Advertisement

ಭಗವದ್ಗೀತೆ ಪಠ್ಯಕ್ಕೆ ವಿರೋಧ ಇಲ್ಲ : ಖಾದರ್‌

01:04 PM Mar 20, 2022 | Team Udayavani |

ಬಳ್ಳಾರಿ: ಹೃದಯ ಶುದ್ಧಿ ಮಾಡುವ ಶಕ್ತಿ ಹೊಂದಿರುವ ಹಾಗೂ ನೈತಿಕ ಮೌಲ್ಯ ತುಂಬುವ ಧಾರ್ಮಿಕ ವಿಚಾರಧಾರೆ ತಿಳಿಸುವುದನ್ನು ಸ್ವಾಗತಿಸುತ್ತೇವೆ ಎಂದು ಕಾಂಗ್ರೆಸ್‌ ವಿಧಾನಸಭ ಉಪನಾಯಕ ಯು.ಟಿ. ಖಾದರ್‌ ಹೇಳಿದರು.

Advertisement

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಶಾಲೆಗಳಲ್ಲಿ ಭಗವದ್ಗೀತೆ ಪಠ್ಯ ಕುರಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಜನರ ಹೃದಯ ಶುದ್ಧಿ ಮಾಡುವ, ಮಕ್ಕಳಲ್ಲಿ ನೈತಿಕತೆ ಬಿತ್ತುವ ಭಗವದ್ಗೀತೆ, ಕುರಾನ್‌, ಬೈಬಲ್‌, ಬಸವಣ್ಣನವರ ವಚನ, ನಾರಾಯಣ ಗುರುಗಳ ತತ್ವವನ್ನು ಬಿತ್ತುವ ಶಿಕ್ಷಣ ಕೊಡಿಸಬೇಕಿದೆ. ಹೀಗಾಗಿ ಶಾಲೆಯಲ್ಲಿ ಭಗವದ್ಗೀತೆ ಪ್ರವಚನ ಮಾಡಿಸುವುದರ ಕುರಿತು ಯಾವುದೇ ವಿರೋಧ ಇಲ್ಲ ಎಂದು ಸ್ಪಷ್ಟಪಡಿಸಿದರು.

ಶಾಲಾ-ಕಾಲೇಜುಗಳಲ್ಲಿ ಧರ್ಮಾಧಾರಿತ ಹಿಜಾಬ್‌ಗ ವಿರೋಧ ವ್ಯಕ್ತಪಡಿಸಿದ ಬಿಜೆಪಿಯವರು, ಪಠ್ಯಪುಸ್ತಕಗಳಲ್ಲಿ ಧರ್ಮಾಧಾರಿತ ಭಗವದ್ಗೀತೆಯನ್ನು ಹೇಗೆ ಪಠಿಸುತ್ತಾರೆ. ಒಳ್ಳೆಯದು ಮಾಡುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ ಓಟ್‌ ಬ್ಯಾಂಕ್‌ಗಾಗಿ ಗೊಂದಲ ಸೃಷ್ಟಿಸಿ, ಸಮಾಜವನ್ನು ಸದಾ ಗೊಂದಲದಲ್ಲಿ ಇಡುವುದು ಸರಿಯಲ್ಲ. ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ನೈತಿಕ ಮೌಲ್ಯಗಳನ್ನು ಕಲಿಸುವುದು ಅಗತ್ಯವಿದೆ ಎಂದವರು ತಿಳಿಸಿದರು.

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದು ಖಚಿತ. ಸಿದ್ದರಾಮಯ್ಯ ಮತ್ತೂಮ್ಮೆ ಮುಖ್ಯಮಂತ್ರಿ ಆಗುವುದು ಖಚಿತ ಎಂದರು.

ಹಿಜಾಬ್‌ ಹಿಂದೆ ಕಾಣದ ಕೈಗಳಿವೆ

Advertisement

ಹಿಜಾಬ್‌ ಸಂಬಂಧ ಹೈಕೋರ್ಟ್‌ ನೀಡಿರುವ ಐತಿಹಾಸಿಕ ತೀರ್ಪಿನ ಘಟನೆ ಹಿಂದೆ ಕಾಣದ ಕೈಗಳಿವೆ ಎಂದು ಮಾಜಿ ಸಂಸದ ವಿ.ಎಸ್‌. ಉಗ್ರಪ್ಪ ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ವಕೀಲ ವೃತ್ತಿ ಜೀವನದಲ್ಲಿ ಇಂತಹ ತೀರ್ಪು ನೋಡಿಲ್ಲ. ಹೈಕೋರ್ಟ್‌ ಈ ರೀತಿ ಹೇಳಿದೆ ಎಂದರೆ ರಾಜ್ಯ-ಕೇಂದ್ರ ಸರ್ಕಾರಗಳಿಗೆ ಈ ಬಗ್ಗೆ ಏಕೆ ಮಾಹಿತಿ ಇರಲಿಲ್ಲ. ಗುಪ್ತಚರ ಇಲಾಖೆ ಏನು ಮಾಡುತ್ತಿದೆ. ಹಿಜಾಬ್‌ ವಿಷಯದಲ್ಲಿ ರಾಜ್ಯ-ಕೇಂದ್ರ ಸರ್ಕಾರಗಳು ವಿಫಲವಾಗಿವೆ ಎಂದರು.

ಇದೊಂದು ಜೀವವಿಲ್ಲದ ಸರ್ಕಾರವಾಗಿದೆ ಎಂದು ಆರೋಪಿಸಿದ ಉಗ್ರಪ್ಪ, ರಾಜ್ಯ ಸರ್ಕಾರ ಸಮಾಜವನ್ನು ಒಡೆದು ಓಟ್‌ ಬ್ಯಾಂಕ್‌ ಮಾಡುವ ಕೆಲಸ ಮಾಡುತ್ತಿದೆ. ಹಿಜಾಬ್‌, ಭಗವದ್ಗೀತೆ, ಕಾಶ್ಮೀರ ಫೈಲ್ಸ್‌ ಚಿತ್ರಗಳಂತಹ ಭಾವನಾತ್ಮಕ ವಿಷಯಗಳಿಂದ ಜನರನ್ನು ಓಟ್‌ ಬ್ಯಾಂಕ್‌ ಮಾಡಿಕೊಳ್ಳಲು ಮುಂದಾಗಿದೆ. ಇದಕ್ಕೆ ಜನರೇ ತಕ್ಕ ಬುದ್ಧಿ ಕಲಿಸಲಿದ್ದಾರೆ ಎಂದರು.ಮಾಜಿ ಸಂಸದ ಬಿ.ಎನ್‌. ಚಂದ್ರಪ್ಪ, ಕೆಪಿಸಿಸಿ ಮುಖಂಡ ಮಂಜುನಾಥ್‌, ಜಿಲ್ಲಾಧ್ಯಕ್ಷ ಜಿ.ಎಸ್‌. ಮಹ್ಮದ್‌ ರಫೀಕ್‌, ಯತೀಂದ್ರಗೌಡ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next