ಹುಬ್ಬಳ್ಳಿ: ನನಗೆ ಪಕ್ಷ ಉಳಿಸಕೊಳ್ಳುವುದು ಮುಖ್ಯವಾಗಿದ್ದು,ರಾಜ್ಯಾಧ್ಯಂತ ಪ್ರವಾಸ ಮಾಡಿ ಪಕ್ಷ ಸಂಘಟನೆ ಮಾಡುವುದಾಗಿ ಜೆಡಿಎಸ್ ರಾಷ್ಟ್ರಾಧ್ಯಕ್ಷ,ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಭಾನುವಾರ ಹೇಳಿಕೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಲೋಕಸಭಾ ಚುನಾವಣೆಯಲ್ಲಿ ಪಕ್ಷ ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕು. ಕುಮಾರಸ್ವಾಮಿ ಅವರು ಸಿಎಂ ಆಗಿರುವುದರಿಂದ ಪಕ್ಷ ಸಂಘಟನೆ ಮಾಡಲಾಗುತ್ತಿಲ್ಲ.ಆ ಕೆಲಸ ನಾನು ಮಾಡುತ್ತಿದ್ದೇನೆ’ ಎಂದರು.
‘ತೃತೀಯ ರಂಗ ಇನ್ನೂ ರಚನೆಯಾಗಿಲ್ಲ, ಆದರೆ ಎನ್‌ಡಿಎಯೇತರ ಎಲ್ಲಾ ಪಕ್ಷಗಳು ಒಟ್ಟಿಗೆ ಸೇರಿ ಮಾತುಕತೆ ನಡೆಸಿದ್ದೇವೆ. ಚುನಾವಣೆಗೆ ಮುನ್ನ ಕೆಲವು ಪಕ್ಷಗಳು ಒಟ್ಟಾಗಲಿವೆ. ಚುನಾವಣೆ ನಡೆದ ಬಳಿಕವೂ ಕೆಲ ಪಕ್ಷಗಳು ಒಟ್ಟು ಸೇರಲಿವೆ’ ಎಂದರು.
‘ರಾಹುಲ್ ಗಾಂಧಿ ನಾಯಕತ್ವದಲ್ಲಿ ಅಭ್ಯಂತರವಿಲ್ಲ’ ಎಂದು ಇದೇ ವೇಳೆ ಹೇಳಿದರು.
‘ಉತ್ತರ ಕರ್ನಾಟಕಕ್ಕೆ ಬಜೆಟ್‌ನಲ್ಲಿ ಯಾವುದೇ ಅನ್ಯಾಯವಾಗಿಲ್ಲ. ಈ ಬಗ್ಗೆ ಶ್ವೇತ ಪತ್ರ ಹೊರಡಿಸಲು ಕುಮಾರಸ್ವಾಮಿಗೆ ಹೇಳುತ್ತೇನೆ’ ಎಂದರು.
ಬಜೆಟ್ ವಿರುದ್ಧ ಟೀಕಿಸಿದ್ದ ಕಾಂಗ್ರೆಸ್ ಶಾಸಕ ಎಚ್.ಕೆ.ಪಾಟೀಲ್ ವಿರುದ್ಧ ತೀವ್ರ ಕಿಡಿ ಕಾರಿದರು.