ಮಂಡ್ಯ/ಮೈಸೂರು: “ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿಯಾಗಿ ನನಗೇನೂ ಆಗಬೇಕಿಲ್ಲ. ನಾನು ಅಮಿತ್ ಶಾ ಅವರನ್ನು ಭೇಟಿಯಾಗಿದ್ದೇನೆಂದು ಸಿಎಂಗೆ ಕನಸು ಬಿದ್ದಿದೆಯಾ?” ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಮೈಸೂರಿನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಅವರು ಕನಸಿನಲ್ಲಿ ಅಮಿತ್ ಶಾ ಅವರನ್ನು ಭೇಟಿಯಾಗಿರಬಹುದು. ಜನರನ್ನು ದಿಕ್ಕು ತಪ್ಪಿಸುವ ಉದ್ದೇಶದಿಂದ ಸಿದ್ದರಾಮಯ್ಯ ಅವರು ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ನಾನು ಅಮಿತ್ ಶಾ ಅವರನ್ನು ಭೇಟಿಯಾಗಿದ್ದಕ್ಕೆ ಸಿದ್ದ ರಾಮಯ್ಯ ಅವರ ಬಳಿಯಲ್ಲಿ ಸಾಕ್ಷಿ ಇದ್ದರೆ ತೋರಿಸಲಿ ಎಂದು ಸವಾಲು ಹಾಕಿದರು. ಗುಪ್ತಚರ ಇಲಾಖೆ ವರದಿಯಲ್ಲಿ ಜೆಡಿಎಸ್ ಮುಂದಿದೆ ಎಂಬ ಮಾಹಿತಿ ಇರುವುದರಿಂದ ಸಿದ್ದರಾಮಯ್ಯ ಅವರು ಕಂಗಾಲಾಗಿದ್ದು, ಜೆಡಿಎಸ್ ಪಕ್ಷವನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.
“ವರುಣಾದಲ್ಲಿ ವಿಜಯೇಂದ್ರಗೆ ಟಿಕೆಟ್ ಕೈ ತಪ್ಪಿದ ಬಗ್ಗೆ ಮಾತನಾಡಿದ ಅವರು, ವಿಜಯೇಂದ್ರಗೆ ಟಿಕೆಟ್ ತಪ್ಪಿಸಲು ಸಿದ್ದರಾಮಯ್ಯ ಯಾರ್ಯಾರ ಜತೆ ಮಾತುಕತೆ ನಡೆಸಿದ್ದಾರೆಂದು ನನಗೆ ತಿಳಿದಿದೆ. ಅಂತಿಮವಾಗಿ ವಿಜಯೇಂದ್ರಗೆ ಟಿಕೆಟ್ ತಪ್ಪಿಸಿ ತಮ್ಮ ಮಗನನ್ನು ಸೇಫ್ ಮಾಡಿದ್ದಾರೆ. ಬಿಜೆಪಿ ಹಾಗೂ ಸಿದ್ದರಾಮಯ್ಯ ಅವರ ನಡುವೆ ಇರುವ ಸಂಬಂಧ ಏನೆಂಬುದು ನನಗೆ ತಿಳಿದಿದೆ. ನಮ್ಮನ್ನು ಒಳ ಮೈತ್ರಿ ಎಂಬುವರು ವರುಣಾದಲ್ಲಿ ಮಾಡಿಕೊಂಡಿದ್ದು ಏನು?’ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
ಬಾಲಕೃಷ್ಣ ಅದೆಂಥಾ ಬಾಂಬ್ ಸಿಡಿಸ್ತಾನೋ ನೋಡ್ತೀನಿ: ಬಳಿಕ ಮಂಡ್ಯದಲ್ಲಿ ರೋಡ್ ಶೋ ನಡೆಸಿದರು. ಕುಮಾರಸ್ವಾಮಿ ಪುತ್ರ ನಿಖೀಲ್ ಸೀಡಿ ಬಿಡುಗಡೆ ಮಾಡುವ ಕುರಿತು ಬಾಲಕೃಷ್ಣ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಿಖೀಲ್ ಬಗ್ಗೆ ಸಾಕ್ಷಿ ಇದ್ದರೆ ಸೀಡಿ ಬಿಡುಗಡೆ ಮಾಡಲಿ. ಅದನ್ನಿಟ್ಟುಕೊಂಡು ಏನು ಮಾಡ್ತಿದ್ದಾರೆ. ಇದರಿಂದ ನನ್ನನ್ನು ಬ್ಲಾಕ್‌ವೆುàಲ್ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.
ರಾಮನಗರ, ಚನ್ನಪಟ್ಟಣದಲ್ಲಿ ಜಮೀರ್ ಓಟಿಲ್ಲ. ಇನ್ನು ನನ್ನನ್ನು ಸೋಲಿಸಲು ಅವರಿಂದ ಹೇಗೆ ಸಾಧ್ಯ. ನನ್ನ ಭವಿಷ್ಯ ಜಮೀರ್ ಕೈಯ್ಯಲ್ಲಿಲ್ಲ. ರಾಮನಗರ-ಚನ್ನಪಟ್ಟಣ ಕ್ಷೇತ್ರದ ಜನರ ಕೈಯ್ಯಲ್ಲಿದೆ.
ನಾನು ನನ್ನ ಕ್ಷೇತ್ರಗಳನ್ನು ಬಿಟ್ಟು ಎಲ್ಲಾ ಕ್ಷೇತ್ರಗಳಲ್ಲಿ ಪ್ರಚಾರ ಮಾಡುತ್ತಿದ್ದೇನೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರ ಕಳೆದ ಹದಿನೈದು ದಿನಗಳಿಂದ ವರುಣಾ, ಚಾಮುಂಡೇಶ್ವರಿಯಲ್ಲೇ ಸುತ್ತಾಡುತ್ತಿದ್ದಾರೆ.ಇದನ್ನು ನೋಡಿದರೆ ಅವರಿಗೆ ಸೋಲಿನ ಭಯ ಕಾಡುತ್ತಿದೆ ಎಂದು ಟಾಂಗ್ ನೀಡಿದರು.