ತುಮಕೂರು: ಕೃಷಿ ಹೊರತು ಜೀವನವೇ ಇಲ್ಲ. ಹೀಗಾಗಿ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಶ್ರೀ ಸಿದ್ಧಗಂಗಾ ಮಠಾಧ್ಯಕ್ಷರಾದ ಡಾ. ಸಿದ್ಧಲಿಂಗ ಸ್ವಾಮೀಜಿ ಎಂದು ತಿಳಿಸಿದರು. ನಗರದ ಸಿದ್ಧಗಂಗಾ ಮಠದ ಆವರಣದಲ್ಲಿ ಸಿದ್ಧಗಂಗಾ ಜಾತ್ರಾ ಮಹೋತ್ಸವದ ಅಂಗವಾಗಿ ಜಿಪಂ, ಜಿಲ್ಲಾಡಳಿತ, ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಸಂಯೋಗದಲ್ಲಿ ಏರ್ಪಡಿಸಿದ್ದ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು.
ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ಸಿದ್ಧಗಂಗಾ ಜಾತ್ರಾ ಮಹೋತ್ಸವದ ಅವಿಭಾಜ್ಯ ಅಂಗವಾಗಿದೆ. ಇದರಲ್ಲಿ ಮಾಹಿತಿ, ಶಿಕ್ಷಣ ಮತ್ತು ಪ್ರಯೋಜನ ಎಲ್ಲವೂ ಲಭಿಸಲಿದೆ. ಎಲ್ಲ ಕ್ಷೇತ್ರಗಳದ್ದು ಒಂದು ತೂಕವಾದರೆ ಕೃಷಿ ಕ್ಷೇತ್ರದ್ದೇ ಒಂದು ತೂಕ ಎಂದು ಹೇಳಿದರು.
ನಮ್ಮ ದೇಶವು ಕೃಷಿ ಪ್ರಧಾನ ದೇಶ. ಅದರಲ್ಲೂ ಮಳೆಯಾಧಾರಿತ ಕೃಷಿ ಮಾಡುತ್ತಿರುವವರೇ ಹೆಚ್ಚು. ಇತ್ತೀಚಿನ ಸಂಕೀರ್ಣ ಸ್ಥಿತಿಯಲ್ಲಿ ಕೃಷಿ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಕೃಷಿ ಎಂಬುದು ಕಷ್ಟಕರ ಕೆಲಸವಾಗಿದೆ. ಬೆಳೆದ ಬೆಳೆಗೆ ಬೆಲೆಯೂ ಇಲ್ಲ ಎಂದಾಗ ಕೃಷಿಯಿಂದ ವಿಮುಖರಾಗುವ ಹಂತ ಬಂದಿದೆ ಎಂದು ನುಡಿದರು.
ನಮ್ಮ ಕೃಷಿ ಅಧಿಕಾರಿಗಳು ಅಲ್ಪಾವಧಿ ಬೆಳೆಗಳು, ಕಡಿಮೆ ನೀರಿನಲ್ಲಿ ಹೆಚ್ಚಿನ ಉತ್ಪನ್ನ ಪಡೆಯುವುದು, ಮಣ್ಣಿನ ಫಲವತ್ತತೆ ಬಗ್ಗೆ ತಿಳಿಸಿ ಕೊಡುವುದು, ಸಮಗ್ರ ಕೃಷಿ ಪದ್ಧತಿ, ಸರ್ಕಾರದ ನೆರವಿನ ಯೋಜನೆ, ಕೃಷಿ ನಷ್ಟ ತಡೆಯುವುದು, ಸುಧಾರಿತ ಕೃಷಿ ಪದ್ಧತಿ ಬಗ್ಗೆ ರೈತರಿಗೆ ಮನವರಿಕೆ ಮಾಡಿಕೊಡಬೇಕು ಎಂದು ತಿಳಿಸಿದರು.
ವಸ್ತು ಪ್ರದರ್ಶನ ಅಚ್ಚುಕಟ್ಟಾಗಿ ನಡೆಯಲು ಕೃಷಿ ಇಲಾಖೆ 7 ತಿಂಗಳಿಂದ ಶ್ರಮ ಪಟ್ಟಿದೆ. ಬೇರೆ ಇಲಾಖೆಗಳಿಗಿಂತ ಈ ಇಲಾಖೆಯ ಶ್ರಮ ಬಹಳಷ್ಟಿದೆ. ಕೃಷಿ ಇಲಾಖೆ ರೂಪಿಸಿದ ವಿವಿಧ ಬೆಳೆಗಳ ತಾಕುಗಳನ್ನು ರೈತರು, ಸಾರ್ವಜನಿಕರು ವೀಕ್ಷಿಸಬೇಕು. ರೋಬೋಟ್ ಹಕ್ಕಿಗಳ ಪ್ರದರ್ಶನ, ಆಕರ್ಷಕ ಕಲಾಕೃತಿಗಳ ಪ್ರದರ್ಶನಗಳು ಈ ಬಾರಿಯ ಮತ್ತೂಂದು ಆಕರ್ಷಣೆಯಾಗಿದೆ ಎಂದರು.
ಈ ಪ್ರದರ್ಶನವು ಎಲ್ಲ ವರ್ಗದವರಿಗೂ ಅಚ್ಚುಮೆಚ್ಚಿನದಾಗಲಿದೆ. ಜಿಲ್ಲಾಡಳಿತ, ಜಿಪಂ ಸಹಕಾರ ಇಲ್ಲದೆ ಇದ್ದಿದ್ದರೆ ಇಷ್ಟೊಂದು ಅಚ್ಚುಕಟ್ಟಾಗಿ ನಡೆಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿದರು. ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಮುಖ್ಯ ನಿರ್ವಾಹಣಾಧಿಕಾರಿ ಡಾ. ಮಹಾಂತೇಶ್ ಕರೂರ ಮಾತನಾಡಿದರು.
ಜಿ.ಪಂ. ಅಧ್ಯಕ್ಷೆ ಎಂ. ಲತಾ ರವಿಕುಮಾರ್, ಮೇಯರ್ ಲಲಿತಾ ರವೀಶ್, ವಸ್ತು ಪ್ರದರ್ಶನದ ಜಂಟಿ ಕಾರ್ಯದರ್ಶಿ ರೇಣುಕಯ್ಯ, ಸಾಂಸ್ಕೃತಿಕ ಸಮಿತಿ ಸಂಚಾಲಕ ಕೆ.ಎಸ್. ಉಮಾಮಹೇಶ್, ಪ್ರಚಾರ ಸಮಿತಿ ಸಂಚಾಲಕ ಜಿ. ರುದ್ರೇಶ್ ಮತ್ತಿತರರು ಉಪಸ್ಥಿತರಿದ್ದರು.