ಬೆಂಗಳೂರು: ‘ರಾಜ್ಯದಲ್ಲಿ ಬಿಜೆಪಿಯು ಯಾವುದೇ ಆಪರೇಷನ್ ನಡೆಸಿಲ್ಲ, ಇಂಜೆಕ್ಷನ್ನು ಇಲ್ಲ, ಟ್ಯಾಬ್ಲೆಟ್ಟೂ ಇಲ್ಲ’ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸರ್ಕಾರ ಕೆಡವಲು ಬಿಜೆಪಿ ಯಾವುದೇ ಪ್ರಯತ್ನ ನಡೆಸಿಲ್ಲ. ರಾಜ್ಯ ಮೈತ್ರಿ ಸರ್ಕಾರ ಪತನವಾದರಷ್ಟೇ ರಾಜ್ಯಾಧ್ಯಕ್ಷರು, ಇತರೆ ನಾಯಕರು, ಪಕ್ಷದ ವರಿಷ್ಠರು ಚರ್ಚಿಸಿ ಸೂಕ್ತ ತೀರ್ಮಾನಕ್ಕೆ ಬರಲಿದ್ದಾರೆ ಎಂದು ತಿಳಿಸಿದರು.
ಶಾಸಕರ ರಾಜೀನಾಮೆ ಹಿಂದೆ ಪ್ರಧಾನಿ ಮೋದಿ, ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಕೈವಾಡವಿದೆ ಎಂಬುದಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಕ್ಕೆ ಪ್ರತಿಕ್ರಿಯಿಸಿದ ರವಿಕುಮಾರ್, ಸಿದ್ದರಾಮಯ್ಯ ಅವರ ತಟ್ಟೆಯಲ್ಲಿ ಎಷ್ಟು ನೊಣ ಬಿದ್ದಿದೆ ಎಂಬುದನ್ನು ಮೊದಲು ನೋಡಿಕೊಳ್ಳಲಿ. ಕಾಂಗ್ರೆಸ್‌ನಲ್ಲೇ ಎಷ್ಟು ಮಂದಿ ಅವರ ಪಕ್ಷದ ವಿರುದ್ಧ ಮಾತನಾಡಿದ್ದಾರೆ, ಜೆಡಿಎಸ್‌ನಲ್ಲಿ ಎಷ್ಟು ಮಂದಿ ಹಿರಿಯ ನಾಯಕರು, ಮಾಜಿ ಸಚಿವರು ಪಕ್ಷದ ವಿರುದ್ಧ ಮಾತನಾಡಿದ್ದಾರೆ ಎಂಬುದನ್ನು ಗಮನಿಸಲಿ. ಸಿದ್ದರಾಮಯ್ಯ ಅವರು ಬಿಜೆಪಿ ಸುಧಾರಣೆ ಮಾತು ಬಿಟ್ಟು ತಮ್ಮ ಪಕ್ಷದ ಕತೆ ಏನಾಗಿದೆ ಎಂಬುದನ್ನು ನೋಡಿಕೊಳ್ಳಲಿ ಎಂದು ತಿರುಗೇಟು ನೀಡಿದರು.
ನಿರಾಧಾರ ಆರೋಪ: ಬಿಜೆಪಿ 40 ಕೋಟಿ ರೂ. ಹಣದ ಆಫರ್ ನೀಡಿತ್ತು ಎಂಬುದಾಗಿ ಜೆಡಿಎಸ್ ಶಾಸಕ ಮಹದೇವ್ ಹೇಳಿಕೆಗೆ ಪ್ರತಿಕ್ರಿಯಿಸಿದ ರವಿಕುಮಾರ್, ಇಷ್ಟು ದಿನ ಅವರು ಏನು ಮಾಡುತ್ತಿದ್ದರು. ಪಂಚತಾರಾ ಹೋಟೆಲ್ನಲ್ಲಿ ಮುಖ್ಯಮಂತ್ರಿ ಎಚ್. ಡಿ.ಕುಮಾರಸ್ವಾಮಿಯವರ ಪಕ್ಕದಲ್ಲಿ ಊಟ ಮಾಡುತ್ತಾ ಕುಳಿತಿದ್ದರೆ? ಇದೆಲ್ಲವೂ ನಿರಾಧಾರ ಎಂದರು.