ವಿಜಯಪುರ : ಬಡವರ ಹಸಿವು ನೀಗಿಸುವ ಅಕ್ಕಿ ವಿತರಣೆ ವಿಷಯದಲ್ಲಿ ಕೇಂದ್ರ ಸರ್ಕಾರ ರಾಜಕೀಯ ಮಾಡುತ್ತಿದೆ. ರಾಜ್ಯ ಸರ್ಕಾರ ಪತ್ರ ಬರೆದಾಗ 7 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಇದೆ ಎಂದು ಹೇಳಿ, ನಂತರ ಉಲ್ಟಾ ಹೊಡೆದಿದ್ದಾರೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಗುರುವಾರ ವಾಗ್ದಾಳಿ ನಡೆಸಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡಿ, ಬಡವರ ಅನ್ನದ ವಿಷಯದಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ರಾಜಕೀಯ ಸಣ್ಣತನದ ವರ್ತನೆ ಸಲ್ಲದು. ಇಷ್ಟಕ್ಕೂ ನಾವೇನೂ ಪುಕ್ಕಟೆಯಾಗಿ ಕೇಳುತ್ತಿಲ್ಲ. ಹಣ ಕೊಡುತ್ತೇವೆ ಕೊಡಿ ಎಂದರೂ ಮೊದಲು ಒಪ್ಪಿಕೊಂಡವರು, ನಂತರ ನಿರಾಕರಿಸುತ್ತಿದ್ದಾರೆ ಎಂದು ಕಿಡಿ ಕಾರಿದರು.
ಅಕ್ಕಿಗೆ ಬದಲಾಗಿ ಉತ್ತರ ಕರ್ನಾಟದಕ ಜಿಲ್ಲೆಗಳಿಗೆ ಜೋಳ, ದಕ್ಷಿಣ ಕರ್ನಾಟಕದ ಜಿಲ್ಲೆಗಳಿಗೆ ರಾಗಿ ವಿತರಿಸುವ ಬಗ್ಗೆ ಚರ್ಚೆ ನಡೆದಿವೆ. ಆದರೆ ಈ ಹಂತದಲ್ಲಿ ಏಕಾಏಕಿ ಬೇಕು ಎಂದರೆ ತುರ್ತಾಗಿ ಜೋಳ, ರಾಗಿ ನಿರೀಕ್ಷಿತ ಪ್ರಮಾಣದಲ್ಲಿ ಸಿಗುವುದಿಲ್ಲ. ಈ ವಾಸ್ತವದ ಅರಿವು ನಮಗಿದೆ ಎಂದರು.
ಇನ್ನು ರಾಜ್ಯದಲ್ಲಿ ವಿದ್ಯುತ್ ದರ ಏರಿಕೆ ಮಾಡಿದ್ದು ಕಾಂಗ್ರೆಸ್ ಸರ್ಕಾರವಲ್ಲ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇದ್ದಾಗಲೇ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್ ಸಿ ) ದರ ಹೆಚ್ಚಳ ಮಾಡಿದೆ. ಕಾಲ ಕಾಲಕ್ಕೆ ವಿದ್ಯುತ್ ದರ ಹೆಚ್ಚಳ ಮಾಡುವ ಅಧಿಕಾರ ಹೊಂದಿರುವ ಕೆಇಆರ್ ಸಿಸಿ, ಭವಿಷ್ಯದಲ್ಲೂ ನಿಗದಿತವಾಗಿ ವಿದ್ಯುತ್ ದರ ಪರಿಷ್ಕರಣೆ ಮಾಡಲಿದೆ ಎಂದು ಸಮಜಾಯಿಸಿ ನೀಡಿ, ಅಧಿಕಾರಕ್ಕೆ ಬರುತ್ತಲೇ ಕಾಂಗ್ರೆಸ್ ವಿದ್ಯುತ್ ದರ ಏರಿಸಿದೆ ಎಂದು ಬಿಜೆಪಿ ಪ್ರತಿಭಟನೆ ಮಾಡುವುದರಲ್ಲಿ ಅರ್ಥವಿಲ್ಲ. ರಾಜಕೀಯ ಕಾರಣಕ್ಕೆ ಮಾಡುವ ಪ್ರತಿಭಟನೆಗಳಿಗೆ ಬೆಲೆ ಇರುವುದಿಲ್ಲ. ಆದರೆ ವಿದ್ಯುತ್ ದರ ಹೆಚ್ಚಳದ ಕುರಿತು ಸಂಬಂಧಿಸಿದ ಸಚಿವರೊಂದಿಗೆ ಸೇರಿ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಮುಖ್ಯಮಂತ್ರಿಗಳು ಜೊತೆ ಕೆಲವೇ ಆಯ್ದ ಸಚಿವರು ತಮ್ಮ ತಮ್ಮ ಇಲಾಖೆಗಳ ಬಗ್ಗೆ ಕೇಂದ್ರ ಸಚಿವರೊಂದಿಗೆ ಚರ್ಚಿಸಲು ದೆಹಲಿಗೆ ತೆರಳಿದ್ದಾರೆ. ಜೂನ್ 27 ನಂತರ ನಮ್ಮ ಇಲಾಖೆಗಳಿಗೆ ಸಂಬಂಧಿಸಿದಂತೆ ಸಮಗ್ರ ಮಾಹಿತಿ ಸಿದ್ಧಪಡಿಸಿಕೊಂಡು, ಜುಲೈ ಮೊದಲ ವಾರ ಕೇಂದ್ರ ಸಚಿವರನ್ನು ಭೇಟಿ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.