Advertisement

ಕಾಮಗಾರಿ ಮುಗಿಯದೇ ಚಿಕ್ಕ ರಥೋತ್ಸವ ನಡೆಯಲ್ಲ

09:06 PM Dec 17, 2019 | Lakshmi GovindaRaj |

ಯಳಂದೂರು: ತಾಲೂಕಿನ ಪ್ರಸಿದ್ಧ ಪೌರಾಣಿಕ ಯಾತ್ರಸ್ಥಳವಾಗಿರುವ ಬಿಳಿಗಿರಿರಂಗನ ಬೆಟ್ಟದಲ್ಲಿ ದೇಗುಲದ ಜೀರ್ಣೋದ್ಧಾರ ಕಾಮಗಾರಿ ಮುಗಿಯದ ಕಾರಣ ಈ ಬಾರಿಯೂ ಬಿಳಿಗಿರಿರಂಗನಾಥ ಸ್ವಾಮಿಯ ಸಂಕ್ರಾಂತಿ ನಂತರ ನಡೆಯುವ ಚಿಕ್ಕ ರಥೋತ್ಸವ ನಡೆಯುವುದಿಲ್ಲ.

Advertisement

ಪ್ರಸಿದ್ಧ ಪ್ರವಾಸಿ ಕ್ಷೇತ್ರ, ಚಂಪಕಾರಣ್ಯ, ಶ್ವೇತಾದ್ರಿ ಎಂಬ ಅನೇಕ ಹೆಸರುಳ್ಳ ಹಾಗೂ ಪ್ರಾಕೃತಿಕ ಸೌಂದರ್ಯವನ್ನು ತನ್ನ ಒಡಲಲ್ಲಿಟ್ಟುಕೊಂಡಿರುವ ಬಿಳಿಗಿರಿರಂಗನ ಬೆಟ್ಟವು ಪುಣ್ಯ ಕ್ಷೇತ್ರವೆನಿಸಿಕೊಂಡಿದ್ದು, ಪ್ರತಿ ವರ್ಷ ಸಂಕ್ರಾಂತಿ ಹಬ್ಬದ ಮಾರನೇ ದಿನ ಇಲ್ಲಿ ಜಾತ್ರೆ ನಡೆಯುವ ವಾಡಿಕೆ ಇದೆ. ಅದರಂತೆ ಜ.16ರಂದು ನಡೆಯಬೇಕಿದ್ದ ಬಿಳಿಗಿರಿರಂಗನಾಥ ಸ್ವಾಮಿಯ ಚಿಕ್ಕ ರಥೋತ್ಸವವು ದೇಗುಲದ ಜೀರ್ಣೋದ್ಧಾರ ಕಾಮಗಾರಿ ಇನ್ನೂ ಮುಗಿಯದ ಕಾರಣ ಈ ಬಾರಿಯೂ ನಡೆಯುತ್ತಿಲ್ಲ.

ಮುಗಿಯದ ಜಿರ್ಣೋದ್ಧಾರ ಕಾಮಗಾರಿ: ಈ ದೇಗುಲಕ್ಕೆ ಸುಮಾರು 500ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದೆ. ಬಿಳಿಗಿರಿರಂಗನ ಬೆಟ್ಟವು ಧಾರ್ಮಿಕ ಕೇಂದ್ರ ಮತ್ತು ಪ್ರಕೃತಿ ಸೌಂದರ್ಯ ತಾಣವೂ ಹೌದು. ನೂರಾರು ವರ್ಷಗಳ ಹಳೆಯದಾದ ಬಿಳಿಗಿರಿರಂಗನಾಥ ಸ್ವಾಮಿ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡುವ ಕೂಗು ಭಕ್ತರ ವಲಯದಲ್ಲಿ ಕೇಳಿ ಬಂದಿತು. ಆದರೆ, ಅದು ಇಷ್ಟು ವರ್ಷಗಳ ತನಕ ಈಡೇರಲಿಲ್ಲ. 2016 ಮಾರ್ಚ್‌ ತಿಂಗಳಲ್ಲಿ ದೇಗುಲದ ಜೀರ್ಣೋದ್ಧಾರ ಕಾಮಗಾರಿ ಆರಂಭಗೊಂಡಿತು.

ಪುರಾತತ್ವ ಇಲಾಖೆಯು ಇದಕ್ಕಾಗಿ 2.40 ಕೋಟಿ ರೂ. ವೆಚ್ಚದಲ್ಲಿ ಮೂಲ ದೇವರು ಇರುವ ಗರ್ಭ ಗುಡಿಯನ್ನು ಬಿಟ್ಟು ಉಳಿದ ದೇವಸ್ಥಾನದ ಭಾಗವನ್ನೆಲ್ಲಾ ಕೆಡವಿ ಜೀರ್ಣೋದ್ಧಾರ ಕೆಲಸ ಆರಂಭ ಮಾಡಿತ್ತು. ಹೀಗಾಗಿ 2017, 2018 ಸೇರಿದಂತೆ ಈ ಬಾರಿಯೂ ರಥೋತ್ಸವ ನಿಂತಿದೆ. ಮೂರು ವರ್ಷಗಳಿಂದ ರಥೋತ್ಸವವೇ ನಡೆದಿಲ್ಲ.

ಜ.16ರಂದು ವಿಶೇಷ ಪೂಜೆ: ಬಿಳಿಗಿರಿರಂಗನಾಥ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಕೈಗೊಂಡಿರುವುದರಿಂದ ದೇವಸ್ಥಾನವನ್ನು ಬಂದ್‌ ಮಾಡಲಾಗುತ್ತದೆ. ಜೀರ್ಣೋದ್ಧಾರ ಮಾಡುವ ವೇಳೆ ಮೂಲ ದೇವರ ವಿಗ್ರಹವನ್ನು ಉಳಿಸಿಕೊಂಡು ಉಳಿದಂತೆ ದೇವಸ್ಥಾನವನ್ನು ಕೆಡವಿ ಹೊಸದಾಗಿ ನಿರ್ಮಾಣ ಮಾಡಲಾಗುತ್ತಿದೆ. ಈ ವೇಳೆ ದೇವಸ್ಥಾನಕ್ಕೆ ಬರುವ ಭಕ್ತರು, ಪ್ರವಾಸಿಗರಿಗೆ ತೊಂದರೆಯಾಗಬಾರದೆಂಬ ಉದ್ದೇಶದಿಂದ ದೇವಸ್ಥಾನದ ಆಡಳಿತ ಮಂಡಳಿ ಮರದಿಂದ ದೇವರ ವಿಗ್ರಹವನ್ನು 2016 ಮಾರ್ಚ್‌ 17ರಂದು ಮಾಡಿ,

Advertisement

ದೇವಸ್ಥಾನದ ಆಡಳಿತ ಕಚೇರಿ ಬಳಿ ಪ್ರತಿಷ್ಠಾಪಿಸಿದೆ. ದಿನ ನಿತ್ಯ ಪೂಜೆ ಕಾರ್ಯವು ನಡೆಸುತ್ತಿದೆ. ಆದರಂತೆ ಜ.16ರಂದು ಜಾತ್ರೆ ಇಲ್ಲದ ಕಾರಣ ಬರುವ ಸಾವಿರಾರು ಭಕ್ತರಿಗೆ ಧಾರ್ಮಿಕ ಕೈಂಕರ್ಯಗಳಿಗೆ ಅನುವು ಮಾಡಿಕೊಡಲಾಗುವುದು. ಜೊತೆಗೆ ವಿಶೇಷ ಪೂಜೆ ಹಾಗೂ ಪ್ರಸಾದ ವಿನಿಯೋಗ ಕಾರ್ಯವನ್ನು ದೇವಾಲಯದಿಂದ ಮಾಡಲಾಗುತ್ತದೆ. ಇಲ್ಲಿಗೆ ಭಕ್ತರು ಬಂದು ದೇವರ ಪೂಜೆ ಮಾಡಿಸಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ಸಂಬಂಧಪಟ್ಟ ಜನಪ್ರತಿನಿಧಿಗಳು, ಇಲಾಖೆಗಳು ಈ ಬಗ್ಗೆ ಹೆಚ್ಚಿನ ಗಮನ ನೀಡಬೇಕು. ಜೀರ್ಣೋದ್ಧಾರ ಕಾಮಗಾರಿ ಆರಂಭಗೊಂಡು 4 ವರ್ಷ ಸಮೀಪಿಸುತ್ತಿದೆ. ಆದರೆ, ಇನ್ನೂ ಪೂರ್ಣಗೊಂಡಿಲ್ಲ. ಇಲ್ಲಿ ಬಿಳಿಗಿರಿರಂಗನಾಥ ಸ್ವಾಮಿಯ 2 ತೇರುಗಳು ನಡೆಯುತ್ತಿವೆ. ದೇಗುಲ ಕಾಮಗಾರಿ ಪೂರ್ಣಗೊಳ್ಳದ ಹೊರತು ಇದನ್ನು ಆಚರಿಸುವಂತಿಲ್ಲ. ಸಾವಿರಾರು ಭಕ್ತರಿಗೆ ಇದು ನಿರಾಸೆ ಮೂಡಿಸಿದೆ. ಈಗಲಾದರೂ ಇಲಾಖೆಗಳು, ಅಧಿಕಾರಿಗಳು ಸಂಬಂಧಪಟ್ಟ ಜನಪ್ರತಿನಿಧಿಗಳು ಈ ಬಗ್ಗೆ ಕ್ರಮ ವಹಿಸಬೇಕು.
-ಕಾಂತರಾಜು, ಬಿಳಿಗಿರಿರಂಗನಾಥಸ್ವಾಮಿ ದೇಗುಲದ ನೌಕರರ ಸಂಘದ ಅಧ್ಯಕ್ಷ

ದೇವಾಲಯದ ಜೀರ್ಣೋದ್ಧಾರ ಕಾಮಗಾರಿ ನಡೆಯುವುದರಿಂದ ಜ.16ರಂದು ನಡೆಯಬೇಕಿದ್ದ ಬಿಳಿಗಿರಿರಂಗನಾಥ ಸ್ವಾಮಿಯ ಚಿಕ್ಕ ಜಾತ್ರೆ ನಡೆಯುವುದಿಲ್ಲ. ಆದರೂ ರಂಗಪ್ಪನ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಅವರಿಗೆ ನೆರವಾಗುವ ಉದ್ದೇಶದಿಂದ ವಿಶೇಷ ಪೂಜೆ ಹಾಗೂ ಪ್ರಸಾದ ವಿನಿಯೋಗ ಕಾರ್ಯಗಳು ನಡೆಯಲಿವೆ.
-ವೆಂಕಟೇಶ ಪ್ರಸಾದ್‌, ಕಾರ್ಯನಿರ್ವಾಹಕ ಅಧಿಕಾರಿ, ಬಿಳಿಗಿರಿರಂಗನಾಥ ಸ್ವಾಮಿ ದೇವಾಲಯ

* ಫೈರೋಜ್‌ಖಾನ್‌

Advertisement

Udayavani is now on Telegram. Click here to join our channel and stay updated with the latest news.

Next