Advertisement
ಶ್ರೀರಾಮಪುರ ಭಾಗದಲ್ಲಿ ಹೆಚ್ಚು ವಾಸವಿರುವ ಬಡವರು, ಮಧ್ಯಮ ವರ್ಗದವರ ಅನುಕೂಲಕ್ಕಾಗಿ 1963ರಲ್ಲಿ ಕೆ.ರಾಧಾಬಾಯಿ ಅವರ ಹೆಸರಿನಲ್ಲಿ ನಿರ್ಮಿಸಿರುವ ಹೆರಿಗೆ ಆಸ್ಪತ್ರೆಗೆ ನಿತ್ಯ ನೂರಾರು ಮಂದಿ ಬರುತ್ತಾರೆ. ಆದರೆ, ಪಾಲಿಕೆ ಅಧಿಕಾರಿಗಳು ಮಾತ್ರ ಆಸ್ಪತ್ರೆ ಅಭಿವೃದ್ಧಿಗೆ ಮುಂದಾಗಿಲ್ಲ. ಮಾತ್ರವಲ್ಲ ಆಸ್ಪತ್ರೆಗೆಂದೇ ನಿರ್ಮಿಸಿರುವ ಸುಸಜ್ಜಿತ ಕಟ್ಟಡವನ್ನು ಖಾಸಗಿಯವರಿಗೆ ಬಾಡಿಗೆ ನೀಡಿದ್ದಾರೆ!
Related Articles
Advertisement
ವಿದ್ಯುತ್ ವ್ಯತ್ಯಯ ಸ್ಥಗಿತಗೊಂಡ ಫೋಟೋ ಥೆರಪಿ: ಇತ್ತೀಚೆಗೆ ಆಸ್ಪತ್ರೆಯಲ್ಲಿ ಜನಿಸಿದ ಮಗುವಿಗೆ ಜಾಂಡೀಸ್ ಇದ್ದ ಹಿನ್ನೆಲೆಯಲ್ಲಿ ವೈದ್ಯರು “ಬ್ಲೂಲೈಟ್ ಫೋಟೋ ಥೆರಪಿ’ ನಡೆಸಲು ಸೂಚಿಸಿದ್ದರು. ಸಾಮಾನ್ಯವಾಗಿ ಜಾಂಡೀಸ್ ಕಾಣಿಸಿಕೊಂಡ ಮಕ್ಕಳಿಗೆ ನಿರಂತರವಾಗಿ 48 ಗಂಟೆಗಳು ಈ ಥೆರಪಿ ನೀಡಿದರೆ ಮಗು ಚೇತರಿಸಿಕೊಳ್ಳುತ್ತದೆ. ಆದರೆ, ಜ.26ರಂದು ಮಗುವಿಗೆ ಥೆರಪಿ ನಡೆಸುವ ವೇಳೆ 4ಗಂಟೆ ವಿದ್ಯುತ್ ವ್ಯತ್ಯಯವಾಗಿತ್ತು. ಜತೆಗೆ ಜನರೇಟರ್ ಕೆಟ್ಟಿದ್ದ ಹಿನ್ನೆಲೆಯಲ್ಲಿ ಮಗುವಿಗೆ ನಿರಂತರವಾಗಿ ಥೆರಪಿ ನೀಡಲು ಸಾಧ್ಯವಾಗದೆ ಮಗು ಮೃತಪಟ್ಟಿತ್ತು.
ಧೂಳು ಹಿಡಿಯುತ್ತಿದೆ ಎಕ್ಸ್‌ರೆ ಸಾಧನ: ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನದಡಿ ಆಸ್ಪತ್ರೆಗೆ ಎಕ್ಸ್‌ರೆ ಸಾಧನಗಳನ್ನು ಪೂರೈಸಲಾಗಿದೆ. ಆದರೆ, ಸ್ಥಳದ ಅಭಾವದಿಂದ ಯಂತ್ರಗಳು ಧೂಳು ಹಿಡಿಯುತ್ತಿವೆ. ಯಂತ್ರೋಪಕರಣಗಳು ಬಂದು ಎರಡು ತಿಂಗಳು ಕಳೆದರೂ ಬಳಕೆಯಾಗಿಲ್ಲ. ಜತೆಗೆ ಯಂತ್ರ ಕಾರ್ಯನಿರ್ವಹಿಸಲು ಅಗತ್ಯವಿರುವ 40ಕೆವಿ ವಿದ್ಯುತ್ ಕೇಂದ್ರ ಅಳವಡಿಸಲು ಬೆಸ್ಕಾಂಗೆ ಮನವಿ ಮಾಡಿದರೂ ಕ್ರಮಕ್ಕೆ ಮುಂದಾಗಿಲ್ಲ.
ಎರಡು ಲಕ್ಷದ ಬದಲು 7 ಸಾವಿರ ಬಾಡಿಗೆ: ಬಿಬಿಎಂಪಿ ವತಿಯಿಂದ ಶ್ರೀರಾಮಪುರ ಹೆರಿಗೆ ಆಸ್ಪತ್ರೆಗೆ ಕೂಗಳತೆ ದೂರದಲ್ಲಿ ಸುಸಜ್ಜಿತವಾದ ಅಂಬೇಡ್ಕರ್ ಡೇ ಕೇರ್ ಸೆಂಟರ್ ಕಟ್ಟಡ ನಿರ್ಮಿಸಲಾಗಿದೆ. ಹೆರಿಗೆ ಆಸ್ಪತ್ರೆಯನ್ನು ನೂತನ ಕಟ್ಟಡಕ್ಕೆ ಸ್ಥಳಾಂತರಿಸುವಂತೆ ಸ್ಥಳೀಯ ಪಾಲಿಕೆ ಸದಸ್ಯರು ಪಾಲಿಕೆ ಆಯುಕ್ತರಿಗೆ ಮನವಿ ನೀಡಿದ್ದಾರೆ.
ಆದರೆ, ಅಧಿಕಾರಿಗಳು ಮಾತ್ರ ಕಟ್ಟಡವನ್ನು ಕೇವಲ 7 ಸಾವಿರ ರೂ.ಗೆ ಬಾಡಿಗೆಗೆ ನೀಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಕಟ್ಟಡವನ್ನು ಎರಡು ಸಂಸ್ಥೆಗಳಿಗೆ ಜಂಟಿಯಾಗಿ ನೀಡಲು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಹಾಗೂ ಕೌನ್ಸಿಲ್‌ನಲ್ಲಿ ಒಪ್ಪಿಗೆ ನೀಡಲಾಗಿದೆ. ಆದರೆ, ಒಂದು ಸಂಸ್ಥೆ ತನಗೆ ಸೌಲಭ್ಯ ಬೇಡವೆಂದು ಪತ್ರ ನೀಡಿ ಒಪ್ಪಂದದಿಂದ ದೂರ ಸರಿದಿದೆ.
ಅದರಂತೆ ಒಪ್ಪಂದವನ್ನು ರದ್ದುಗೊಳಿಸಿ ಮತ್ತೆ ಕೌನ್ಸಿಲ್ ಮುಂದೆ ಮಂಡಿಸಿ ಒಪ್ಪಿಗೆ ಪಡೆಯಬೇಕಿತ್ತು. ಜತೆಗೆ ಕಟ್ಟಡಕ್ಕೆ ಲೋಕೋಪಯೋಗಿ ಇಲಾಖೆ 1,84,595 ರೂ. ಬಾಡಿಗೆ ನಿಗದಿಪಡಿಸಿದ್ದರೂ, ದ್ವಿತೀಯ ದರ್ಜೆ ಸಹಾಯಕರೊಂದಿಗೆ ಖಾಸಗಿಯವರು ಒಪ್ಪಂದ ಮಾಡಿಕೊಂಡು ಕೇವಲ 7 ಸಾವಿರ ರೂ.ಗೆ ಬಾಡಿಗೆ ಪಾವತಿಸುತ್ತಿದ್ದಾರೆ.
* ವೆಂ. ಸುನೀಲ್ ಕುಮಾರ್