Advertisement

ಹಾಲಿ ತಂಗುದಾಣಗಳಲ್ಲಿ ನಿಲ್ಲಲು ಆಗಲ್ಲ- ಕೂರಲು ಜಾಗವಿಲ್ಲ

10:19 AM Sep 29, 2018 | Team Udayavani |

ಸ್ಮಾರ್ಟ್‌ ಸಿಟಿ ಬಸ್‌ ನಿಲ್ದಾಣಗಳಿಗೆ ಹೈಟೆಕ್‌ ಸೌಲಭ್ಯ!

Advertisement

ಮಹಾನಗರ: ಸ್ಮಾರ್ಟ್‌ಸಿಟಿ ಯೋಜನೆಯಡಿ ನಗರದ ವಿವಿಧೆಡೆ ಈಗ ಹೈಟೆಕ್‌ ಮಾದರಿಯ ಸ್ಮಾರ್ಟ್‌ ಬಸ್‌ ನಿಲ್ದಾಣಗಳ ನಿರ್ಮಾಣ ಕಾರ್ಯ ಪ್ರಾರಂಭವಾಗಿದೆ. ಆದರೆ, ಈಗಿರುವ ಅನೇಕ ಬಸ್‌ ನಿಲ್ದಾಣಗಳ ನಿರ್ವಹಣೆಯಿಲ್ಲದೆಗಳ ಸ್ಥಿತಿ ಅಧೋಗತಿಯಾಗಿದ್ದು, ಎಷ್ಟೋ ಕಡೆಗಳಲ್ಲಿ ಪ್ರಯಾಣಿಕರು ಸೂಕ್ತ ಬಸ್‌ ಶೆಲ್ಟರ್‌ ಇಲ್ಲದೆ ಪರದಾಡುತ್ತಿದ್ದಾರೆ.

ಹೀಗಿರುವಾಗ, ಸರಕಾರವು ಲಕ್ಷಾಂತರ ರೂ. ಖರ್ಚು ಮಾಡಿ ಎಸಿಯಂಥಹ ಸುಖಾಸೀನ ಹೈಟೆಕ್‌ ಸೌಲಭ್ಯ ಹೊಂದಿರುವ ಸ್ಮಾರ್ಟ್‌ ಬಸ್‌ ನಿಲ್ದಾಣಗಳನ್ನು ನಿರ್ಮಿಸುತ್ತಿರುವುದರ ಔಚಿತ್ಯವಾದರೂ ಏನು ಎಂಬ ಪ್ರಶ್ನೆ ಈಗ ಸಾರ್ವಜನಿಕ ವಲಯದಲ್ಲಿ ಮೂಡಿದ್ದು, ಪಾಲಿಕೆಯ ಈ ಹೈಟೆಕ್‌ ಬಸ್‌ ನಿಲ್ದಾಣಗಳ ನಿರ್ಮಾಣಕ್ಕೆ ವಿಪಕ್ಷದವರು ಹಾಗೂ ನಗರವಾಸಿಗಳಿಂದ ಅಪಸ್ವರ ಎದ್ದಿದೆ.

ನಗರದ ಅನೇಕ ಕಡೆಗಳಲ್ಲಿ ಈಗಿರುವ ಬಸ್‌ ನಿಲ್ದಾಣಕ್ಕೆ ಹಾಸಿರುವ ಶೀಟ್‌ಗಳು ತುಕ್ಕು ಹಿಡಿದಿದ್ದು, ಕೆಲವೆಡೆ ತುಂಡಾಗಿವೆ. ಇದರಿಂದ ಮಳೆಗಾಲ ಬರುವಾಗ ಪ್ರಯಾಣಿಕರು ಕೊಡೆ ಹಿಡಿದು ನಿಲ್ಲಬೇಕಾದ ಸ್ಥಿತಿ ಇದೆ. ರಾತ್ರಿ ವೇಳೆ ಕೆಲವು ನಿಲ್ದಾಣಗಳಲ್ಲಿ ವಿದ್ಯುತ್‌ ದೀಪ ಉರಿಯುವುದಿಲ್ಲ. ಇದರಿಂದಾಗಿ ಪ್ರಯಾಣಿಕರಿಗೆ ತೊಂದರೆ ಉಂಟಾಗುತ್ತಿದೆ. 

ಮೂರು ಶ್ರೇಣಿಗಳಲ್ಲಿ ನಿರ್ಮಾಣ
ನಗರದ ಕಾವೂರು, ಮಣ್ಣಗುಡ್ಡ ಸೇರಿದಂತೆ ಅನೇಕ ಕಡೆಗಳಲ್ಲಿ ಸ್ಮಾಟ್‌ ಬಸ್‌ ನಿಲ್ದಾಣದ ಕಾಮಗಾರಿ ಆರಂಭವಾಗಿದೆ. ‘ಎ’, ‘ಬಿ’ ಹಾಗೂ ‘ಸಿ’ ಶ್ರೇಣಿಗಳಲ್ಲಿ ತಂಗುದಾಣ ನಿರ್ಮಿಸಲು ಯೋಚಿಸಲಾಗಿದೆ. ‘ಎ’ ಮಾದರಿಯ ಬಸ್‌ ನಿಲ್ದಾಣಗಳು 24 ಲಕ್ಷಗಳಲ್ಲಿ ‘ಬಿ’ ಮತ್ತು ‘ಸಿ’ ಮಾದರಿಯ ಬಸ್‌ ನಿಲ್ದಾಣಗಳು 12 ಲಕ್ಷ ರೂ.ಗಳಲ್ಲಿ ನಿರ್ಮಾಣವಾಗಲಿದೆ. ಕೆಲವೊಂದು ಪ್ರದೇಶಗಳಲ್ಲಿ ಈಗಿರುವ ಬಸ್‌ ನಿಲ್ದಾಣದ ಸ್ಥಳಾವಕಾಶವನ್ನು ಪರಿಗಣಿಸಿ ಬಸ್‌ತಂಗುದಾಣ ನಿರ್ಮಾಣ ಆಗಲಿದೆ.

Advertisement

‘ಎ’ ಮತ್ತು ‘ಬಿ’ ಶ್ರೇಣಿಯ ಬಸ್‌ ತಂಗುದಾಣವು 7.5 ಮೀ. ಉದ್ದ ಹಾಗೂ 2.5 ಮೀ. ಅಗಲವಿರಲಿದ್ದು, ‘ಸಿ’ ಶ್ರೇಣಿ ಬಸ್‌ ನಿಲ್ದಾಣ 6 ಮೀ. ಉದ್ದ ಹಾಗೂ 2.2 ಮೀ ಅಗಲವಿರಲಿದೆ. ಸ್ಮಾರ್ಟ್‌ ಬಸ್‌ ನಿಲ್ದಾಣಗಳಲ್ಲಿ ಅತ್ಯಾಧುನಿಕ ಸೌಲಭ್ಯಗಳು ದೊರಕಲಿದ್ದು, ಸಿ.ಸಿ. ಕೆಮರಾ, ರಿಯಲ್‌ ಟೈಮರ್‌ ಬಸ್‌ ಟ್ರ್ಯಾಕಿಂಗ್‌ ಸಿಸ್ಟಮ್‌, ಎಲ್‌ ಇಡಿ ಡಿಸ್‌ಪ್ಲೇ, ಜಾಹಿರಾತು ಪ್ಯಾನಲ್‌, ಇ-ಟಾಯ್ಲೆಟ್‌, ಅಟೋಮ್ಯಾಟಿಕ್‌ ಲೈಟಿಂಗ್‌ ಸಿಸ್ಟಮ್‌, 225 ಲೀ. ಸಾಮರ್ಥ್ಯದ ನೀರಿನ ಟ್ಯಾಂಕ್‌, ಎಕ್ಸಾಸ್ಟ್‌ ಪ್ಯಾನ್‌ ಮುಂತಾದ ಸೌಲಭ್ಯಗಳು ಇರಲಿದೆ.

ಬಸ್‌ ನಿಲಾಣವೇ ಇಲ್ಲ .. ಬಸ್‌ ನಿಲ್ಲುತ್ತೆ 
ನಗರದ ಪಿವಿಎಸ್‌ ಸರ್ಕಲ್‌ ಬಳಿ, ಬಂಟ್ಸ್‌ ಹಾಸ್ಟೆಲ್‌, ಪಂಪ್‌ ವೆಲ್‌, ಕಂಕನಾಡಿ, ಲಾಲ್‌ಬಾಗ್‌, ಪಡೀಲ್‌, ಬಲ್ಲಾಳ್‌ಬಾಗ್‌, ಬೆಸೆಂಟ್‌ ಕಾಲೇಜು, ಹಂಪನಕಟ್ಟೆ, ಮಿಲಾಗ್ರಿಸ್‌, ಬಂಟ್ಸ್‌ ಹಾಸ್ಟೆಲ್‌ ನಿಂದ ಜ್ಯೋತಿ ವೃತ್ತ ಮಾರ್ಗ, ಆ್ಯಗ್ನೆಸ್‌ ಕಾಲೇಜು ಬಳಿ ಸೇರಿದಂತೆ ನಗರದ ಇನ್ನಿತರ ಪ್ರದೇಶಗಳಲ್ಲಿ ಬಸ್‌ ನಿಲ್ಲಿಸಲಾಗುತ್ತಿದೆ. ಆದರೆ ಆ ಜಾಗದಲ್ಲಿ ಬಸ್‌ ನಿಲ್ದಾಣವಿಲ್ಲ. ಕೆಲವೆಡೆ ನಿಲ್ದಾಣವಿಲ್ಲದರೂ ಬಸ್‌ ನಿಲ್ಲಿಸುವುದಿಲ್ಲ.

ಮೂಲ ಸೌಕರ್ಯವಿಲ್ಲ
ನಗರದ ಕೆಲವು ಬಸ್‌ ನಿಲ್ದಾಣಗಳಲ್ಲಿ ಮೂಲ ಸೌಕರ್ಯವಿಲ್ಲ. ಸ್ಮಾರ್ಟ್‌ ಬಸ್‌ ನಿಲ್ದಾಣ ನಿರ್ಮಾಣಕ್ಕೂ ಮುನ್ನ ಪಾಲಿಕೆ ಈ ಬಗ್ಗೆ ಗಮನಹರಿಸಬೇಕಿತ್ತು. ಸ್ಮಾರ್ಟ್‌ ಬಸ್‌ ತಂಗುದಾಣದ ಬಗ್ಗೆ ಟೀಕೆಗಳು ಕೇಳಿಬರುತ್ತಿವೆ. ಈ ಬಗ್ಗೆ ಪಾಲಿಕೆ ಸಭೆಯಲ್ಲಿಯೂ ಚರ್ಚಿಸುತ್ತೇನೆ.
– ಪ್ರೇಮಾನಂದ ಶೆಟ್ಟಿ,
ಮನಪಾ ವಿಪಕ್ಷ ನಾಯಕ

ಸೌಕರ್ಯಕ್ಕೆ ಆದ್ಯತೆ
ನಗರದ ಕೆಲವು ಪ್ರದೇಶದ ಬಸ್‌ ನಿಲ್ದಾಣಗಳಲ್ಲಿ ಮೂಲ ಸೌಕರ್ಯದ ಕೊರತೆಯಿದೆ. ಈ ಬಗ್ಗೆ ಪಾಲಿಕೆ ಗಮನಕ್ಕೆ ಬಂದಿದ್ದು, ಅಂತಹ ಬಸ್‌ ನಿಲ್ದಾಣಗಳನ್ನು ಗುರುತಿಸಿ, ಸೌಲಭ್ಯ ಕಲ್ಪಿಸಲಾಗುವುದು.
– ಭಾಸ್ಕರ್‌ ಕೆ.,
ಪಾಲಿಕೆ ಮೇಯರ್‌

ಬಸ್‌ ಬೇ ಅಗತ್ಯ
ಸ್ಮಾರ್ಟ್‌ ಬಸ್‌ ನಿಲ್ದಾಣದ ಕಾಮಗಾರಿಗೂ ಮುನ್ನ ಬಸ್‌ ಬೇ ನಿರ್ಮಾಣ ಮಾಡಬೇಕಿತ್ತು. ಇದೀಗ ಕಾಮಗಾರಿ ಆರಂಭಗೊಂಡಿದ್ದು, ರಸ್ತೆಯ ಬದಿಗಳ ವರೆಗೆ ಬಸ್‌ ನಿಲ್ದಾಣ ಬರಲಿದೆ. ಇದರಿಂದಾಗಿ ಸಾರ್ವಜನಿಕರಿಗೆ ತೊಂದರೆ ಉಂಟಾಗಲಿದೆ.
– ಪ್ರದೀಪ್‌ ಕುಮಾರ್‌,
ಸಾರ್ವಜನಿಕರು, ಕೊಟ್ಟಾರ 

ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next