ಬೆಂಗಳೂರು: ರಾಜ್ಯದಲ್ಲಿ ಕೋವಿಡ್ 19 ಸೋಂಕು ಹರಡುವಿಕೆಯನ್ನು ತಡೆಗಟ್ಟುವ ಉದ್ದೇಶದಿಂದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ದಕ್ಷಿಣ ಕನ್ನಡ ಸೇರಿದಂತೆ ಇನ್ನು ಕೆಲವು ಜಿಲ್ಲೆಗಳಲ್ಲಿ ಲಾಕ್ ಡೌನ್ ನಿಯಮಗಳನ್ನು ಮರು ಜಾರಿಗೊಳಿಸಲಾಗಿತ್ತು.
ಆದರೆ ಇಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಫೇಸ್ಬುಕ್ ಲೈವ್ ಮೂಲಕ ಮಾತನಾಡಿ ರಾಜ್ಯದಲ್ಲಿ ಇನ್ನು ಲಾಕ್ ಡೌನ್ ನಿಯಮಗಳು ಕಂಟೈನ್ಮೆಂಟ್ ಹೊರತಾದ ಭಾಗಗಳಲ್ಲಿ ಜಾರಿಯಲ್ಲಿರುವುದಿಲ್ಲ ಎಂದು ಹೇಳಿದ್ದರು.
ಇದಕ್ಕೆ ಅನುಗುಣವಾಗಿ ರಾಜ್ಯ ಸರಕಾರ ಇದೀಗ ಕೆಲವೊಂದು ಮಾರ್ಪಾಡುಗಳೊಂದಿಗೆ ಜೂನ್ 30ರಂದು ತನ್ನ ಆದೇಶದಲ್ಲಿ ಕೆಲವೊಂದು ಅಂಶಗಳನ್ನು ಪರಿಷ್ಕರಿಸಿ ರಾಜ್ಯಾದ್ಯಂತ ಅನ್ ಲಾಕ್ ಪ್ರಕ್ರಿಯೆಯನ್ನು ಮರು ಜಾರಿಗೊಳಿಸಿದೆ.
ಇದರ ಪ್ರಕಾರ ಬೆಂಗಳೂರು ಪ್ರದೇಶದಲ್ಲಿ ಜುಲೈ 14ರ ರಾತ್ರಿ 8.00 ಗಂಟೆಯಿಂದ ಜುಲೈ 22ರ ಬೆಳಿಗ್ಗೆ 5 ಗಂಟೆಗಳವರೆಗೆ ಜಾರಿಯಲ್ಲಿದ್ದ ಲಾಕ್ ಡೌನ್ ನಾಳೆ ಬೆಳಿಗ್ಗೆಗೆ ಮುಕ್ತಾಯಗೊಳ್ಳಲಿದೆ. ಮತ್ತು ಈ ವ್ಯವಸ್ಥೆ ಜುಲೈ 30ರವರೆಗೆ ಹೀಗೆಯೇ ಮುಂದುವರಿಯಲಿದೆ ಎಂದು ರಾಜ್ಯ ಸರಕಾರ ತನ್ನ ಆದೇಶದಲ್ಲಿ ತಿಳಿಸಿದೆ.
ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುರುವಾರ (ಜು.23) ಬೆಳಗ್ಗೆ 5 ಗಂಟೆಯವರೆಗೆ ಲಾಕ್ ಡೌನ್ ನಿಯಮಗಳು ಜಾರಿಯಲ್ಲಿರುತ್ತವೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಕೋಟ ಶ್ರೀನಿವಾಸ ಪೂಜಾರಿಯವರು ತಿಳಿಸಿದ್ದಾರೆ.
Related Articles
ಮಾರ್ಪಾಡುಗೊಂಡ ಅನ್ ಲಾಕ್ 2.0 ಮಾರ್ಗಸೂಚಿಗಳ ಪ್ರಕಾರ ರಾಜ್ಯಾದ್ಯಂತ ರಾತ್ರಿ 9.00 ಗಂಟೆಯಿಂದ ಬೆಳಗ್ಗೆ 5.00 ಗಂಟೆಯವರೆಗೆ ಕರ್ಫ್ಯೂ ಸ್ಥಿತಿ ಜಾರಿಯಲ್ಲಿರುತ್ತದೆ. ಮತ್ತು ಪ್ರಸ್ತುತ ಚಾಲ್ತಿಯಲ್ಲಿರುವಂತೆ ಪ್ರತೀ ಭಾನುವಾರದ ಲಾಕ್ ಡೌನ್ ಮುಂದುವರಿಯಲಿದೆ.
ಮತ್ತು ಈ ನಿಯಮಗಳಿಗೆ ಪೂರಕವಾಗಿ ಜನಸಂದಣಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಬೆಂಗಳೂರು ಸಹಿತ ರಾಜ್ಯದ ಎಲ್ಲಾ ಜಿಲ್ಲೆಗಳು ಹಾಗೂ ತಾಲೂಕು ಮಟ್ಟಗಳಲ್ಲಿ ತರಕಾರಿ ಮಾರುಕಟ್ಟೆಗಳನ್ನು ಎ.ಪಿ.ಎಂ.ಸಿ. ಅಥವಾ ಸೂಕ್ತ ವಿಶಾಲ ಪ್ರದೇಶಗಳಿಗೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳುವುದು.
ಉದ್ಯಾನವನಗಳಲ್ಲಿ ಜಿಮ್ ಸಲಕರಣೆಗಳು ಹಾಗೂ ಕುಳಿತುಕೊಳ್ಳುವ ಬೆಂಚ್ ಗಳನ್ನು ಸಾರ್ವಜನಿಕರು ಬಳಸದಂತೆ ನಿಗಾ ವಹಿಸುವುದು.
ಇವುಗಳೊಂದಿಗೆ ಆಯಾ ಜಿಲ್ಲಾಡಳಿತಗಳ ಪ್ರತ್ಯೇಕ ಮಾರ್ಗಸೂಚಿಗಳು ಪ್ರಕಟಗೊಳ್ಳುವವರೆಗೂ ಅನ್ ಲಾಕ್ 2.0ರ ಮಾರ್ಗಸೂಚಿಯು ಈ ಮೇಲಿನ ಬದಲಾವಣೆಗಳೊಂದಿಗೆ ರಾಜ್ಯಾದ್ಯಂತ ಜಾರಿಯಲ್ಲಿರುತ್ತದೆ.