ಬೆಂಗಳೂರು: ದೇಶದ ಸನಾತನ ಸಂಸ್ಕೃತಿ ಶ್ರೇಷ್ಠವಾದುದು. ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆ ಬೇಡ ಎಂದು ಹುಬ್ಬಳ್ಳಿ ಮೂರು ಸಾವಿರ ಮಠದ ಪೀಠಾಧಿಪತಿಗಳಾದ ಶ್ರೀ ಗುರುಸಿದ್ಧರಾಜ ಯೋಗೀಂದ್ರ ಸ್ವಾಮಿಗಳು ಕರೆ ನೀಡಿದರು.
ರಾಜಾಜಿನಗರದ ಕೆಎಲ್‌ಇ ಸೊಸೈಟಿ ಶಾಲೆಯ ಸಭಾಂಗಣದಲ್ಲಿ ಕೈವಾರ ಶ್ರೀ ಯೋಗಿನಾರೇಯಣ ಮಠದಿಂದ ಹಮ್ಮಿಕೊಂಡಿದ್ದ ಧರ್ಮ ಚಿಂತನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಗಾಳಿಯನ್ನು ಕಣ್ಣುಗಳಿಂದ ಕಾಣಲು ಸಾಧ್ಯವಿಲ್ಲ. ಆದರೆ, ನಮ್ಮ ಪ್ರಾಣದ ಮೂಲಾಧಾರ ವಾಯುವೇ ಆಗಿದೆ. ಹಾಗೇ ಭಗವಂತನು ಸರ್ವವ್ಯಾಪಿಯಾಗಿದ್ದಾನೆ. ಅವನನ್ನು ನಂಬಬೇಕು.
ಆಗಮಾತ್ರ ಆ ಸತ್ಯವು ಗೋಚರವಾಗುತ್ತದೆ. ಆತ್ಮ ಕಣ್ಣಿಗೆ ಕಾಣುವುದಿಲ್ಲ. ಅದನ್ನು ಗ್ರಹಿಸುವುದೂ ಸಾಧ್ಯವಿಲ್ಲ. ನಾವು ಒಂದು ವಸ್ತ್ರವನ್ನು ತೆಗೆದು ಹೊಸ ವಸ್ತ್ರ ಹಾಕಿಕೊಂಡಂತೆ ದೇಹ ನಾಶವಾದ ನಂತರ ಆತ್ಮ ಇನ್ನೊಂದು ದೇಹ ಸೇರುತ್ತದೆ. ಈ ಸತ್ಯವನ್ನು ತಿಳಿದುಕೊಂಡು, ದೇಹಕ್ಕೊಸ್ಕರ ದುಃಖೀಸಬಾರದು ಎಂದು ನುಡಿದರು.
ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಮತ್ತು ಗೋಕುಲ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಡಾ.ಎಂ.ಆರ್.ಜಯರಾಮ್ ಅವರು ಮಾತನಾಡಿ, ಋಷಿ, ಮುನಿಗಳು ನುಡಿದಿರುವ ವಾಕ್ಯಗಳು ಸತ್ಯವಾದವುಗಳು. ವೇದಾಂತದ ಉಪನಿಷತ್‌ಗಳೂ ಕೂಡ ಗುರುವಾಕ್ಯವೇ ಆಗಿವೆ. ನಾನಾ ಜೀವಿಗಳಲ್ಲಿ ಜನ್ಮವೆತ್ತಿದ ನಂತರ ಮಾನವ ಜನ್ಮ ದೊರೆತಿದೆ. ಗುರು ತತ್ವ ಬಹಳ ಮುಖ್ಯವಾದುದು. ಗುರು ನೀಡುವ ಬೋಧನೆ ಅಮೃತವಿದ್ದಂತೆ. ಈ ಅಮೃತವನ್ನು ಸವಿದವನು ಭವಸಾಗರವನ್ನು ದಾಟಿ ಮೋಕ್ಷ ಹೊಂದುತ್ತಾನೆ ಎಂದರು.
ಕೈವಾರದ ಸಂಕೀರ್ತನಾ ಯೋಜನೆ ಸಂಚಾಲಕ ವಾನರಾಶಿ ಬಾಲಕೃಷ್ಣ ಭಾಗವತರ್, ಮಾಜಿ ಮೇಯರ್ ಪದ್ಮಾವತಿ, ಮಲ್ಲಾರ ಪತ್ರಿಕೆ ಸಂಪಾದಕ ಡಾ.ಬಾಬುಕೃಷ್ಣಮೂರ್ತಿ, ಶರಣ ಸಮಿತಿಯ ವಿಶ್ವನಾಥ್, ಪೆರಿಕಲ್ ಸುಂದರ್, ವಕೀಲ ಜಗದೀಶ್, ಹರಿಕಥಾ ವಿದ್ವಾನ್ ಎನ್.ಆರ್.ಜ್ಞಾನಮೂರ್ತಿ ಮುಂತಾದವರು ಭಾಗವಹಿಸಿದ್ದರು.