆ. ಈ ಬಗ್ಗೆ ಹಿಂದಿನ ತಹಶೀಲ್ದಾರ್ ಅವರಿಗೆ ದೂರು ಸಲ್ಲಿಸಿದ್ದರೂ ಯಾವುದೇ ಕ್ರಮ ವಹಿಸಲಿಲ್ಲ. ಈ ಬಗ್ಗೆ ಲೋಕಾಯುಕ್ತ ಇನ್ಸ್‌ಪೆಕ್ಟರ್‌ಗೆ ದೂರು ಸಲ್ಲಿಸಲಾಗಿದೆ. ಕಾಯಂ ತಹಶೀಲ್ದಾರ್ ಇಲ್ಲದಿರುವುದರಿಂದ ಮತ್ತಷ್ಟು ತೊಂದರೆಯಾಗಬಹುದು ಎಂಬ ಆತಂಕ ಸಾರ್ವಜನಿಕರಲ್ಲಿ ಮೂಡಿದೆ.
ಯಳಂದೂರು ತಾಲೂಕಿಗೆ ತಹಶೀಲ್ದಾರ್ ಅವರು ಪ್ರಭಾರಿಯಾಗಿದ್ದಾರೆ. ಇಲ್ಲಿನ ಸಮಸ್ಯೆ ನಿವಾರಣೆಗೆ ಕಾಯಂ ತಹಶೀಲ್ದಾರ್ ನೇಮಕಕ್ಕೆ ಪತ್ರ ಬರೆದು ಕ್ರಮ ವಹಿಸಲಾಗುವುದು.
–ಎಂ.ಆರ್. ರವಿ, ಜಿಲ್ಲಾಧಿಕಾರಿ
-ಫೈರೋಜ್ ಖಾನ್