ಹುಬ್ಬಳ್ಳಿ: ಕಾಂಗ್ರೆಸ್ ವೀರೇಂದ್ರ ಪಾಟೀಲರಿಗೆ ಅವಮಾನ ಮಾಡಿದೆ. ಯಾವುದೇ ಕಾರಣಕ್ಕೂ ವೀರಶೈವ ಲಿಂಗಾಯತರ ಮತ ಕೇಳುವ ಹಕ್ಕು ಕಾಂಗ್ರೆಸ್‌ಗೆ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯಗೆ ಮೋದಿ ವಿರುದ್ಧ ಮಾತನಾಡಿದರೆ ದೊಡ್ಡವನಾಗ್ತೀನಿ ಅನ್ನೋ ಭಾವನೆ ಬಂದಿದೆ. ಅವರ ಹೇಳಿಕೆಗಳಿಂದ ಜನ ಬೇಸತ್ತಿದ್ದು, ಅಸಡ್ಡೆ ತೋರುತ್ತಿದ್ದಾರೆ ಎಂದರು.
ಕಾಂಗ್ರೆಸ್‌ನ ಜನಾರ್ದನ ಪೂಜಾರಿ ಸಹ ಮತ್ತೆ ಮೋದಿ ಪ್ರಧಾನಿ ಆಗುತ್ತಾರೆ ಎಂದಿದ್ದಾರೆ. ಲೋಕಸಭೆಯಲ್ಲಿ ನಾವು 280ಕ್ಕೂ ಅಧಿಕ ಸ್ಥಾನ ಹಾಗೂ ರಾಜ್ಯದಲ್ಲಿ 22 ಸ್ಥಾನ ಗೆಲ್ಲುತ್ತೇವೆ ಎಂದು ಹೇಳುತ್ತೇವೆ. ಅದೇ ರೀತಿ ಕಾಂಗ್ರೆಸ್‌ನವರು ನಾವು ಇಷ್ಟೇ ಸೀಟು ಗೆಲ್ಲುತ್ತೇವೆಂದು ಗಟ್ಟಿಯಾಗಿ ಹೇಳುವ ಧೈರ್ಯ ತೋರಲಿ ನೋಡೋಣ ಎಂದು ಸವಾಲು ಹಾಕಿದರು.
ಸಿದ್ದರಾಮಯ್ಯ ಬೆಂಬಲಿಗರು ಬಿಜೆಪಿಯೊಂದಿಗೆ ಕಾಲ್ಕೆರೆದು ಜಗಳ ಮಾಡುತ್ತಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಯಮಂತ್ರಿ ಮಾಡಬೇಕಿತ್ತು ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರು ಹೇಳಿದ್ದನ್ನೇ ನಾನು ಹೇಳಿದ್ದೇನೆ. ನಾನು ಸಿಎಂ ಆಗುತ್ತೇನೆಂದು ಎಲ್ಲಿಯೂ ಹೇಳಿಲ್ಲ. ನಾವು ಬೇರೆ ಪಕ್ಷದ ಅಭ್ಯರ್ಥಿ ಬಗ್ಗೆ ಯಾವುದೇ ಟೀಕೆ ಮಾಡುತ್ತಿಲ್ಲ ಎಂದರು.
ಹೊಂದಾಣಿಕೆ ಊಹಾಪೋಹ: ಕುಮಾರಸ್ವಾಮಿ ದೆಹಲಿಗೆ ಕಳುಹಿಸಿ ಜೆಡಿಎಸ್‌ನೊಂದಿಗೆ ಬಿಜೆಪಿ ಹೊಂದಾಣಿಕೆ ಮಾಡಿಕೊಳ್ಳುತ್ತಿದೆ ಎಂಬುದು ಊಹಾಪೋಹ. ಜೆಡಿಎಸ್‌ನವರು ನಮ್ಮ ಸಂಪರ್ಕದಲ್ಲಿಲ್ಲ. ಅಂತಹ ಯಾವುದೇ ಮಾತುಕತೆಗಳೂ ಆಗಿಲ್ಲ. ಸಿದ್ದರಾಮಯ್ಯನವರ ಮಾತಿಗೆ ಈಶ್ವರಪ್ಪ ತಿರುಗೇಟು ನೀಡುತ್ತಿದ್ದಾರಷ್ಟೇ ಎಂದರು.
ಮೂವರು ಪಕ್ಷೇತರರು ನಮ್ಮ ಜತೆ ಬರ್ತಾರೆ: ಕಾಂಗ್ರೆಸ್ ಪಕ್ಷ ಕುಂದಗೋಳ-ಚಿಂಚೋಳಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಹಣದ ಹೊಳೆ ಹರಿಸುತ್ತಿದೆ. ಆದರೂ ಎರಡೂ ಕ್ಷೇತ್ರದಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು 20 ಸಾವಿರಕ್ಕಿಂತ ಅಧಿಕ ಮತಗಳ ಅಂತರದಿಂದ ಗೆಲ್ಲುತ್ತಾರೆ. ಇವೆರಡು ಉಪ ಚುನಾವಣೆ ಗೆಲ್ಲುವ ಜತೆಗೆ ಮೂವರು ಪಕ್ಷೇತರರು ನಮ್ಮ ಜತೆ ಬರುತ್ತಾರೆ. ಆಗ ನಮ್ಮ ಸಂಖ್ಯಾಬಲ 109 ಆಗುತ್ತದೆ. ಹೀಗಾಗಿ ಬದಲಾವಣೆ ಆಗುತ್ತದೆ ಎಂದು ಹೇಳಿದರು.