Advertisement
ಕನ್ನಡದಲ್ಲಿ ಸೃಷ್ಟಿಯಾಗುತ್ತಿರುವ, ಜಗತ್ತಿನ ವಿವಿಧ ಭಾಷೆಗಳಿಂದ ಕನ್ನಡಕ್ಕೆ ಬರುತ್ತಿರುವ ಕಳೆದೆರಡು ಮೂರು ದಶಕಗಳ ಸಾಹಿತ್ಯ ಕೃತಿಗಳನ್ನು ಗಮನಿಸಿದ ಯಾರಿಗೂ ವೇದ್ಯವಾಗುವ ಮುಖ್ಯ ವಿಚಾರವೆಂದರೆ ಕಾಲದ ಸದ್ದನ್ನು ಸಾಹಿತ್ಯ ಕೃತಿಯ ಮೂಲಕ ಹಿಡಿಯಲು ಸೃಜನಶೀಲತೆ ಎದುರಿಸುತ್ತಿರುವ ಬಹುಬಗೆಯ ಬಿಕ್ಕಟ್ಟುಗಳು. ನಮ್ಮ ಸಾಮಾಜಿಕ-ರಾಜಕೀಯ ವಿಷಮತೆಗಳು ಒಂದು ಬಗೆಯ ಅಸ್ಪಷ್ಟತೆಯಲ್ಲೇ ಮನುಷ್ಯನ ಬದುಕನ್ನು ಅಸಹನೀಯಗೊಳಿಸುತ್ತಿವೆ. ಇಪ್ಪತ್ತೂಂದನೆಯ ಶತಮಾನದಲ್ಲಿ ಮನುಕುಲದ ಬದುಕಿನ ದಿಕ್ಸೂಚಿಯನ್ನು ಗ್ರಹಿಸುವುದಕ್ಕೆ ಸರಿಯಾದ ಅಳತೆ ಗೋಲುಗಳೇ ದೊರಕದಂತಾಗಿದೆ. ಎಲ್ಲವನ್ನೂ ಒಂದು ಅಂತರ ಮತ್ತು ಅನುಮಾನದಿಂದಲೇ ಒಳಗೊಳ್ಳಬೇಕಾದ ಸಾಹಿತ್ಯವನ್ನೇ ಅನುಮಾನದಿಂದ ನೋಡುವಂತಾಗಿರುವ ಕಾಲದಲ್ಲಿ ನಾವಿದ್ದೇವೆ. ಉಗ್ರವಾದ, ಧಾರ್ಮಿಕ ಮೂಲಭೂತವಾದ, ಕೋಮುವಾದಗಳ ಪ್ರತಿಬಿಂಬ ದಿನದಿಂದ ದಿನಕ್ಕೆ ವಿಸ್ತಾರ ಪಡೆಯುತ್ತಿದೆ.
ಆಧುನಿಕ ರಾಷ್ಟ್ರೀಯತೆಯ ಭಾವನೆಯು ಚಲನಶೀಲ ಚಿಂತನೆಯ ಭಾಗವಾಗಿ ಕಾಣಿಸಿಕೊಳ್ಳುತ್ತಿದೆಯೇ ಎಂಬುದನ್ನು ಪರಿಶೀಲಿಸಬೇಕಾದ ಅಗತ್ಯ ಹಿಂದೆಂದಿಗಿಂತಲೂ ಹೆಚ್ಚಾಗಿರುವ ಸನ್ನಿವೇಶದಲ್ಲಿ ನಾವಿದ್ದೇವೆ. ಚಿಂತಿಸಿ, ಕೈಬರಹದ ಮೂಲಕ ಕೃತಿ ನಿರ್ಮಾಣ ಮಾಡುವ ಕಾಲ ಬದಿಗೆ ಸರಿದು, ಬುದ್ದಿ ಬೆರಳಿಗಿಳಿದು, ಕೀಲಿಮಣೆಯ ಮೇಲಾಡುವ ಮುದ್ರೆಯ ಅಚ್ಚು ಸಾಹಿತ್ಯವಾಗಿ ಪ್ರತಿಫಲಿಸುತ್ತಿರುವ ಕಾಲದಲ್ಲಿ ‘ಸಾಮಾಜಿಕ ತಂತ್ರಜ್ಞಾನ’ದ ಪ್ರಶ್ನೆ ಮುನ್ನೆಲೆಗೆ ಬಂದಿರುವುದು ಸಹಜವಾಗಿಯೇ ಇದೆ. ವೈಜ್ಞಾನಿಕ ಪರಿವೇಷದಿಂದ ಪ್ರಕಟಗೊಂಡ ತಂತ್ರಜ್ಞಾನಕ್ಕೀಗ ಸಾಮಾಜಿಕ ಸ್ವರೂಪ ಪ್ರಾಪ್ತವಾಗಿರುವುದು ಗಮನಾರ್ಹ ಸಂಗತಿ. ಟ್ರಾಫಿಕ್ ಸಿಗ್ನಲ್‌ನಲ್ಲಿ ಅಪವ್ಯಯವಾಗುತ್ತಿದ್ದ ಅವಧಿಯಲ್ಲಿಯೇ ಸಾಹಿತ್ಯಸೃಷ್ಟಿಗೆ ತೆರೆದುಕೊಳ್ಳುವ ಪರ್ಯಾಯ ದಾರಿಯ ಬಗ್ಗೆ ಸಾಫ್ಟ್‌ವೇರ್ ಜಗತ್ತಿನಿಂದ ಬಂದು ಜನಪ್ರಿಯತೆ ಸಂಪಾದಿಸಿರುವ ನಮ್ಮ ಲೇಖಕರೊಬ್ಬರು ಬರೆದುಕೊಂಡಿದ್ದು ಇಲ್ಲಿ ನೆನಪಾಗುತ್ತಿದೆ. ಈ ಹಿನ್ನೆಲೆಯಲ್ಲೇ “ಏಕ ರೂಪತೆ’ಯ ಬಗ್ಗೆ ಮಾತನಾಡುತ್ತಿರುವ ಆಧುನಿಕ ರಾಷ್ಟ್ರೀಯತೆಯ ಕಲ್ಪನೆಗಳನ್ನು, ಅಪಕಲ್ಪನೆಗಳನ್ನು ಮಾವು ಅನೇಕ ಆಯಾಮಗಳಿಂದ ಅರ್ಥಮಾಡಿಕೊಳ್ಳಬೇಕಾಗಿದೆ. ಇದನ್ನೂ ಓದಿ:ಜಮ್ಮು- ಕಾಶ್ಮೀರ: 3 ವಾರದಲ್ಲಿ 25 ಶಂಕಿತರ ಬಂಧನ: ಎನ್‌ಐಎ
Related Articles
Advertisement
ಪ್ರಯೋಗಶೀಲತೆ ದೃಷ್ಟಿಯಿಂದ ಗಮನಿಸಿದಾಗ ಹೊಸಕಾಲದ ಬೆಳೆ ಹುಲುಸಾಗಿಯೇ ಇದೆ. ಮಹಾಕಾವ್ಯ, ಖಂಡಕಾವ್ಯ, ಗಜಲ್, ಹನಿ ಗವಿತೆಗಳು, ದ್ವಿಪದಿ ಮುಂತಾದವು ಗಂಭೀರ ಕವಿತೆಗಳೊಂದಿಗೆ ಹೆಚ್ಚು ರಚಿತಗೊಳ್ಳುತ್ತಿರುವುದು, ಅದರಲ್ಲಿಯೂ ಯುವ ತಲೆಮಾರಿನವರ ಇಂಥ ಪ್ರಯೋಗಶೀಲತೆಗೆ ತೆರೆದು ಕೊಂಡಿರುವುದು ಕನ್ನಡದಮಟ್ಟಿಗೆ ವಿಶೇಷ ಸಂಗತಿಯಾಗಿದೆ. ಸಾಹಿತ್ಯಾಭಿವ್ಯಕ್ತಿಗೆ ಮುಂದಾಗುವವರನ್ನು ಹೆಚ್ಚಾಗಿ ಕಾವ್ಯವೇ ಹಿಡಿದಿಟ್ಟುಕೊಳ್ಳುವುದು ಎಂದಿನಿಂದಲೂ ಚಾಲ್ತಿಯಲ್ಲಿರುವ ಸಂಗತಿ ಯಾದರೂ ಸಾಹಿತ್ಯವಲಯದಲ್ಲಿ ಕಾವ್ಯ ರಚಿಸುವವರಿಗೆ ಹೆಚ್ಚು ಆದರ ದೊರೆಯುತ್ತಿರುವುದು ಗಮನಾರ್ಹ. ಬೇರೆ ಪ್ರಕಾರಗಳಿಗೆ ಕಾವ್ಯದ ಅನಂತರದ ಸ್ಥಾನ ನೀಡುವ ಪರಿಪಾಠವನ್ನು ಅಘೋಷಿತ ವಾಗಿ ಪಾಲಿಸಿಕೊಂಡು ಬರಲಾಗುತ್ತಿದೆ. ಹೀಗಾಗಿ ಕವಿಯೆನಿಸಿ ಕೊಳ್ಳುವವರಿಗೆ ಕಿಮ್ಮತ್ತು ಜಾಸ್ತಿ. ಕಾವ್ಯದ ಅನಂತರ ಸಣ್ಣಕಥೆ, ಕಾದಂಬರಿ, ಲಲಿತ ಪ್ರಬಂಧ, ನಾಟಕ, ವಿಮರ್ಶೆ, ಅನುವಾದ ಮುಂತಾದವುಗಳ ಸರದಿ. ಇಲ್ಲಿಯೂ ಸಂಶೋಧನೆ, ಭಾಷಾ ವಿಜ್ಞಾನ, ಗ್ರಂಥ ಸಂಪಾದನೆ, ಹಸ್ತಪ್ರತಿ ಶಾಸ್ತ್ರ, ನಿಘಂಟು- ವಿಶ್ವಕೋಶ ಗಳ ಸಂಪಾದನೆಯಂತಹ ಶಾಸ್ತ್ರ ಸಾಹಿತ್ಯಗಳ ನಿರ್ಮಾಣದಲ್ಲಿ ತೊಡಗಿಸಿಕೊಂಡಿರುವವರ ಸಾಧನೆ ಮಸುಕಾಗಿದೆ. ಹೊಸ ತಲೆಮಾರಿ ನವರಲ್ಲಿ ಈ ಕ್ಷೇತ್ರಗಳತ್ತ ಆಕರ್ಷಿತರಾಗುವವರ ಸಂಖ್ಯೆಯೂ ಗಣನೀಯವಾಗಿ ಕ್ಷೀಣಿಸಿದೆ. ಒಂದು ಭಾಷೆಯ ಬೆಳವಣಿಗೆಯಲ್ಲಿ ಸೃಜನಶೀಲ ಸಾಹಿತ್ಯದ ಕೊಡುಗೆಯಷ್ಟೇ ಶಾಸ್ತ್ರ ಸಾಹಿತ್ಯದ ಪಾತ್ರವೂ ಇರುತ್ತದೆಂಬುದನ್ನು ನಾವು ಮರೆಯುವಂತಿಲ್ಲ. ವಿದ್ವತ್ ವಲಯದ ವಿಕಾಸದ ದಾರಿಗಳನ್ನು ನಾವಿನ್ನೂ ಹುಡುಕಿಕೊಂಡಿಲ್ಲ.
ನಮ್ಮ ಕಾಲದ ಬಹುಮುಖ್ಯ ಕೊರತೆ ಎಂದರೆ ಅದು ಬರಹಗಳಲ್ಲಿ ಸಾಂತ್ವನ ಸಂಯಮದ ಗೈರುಹಾಜರಿ. ‘ಅವಸರವೂ ಸಾವಧಾನದ ಬೆನ್ನೇರಿದೆ,’ ಎಂಬ ಕವಿವಾಣಿ ಮರೆತೇ ಹೋಗಿದೆ. ಇದರಿಂದಾಗಿ ಸುದೀರ್ಘ ರಚನೆಯ ವ್ಯವಧಾನ ಕಣ್ಮರೆ ಯಾಗು ತ್ತಿದೆ. ವರ್ಷ ವರ್ಷವೂ ಹೊಸ ಪ್ರಕಟನೆ ಬರದಿದ್ದರೆ ನಾನೆಲ್ಲಿ ಅಮಾನ್ಯವೆ ನಿಸಿವೆನೋ ಎಂಬ ಆತಂಕದಲ್ಲಿ ಆಗುತ್ತಿರುವ ಗರ್ಭ ಪಾತವೇ ಹೆಚ್ಚಾಗಿ, ಸಾರ್ಥಕ ಫಲಿತಗಳು ಕಾಣದಾಗುತ್ತಿವೆ. ಕಾಲ ಧರ್ಮವೇ ಈ ವೇಗ ಪಡೆದಿರುವಾಗ ನಮ್ಮನ್ನು ಹಿಡಿದು ನಿಲ್ಲಿಸಿ ಓದಿಸಿಕೊಳ್ಳುವ ಕೃತಿಗಳನ್ನು ನಿರೀಕ್ಷಿಸುವುದು ಕಷ್ಟಕರವೆನಿಸಿದೆ.
ಕನ್ನಡದ ಸಂಸ್ಕೃತಿಯನ್ನು ಸಮಗ್ರ ಸ್ವರೂಪದಲ್ಲಿ ಕಾಣಿಸಬಲ್ಲ (ಹಾಗೆಂದರೇನು ಎಂಬ ಪ್ರಶ್ನೆಯನ್ನೂ ಎದುರಿಸಿಕೊಂಡು) ಕೃತಿ ರಚನೆಯ ಸವಾಲು ನಮ್ಮ ಲೇಖಕರ ಎದುರಿಗಿದೆ. ಕಾಲವೇ ಅಂತಹ ಲೇಖಕರನ್ನು ಹುಟ್ಟುಹಾಕಬಲ್ಲುದು ಎಂಬುದೊಂದು ಸಮಾಧಾನದ ಮಾತು. ಸಾರಾಂಶ ವಿಮರ್ಶೆಯ ಮಾದರಿಗಳು ಕನ್ನಡದಲ್ಲಿ ಹೊಸ ಚಿಂತನೆಗಳನ್ನು ಹುಟ್ಟುಹಾಕುವಷ್ಟು ಸಶಕ್ತವಾಗದಿರುವುದೂ ಕೂಡ ದೊಡ್ಡ ಕೊರತೆಯೇ. ನಮ್ಮ ನಡುವಿನ ದೊಡ್ಡ ಚಿಂತಕರು ಹೊಸ ಮಾಧ್ಯಮಗಳ ಭರಾಟೆಯಲ್ಲಿ ಮೌನವಾಗಿಬಿಟ್ಟಿದ್ದಾರೆ. ಇಸಂಗಳು, ಎಡ-ಬಲ- ಮಧ್ಯಮ ಮಾರ್ಗದ ಪಂಥ ವಕ್ತಾರಿಕೆಗಳು ಅಭಿಪ್ರಾಯ ರೂಪಿಸುವ ಶಕ್ತಿ ಕೇಂದ್ರಗಳಾಗಿವೆ.
ಈ ಎಲ್ಲ ಅಡೆತಡೆಗಳನ್ನು ನಿವಾರಿಸಿಕೊಂಡು ನಮ್ಮನ್ನು ಸಂತೈಸುವ, ಬದುಕನ್ನು ಸಹನೀಯಗೊಳಿಸುವ ಸಾಹಿತ್ಯ ಸೃಷ್ಟಿಯ ಸಂದರ್ಭಕ್ಕಾಗಿ ನಾಡು ಕಾದು ಕುಳಿತಿದೆ. ಬದುಕಲು ಹೋರಾಡ ಬೇಕಾದ ಸ್ಥಿತಿ ನಿರ್ಮಾಣವಾಗಿರುವ ಕಾಲಘಟ್ಟದಲ್ಲಿ ಸಾಹಿತ್ಯದ ಮೂಲದ್ರವ್ಯಕ್ಕೇನೂ ಕೊರತೆಯಿಲ್ಲ. ಅವನ್ನು ಕಲಾತ್ಮಕತೆಯಿಂದ ದುಡಿಸಿಕೊಳ್ಳುವ ಸಂಕಲ್ಪಶಕ್ತಿಯ ಕೊರತೆಯನ್ನು ನಮ್ಮ ಲೇಖಕರು ದಿಟ್ಟತನದಿಂದ ನಿವಾರಿಸಿಕೊಳ್ಳುವುದಕ್ಕೆ ಯಾವ ಚಳವಳಿ ಗಾಗಿಯೂ ಕಾದು ಕುಳಿತುಕೊಳ್ಳಬೇಕಾಗಿಲ್ಲ.
– ಡಾ| ಎಚ್. ಎಸ್. ಸತ್ಯನಾರಾಯಣ