ಬೆಂಗಳೂರು: ಭಾರತದಲ್ಲಿ ಹಾವು ಕಡಿತದಿಂದ ವರ್ಷಕ್ಕೆ ಸಾವಿರಾರು ಮಂದಿ ಪ್ರಾಣ ಕಳೆದುಕೊಳ್ಳುತ್ತಾರೆ. ಇವುಗಳಲ್ಲಿ ನಾಗರಹಾವು, ಕಟ್ಟು ಹಾವುಗಳ ಕಡಿತಕ್ಕೆ ಬಲಿಯಾಗುವವರ ಸಂಖ್ಯೆ ಹೆಚ್ಚು. ಈ ಹಾವುಗಳೊಂದಿಗೆ ಅತ್ಯಂತ ವಿಷಕಾರಿಯಾದ ಕಾಳಿಂಗ ಸರ್ಪ ಸಹ ಪಶ್ಚಿಮ ಘಟ್ಟ, ಹಿಮಾಲಯ ತಪ್ಪಲಿನ ಪ್ರದೇಶದ ಜನರಲ್ಲಿ ವಿಷಾತಂಕ ಮೂಡಿ ಸುತ್ತವೆ. ಇದೀಗ ಭಾರತೀಯ ವಿಜ್ಞಾನ ಸಂಸ್ಥೆ (ಐಐ ಎಸ್‌ಸಿ)ಯ ವಿಜ್ಞಾನಿಗಳು ಭಾರತದಲ್ಲಿ ಪ್ರಚಲಿತ ವಿರುವ ಈ ಮೂರು ಹಾವುಗಳ ವಿರುದ್ಧ ಪರಿಣಾಮ ಕಾರಿಯಾಗಿ ಹೋರಾಡುವ ಕೃತಕ ಪ್ರತಿ ಕಾಯಗಳನ್ನು ಸೃಷ್ಟಿಸಿ ವಿಷ ವಿಜ್ಞಾನದಲ್ಲಿ ಹೊಸ ಕ್ರಾಂತಿಗೆ ಮುನ್ನುಡಿ ಬರೆದಿದ್ದಾರೆ.
ಐಐಎಸ್‌ಸಿಯ ಪರಿಸರ ವಿಜ್ಞಾನಗಳ ಕೇಂದ್ರ ಮತ್ತು ಸ್ಕ್ರಿಪ್ಸ್ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳು ನಾಗರಹಾವು, ಕಾಳಿಂಗ ಸರ್ಪ, ಕಟ್ಟುಹಾವು ಮತ್ತು ಆಫ್ರಿಕಾದ ಸಹರಾ ಮರುಭೂಮಿ ಪ್ರದೇಶದ ಬ್ಲ್ಯಾಕ್ ಮಾಂಬಾಗಳ ಪ್ರಾಣಾಂತಕ ಪ್ರಬಲ ನ್ಯೂರೋ ಟಾಕ್ಸಿನ್‌ನ ವಿರುದ್ಧ ಹೋರಾಡಿ ಅವುಗಳನ್ನು ತಟಸ್ಥಗೊಳಿಸುವ ಸಂಶ್ಲೇಷಿತ ಮಾನವ ಪ್ರತಿಕಾಯವನ್ನು ಅಭಿವೃದ್ಧಿ ಪಡಿಸಿದ್ದಾರೆ.
ಪ್ರಚಲಿತ ಇರುವ ಕ್ರಮದಲ್ಲಿ ಕುದುರೆಗಳು, ಹೇಸರ ಗತ್ತೆಗಳಿಗೆ ಚುಚ್ಚುಮದ್ದಿನ ಮೂಲಕ ವಿಷ ವನ್ನು ನೀಡಿ ಅವುಗಳು ಉತ್ಪಾದಿಸುವ ಪ್ರತಿಕಾಯ ಗಳನ್ನು ಸಂಗ್ರಹಿಸಿ ವಿಷದ ಹಾವು ಕಡಿತಕ್ಕೆ ಈಡಾದವನಿಗೆ ನೀಡಲಾಗುತ್ತದೆ. ಈ ಪ್ರಾಣಿಗಳು ತಮ್ಮ ಜೀವಿತಾವಧಿಯಲ್ಲಿ ವಿವಿಧ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳ ದಾಳಿಯನ್ನು ಎದುರಿಸಲು ಪ್ರತಿ ಕಾಯಗಳನ್ನು ಸೃಷ್ಟಿಸಿರುತ್ತದೆ. ಈ ಪ್ರತಿಕಾಯಗಳು ಸಹ ಪ್ರತಿ ವಿಷಗಳಲ್ಲಿ ಸೇರಿಕೊಳ್ಳುವುದರಿಂದ ಹಾವಿನ ಕಡಿತದ ವಿರುದ್ಧದ ಪ್ರತಿಕಾಯಗಳ ಪ್ರಮಾಣವನ್ನು ಔಷಧಿಯಲ್ಲಿ ಕುಗ್ಗಿಸಿ ಅದರ ಪ್ರಭಾವವನ್ನು ಕುಂಠಿತಗೊಳಿಸುತ್ತವೆ.
ಮೊದಲು ವಿಷವನ್ನು ನೀಡಿ ಆ ಬಳಿಕ ತಕ್ಷಣವೇ ಪ್ರತಿವಿಷ ನೀಡಿದ್ದು ಸೇರಿದಂತೆ ವಿಷ ಪ್ರಯೋಗ ನಡೆದು 10 ನಿಮಿಷ, 20 ನಿಮಿಷಗಳ ಮೇಲೆಯೂ ಪ್ರತಿವಿಷ ನೀಡಿದಾಗಲೂ ಇಲಿಗಳನ್ನು ಬದುಕಿಸಲು ಪ್ರತಿಕಾಯಗಳು ಯಶಸ್ವಿಯಾಗಿದೆ. ಸಾಂಪ್ರದಾಯಿಕ ವಿಷ ಮದ್ದುಗಳು ಇಲಿಗೆ ವಿಷ ಪ್ರಯೋಗ ನಡೆದ ತಕ್ಷಣ ನೀಡಿದಾಗ ಮಾತ್ರ ಇಲಿಯನ್ನು ಬದುಕಿಸಲು ಸಫಲವಾಗಿದ್ದವು ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಹಾಗೆಯೇ ಮಾನವನ ದೇಹದ ಸ್ನಾಯು, ನರಕೋಶಗಳ ಗ್ರಾಹಿಗಳ ಜೊತೆ ವಿಷ ಅಂಟಿಕೊಳ್ಳುವ ಮಾದರಿಯಲ್ಲಿಯೇ ಪ್ರತಿಕಾಯ ಸಹ ಅಂಟಿಕೊಳ್ಳುತ್ತದೆ. ಆದ್ದರಿಂದ ವಿಷವು ಗ್ರಾಹಿಗಳ ಬದಲು ಪ್ರತಿಕಾಯಗಳಿಗೆಯೇ ಅಂಟಿಕೊಳ್ಳುತ್ತದೆ. ಇದರ ಜೊತೆಗೆ ಮಾನವನ ಜೀವಕೋಶಗಳ ಮೇಲೆಯೇ ನೇರ ಪ್ರಯೋಗ ನಡೆಸಿ ಪ್ರತಿಕಾಯ ಸೃಷ್ಟಿಸಬಹುದಾಗಿದೆ. ಮಾನವ ಜೀವಕೋಶಗಳ ಮೇಲೆ ಪ್ರಯೋಗ ನಡೆದಾಗ ಯಾವುದೇ ಅಲರ್ಜಿ ವರದಿಯಾಗಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಈ ಪ್ರಯೋಗದ ವರದಿ ಸೈನ್ಸ್ ಟ್ರಾನ್ಸ್‌ಲೇಷನಲ್ ಮೆಡಿಸಿನ್ ಜರ್ನಲ್‌ನಲ್ಲಿ ಪ್ರಕಟವಾಗಿದೆ. ಐಐಎಸ್‌ಸಿಯ ಪರಿಸರ ವಿಜ್ಞಾನ ಕೇಂದ್ರದ ಅಸೋಸಿಯೇಟ್ ಪ್ರೊಫೆಸರ್ ಕಾರ್ತಿಕ್ ಸುನಗರ್ ಪ್ರಯೋಗದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಎಚ್‌ಐವಿ, ಕೋವಿಡ್-19ರ ವಿರುದ್ಧ ಪ್ರತಿಕಾಯಗಳನ್ನು ಸೃಷ್ಟಿಸಲು ಬಳಸಿದ ತಂತ್ರವನ್ನು ಮೊದಲ ಬಾರಿಗೆ ಹಾವಿನ ವಿಷಕ್ಕೆ ಪ್ರತಿವಿಷ ಸೃಷ್ಟಿಸಲು ಬಳಸಲಾಗಿದೆ. ಮೊದಲ ಬಾರಿಗೆ ಪ್ರತಿ ವಿಷ ಸೃಷ್ಟಿಗೆ ನಿರ್ದಿಷ್ಟ ಮಾದರಿಯೊಂದನ್ನು ಅನುಸರಿಸಿದ್ದೇವೆ. ನಮ್ಮ ಪ್ರಯೋಗವು ಸಾರ್ವತ್ರಿಕ ಪ್ರತಿ ವಿಷ ಸೃಷ್ಟಿಸುವ ಸಾಧ್ಯತೆಯನ್ನು ಸಾಕಾರಗೊಳಿಸುವಲ್ಲಿ ಇಟ್ಟಿರುವ ಮಹತ್ವದ ಹೆಜ್ಜೆ.
-ಸೆಂಜಿ ಲಕ್ಷ್ಮೀ, ಸಂಶೋಧನಾ ವಿದ್ಯಾರ್ಥಿ