Advertisement

ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಇಲ್ಲ

06:46 PM May 05, 2020 | mahesh |

ಕೋಲಾರ: ಸರ್ಕಾರದ ಸೂಚನೆಯಂತೆ ಲಾಕ್‌ಡೌನ್‌ ಸಡಿಲಿಕೆ ಮಾಡಿದ್ದು, ಬೆಳಗ್ಗೆ 9 ರಿಂದ ಸಂಜೆ 7 ರವರೆಗೂ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರ ಕಾಪಾಡುವುದು ಕಡ್ಡಾಯವಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ತಿಳಿಸಿದರು. ಜಿಲ್ಲಾಡಳಿತ ಭವನದ ತಮ್ಮ ಕಚೇರಿಯಲ್ಲಿ ಸೋಮವಾರ ಸುದ್ದಿಗಾರರಿಗೆ ಈ ಮಾಹಿತಿ ನೀಡಿ ಅವರು, ಲಾಕ್‌ಡೌನ್‌ ಸಡಿಲಿಕೆ ಹಿನ್ನೆಲೆಯಲ್ಲಿ ಸರ್ಕಾರದ ನಿರ್ದೇಶನದಂತೆ ಎಲ್ಲಾ ರೀತಿಯ ಅಂಗಡಿಗಳನ್ನು ತೆರೆಯಲು ಅವಕಾಶ ಕಲ್ಪಿಸಿದ್ದು, ಜನತೆ ಇದನ್ನು ದುರ್ಬಳಕೆ ಮಾಡಿಕೊಳ್ಳಬಾರದು ಎಂದು ಎಚ್ಚರಿಸಿದರು.

Advertisement

ಪ್ರಾರ್ಥನೆಗೆ ಅವಕಾಶ ಇಲ್ಲ: ಆರ್ಥಿಕ ಚೇತರಿಕೆ ಕ್ರಮವಾಗಿ ಸರ್ಕಾರ ಕೈಗಾರಿಕೆಗಳಿಗೂ ಕೆಲವು ಷರತ್ತು ವಿಧಿಸಿ ಅನುಮತಿ ನೀಡಿದ್ದು, ಕೈಗಾರಿಕೆಗಳು ಕಾರ್ಯಾರಂಭ ಮಾಡಿವೆ. ಕ್ಷೌರಿಕ,
ದಂತ ವೈದ್ಯರಿಗೆ ವಿಧಿಸಿದ್ದ ನಿರ್ಬಂಧವನ್ನೂ ಸಡಿಲಿಸಲಾಗಿದ್ದು, ಅವರು ಕಾರ್ಯ ನಿರ್ವಹಿಸಬಹುದಾಗಿದೆ. ಧಾರ್ಮಿಕ ಕೇಂದ್ರಗಳಲ್ಲಿ ಪೂಜೆ, ಪ್ರಾರ್ಥನೆಗೆ ಸಂಬಂಧಪಟ್ಟವರಿಗೆ ಮಾತ್ರ ಅವಕಾಶವಿದ್ದು, ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಇಲ್ಲ ಎಂದು ಹೇಳಿದರು.

ಸಂಚಾರ ಆರಂಭ: ಜಿಲ್ಲೆಯಲ್ಲಿ ತೆರೆದಿರುವ ಅಂತರರಾಜ್ಯ ಗಡಿ ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ಮುಂದುವರಿಯಲಿದೆ. ರ್ಯಾಡಂ ಆಗಿ ಪ್ರತಿ ದಿನವೂ ಜನರಿಂದ ಮಾದರಿ ಸಂಗ್ರಹಿಸಿ
ಪ್ರಯೋಗಾಲಯಕ್ಕೆ ಕಳುಹಿಸಿ ವರದಿ ಪಡೆಯಲಾಗುತ್ತಿದೆ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳನ್ನು ಜಿಲ್ಲಾ ವ್ಯಾಪ್ತಿಯಲ್ಲಿ ಸಂಚರಿಸಲು ಅವಕಾಶ ನೀಡಲಾಗಿದೆ. 51 ಸೀಟುಗಳ ಪೈಕಿ ಶೇ.50 ಮಾತ್ರ ಭರ್ತಿ ಮಾಡಿ ಸಂಚಾರಕ್ಕೆ ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.

ಪಾಸ್‌ ಬೇಕಿಲ್ಲ: ಕೋಲಾರದಿಂದ ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲೆಗಳಲ್ಲಿ ಕರ್ತವ್ಯಕ್ಕೆ ತೆರಳುವವರಿಗೆ ಪ್ರತ್ಯೇಕ ಪಾಸ್‌ ಅಗತ್ಯವಿಲ್ಲ, ಚೆಕ್‌ಪೋಸ್ಟ್‌ಗಳಲ್ಲಿ ಐಡಿ ಕಾರ್ಡ್‌ ತೋರಿಸಿ ಸಂಚರಿಸಬಹುದು ಎಂದ ಅವರು, ಸೇವಾ ಸಿಂಧು ಪೋರ್ಟಲ್‌ನಲ್ಲಿ ಅಂತರ್‌ ರಾಜ್ಯ ಪ್ರಯಾಣಕ್ಕೆ ಪಾಸ್‌ ಕೇಳಿರುವವರ ಸಂಖ್ಯೆ 2100ಕ್ಕೂ ಹೆಚ್ಚು ಇದೆ. ಮದುವೆ ಇನ್ನಿತರೆ ಅಗತ್ಯಗಳಿಗೆ ಎಸ್ಪಿಯಿಂದ ಪಾಸ್‌ ಪಡೆಯಬಹುದು ಎಂದು ಹೇಳಿದರು.

ಜನರ ಕೈಯಲ್ಲಿದೆ: ಸರಕಾರದ ನಿರ್ದೇಶನದಂತೆ ಕೋವಿಡ್ ಪರಿಸ್ಥಿತಿಯನ್ನು ನಿರ್ವಹಿಸಲು ಜಿಲ್ಲಾಡಳಿತ ಸನ್ನದ್ಧವಾಗಿದೆ. ಇಷ್ಟು ದಿನ ಕೋಲಾರ ಜಿಲ್ಲೆ ಹಸಿರು ವಲಯವಾಗಿ ನೋಡಿಕೊಳ್ಳುವಲ್ಲಿ ಆಡಳಿತ ವರ್ಗ ಸಾಕಷ್ಟು ಶ್ರಮ ವಹಿಸಿದೆ. ಲಾಕ್‌ಡೌನ್‌ ಸಡಿಲಿಸಿರುವುದರಿಂದ ಇನ್ನು ಮುಂದೆ ಪರಿಸ್ಥಿತಿ ಜನರ ಕೈಯಲ್ಲಿದೆ. ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕಾ
ಕ್ರಮಗಳನ್ನು ಕೈಗೊಂಡು ಕೊರೊನಾದಿಂದ ರಕ್ಷಿಸಿಕೊಳ್ಳಬೇಕು ಎಂದರು. ಮಾಸ್ಕ್ ಧರಿಸದೇ ಸಂಚರಿಸುವವರ ವಿರುದ್ಧ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next