ಬೆಂಗಳೂರು: ಈ ಬಾರಿ ಪರೀಕ್ಷೆಗಳ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ವಿದ್ಯುತ್ ಕಟ್ ತೊಂದರೆ ಇರುವುದಿಲ್ಲ. ಲೋಡ್ ಶೆಡ್ಡಿಂಗ್ ಪ್ರಶ್ನೆ ಉದ್ಭವಿಸುವುದೇ ಇಲ್ಲ. ಸದ್ಯ ರಾಜ್ಯದ ವಿದ್ಯುತ್ ಪರಿಸ್ಥಿತಿ ಉತ್ತಮವಾಗಿದ್ದು, ರೈತರಿಗೆ ಹಗಲು ವೇಳೆ ಸಹ ವಿದ್ಯುತ್ ಕೊಡಬೇಕು ಎಂಬುದು ಸರ್ಕಾರದ ಆಶಯವಾಗಿದೆ ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ವಿದ್ಯುತ್ ಉತ್ಪಾದನೆ ಮಾಡುವ ಸಕ್ಕರೆ ಕಾರ್ಖಾನೆಗಳ ಪ್ರತಿನಿಧಿಗಳು ಮತ್ತು ಎಸ್ಕಾಂಗಳ ಹಿರಿಯ ಅಧಿಕಾರಿಗಳ ಜೊತೆ ವಿಧಾನಸೌಧದಲ್ಲಿ ಬುಧವಾರ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಈ ವರ್ಷ ನಮ್ಮಲ್ಲಿ ಸಾಕಷ್ಟು ಪ್ರಮಾಣದಲ್ಲಿ ವಿದ್ಯುತ್ ಇದೆ. ಹಾಗಾಗಿ, ವಿದ್ಯುತ್ ಆಭಾವದ ಸಮಸ್ಯೆ ಎದುರಾಗುವುದಿಲ್ಲ ಎಂದರು.
ಎಲ್ಲ ಮೂಲಗಳಿಂದ ಪ್ರಸ್ತುತ ಸುಮಾರು 1,500 ಮೆ.ವ್ಯಾ ವಿದ್ಯುತ್ ಬರುತ್ತಿದೆ. ಪ್ರತಿ ತಾಲೂಕಿನಲ್ಲಿ 25 ಮೆ.ವ್ಯಾ ವಿದ್ಯುತ್ ಉತ್ಪಾದಿಸಿ ಅದನ್ನು ಅದೇ ತಾಲೂಕಿಗೆ ಹಂಚಿಕೆ ಮಾಡುವ ಸೋಲಾರ್ ವಿದ್ಯುತ್ ಉತ್ಪಾದನೆ ಯೋಜನೆ ಈಗಾಗಲೇ ರಾಜ್ಯದ ಸುಮಾರು ಶೇ.90ರಷ್ಟು ತಾಲೂಕುಗಳಲ್ಲಿ ಕಾರ್ಯಾಗತಗೊಂಡಿದೆ. ಉಳಿದ ತಾಲೂಕು ಗಳಲ್ಲೂ ಶೀಘ್ರದಲ್ಲೇ ಕಾರ್ಯಗತೊಳ್ಳಲಿದೆ. ಈಗಾಗಲೇ 1,200 ಮೆ.ವ್ಯಾ ಸೋಲಾರ್ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಇನ್ನೂ ಹೆಚ್ಚುವರಿಯಾಗಿ 860 ಮೆ. ವ್ಯಾ ಸಿಗಲಿದೆ. ಎಲ್ಲ ವಿದ್ಯುತ್ ಜಾಲಗಳು ಸಮತಟ್ಟು ಸ್ಥಿತಿಯಲ್ಲಿವೆ ಎಂದು ಸಚಿವರು ತಿಳಿಸಿದರು.
ರಾಜ್ಯದಲ್ಲಿ ಸುಮಾರು 60 ಸಕ್ಕರೆ ಕಾರ್ಖಾನೆಗಳು ವಿದ್ಯುತ್ ಉತ್ಪಾದನೆ ಮಾಡು ತ್ತಿವೆ. ಈ ಕಾರ್ಖಾನೆಗಳ ಉತ್ಪಾದನಾ ಸಾಮರ್ಥಯ 1,515 ಮೆ.ವ್ಯಾ ಇದೆ. ಆದರೆ, ಸರ್ಕಾರಕ್ಕೆ ಸಿಗುತ್ತಿರುವುದು 500 ಮೆ.ವ್ಯಾ ಮಾತ್ರ. ಕೆಇಆರ್‌ಸಿ ನಿಗದಪಡಿಸಿದ ದರ ನಮಗೆ ಎಟಕುವುದಿಲ್ಲ ಎಂದು ಕೆಲವು ಕಾರ್ಖಾನೆಗಳ ವಾದ ಆಗಿದ್ದರೆ, ಇನ್ನೂ
ಕೆಲವರದ್ದು ಬೇರೆ-ಬೇರೆ ಸಮಸ್ಯೆಗಳಿವೆ.
ಆ ಹಿನ್ನೆಲೆಯಲ್ಲಿ ಸಕ್ಕರೆ ಕಾರ್ಖಾನೆ ಪ್ರತಿನಿಧಿಗಳು ಮತ್ತು ಎಸ್ಕಾಂ ಅಧಿಕಾರಿಗಳನ್ನು ಸೇರಿಸಿ ಸಭೆ ನಡೆಸಲಾಗಿದೆ. ಎಲ್ಲ ಸಮಸ್ಯೆಗಳ ಬಗ್ಗೆ ಚರ್ಚೆ ಆಗಿದೆ. ಕೆಲವೊಂದನ್ನು ಕಾರ್ಖಾನೆ ಮಾಲೀಕರು ಒಪ್ಪಿಕೊಂಡಿದ್ದಾರೆ. ಕೆಲವು ಬೇಡಿಕೆಗಳ ಬಗ್ಗೆ ಸರ್ಕಾರ ಸಕಾರಾತ್ಮಕ ಆಶ್ವಾಸನೆ ನೀಡಿದೆ ಎಂದರು.
ಪಾವಗಡದ ಸೋಲಾರ್ ವಿದ್ಯುತ್ ಘಟಕದಲ್ಲಿ ವಿದ್ಯುತ್ ಉತ್ಪಾದಿಸಿ ಅದನ್ನು ಪ್ರತಿ ಯೂನಿಟ್‌ಗೆ 3 ರೂ.ರಂತೆ
ಸರ್ಕಾರಕ್ಕೆ ಕೊಡುವುದಾಗಿ ಎನ್‌ಟಿಪಿಸಿ ಒಪ್ಪಿಕೊಂಡಿತ್ತು. ಆದರೆ, ಈ ದರ ಈಗ ಕಾರ್ಯಸಾಧುವಾಗುತ್ತಿಲ್ಲ ಎಂಬ
ಕಾರಣ ನೀಡಿ ಹಿಂದೆ ಸರಿದಿದೆ. ಆದ್ದರಿಂದ ಇಲಾಖೆ ವತಿಯಿಂದಲೇ ಟೆಂಡರ್ ಕರೆದು, 6 ತಿಂಗಳಲ್ಲಿ ಕಾರ್ಯಗತಗೊಳಿಸಲಾಗುವುದು ಎಂದು ಇದೇ ವೇಳೆ ಇಂಧನ ಸಚಿವರು ತಿಳಿಸಿದರು.