Advertisement

ರಕ್ಷಣಾ ಸಚಿವೆ ಸೂಚನೆಗೂ ಬೆಲೆ ಇಲ್ಲ

12:38 PM Oct 20, 2018 | |

ಬೆಂಗಳೂರು: ನಗರದಲ್ಲಿ ರಕ್ಷಣಾ ಇಲಾಖೆ ಜಾಗದಲ್ಲಿ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿಸ್ಥಿತಿ “ದೇವರು ಕೊಟ್ಟರೂ ಪೂಜಾರಿ ಕೊಡಲಿಲ್ಲ’ ಎನ್ನುವಂತಾಗಿದೆ!

Advertisement

ನಗರದಲ್ಲಿರುವ ರಕ್ಷಣಾ ಇಲಾಖೆ ಜಾಗದಲ್ಲಿ ನಡೆಯುತ್ತಿರುವ ಸುಮಾರು ಹತ್ತು ಮೂಲ ಸೌಕರ್ಯ ಅಭಿವೃದ್ಧಿ ಕಾಮಗಾರಿಗಳು ವರ್ಷಗಳಿಂದ ನೆನೆಗುದಿಗೆ ಬಿದ್ದಿವೆ. ಇವುಗಳನ್ನು ತಕ್ಷಣ ಕೈಗೆತ್ತಿಕೊಳ್ಳಲು ಅವಕಾಶ ನೀಡುವಂತೆ ಎರಡು ತಿಂಗಳ ಹಿಂದೆಯೇ ಖುದ್ದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ತಮ್ಮ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಆದರೆ, ಸ್ಥಳೀಯ ಮಿಲಿಟರಿ ಅಧಿಕಾರಿಗಳು ಮಾತ್ರ ಅನುಮತಿ ನೀಡುತ್ತಿಲ್ಲ. ಇದು ಬಿಬಿಎಂಪಿಗೆ ತಲೆನೋವಾಗಿ ಪರಿಣಮಿಸಿದೆ.

ಸುಮಾರು 286.73 ಕೋಟಿ ಮೊತ್ತದ ರಕ್ಷಣಾ ಇಲಾಖೆಗೆ ಸೇರಿದ 45,165.84 ಚದರ ಮೀಟರ್‌ ಜಾಗದಲ್ಲಿ ರಸ್ತೆ, ಎತ್ತರಿಸಿದ ಸೇತುವೆ ಸೇರಿದಂತೆ ಹಲವು ಕಾಮಗಾರಿಗಳು ನಡೆಯುತ್ತಿವೆ. ಇವುಗಳಿಗೆ ಅವಕಾಶ ಕಲ್ಪಿಸುವ ಸಂಬಂಧ ಆಗಸ್ಟ್‌ನಲ್ಲೇ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಮತ್ತು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಸಭೆ ನಡೆಸಿದ್ದರು.

ಸಭೆಯಲ್ಲಿ ಒಮ್ಮತವೂ ಮೂಡಿಬಂದಿತ್ತು. ಅಷ್ಟೇ ಅಲ್ಲ, ಕಾರ್ಯಾರಂಭಕ್ಕೆ ಅನುಮತಿ ನೀಡಲು ಸಭೆಯಲ್ಲಿ ಸೂಚಿಸಲಾಗಿತ್ತು. ಅದರಂತೆ ಕಾಮಗಾರಿ ಕೈಗೆತ್ತಿಕೊಳ್ಳಲು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಂದಾದರೆ, ಇದಕ್ಕೆ ಸ್ಥಳೀಯ ರಕ್ಷಣಾ ಇಲಾಖೆ ಅಧಿಕಾರಿಗಳು ಅವಕಾಶ ಕಲ್ಪಿಸುತ್ತಿಲ್ಲ. 

ಒಂದಿಂಚೂ ಪ್ರಗತಿ ಇಲ್ಲ: ಪರಿಣಾಮ ಹತ್ತರಲ್ಲಿ ಒಂದೇ ಒಂದು ಕಾಮಗಾರಿ ಒಂದಿಂಚೂ ಪ್ರಗತಿ ಕಂಡಿಲ್ಲ. ಇದರೊಂದಿಂದ ಸಭೆಯ ಉದ್ದೇಶವೂ ಸಾಕಾರಗೊಳ್ಳುತ್ತಿಲ್ಲ. ಈ ಬಗ್ಗೆ ಬೇಸರ ವ್ಯಕ್ತಪಡಿಸಿರುವ ನಗರಾಭಿವೃದ್ಧಿ ಇಲಾಖೆ, “ಕಾಮಗಾರಿಗಳಿಗೆ ಅವಕಾಶ ಕಲ್ಪಿಸಬೇಕು ಎಂದು ರಕ್ಷಣಾ ಸಚಿವರು ಮತ್ತು ಮುಖ್ಯಮಂತ್ರಿಗಳ ಸಭೆಯಲ್ಲಿ ಸ್ಪಷ್ಟವಾಗಿ ಸೂಚನೆ ನೀಡಲಾಗಿದೆ.

Advertisement

ತದನಂತರ ನಡೆದ ಸಮಿತಿ ಸಭೆಯಲ್ಲಿ  ಕೂಡ ಈ ಸಂಬಂಧ ತೀರ್ಮಾನ ಕೈಗೊಳ್ಳಲಾಗಿದೆ. ಆದಾಗ್ಯೂ ಕಾಮಗಾರಿಗಳನ್ನು ಆರಂಭಿಸಲು ಅವಕಾಶ ನೀಡುತ್ತಿಲ್ಲ. ಈ ನಿಟ್ಟಿನಲ್ಲಿ ಪೂರಕ ಕ್ರಮ ಕೈಗೊಳ್ಳಬೇಕು’ ಎಂದು ಮನವಿ ಮಾಡಿದೆ. ಈ ಸಂಬಂಧ ನಡೆದ ನಡಾವಳಿಯಲ್ಲೂ ತೀರ್ಮಾನ ಕೈಗೊಳ್ಳಲಾಗಿದ್ದು, ಸಭೆಯಲ್ಲಿ ರಕ್ಷಣಾ ಇಲಾಖೆ ಅಧಿಕಾರಿಗಳು ಕೂಡ ಹಾಜರಿದ್ದರು. 

ರಕ್ಷಣಾ ಸಚಿವರು ಸೂಚಿಸಿದರೂ ಅಧಿಕಾರಿಗಳು ಇದಕ್ಕೆ ಸ್ಪಂದಿಸುತ್ತಿಲ್ಲ. ನಾವು (ರಕ್ಷಣಾ ಇಲಾಖೆ) ಹಸ್ತಾಂತರಿಸುವ ಭೂಮಿ ಸರಿಸಮನಾಗಿ ಪರ್ಯಾಯ ಭೂಮಿ ಕಲ್ಪಿಸಿದ ನಂತರವೇ ಕಾಮಗಾರಿಗಳನ್ನು ಆರಂಭಿಸಲು ಅವಕಾಶ ಕಲ್ಪಿಸಲಾಗುವುದು ಎಂದು ಅಪಸ್ವರ ಎತ್ತಿದ್ದಾರೆ. ಹಾಗಿದ್ದರೆ, ರಕ್ಷಣಾ ಸಚಿವರು ಮತ್ತು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆದ ಸಭೆ ಹಾಗೂ ಅದರಲ್ಲಿ ತೆಗೆದುಕೊಂಡ ತೀರ್ಮಾನಗಳಿಗೆ ಯಾವುದೇ ಪ್ರಾಮುಖ್ಯತೆ ಇಲ್ಲವೇ?

ಅಷ್ಟಕ್ಕೂ ನಾವು ಭೂಮಿ ಹಸ್ತಾಂತರ ಮಾಡುವಂತೆ ಕೇಳುತ್ತಿಲ್ಲ. ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಅನುಮತಿ ಅಷ್ಟೇ. ಆದರೆ, ಅಧಿಕಾರಿಗಳ ಈ ಧೋರಣೆಯಿಂದ ವಿನಾಕಾರಣ ಕಾಮಗಾರಿ ಮತ್ತಷ್ಟು ವಿಳಂಬವಾಗುತ್ತಿದೆ ಎಂದು ಹೆಸರು ಹೇಳಲಿಚ್ಛಿಸದ ನಗರಾಭಿವೃದ್ಧಿ ಇಲಾಖೆ ಅಧಿಕಾರಿಯೊಬ್ಬರು ಬೇಸರ ವ್ಯಕ್ತಪಡಿಸಿದರು. 

ಭೂಮಿ ಪೂಜೆಗೆ ಬಂದವರು ವಾಪಸ್‌!: ಈ ಹಿಂದೆ ಕಾವಲ್‌ ಬೈರಸಂದ್ರದಿಂದ ಮೋದಿ ಗಾರ್ಡನ್‌ವರೆಗೆ ಪರ್ಯಾಯ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಗುದ್ದಲಿ ಪೂಜೆ ನೆರವೇರಿಸಲು ಹೋದ ಬಿಬಿಎಂಪಿ ಅಧಿಕಾರಿಗಳನ್ನೇ ಈ ಹಿಂದೆ ಮಿಲಿಟರಿ ಪಡೆ ವಾಪಸ್‌ ಕಳುಹಿಸಿದ್ದನ್ನು ಇಲ್ಲಿ ಸ್ಮರಿಸಬಹುದು. 

ರಕ್ಷಾ ಸಚಿವರು ಮತ್ತು ಮುಖ್ಯಮಂತ್ರಿಗಳ ಸಭೆ ನಂತರ ಮೋದಿ ಗಾರ್ಡನ್‌ ಬಳಿ ರಸ್ತೆ ನಿರ್ಮಾಣಕ್ಕಾಗಿ ಗುದ್ದಲಿ ಪೂಜೆ ಕಾರ್ಯಕ್ರಮಕ್ಕೆ ಅಲ್ಲಿ ತಾತ್ಕಾಲಿಕ ಟೆಂಟ್‌ ನಿರ್ಮಿಸಲಾಗಿತ್ತು. ಆದರೆ, ಏಕಾಏಕಿ ಮಿಲಿಟರಿ ಸಿಬ್ಬಂದಿ ಅದನ್ನು ತೆರವುಗೊಳಿಸಿ, ಬಿಬಿಎಂಪಿ ಸಿಬ್ಬಂದಿಯನ್ನು ವಾಪಸ್‌ ಕಳುಹಿಸಿದ್ದರು. 

2 ತಿಂಗಳ ಹಿಂದಿನ ಸಭೆಯಲ್ಲಿ ಕೈಗೊಂಡ ತೀರ್ಮಾನಗಳು: ಎಂಟು ಕಡೆಗಳಲ್ಲಿ ರಕ್ಷಣಾ ಇಲಾಖೆಗೆ ಸೇರಿದ ಜಾಗವನ್ನು ಬಿಬಿಎಂಪಿಗೆ ಹಸ್ತಾಂತರ. ಎರಡು ಕಡೆ ಗುತ್ತಿಗೆ ಆಧಾರದ ಮೇಲೆ ಜಮೀನು. ಭೂಮಿ ಹಸ್ತಾಂತರ ಪ್ರಕ್ರಿಯೆ ತಕ್ಷಣ ಆರಂಭಿಸಬೇಕು. ಈ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ಕಾಯದೆ, ಕಾಮಗಾರಿಗೆ ಅವಕಾಶ ನೀಡಬೇಕು. 

ರಕ್ಷಣಾ ಇಲಾಖೆ ಭೂಮಿಗೆ ಪ್ರತಿಯಾಗಿ ಅಷ್ಟೇ ಮೌಲ್ಯದ ಭೂಮಿಯನ್ನು ರಕ್ಷಣಾ ಇಲಾಖೆಗೆ ರಾಜ್ಯ ಸರ್ಕಾರ ವರ್ಗಾವಣೆ ಮಾಡಬೇಕು. ಇದನ್ನು ಸಚಿವ ಸಂಪುಟದಲ್ಲಿ ನಿರ್ಧಾರ ಕೈಗೊಂಡು ಭೂಮಿ ವರ್ಗಾವಣೆ ಮಾಡಲು ಒಪ್ಪಿಗೆ (ಈಗಾಗಲೇ ಒಪ್ಪಿಗೆ ನೀಡಲಾಗಿದೆ).

ಕಾಮಗಾರಿಗಳು ಯಾವುವು?
-ಈಜಿಪುರ ಒಳವರ್ತುಲ ರಸ್ತೆಯಿಂದ ಸರ್ಜಾಪುರ ಮುಖ್ಯರಸ್ತೆವರೆಗೆ ರಸ್ತೆ ನಿರ್ಮಾಣ.
-ಬ್ಯಾಟರಾಯನಪುರದ ರಾಷ್ಟ್ರೀಯ ಹೆದ್ದಾರಿ-7ರಿಂದ ಸಂಜೀವಿನಿನಗರವರೆಗೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿ.
-ರಾಷ್ಟ್ರೀಯ ಹೆದ್ದಾರಿ-7 ಮತ್ತು ಹೆಬ್ಟಾಳ ಸರೋವರ ಬಡಾವಣೆ ಮಧ್ಯೆ ಆಮೊ ಬಡಾವಣೆ ಮೂಲಕ ಸಂಪರ್ಕ ರಸ್ತೆ.
-ಹೊಸೂರು-ಲಸ್ಕರ್‌ ರಸ್ತೆ ವಿಸ್ತರಣೆ.
-ಹಾಸ್ಮ್ಯಾಟ್‌ ಆಸ್ಪತ್ರೆಯಿಂದ ವಿವೇಕನಗರ 1ನೇ ಮುಖ್ಯರಸ್ತೆವರೆಗಿನ ಅಗರ ರಸ್ತೆ ಅಭಿವೃದ್ಧಿ .
-ಲೊವರ್‌ ಅಗರಂ ರಸ್ತೆ ವಿಸ್ತರಣೆ.
-ಡಿ.ಜೆ. ಹಳ್ಳಿಯ ಕಾವಲ್‌ ಬೈರಸಂದ್ರದಿಂದ ಮೋದಿ ಗಾರ್ಡನ್‌ವರೆಗೆ ಪರ್ಯಾಯ ರಸ್ತೆ.
-ಈಜಿಪುರ ಮುಖ್ಯರಸ್ತೆ ಒಳವರ್ತುಲ ರಸ್ತೆ, ಸೋನಿ ವರ್ಲ್ಡ್ ಜಂಕ್ಷನ್‌, ಕೇಂದ್ರೀಯ ಸದನ ಜಂಕ್ಷನ್‌ ನಡುವೆ ಸಂಪರ್ಕ ಕಲ್ಪಿಸುವ ಎತ್ತರಿಸಿದ ಮಾರ್ಗ ನಿರ್ಮಾಣ.
-ಬಾಣಸವಾಡಿ ಬಳಿ ಇರುವ ರೈಲ್ವೆ ಎತ್ತರಿಸಿದ ಸೇತುವೆಗೆ ಪೂರಕವಾಗಿ ಹೆಚ್ಚುವರಿ ಲೂಪ್‌ ನಿರ್ಮಾಣ.

* ವಿಜಯಕುಮಾರ್‌ ಚಂದರಗಿ 

Advertisement

Udayavani is now on Telegram. Click here to join our channel and stay updated with the latest news.

Next