Advertisement

ಕಾರ್ನಾಡ್‌ರಂಥ ಪ್ರಖರ ಚಿಂತಕ ಮತ್ತೊಬ್ಬರಿಲ್ಲ

07:27 AM Jun 17, 2019 | Team Udayavani |

ಬೆಂಗಳೂರು: “ಗಿರೀಶ್‌ ಕಾರ್ನಾಡ್‌ ಅವರನ್ನು ಎಡಪಂಥೀಯ ಎನ್ನುವುದರ ಬಗ್ಗೆ ನನಗೆ ಆಕ್ಷೇಪಣೆ ಇದೆ. ಕನ್ನಡ ಚಿತ್ರರಂಗದಲ್ಲಿ ಅವರಂತಹ ಪ್ರಖರ ಚಿಂತಕ ಮತ್ತೊಬ್ಬರಿಲ್ಲ ‘ ಎಂದು ಹಿರಿಯ ನಿರ್ದೇಶಕ ಗಿರೀಶ್‌ ಕಾಸರವಳ್ಳಿ ಅವರು ಅಭಿಪ್ರಾಯಪಟ್ಟರು. ಕರ್ನಾಟಕ ಚಲನಚಿತ್ರ ಅಕಾಡೆಮಿ ಭಾನುವಾರ ಆಯೋಜಿಸಿದ್ದ “ಗಿರೀಶ್‌ ಕಾರ್ನಾಡ್‌’ ನಮನ ಸಲ್ಲಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

Advertisement

ಕಾರ್ನಾಡ್‌ ನನಗೆ ಸಿನಿಮಾ ವ್ಯಕ್ತಿಗಿಂತ ಹೆಚ್ಚಾಗಿ ಇಷ್ಟವಾಗೋದು ರಂಗಕರ್ಮಿಯಾಗಿ. ರಂಗಭೂಮಿಗೆ ಹೊಸ ಆಯಾಮವನ್ನು ಅವರು ಕೊಟ್ಟವರು. ಅವರ ನಿಧನ ಕನ್ನಡ ಚಿತ್ರರಂಗಕ್ಕೆ ಅತಿ ದೊಡ್ಡ ನಷ್ಟ. ಕನ್ನಡ ಚಿತ್ರರಂಗ ಅವರನ್ನು ಸಮರ್ಥವಾಗಿ ಬಳಸಿಕೊಳ್ಳಲಿಲ್ಲ. ಕನ್ನಡ ಚಿತ್ರರಂಗಕ್ಕೆ ಕಾರ್ನಾಡರು ಕೊಟ್ಟಷ್ಟು ಕೊಡುಗೆ ಬೇರೆ ಯಾರೂ ಕೊಟ್ಟಿಲ್ಲ.

ಆದರೂ, ಅವರನ್ನು ಕನ್ನಡ ಚಿತ್ರರಂಗ ಸರಿಯಾಗಿ ಗುರುತಿಸಲಿಲ್ಲ. ಎಂಥೆಂಥವರಿಗೋ ನಿರ್ದೇಶಕ ಪುಟ್ಟಣ್ಣ ಕಣಗಾಲ್‌ ಪ್ರಶಸ್ತಿಯನ್ನು ಕೊಡುತ್ತಾರೆ. ಆದರೆ, ಗಿರೀಶ್‌ ಕಾರ್ನಾಡ್‌ ಅವರಿಗೆ ಕೊನೆಗೂ ಅದು ಸಿಗಲೇ ಇಲ್ಲ. ಕಾರ್ನಾಡರು ಎಂದಿಗೂ ಇಂಥದ್ದನ್ನು ಬಯಸಿದವರೂ ಅಲ್ಲ. ಆದರೆ, ಕನ್ನಡ ಚಿತ್ರರಂಗ ಅವರನ್ನು ಹೊರಗಟ್ಟಿತು ಎಂಬುದು ನನ್ನ ಭಾವನೆ’ ಎಂದು ಗಿರೀಶ್‌ ಕಾಸವರಳ್ಳಿ ಹೇಳಿದರು.

ಕರ್ನಾಟಕ ಚಲಚಿತ್ರ ಅಕಾಡೆಮಿ ಅಧ್ಯಕ್ಷರಾದ ನಾಗತಿಹಳ್ಳಿ ಚಂದ್ರಶೇಖರ್‌ ಮಾತನಾಡಿ, “ಕಾರ್ನಾಡರ ಕೃತಿ, ನಾಟಕ, ಚಿತ್ರಗಳಿಗೆ ಎಂದೂ ಸಾವಿಲ್ಲ. ಅವರು ನಂಬಿದ ಸಿದ್ಧಾಂತದ ನೆಲೆಯಲ್ಲೇ ಬದುಕಿದವರು. ಅವರದ್ದು ಬಹುಮುಖ ವ್ಯಕ್ತಿತ್ವ. ಮರಾಠಿ, ಹಿಂದಿ, ಇಂಗ್ಲೀಷ್‌ ಹೀಗೆ ಹಲವು ಭಾಷೆಗಳಲ್ಲಿ ಹಿಡಿತವಿದ್ದರೂ, ಅವರ ಸಾಹಿತ್ಯ ಕೃಷಿ ಸಾಗಿದ್ದು ಮಾತ್ರ ಕನ್ನಡ ನೆಲದಲ್ಲಿ.

ನಟರಾಗಿ, ಬರಹಗಾರರಾಗಿ, ಸಾಹಿತಿಯಾಗಿ, ನಿರ್ದೇಶಕರಾಗಿ ಅವರು ಜನಮಾನಸದಲ್ಲಿ ಸಾರ್ವಕಾಲಿಕವಾಗಿ ನಿಲ್ಲುತ್ತಾರೆ’ ಎಂದು ನಾಗತಿಹಳ್ಳಿ ಚಂದ್ರಶೇಖರ್‌ ಹೇಳಿದರು. ನಿರ್ದೇಶಕ ನಾಗಾಭರಣ ಮಾತನಾಡಿ, “ನನ್ನ ಸಿನಿಮಾ ಜರ್ನಿಯಲ್ಲಿ ಕಾರ್ನಾಡ್‌ ಅವರ ಪಾತ್ರ ಮಹತ್ವವಾದದ್ದು. ಅವರೊಂದಿಗೆ ನನ್ನ ಸಿನಿಮಾರಂಗದ ಪಯಣ ಶುರುವಾಯಿತು.

Advertisement

ನಾಟಕಕ್ಕೆ ಕಾರಂತರು ಗುರುವಾದರೆ, ಸಿನಿಮಾಗೆ ಗಿರೀಶ್‌ ಕಾರ್ನಾಡ್‌ ನನ್ನ ಗುರು. ಕಾರಂತರು ರಂಗಭೂಮಿಯಲ್ಲಿ ಶಿಸ್ತು ಹೇಳಿಕೊಟ್ಟರೆ, ಕಾರ್ನಾಡರು ಸಿನಿಮಾರಂಗದಲ್ಲಿ ಶಿಸ್ತು ಕಲಿಸಿಕೊಟ್ಟರು. ಕಾರ್ನಾಡ್‌ ಅವರು ಸಿನಿಮಾ ಹೇಗೆ ಮಾಡಬೇಕು, ಸವಾಲುಗಳನ್ನು ಯಾವ ರೀತಿ ಎದುರಿಸಬೇಕು ಎಂಬುದನ್ನು ಹೇಳಿಕೊಟ್ಟ ಮಹಾನ್‌ ಗುರು’ ಎಂದರು.

ಹಿರಿಯ ಕಲಾವಿದೆ ಬಿ.ಜಯಶ್ರೀ ಮಾತನಾಡಿ, “ನಾನು “ಹಯವದನ’ ನಾಟಕದಲ್ಲಿ ನಟಿಸುವಾಗ, ನಾಟಕ ನೋಡಲು ಕಾರ್ನಾಡರು ಬರುತ್ತಿದ್ದರು. ಆ ನಾಟಕದ ಲೇಖಕರು ನಾಟಕ ನೋಡಲು ಬರುತ್ತಾರೆ ಅಂದಾಗ, ಎಲ್ಲೋ ಒಂದು ಕಡೆ ಭಯ ಸಹಜವಾಗಿರುತ್ತಿತ್ತು. ಆದರೆ, ಪ್ರದರ್ಶನದ ಬಳಿಕ ಅವರು ಪ್ರತಿ ಸಲವೂ ಮೆಚ್ಚುಗೆ ವ್ಯಕ್ತಪಡಿಸಿ, ಕೆಲ ಸಲಹೆ ಕೊಟ್ಟು ಹೋಗುತ್ತಿದ್ದರು.

ಕಲಾವಿದರ ಜತೆ ಬಾಂಧವ್ಯ ಇಟ್ಟುಕೊಂಡ ಆ ರೀತಿಯ ಲೇಖಕರು ಕಡಿಮೆ,’ ಎಂದು ಹಳೆಯ ನೆನಪುಗಳನ್ನು ಬಿ.ಜಯಶ್ರೀ ಮೆಲುಕು ಹಾಕಿದರು. ಈ ಸಂದರ್ಭದಲ್ಲಿ ನಿರ್ದೇಶಕ ಕೆ.ಎಂ.ಚೈತನ್ಯ ಮಾತನಾಡಿದರು. ಕಾರ್ಯಕ್ರಮದಲ್ಲಿ ಗಿರೀಶ್‌ ಕಾರ್ನಾಡ್‌ ಅವರ ಆಪ್ತರು, ಶಿಷ್ಯಂದಿರು, ಅಭಿಮಾನಿಗಳು ಹಾಗು ಚಿತ್ರರಂಗದ ಗಣ್ಯರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next