Advertisement

ಕಸದ ವಾಹನ ನಿಲ್ಲಿಸಲು ಜಾಗವೇ ಇಲ್ಲ !

10:11 AM Aug 09, 2018 | |

ಮಹಾನಗರ: ಪಾಲಿಕೆ ವ್ಯಾಪ್ತಿಯಲ್ಲಿ ತ್ಯಾಜ್ಯ ಸಂಗ್ರಹ- ವಿಲೇವಾರಿಗೆ ಬಳಕೆಯಾಗುತ್ತಿರುವ ವಾಹನಗಳನ್ನು ನಿಲ್ಲಿಸುವುದಕ್ಕೆ ಸೂಕ್ತ ಸ್ಥಳಾವಕಾಶ ದೊರೆಯದ ಹಿನ್ನೆಲೆಯಲ್ಲಿ ಈಗ ವಾಹನ ನಿರ್ವಹಣೆ ಮಾಡುವ ಪೌರ ಕಾರ್ಮಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

Advertisement

ಸಾಮಾನ್ಯವಾಗಿ ಕಸದ ವಾಹನಗಳನ್ನು ಕಂಡರೆ ಸಾಕು ಜನರು ಗಬ್ಬು ವಾಸನೆ ಬರುತ್ತದೆ ಎಂದು ಮೂಗು ಮುಚ್ಚಿ ದೂರ ಹೋಗುತ್ತಾರೆ. ಹೀಗಿರುವಾಗ, ಇಂತಹ ಕಸ ವಿಲೇವಾರಿ ಮಾಡುವ ವಾಹನಗಳನ್ನು ಒಂದು ಕಡೆ ಸಾಲು ಸಾಲಾಗಿ ನಿಲ್ಲಿಸಿದರೆ, ಅದಕ್ಕೆ ಸ್ಥಳೀಯರು ಖಂಡಿತವಾಗಿಯೂ ವಿರೋಧ ವ್ಯಕ್ತಪಡಿಸುತ್ತಾರೆ. ಈ ಸಮಸ್ಯೆಯಿಂದಾಗಿ, ನಗರದೊಳಗೆ, ಕಸ ಸಂಗ್ರಹಿಸುವ ವಾಹನಗಳನ್ನು ಕೆಲಸ ಮುಗಿದ ಮೇಲೆ ನಿಲುಗಡೆ ಮಾಡಲು ಎಲ್ಲಿಯೂ ಸ್ಥಳಾವಕಾಶ ಲಭಿಸುತ್ತಿಲ್ಲ.

ಅಲ್ಲದೆ ಇವುಗಳನ್ನು ನಿಲ್ಲಿಸಲು ನಗರದಲ್ಲಿ ಯಾರ್ಡ್‌ ವ್ಯವಸ್ಥೆ ಇಲ್ಲ. ಈಗ ನಗರದ ಅನೇಕ ಕಡೆಗಳಲ್ಲಿ ಹತ್ತತ್ತು ವಾಹನಗಳನ್ನು ನಿಲ್ಲಿಸುತ್ತಿದ್ದು, ಪಾಲಿಕೆ ಮತ್ತು ಆ್ಯಂಟನಿ ಸಂಸ್ಥೆಗಳ ಹಗ್ಗಜಗ್ಗಾಟದಿಂದಾಗಿ ನೂರಾರು ಮಂದಿ ಕಾರ್ಮಿಕರು ದಿನನಿತ್ಯ ಸಂಕಷ್ಟ ಅನುಭವಿಸುವಂತಾಗಿದೆ.

83 ವಾಹನ ಕಾರ್ಯನಿರ್ವಹಣೆ
ನಗರದಲ್ಲಿ ದಿನಂಪ್ರತಿ 83 ಘನತ್ಯಾಜ್ಯ ವಿಲೇವಾರಿ ವಾಹನಗಳು ಕಾರ್ಯನಿರ್ವಹಿಸುತ್ತಿವೆ. 823 ಮಂದಿ ಕಾರ್ಮಿಕರು ದುಡಿಯುತ್ತಿದ್ದಾರೆ. ತ್ಯಾಜ್ಯ ಸಂಗ್ರಹ ವಾಹನಗಳನ್ನು ನಿಲ್ಲಿಸಲು ಈ ಹಿಂದೆ ನಗರದ ಕೂಳೂರು ಸಮೀಪ ಯಾರ್ಡ್‌ ವ್ಯವಸ್ಥೆ ಮಾಡಲಾಗಿತ್ತು. ರಾತ್ರಿಯಾದಂತೆ ಎಲ್ಲ ವಾಹನಗಳು ಅಲ್ಲೇ ತಂಗುತ್ತಿದ್ದವು. ಆದರೆ ಆ ಪ್ರದೇಶದ ಸುತ್ತಮುತ್ತ ವಾಸನೆ ಬರುತ್ತದೆ ಎಂದು ಸ್ಥಳೀಯರು ಗಾಡಿ ನಿಲ್ಲಿಸಲು ವಿರೋಧ ವ್ಯಕ್ತಪಡಿಸಿದ್ದರು. ಸಮರ್ಪಕ ಯಾರ್ಡ್‌ ಗುರುತು ಮಾಡುವುದು ಮಹಾನಗರ ಪಾಲಿಕೆ ಮತ್ತು ಆ್ಯಂಟನಿ ಸಂಸ್ಥೆಯ ಜವಾಬ್ದಾರಿಯಾಗಿದ್ದು, ಇನ್ನೂ ಸ್ಥಳ ಹುಡುಕಲಾಗುತ್ತಿದೆ ಎಂದು ಎರಡೂ ಸಂಸ್ಥೆಗಳು ದಿನದೂಡುತ್ತಿವೆ.

ಹತ್ತತ್ತು ವಾಹನಗಳ ನಿಲುಗಡೆ
ಕೂಳೂರು ಬಳಿ ಇದ್ದಂತಹ ಯಾರ್ಡ್‌ಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ ಬಳಿಕ, ನಗರದ ಸುರತ್ಕಲ್‌, ಪಚ್ಚನಾಡಿ, ಕಾವೂರು, ಮಲ್ಲಿಕಟ್ಟೆ, ಮಣ್ಣಗುಡ್ಡೆ, ಕಂಕನಾಡಿ, ಮಂಗಳಾದೇವಿ ಸಹಿತ ವಿವಿಧ ಕಡೆಗಳಲ್ಲಿ ಸುಮಾರು ಹತ್ತತ್ತು ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ಈ ವಾಹನಗಳನ್ನು ಕಾವಲು ಕಾಯುವ ಸಲುವಾಗಿ ಕೆಲವೊಂದು ಕಡೆಗಳಲ್ಲಿ ಮಾತ್ರ ಭದ್ರತಾ ಸಿಬಂದಿಯನ್ನು ನೇಮಿಸಲಾಗಿದೆ.

Advertisement

ಗ್ಯಾರೇಜ್‌ ಇರುವುದು ಕೂಳೂರಿನಲ್ಲಿ
ನಗರದ ವಿವಿಧ ಕಡೆಗಳಲ್ಲಿ ನಿಲ್ಲಿಸಲಾದ ವಾಹನಗಳಿಗೆ ಯಾವುದೇ ಸಮಸ್ಯೆ ಉಂಟಾದರೆ ಸರಿಪಡಿಸಲು ಕೂಳೂರು ಬಳಿ ಇರುವ ಗ್ಯಾರೇಜ್‌ಗೆ ತೆಗೆದುಕೊಂಡು ಬರಬೇಕು. ಚಾಲಕ ಕೂಳೂರಿನಲ್ಲಿ ವಾಹನವನ್ನು ಬಿಟ್ಟು ಬಳಿಕ ತನ್ನ ಸ್ವಂತ ಖರ್ಚಿನಲ್ಲಿ ಬೇರೆ ವಾಹನ ಹಿಡಿಯಬೇಕು. ಬಳಿಕ ಮನೆಗೆ ತಲುಪುವಾಗ ರಾತ್ರಿಯಾಗುತ್ತದೆ.

ಸಮಸ್ಯೆ ಏನು?
ಘನತ್ಯಾಜ್ಯ ವಿಲೇವಾರಿ ಮಾಡುತ್ತಿರುವ 823 ಮಂದಿ ಕಾರ್ಮಿಕರಲ್ಲಿ ಹೆಚ್ಚಿನ ಮಂದಿ ಮಹಿಳೆಯರು. ಅದರಲ್ಲಿಯೂ ಬೈಕಂಪಾಡಿ, ಕೂಳೂರು ಸುತ್ತಮುತ್ತಲಿನ ಕಾರ್ಮಿಕರೇ ಹೆಚ್ಚು. ಮನೆ ಮನೆಗೆ ತೆರಳಿ ತ್ಯಾಜ್ಯ ವಿಲೇವಾರಿ ಮಾಡುವಂತಹ ಕಾರ್ಯಗಳು ಬೆಳಗ್ಗೆ ಸುಮಾರು 6 ಗಂಟೆಯಿಂದ ಪ್ರಾರಂಭಿಸಲಾಗುತ್ತದೆ. ಆದರೆ ವಾಹನಗಳು ಅಲ್ಲಲ್ಲಿ ತಂಗುವುದರಿಂದ ಬೆಳಗಿನ ಜಾವ ಕಾರ್ಮಿಕರು ಆಯಾ ಪ್ರದೇಶಕ್ಕೆ ಬರಲು ಕಷ್ಟವಾಗುತ್ತಿದೆ. ಪಾಲಿಕೆ ಅಥವಾ ಆ್ಯಂಟನಿ ಸಂಸ್ಥೆ ಕಾರ್ಮಿಕರಿಗೆಂದು ವಾಹನ ಸೌಕರ್ಯವನ್ನು ಒದಗಿಸಿಲ್ಲ. ಇದೇ ಕಾರಣದಿಂದ ಉದಾಹರಣೆಗೆ ಸುರತ್ಕಲ್‌ನಿಂದ ಜಪ್ಪು ಪ್ರದೇಶಕ್ಕೆ ಬಸ್‌ಗಳಲ್ಲಿ ಆಗಮಿಸುವುದರಲ್ಲಿ ಬೆಳಗ್ಗೆ 7 ಗಂಟೆಯಾಗುತ್ತಿದೆ. ಒಂದು ವೇಳೆ ಪಚ್ಚನಾಡಿ, ಸುರತ್ಕಲ್‌ ಸಮೀಪ ವಾಹನಗಳನ್ನು ನಿಲ್ಲಿಸಲು ಯಾರ್ಡ್‌ ನಿರ್ಮಿಸಿದರೆ ಎಲ್ಲ ಕೆಲಸ ಕಾರ್ಯಗಳು ಸುಸೂತ್ರವಾಗಿ ಸಾಗಲು ಸಾಧ್ಯ.

ಶೌಚಾಲಯ ವ್ಯವಸೆ ಇಲ್ಲ 
ರಾಜ್ಯ ವಾಹನ ಚಾಲಕರೊಬ್ಬರು ಉದಯವಾಣಿ ‘ಸುದಿನ’ಕ್ಕೆ ಪ್ರತಿಕ್ರಿಯಿಸಿ, ತ್ಯಾಜ್ಯ ವಿಲೇವಾರಿ ಮಾಡುವಂತಹ ಕಾರ್ಮಿಕರಿಗೆ ಸಮವಸ್ತ್ರ ನೀಡಿದ್ದು, ಅದನ್ನು ಧರಿಸಲು ಯಾವುದೇ ಕೊಠಡಿಯ ವ್ಯವಸ್ಥೆ ಇಲ್ಲ. ಅಷ್ಟೇ ಅಲ್ಲದೆ, ಶೌಚಾಲಯ ಕೂಡ ಒದಗಿಸಿಲ್ಲ. ಕಾರ್ಮಿಕರಲ್ಲಿ ಹೆಚ್ಚಿನ ಮಂದಿ ಮಹಿಳೆಯರಿದ್ದು, ಈಗ ರಸ್ತೆ ಬದಿಯಲ್ಲೇ ಸಮವಸ್ತ್ರ ಧರಿಸುವಂತಾಗಿದೆ. ಬೆಳಗ್ಗಿನ ವೇಳೆ ಮನೆಯಿಂದ ಬರುವಾಗಲೇ ಸಮವಸ್ತ್ರ ಧರಿಸಬಹುದು. ಆದರೆ ಸಂಜೆ ಮನೆಗೆ ತೆರಳುವ ವೇಳೆ ಬಟ್ಟೆ ಕೊಳೆಯಾಗಿರುತ್ತದೆ, ಬಸ್‌ನಲ್ಲಿ ಓಡಾಡುವಾಗ ಸಮಸ್ಯೆಯಾಗುತ್ತದೆ ಎನ್ನುತ್ತಾರೆ

ಆ್ಯಂಟನಿ ಸಂಸ್ಥೆಗೆ ತಿಳಿಸಲಾಗಿದೆ
ತ್ಯಾಜ್ಯ ವಿಲೇವಾರಿ ಮಾಡುವಂತಹ ವಾಹನಗಳು ನಗರದ ಅಲ್ಲಲ್ಲಿ ನಿಲ್ಲುತ್ತಿದ್ದು, ಈ ವಿಚಾರ ಗಮನಕ್ಕೆ ಬಂದಿದೆ. ಇದರಿಂದ ಕಾರ್ಮಿಕರಿಗೆ ತೊಂದರೆ ಉಂಟಾಗುತ್ತಿದೆ. ವಾಹನಗಳನ್ನು ನಿಲ್ಲಿಸಲು ಜಾಗದ ವ್ಯವಸ್ಥೆ ಕಲ್ಪಿಸುವುದು ಆ್ಯಂಟನಿ ಸಂಸ್ಥೆಯ ಜವಾಬ್ದಾರಿ. ಈ ವಿಚಾರವನ್ನು ಸಂಸ್ಥೆಯ ಗಮನಕ್ಕೆ ತಂದಿದ್ದೇವೆ.
 - ಭಾಸ್ಕರ್‌ ಕೆ.,
 ಪಾಲಿಕೆ ಮೇಯರ್‌

 ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next