ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಅತ್ಯುತ್ತಮ ನ್ಯಾಯಾಂಗ ವ್ಯವಸ್ಥೆಯನ್ನು ಹೊಂದಿರುವ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಭಾರತದಲ್ಲೀಗ ನ್ಯಾಯಾಂಗ ಮತ್ತು ಸರಕಾರದ ನಡುವೆ ತಿಕ್ಕಾಟ ತೀವ್ರಗೊಂಡಿದೆ. ನಮ್ಮ ನ್ಯಾಯಾಂಗ ವ್ಯವಸ್ಥೆಯ ಅತ್ಯುನ್ನತ ನ್ಯಾಯಾಲಯಗಳಾಗಿರುವ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳಿಗೆ ನ್ಯಾಯಾಧೀಶರನ್ನು ನೇಮಕ ಮಾಡುವ ವಿಚಾರ ಈ ವಿವಾದದ ಕೇಂದ್ರಬಿಂದು. ವಿವಾದ ತಲೆದೋರಿ ತಿಂಗಳುಗಳೇ ಉರುಳಿದ್ದರೂ ಇದಕ್ಕೊಂದು ಪರಿಹಾರೋಪಾಯವನ್ನು ಕಂಡುಹುಡುಕುವ ನಿಟ್ಟಿನಲ್ಲಿ ಇತ್ತಂಡಗಳಿಂದಲೂ ಸಕಾರಾತ್ಮಕ ಪ್ರಯತ್ನ ನಡೆಯದಿರುವುದು ಸೋಜಿಗವೇ ಸರಿ.
ನ್ಯಾಯಾಧೀಶರ ನೇಮಕಾತಿಯನ್ನು ಕೇಂದ್ರ ಸರಕಾರ ಮತ್ತುಸು. ಕೋ. ಪ್ರತಿಷ್ಠೆಯ ವಿಷಯವನ್ನಾಗಿಸಿಕೊಂಡಿದ್ದು ಪಾರಮ್ಯ ಮೆರೆಯಲು ಪೈಪೋಟಿ ನಡೆಸಿವೆ. ಈ ವಿಷಯವಾಗಿ ರಾಜ್ಯಸಭೆಯ ಸಭಾಧ್ಯಕ್ಷರೂ ಆಗಿರುವ ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್, ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ಕೇಂದ್ರದ ಕಾನೂನು ಸಚಿವ ಕಿರಣ್ ರಿಜಿಜು ಬಹಿರಂಗ ಹೇಳಿಕೆಗಳನ್ನು ನೀಡುವ ಮೂಲಕ ವಿವಾದಕ್ಕೆ ತುಪ್ಪ ಸುರಿಯುತ್ತಿದ್ದಾರೆ. ಸು. ಕೋ. ಮುಖ್ಯ ನ್ಯಾಯಾಧೀಶರ ನೇತೃತ್ವದ ಕೊಲೀಜಿಯಂ ಕೂಡ ಈ ವಿವಾದವನ್ನು ತಣ್ಣಗಾಗಿಸಲು ಮುಂದಾಗದೆ ಸರಕಾರದ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ಹೆಚ್ಚಿನ ಆಸಕ್ತಿ ತೋರುತ್ತಿರುವುದು ದುರದೃಷ್ಟಕರ.
ಸರಕಾರ ಮತ್ತು ಕೊಲೀಜಿಯಂ ನಡುವಣ ಈ ಸಂಘರ್ಷದಿಂದಾಗಿ ದೇಶದ ವಿವಿಧ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾ ಧೀಶರ ಹಲವು ಹುದ್ದೆಗಳಿಗೆ ನೇಮಕಾತಿ ಸಾಧ್ಯವಾಗಿಲ್ಲ. ಇದರಿಂದಾಗಿ ಪ್ರಕರಣಗಳ ವಿಚಾರಣೆಯ ಮೇಲೆ ಭಾರೀ ಪರಿಣಾಮ ಬೀರುತ್ತಿದೆ.
ನ್ಯಾಯಾಧೀಶರ ನೇಮಕಾತಿಯಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವ ತರುವ ಅಗತ್ಯವಿದೆ ಎಂದು ಪ್ರತಿಪಾದಿಸುತ್ತಿರುವ ಕೇಂದ್ರ, ಸು. ಕೋ. ಸಂಸತ್‌ನ ಅಧಿಕಾರವನ್ನು ಮೊಟಕುಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದೆ. ಸರಕಾರವು ಸಂವಿಧಾನದ ಮೇಲೆ ಸವಾರಿ ಮಾಡಹೊರಟಿದೆ ಮತ್ತು ನ್ಯಾಯಾಂಗದ ಮೇಲೆ ತನ್ನ ಪ್ರಭಾವನ್ನು ಬೀರಲು ಮುಂದಾಗಿದೆ ಎಂಬುದು ಕೊಲೀಜಿಯಂನ ಪ್ರತ್ಯಾರೋಪ.
ಈ ವಿವಾದದ ಮುಂದುವರಿದ ಭಾಗವಾಗಿ ನ್ಯಾಯಾಧೀಶರ ನೇಮ ಕಾತಿಗಾಗಿರುವ ಕೊಲೀಜಿಯಂಗೆ ಕೇಂದ್ರ ಮತ್ತು ಆಯಾಯ ರಾಜ್ಯ ಸರಕಾರಗಳ ಪ್ರತಿನಿಧಿಯನ್ನು ಸೇರ್ಪಡೆಗೊಳಿಸುವಂತೆ ಸಲಹೆ ನೀಡಿ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಸು. ಕೋರ್ಟ್ ಮುಖ್ಯ ನ್ಯಾಯಾಧೀಶರಿಗೆ ಪತ್ರ ಬರೆದಿರುವುದು ಈ ಕುರಿತಾಗಿನ ಚರ್ಚೆಯನ್ನು ಮತ್ತೆ ಮುನ್ನೆಲೆಗೆ ತಂದಿದೆ. ಆದರೆ ಕೊಲೀಜಿಯಂ ಕೇಂದ್ರದ ಈ ಸಲಹೆಯನ್ನು ಸಾರಾಸಗಟಾಗಿ ತಿರಸ್ಕರಿಸಿದೆ. ಅಷ್ಟು ಮಾತ್ರವಲ್ಲದೆ ಈ ಹಿಂದೆ ಸು. ಕೋರ್ಟ್‌ನಿಂದ ರದ್ದುಗೊಳಿಸಲ್ಪಟ್ಟ ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗವನ್ನು ಹಿಂಬಾಗಿಲಿನಿಂದ ಜಾರಿಗೆ ತರುವ ಪ್ರಯತ್ನ ಇದಾಗಿದೆ ಎಂದು ಆರೋಪಿಸಿದೆ.
ನ್ಯಾಯಾಧೀಶರ ನೇಮಕಾತಿ ವಿಷಯವಾಗಿ ಹೊತ್ತಿಕೊಂಡಿರುವ ಕಿಡಿ ಸದ್ಯಕ್ಕಂತೂ ಶಮನವಾಗುವ ಲಕ್ಷಣ ಕಾಣುತ್ತಿಲ್ಲ. ಇಂಥ ಗಂಭೀರ ವಿಷಯ ಗಳು ಸಾರ್ವಜನಿಕವಾಗಿ ಚರ್ಚೆಗೀಡಾಗುವುದು ಸರಿಯಲ್ಲ. ಸರಕಾರ ಮತ್ತು ನ್ಯಾಯಾಂಗ ಪರಸ್ಪರ ಕೊಡು-ಕೊಳ್ಳುವಿಕೆಯ ಮನೋಭಾವ ದೊಂದಿಗೆ ಸಂವಿಧಾನದ ಚೌಕಟ್ಟಿನಲ್ಲಿ ಈ ಸಮಸ್ಯೆಗೆ ಪರಿಹಾರ ಸೂತ್ರವನ್ನು ಕಂಡುಹಿಡಿಯಬೇಕಾದುದು ಇಂದಿನ ಅಗತ್ಯ ಮತ್ತು ಅನಿವಾರ್ಯತೆ.