Advertisement

ಪ್ರವಾಸೋದ್ಯಮ ಇಲಾಖೆಯ ಒಂದು ಹುದ್ದೆಯಲ್ಲೂ  ಖಾಯಂ ಸಿಬಂದಿ ಇಲ್ಲ !

03:16 PM Apr 24, 2017 | Team Udayavani |

ಮಹಾನಗರ: ಹತ್ತು ಹಲವು ಪ್ರಸಿದ್ಧ ಧಾರ್ಮಿಕ ಸ್ಥಳಗಳು, ಸಮುದ್ರ ಕಿನಾರೆಗಳನ್ನು ಒಳಗೊಂಡು ಪ್ರವಾಸೋದ್ಯಮಕ್ಕೆ  ಹೆಸರಾಗಿರುವ  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸಬೇಕಾದ ರಾಜ್ಯ ಪ್ರವಾಸೋದ್ಯಮ ಇಲಾಖೆಯಲ್ಲಿ ಎಲ್ಲ ಖಾಯಂ ಹುದ್ದೆಗಳು ಖಾಲಿ ಇವೆ!

Advertisement

ಇದು, ಸ್ವಲ್ಪ ಅಚ್ಚರಿಯಾದರೂ ಸತ್ಯ. ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳಿಗೆ ದೇಶ, ವಿದೇಶಗಳಿಂದ ಪ್ರವಾಸಿಗರು ಆಗಮಿಸುತ್ತಾರೆ. 
ರಜಾ ದಿನಗಳಲ್ಲಂತೂ ಪ್ರವಾಸಿಗರ ಸಂಖ್ಯೆ ನಾಲ್ಕೈದು ಪಟ್ಟು ಹೆಚ್ಚಿರುತ್ತದೆ. ಪ್ರವಾಸಿ ತಾಣಗಳಲ್ಲಿ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಿ ಇನ್ನಷ್ಟು ಪ್ರವಾಸಿಗರನ್ನು ಸೆಳೆಯಬೇಕಾದ ಇಲಾ ಖೆಯೇ ಸೂಕ್ತ ಸಿಬಂದಿಯಿಲ್ಲದೇ ಬಸವಳಿದಿದೆ. ಎಲ್ಲ  ಹುದ್ದೆಗಳು ಖಾಲಿ ಪ್ರಸ್ತುತ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯಲ್ಲಿ ಎಲ್ಲ ಹುದ್ದೆಗಳು ಖಾಲಿ ಇವೆ. ಸದ್ಯಕ್ಕೆ ಇಲಾಖೆ ನಡೆಯುತ್ತಿ ರುವುದೇ ಪ್ರಭಾರ ಹೊಣೆಗಾರಿಕೆ ಮತ್ತು ದಿನಗೂಲಿ ನೌಕರರಿಂದ ಎಂದರೆ ವಿಚಿತ್ರವೆನಿಸಬಹುದು. ಎಲ್ಲ ರಾಜ್ಯಗಳಲ್ಲಿ ಪ್ರವಾಸೋದ್ಯಮಕ್ಕೆ ಅಲ್ಲಿನ ಸರಕಾರಗಳು ಹೆಚ್ಚಿನ ಉತ್ತೇಜನ ಮತ್ತು ಗಮನ ನೀಡುತ್ತಿದ್ದರೆ ನಮ್ಮಲ್ಲಿ ಕೇಳುವವರೇ ಇಲ್ಲವಾಗಿದೆ. ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಸರಕಾರ ಅನುದಾನ ನೀಡಿದರೂ ಅದನ್ನು ಖರ್ಚು ಮಾಡಲಿಕ್ಕೆ ಸಿಬಂದಿಗಳಿಲ್ಲದಂತಾಗಿದೆ.

15 ಮಂದಿ ಗೈಡ್‌ಗಳು
ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವೆಬ್‌ಸೈಟ್‌ನಲ್ಲಿ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳನ್ನು ಗುರುತಿಸಲಾಗಿದೆ. 
ಅದರಲ್ಲಿ 15 ಮಂದಿ ಗೈಡ್‌ಗಳ ಹೆಸರು, ಪರವಾನಿಗೆ ಸಂಖ್ಯೆ ಹಾಗೂ ದೂರವಾಣಿ ಸಂಖ್ಯೆಗಳನ್ನು ನೀಡಲಾಗಿದೆ. ಆದರೆ ಇವರನ್ನು ನೋಡಿಕೊಳ್ಳುವವರು ಯಾರೂ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಗೈಡ್‌ಗಳಲ್ಲಿ ಒಬ್ಬರನ್ನು “ಉದಯವಾಣಿ’ ಮಾತನಾಡಿಸಿದಾಗ, ನಮ್ಮನ್ನು ಗೈಡ್‌ ಆಗಿ ನೇಮಿಸಿದ್ದಾರೆ. ಆದರೆ ಜಿಲ್ಲೆಯ ಪ್ರವಾಸೋದ್ಯಮ ಇಲಾಖೆ ಯಾವುದೇ ಉತ್ತೇಜನ ನೀಡುವ ಕೆಲಸ ಮಾಡುತ್ತಿಲ್ಲ. ಮೂರು ತಿಂಗಳ ಹಿಂದೆ ಕರೆ ಮಾಡಿ ನೀವು ನೋಂದಣಿ ಮಾಡಿಕೊಳ್ಳಿ. ಅದಕ್ಕೆ ಬೇಕಾದ ವ್ಯವಸ್ಥೆ ಮಾಡುತ್ತೇವೆ ಎಂದಿದ್ದರು. ಆದರೆ ಆ ಬಳಿಕ ಯಾವುದೇ ಉತ್ತರವಿಲ್ಲ  ಎನ್ನುತ್ತಾರೆ ಅವರು.

ಒಟ್ಟು ಹುದ್ದೆಗಳೆಷ್ಟು ?
ಇಲಾಖೆಗೆ ಸಹಾಯಕ ನಿರ್ದೇಶಕರು, ಟೂರಿಸ್ಟ್‌  ಆಫೀಸರ್‌ ಅಥವಾ ಟೂರಿಸ್ಟ್‌  ಪ್ರಮೋಟರ್‌, ಪ್ರಥಮ ದರ್ಜೆ ಸಹಾಯಕ ಹಾಗೂ 
ಗ್ರೂಪ್‌ ಡಿ ನೌಕರ ಹುದ್ದೆಗಳು ಮಂಜೂರಾಗಿವೆ. ಆದರೆ ಈ ಎಲ್ಲ  ಹುದ್ದೆಗಳು ಖಾಲಿ ಇವೆ.  ಪ್ರಸ್ತುತ ಇಲಾಖೆಯ ಮುಖ್ಯಸ್ಥನ ಹುದ್ದೆ ಅಂದರೆ ಸಹಾಯಕ ನಿರ್ದೇಶಕರ ಹುದ್ದೆಯಲ್ಲಿ  ಜಿಲ್ಲಾ  ಅಂಕಿಅಂಶ ಇಲಾಖೆಯ ಉಪನಿರ್ದೇಶಕರು ಕಾರ್ಯನಿರ್ವಹಿಸುತ್ತಿದ್ದಾರೆ. 
ಇವರು ಕಳೆದ ವಾರವಷ್ಟೇ ಆ ಹುದ್ದೆಗೆ ಹೆಚ್ಚುವರಿಯಾಗಿ ನೇಮಕಗೊಂಡವರು.  ಉಳಿದಂತೆ ಇಬ್ಬರು ದಿನಗೂಲಿ ಆಧಾರದಲ್ಲಿದ್ದರೆ, ಒಬ್ಬರು ಕಂಪ್ಯೂಟರ್‌ ಆಪರೇಟರ್‌ ಹಾಗೂ ಇನ್‌ಫ್ರಾಸ್ಟ್ರಕ್ಚರ್‌ ಡೆವಲಪ್‌ಮೆಂಟ್‌ ಕಾರ್ಪೊರೇಶನ್‌ ಕರ್ನಾಟಕ (ಐಡೆಕ್‌)ದಿಂದ  ನೇಮಕಗೊಂಡ‌ ಒಬ್ಬ ಅಧಿಕಾರಿ ಇದ್ದಾರೆ.  ಇಲ್ಲಿಯ ಡಿ ಗ್ರೂಪ್‌ ನೌಕರ ಹಾಸನದಲ್ಲಿ ಕೆಲಸ ಮಾಡುತ್ತಿದ್ದಾರೆ.

ನನಗೆ ಮಾಹಿತಿ ಇಲ್ಲ
ಪ್ರವಾಸೋದ್ಯಮಕ್ಕೆ ಖಾಯಂ ಹುದ್ದೆ ಏಕೆ ನೇಮಕವಾಗಿಲ್ಲ  ಎಂಬುದರ ಕುರಿತು ಮಾಹಿತಿ ಇಲ್ಲ. ನನಗೆ ಕಳೆದ ವಾರವಷ್ಟೇ ಪ್ರಭಾರ ಜವಾಬ್ದಾರಿ ನೀಡಿದ್ದಾರೆ. ನಾನು ಅಂಕಿಅಂಶ ಇಲಾಖೆಯ ಉಪನಿರ್ದೇಶಕ.ಜತೆಗೆ ಉಡುಪಿ ಜಿಲ್ಲೆಯ ಅಂಕಿಅಂಶ ಇಲಾಖೆಯ ಜವಾಬ್ದಾರಿಯೂ ಇದೆ.
ಡಾ| ಉದಯಕುಮಾರ್‌, ಪ್ರಭಾರ ಸಹಾಯಕ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ದ.ಕ.

Advertisement

ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next