ಬ್ಯಾಡಗಿ (ಹಾವೇರಿ): ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಡುವೆಯೇ ನೂರಕ್ಕೆ ನೂರರಷ್ಟು ಹೊಂದಾಣಿಕೆ ಇಲ್ಲ. ಸುಮ್ಮನೇ ನಮ್ಮ ಪಕ್ಷ, ಸರ್ಕಾರದ ಬಗ್ಗೆ ಮಾತನಾಡುತ್ತಾರೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ತಿರುಗೇಟು ನೀಡಿದರು.
ಅವರು ಬುಧವಾರ ಬ್ಯಾಡಗಿ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, `ರಾಜ್ಯ ಸರ್ಕಾರದ ಸಚಿವ ಸಂಪುಟದಲ್ಲಿ ಹೊಂದಾಣಿಕೆ ಇಲ್ಲ’ ಎಂಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಈ ರೀತಿ ಪ್ರತಿಕ್ರಿಯಿಸಿದರು.
ನಾವೆಲ್ಲರೂ ಮುಖ್ಯಮಂತ್ರಿಯವರ ನೇತೃತ್ವದಲ್ಲಿ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುತ್ತಿದ್ದೇವೆ. ಕೇವಲ ಪ್ರಚಾರಕ್ಕಾಗಿ ಕಾಂಗ್ರೆಸ್ಸಿನವರು ಜನರ ದಿಕ್ಕು ಬೇರೆಡೆ ಸೆಳೆಯಲು ವಿನಾಕಾರಣ ಆರೋಪ ಮಾಡುತ್ತಿದ್ದಾರೆ. ಕೋವಿಡ್ ಸಂಕಷ್ಟ ಕಾಲದಲ್ಲೂ ರಾಜಕೀಯ ಮಾಡುತ್ತಿದ್ದಾರೆ ಎಂದರು.
ವೈದ್ಯಕೀಯ ಉಪಕರಣ ಖರೀದಿ ವ್ಯವಹಾರದ ಬಗ್ಗೆ ಕಾಂಗ್ರೆಸ್‌ನವರು ಲೆಕ್ಕ ಕೊಡಿ ಎನ್ನುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ನಾವು ಲೆಕ್ಕ ಕೊಡಲು ಸಿದ್ಧರಿದ್ದು ಲೆಕ್ಕ ನೋಡಿ ಎನ್ನುತ್ತಿದ್ದೇವೆ. ಆದರೆ, ಅವರಿಗೆ ಲೆಕ್ಕ ನೋಡಲು ಆಸಕ್ತಿ ಇಲ್ಲ. ಸುಮ್ಮನೇ ಪ್ರಚಾರಕ್ಕಾಗಿ ಲೆಕ್ಕ ಕೊಡಿ ಎನ್ನುತ್ತಿದ್ದಾರೆ ಎಂದರು.
ನೂತನ ವಿಧಾನ ಪರಿಷತ್ ಸದಸ್ಯರಿಗೆ ಸಚಿವ ಸಂಪುಟಕ್ಕೆ ಸೇರ್ಪಡೆಗೊಳಿಸುವ ವಿಚಾರದಲ್ಲಿ ಮುಖ್ಯಮಂತ್ರಿಯವರಿಗೆ ಪರಮಾಧಿಕಾರವಿದೆ. ಸಂಪುಟದಲ್ಲಿ ಯಾರನ್ನು ಸೇರಿಸಿಕೊಳ್ಳಬೇಕು ಹಾಗೂ ಯಾರನ್ನು ಬಿಡಬೇಕು ಎಂಬ ಬಗ್ಗೆ ಮುಖ್ಯಮಂತ್ರಿಗಳೇ ನಿರ್ಧಾರ ತೆಗೆದುಕೊಳ್ಳುತ್ತಾರೆ. ಮುಖ್ಯಮಂತ್ರಿಯವರು ಈ ಬಗ್ಗೆ ಮೊದಲೇ ಪೂರ್ವ ತಯಾರಿ ಮಾಡಿಕೊಂಡಿದ್ದಾರೆ ಎಂದರು.