Advertisement
ಉಡುಪಿಯ ಗಾಂಧಿ ಪ್ರತಿಮೆ ಇರುವ ಕ್ಲಾಕ್ ಟವರ್‌ನಿಂದ ಕೆ.ಎಂ. ಮಾರ್ಗವಾಗಿ ಪ್ರತಿ ದಿನ ಸರಕಾರಿ ಹಾಗೂ ಖಾಸಗಿ ಬಸ್‌ಗಳು ಸಾವಿರಕ್ಕೂ ಹೆಚ್ಚು ಟ್ರಿಪ್ ಮಾಡುತ್ತಿದ್ದು, ಸಾವಿರಾರು ವಾಹನಗಳು, ಪ್ರಯಾಣಿಕರು, ವಿದ್ಯಾರ್ಥಿಗಳು, ನೌಕರರು, ಆಸ್ಪತ್ರೆಗೆ ಬರುವ ರೋಗಿಗಳು ಹಾಗೂ ಸಾರ್ವಜನಿಕರ ಓಡಾಟದಿಂದ ಈ ರಸ್ತೆ ಸದಾ ಸಂಚಾರ ದಟ್ಟಣೆಯಿಂದ ಕೂಡಿದ್ದು ಸರ್ವಿಸ್ ನಿಲ್ದಾಣ, ಕ್ಲಾಕ್ ಟವರ್ ಬಳಿ ಪ್ರತಿಭಟನೆ, ಸಾರ್ವಜನಿಕ ಸಭೆ, ಧರಣಿ ನಡೆದರೆ ತೊಂದರೆಯಾಗುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ| ಸಂಜೀವ್ ಎಂ. ಪಾಟೀಲ್ ಜಿಲ್ಲಾಡಳಿತಕ್ಕೆ ಸೂಚನೆ ನೀಡಿರುವುದನ್ನು ಪರಿಗಣಿಸಿ ಎಡಿಸಿ ಈ ನಿರ್ಧಾರ ಕೈಗೊಂಡಿದ್ದಾರೆ.
ಇನ್ನು ಮುಂದೆ ಯಾವುದೇ ಸಂಘಟನೆಗಳು, ಬೇರೆ ಬೇರೆ ಪಕ್ಷಗಳು ಪ್ರತಿಭಟನೆ, ಧರಣಿಯನ್ನು ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿಗಳ ಕಚೇರಿಯ ಹೊರಭಾಗದಲ್ಲಿರುವ ಸತ್ಯಾಗ್ರಹ ಸ್ಥಳದಲ್ಲಿ ಅವಕಾಶ ನೀಡಲಾಗಿದೆ. ಉಡುಪಿಯಲ್ಲಿ ಹೆಚ್ಚಾಗಿ ಸಂಜೆ ವೇಳೆ ಪ್ರತಿಭಟನೆಗಳನ್ನು ಆಯೋಜಿಸುವುದರಿಂದ ಆ ಸಮಯದಲ್ಲಿಯೇ ಸಂಚಾರ ದಟ್ಟಣೆ, ಜನ ಸಂಚಾರಕ್ಕೆ ಸಮಸ್ಯೆಯಾಗುತ್ತಿರುವುದರಿಂದ ಪೊಲೀಸ್ ಇಲಾಖೆ ಸೂಚನೆಯನ್ವಯ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ಡಿಸಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ. ಮರಳು ವಿಚಾರದಲ್ಲಿ ಆ. 30 ರಂದು ಬಿಜೆಪಿ ಹಮ್ಮಿಕೊಂಡಿದ್ದ ಅಹೋರಾತ್ರಿ ಧರಣಿಗೆ ಕ್ಲಾಕ್ ಟವರ್‌ನಲ್ಲಿ ಅನುಮತಿ ನಿರಾಕರಿಸಲಾಗಿತ್ತು. ಇದೇ ವೇಳೆ ಬಿಜೆಪಿ ಹಾಕಿದ್ದ ಪೆಂಡಾಲ್‌ನ್ನು ಸಹ ನಗರಸಭೆ ತೆರವುಗೊಳಿಸಿತ್ತು.