Advertisement

ಕಾರ್ಯಾಧ್ಯಕ್ಷರ ಹುದ್ದೆಯಿಂದ ಸಮಸ್ಯೆಯಿಲ್ಲ

11:34 PM Jan 17, 2020 | Lakshmi GovindaRaj |

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರ ಜೊತೆಗೆ ವಿಭಾಗವಾರು ಕಾರ್ಯಾಧ್ಯಕ್ಷರನ್ನು ನೇಮಕ ಮಾಡುವುದರಿಂದ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಎಂದು ಮಾಜಿ ಗೃಹ ಸಚಿವ ಎಂ.ಬಿ.ಪಾಟೀಲ್‌ ಹೇಳಿದ್ದಾರೆ. ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಕೆಪಿಸಿಸಿ ಅಧ್ಯಕ್ಷರ ಹುದ್ದೆಗೆ ಹೈಕಮಾಂಡ್‌ ಯಾರನ್ನು ನೇಮಿಸುತ್ತದೆ ಎಂದು ಗೊತ್ತಿಲ್ಲ. ಪ್ರತಿಯೊಬ್ಬರದ್ದೂ ವೈಯಕ್ತಿಕ ಹೇಳಿಕೆಗಳಿರುತ್ತವೆ. ಆದರೆ, ಪಕ್ಷದ ಹೈಕಮಾಂಡ್‌ ತೆಗೆದು ಕೊಳ್ಳುವ ತೀರ್ಮಾನವನ್ನು ಪಾಲಿಸಬೇಕಾಗುತ್ತದೆ ಎಂದರು.

Advertisement

ಕಾರ್ಯಾಧ್ಯಕ್ಷರನ್ನು ನೇಮಕ ಮಾಡುವುದರಿಂದ ಯಾವುದೇ ಸಮಸ್ಯೆ ಕಾಣಿಸುತ್ತಿಲ್ಲ. ಅಧ್ಯಕ್ಷ ರೊಬ್ಬರೇ ಎಲ್ಲ ಕಡೆಯೂ ಓಡಾಡುವುದಕ್ಕೆ ಸಾಧ್ಯವಾಗುವುದಿಲ್ಲ. ಹೀಗಾಗಿ ಪಕ್ಷದ ಹಿತ ದೃಷ್ಟಿಯಿಂದ ಕಾರ್ಯಾಧ್ಯಕ್ಷರನ್ನು ನೇಮಕ ಮಾಡುವುದರ ಬಗ್ಗೆ ಹೈಕಮಾಂಡ್‌ ತೀರ್ಮಾನ ತೆಗೆದು ಕೊಳ್ಳಬಹುದು ಎಂದು ಹೇಳಿದರು. ನನ್ನನ್ನು ಅಧ್ಯಕ್ಷನನ್ನಾಗಿ ಮಾಡುವಂತೆ ಯಾರನ್ನೂ ಭೇಟಿ ಮಾಡಿಲ್ಲ. ಕೆಪಿಸಿಸಿ ಅಧ್ಯಕ್ಷರಾದರೆ ಸೂಕ್ತ ಎನ್ನುವವರ ಪಟ್ಟಿಯಲ್ಲಿ ನನ್ನ ಹೆಸರನ್ನೂ ಸೂಚಿಸಿದ್ದಾರೆ.

ಹೈಕಮಾಂಡ್‌ ಸಾಮಾಜಿಕ ನ್ಯಾಯದ ಲೆಕ್ಕಾಚಾರದಲ್ಲಿ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದರು. ಇದೇ ವೇಳೆ, ಸಂಪುಟ ವಿಸ್ತರಣೆ ವಿಳಂಬ ಬಿಜೆಪಿಯ ಆಂತರಿಕ ವಿಚಾರ, ಅವರು ನಮ್ಮ ಪಕ್ಷದ ಶಾಸ ಕರನ್ನು ಕರೆದುಕೊಂಡು ಹೋಗಿ ಮಂತ್ರಿ ಮಾಡುವ ಭರವಸೆ ನೀಡಿದ್ದರು. ಈಗ ಕೊಟ್ಟ ಮಾತಿನಂತೆ ನಡೆದು ಕೊಳ್ಳಬೇಕಲ್ಲಾ. ಜನರೂ ತಮ್ಮ ಶಾಸಕರು ಮಂತ್ರಿ ಆಗುತ್ತಾರೆ ಎನ್ನುವ ಕಾರಣಕ್ಕೆ ಅವರನ್ನು ಗೆಲ್ಲಿಸಿ ಕಳುಹಿಸಿದ್ದಾರೆ ಎಂದರು.

ಇನ್ನು ಹರಿಹರದ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಸಮಾವೇಶದಲ್ಲಿ ಮುಖ್ಯಮಂತ್ರಿ ಬಗ್ಗೆ ಮಾತನಾಡಿದ್ದು ತಪ್ಪು. ತಮ್ಮ ಸಮುದಾಯಕ್ಕೆ ಬೆಂಬಲ ಕೊಡಬೇಕು ಎಂದು ಕೇಳುವುದು ತಪ್ಪಲ್ಲ. ಆದರೆ, ಕೊಡದಿದ್ದರೆ ಸಮಾಜ ತಿರುಗಿ ಬೀಳುತ್ತದೆ ಎಂದು ಹೇಳುವುದು ಸರಿಯಲ್ಲ. ಅವರು ಹೇಳುವ ಧಾಟಿಯಲ್ಲಿ ತಪ್ಪಾಗಿದೆ ಎಂದು ಹೇಳಿದರು.

ಹೈಕಮಾಂಡ್‌ ತೀರ್ಮಾನ ನೋಡೋಣ – ಸಿದ್ದು: “ನಾನು ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದು ಹೈಕಮಾಂಡ್‌ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತದೆ’ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಈಗಾಗಲೇ ರಾಜೀನಾಮೆ ಕೊಟ್ಟಿರುವುದರಿಂದ ಹೈಕಮಾಂಡ್‌ ಯಾವ ತೀರ್ಮಾನ ತೆಗೆದು ಕೊಳ್ಳುತ್ತದೆಯೋ ನೋಡೋಣ ಎಂದರು. ನೀವು ಪ್ರತಿಪಕ್ಷದ ನಾಯಕರಾಗಿ ಮುಂದುವರಿಯಿರಿ ಎಂದು ಹೈಕಮಾಂಡ್‌ ಹೇಳಿದರೆ, ನಿಮ್ಮ ನಿಲುವೇನು ಎಂದು ಕೇಳಿದ ಪ್ರಶ್ನೆಗೆ, ನೀವೇನು ಹೈಕಮಾಂಡಾ ?. ಸೋನಿಯಾ ಗಾಂಧಿನಾ?. ಹೈಕಮಾಂಡ್‌ ಹೇಳಲಿ. ಮುಂದೆ ನೋಡೋಣ ಎಂದು ಹೇಳಿದರು.

Advertisement

ಹುದ್ದೆ ವಿಭಜನೆ ಬಗ್ಗೆ ಚರ್ಚೆಯಾಗಿಲ್ಲ – ಜಾರ್ಜ್‌: ಶಾಸಕಾಂಗ ಪಕ್ಷದ ನಾಯಕ ಹಾಗೂ ಪ್ರತಿಪಕ್ಷದ ನಾಯಕನ ಹುದ್ದೆ ವಿಭಜಿಸುವ ಬಗ್ಗೆ ಎಲ್ಲಿಯೂ ಚರ್ಚೆಯಾಗಿಲ್ಲ ಎಂದು ಮಾಜಿ ಸಚಿವ ಕೆ.ಜೆ. ಜಾರ್ಜ್‌ ಹೇಳಿದ್ದಾರೆ. ಸಿದ್ದರಾಮಯ್ಯ ಅವರ ನಿವಾಸದಲ್ಲಿ ನಡೆದ ಸಭೆಯ ನಂತರ ಮಾತನಾಡಿ, ಮೊದಲು ಕೆಪಿಸಿಸಿ ಅಧ್ಯಕ್ಷರ ನೇಮಕ ಮಾಡಬೇಕು. ಆ ನಂತರ ಕಾರ್ಯಾಧ್ಯಕ್ಷರ ಹುದ್ದೆ ನೇಮಕದ ವಿಚಾರ.

ಆದಷ್ಟು ಬೇಗ ನೇಮಕ ಮಾಡಬೇಕು ಎನ್ನುವುದು ನಮ್ಮ ಬಯಕೆ. ಪ್ರತಿಪಕ್ಷದ ನಾಯಕ ಹಾಗೂ ಶಾಸಕಾಂಗ ಪಕ್ಷದ ನಾಯಕನ ಸ್ಥಾನ ಬೇರೆ ಮಾಡ ಬೇಕೆಂದು ಎಲ್ಲಿಯೂ ಚರ್ಚೆಯಾಗಿಲ್ಲ. ಈ ಬಗ್ಗೆ ಹೈಕಮಾಂಡ್‌ ತೀರ್ಮಾನ ಮಾಡುತ್ತದೆ ಎಂದು ಹೇಳಿದರು. ಇದೇ ವೇಳೆ, ತಮ್ಮ ವಿರುದ್ಧ ಇಡಿ ನೊಟೀಸ್‌ ನೀಡಿರುವುದಕ್ಕೆ ಪ್ರತಿಕ್ರಿಯಿಸಿ, ಡಿ.ಕೆ.ರವಿ ಹಾಗೂ ಡಿವೈಎಸ್‌ಪಿ ಗಣಪತಿ ಪ್ರಕರಣದಲ್ಲಿ ಏನಾಗಿದೆ ಎಂದು ಎಲ್ಲರಿಗೂ ಗೊತ್ತಿದೆ ಎಂದು ಹೇಳಿದರು.

ಜಮೀರ್‌ಗೆ ವಿರೋಧ: ಮಾಜಿ ಸಚಿವ ಜಮೀರ್‌ ಅಹಮದ್‌ಗೆ ಅಲ್ಪ ಸಂಖ್ಯಾತ ಮುಸ್ಲಿಂ ಕೋಟಾದಡಿ ಕೆಪಿಸಿಸಿ ಕಾರ್ಯಾ ಧ್ಯಕ್ಷರನ್ನಾಗಿ ನೇಮಿಸಲು ಸಿದ್ದರಾಮಯ್ಯ ಬಣದಿಂದ ಪ್ರಯತ್ನ ನಡೆಯುತ್ತಿದೆ ಎಂದು ಮೂಲ ಕಾಂಗ್ರೆಸ್‌ನ ಕೆಲವು ಮುಸ್ಲಿಂ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ. ಜಮೀರ್‌ ಪಕ್ಷಕ್ಕೆ ಬಂದು ಎರಡು ವರ್ಷವಾಗಿಲ್ಲ. ಅವರನ್ನು ಕಾರ್ಯಾಧ್ಯಕ್ಷರನ್ನಾಗಿ ಮಾಡುವುದು ಸಮಾಜ ಹಾಗೂ ಪಕ್ಷದ ದೃಷ್ಟಿಯಿಂದ ಒಳ್ಳೆಯದಲ್ಲ.

ಅಲ್ಲದೇ ಬೆಂಗಳೂರು ವಿಭಾಗದಲ್ಲಿ ಮುಸ್ಲಿಂ ಸಮುದಾಯಕ್ಕೆ ಸೇರಿರುವ ಮೂವರು ಶಾಸಕರು, ಇಬ್ಬರು ಪರಿಷತ್‌ ಸದಸ್ಯರು ಹಾಗೂ ಒಬ್ಬರು ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷರಿದ್ದಾರೆ. ಹೀಗಾಗಿ ಕಾರ್ಯಾಧ್ಯಕ್ಷ ಹುದ್ದೆಯನ್ನೂ ಬೆಂಗಳೂರು ವಿಭಾಗಕ್ಕೆ ಸೇರಿದವರಿಗೆ ನೀಡಿದರೆ, ರಾಜ್ಯದ ಇತರ ಭಾಗದ ಮುಸ್ಲಿಂ ಸಮುದಾಯದ ನಾಯಕರಿಗೆ ಅನ್ಯಾಯ ಮಾಡಿದಂತಾಗುತ್ತದೆ ಎಂದು ಕೆಲವು ಮುಸ್ಲಿಂ ನಾಯಕರು ಪಕ್ಷದ ನಾಯಕರಿಗೆ ಮನವಿ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next