ಧಾರವಾಡ: ಇಂದು ಅಂಕ ಗಳಿಕೆ ಜೊತೆಗೆ ಇಂಗ್ಲಿಷ್ ಮಾಧ್ಯಮ ಎಂಬ ಭೂತ ನಮ್ಮನ್ನು ಕಾಡುತ್ತಿದೆ ಎಂದು ಭಾರತರತ್ನ ಪುರಸ್ಕೃತ ಪ್ರೊ|ಸಿ.ಎನ್.ಆರ್. ರಾವ್ ಹೇಳಿದರು.
ಸೃಜನಾ ರಂಗಮಂದಿರದಲ್ಲಿ ಕರ್ನಾಟಕ ಪ್ರೌಢಶಾಲೆ ಶತಮಾನೋತ್ಸವ ನಿಮಿತ್ತ ಗುರುವಾರ ಹಳೆಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಮಕ್ಕಳಿಗಾಗಿ ನಡೆದ ವಿಜ್ಞಾನ ವಸ್ತು ಪ್ರದರ್ಶನದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಕನ್ನಡ ಭಾಷೆಯಲ್ಲಿ ಶಾಲೆ ಕಲಿತರೆ ಬೆಳವಣಿಗೆ ಆಗುವುದಿಲ್ಲ ಎಂದೇನಿಲ್ಲ. ನಾನೂ ಸಹ 10ನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿಯೇ ಶಾಲೆ ಕಲಿತಿರುವೆ. ಆದರೆ, ಇಂಗ್ಲಿಷ್ ಭಾಷೆಯನ್ನು ಒಂದು ಭಾಷೆಯನ್ನಾಗಿ ಮಾತ್ರ ಕಲಿತೆ. ಶಾಲಾ ಹಂತದಲ್ಲಿಯೇ ಹಲವಾರು ಇಂಗ್ಲಿಷ್ ಸ್ಪರ್ಧೆಗಳಲ್ಲೂ ಪ್ರಶಸ್ತಿ ಪಡೆದೆ. ಭಾಷೆಯನ್ನು ನಾವು ಪರಿಣಾಮಕಾರಿಯಾಗಿ ಕಲಿಯಬೇಕು. ನನ್ನ ಪ್ರಕಾರ ಕನಿಷ್ಠ 10ನೇ ತರಗತಿ ವರೆಗೆ ಮಾತೃಭಾಷೆಯಲ್ಲಿಯೇ ಮಕ್ಕಳು ಶಿಕ್ಷಣ ಪಡೆಯಬೇಕು. ಅದರಲ್ಲೂ ವಿಜ್ಞಾನ ಕಲಿಯಲು ಭಾಷೆಯ ತೊಡಕು ಇಲ್ಲವೇ ಇಲ್ಲ ಎಂದರು.
ಭಾರತದ ಶಿಕ್ಷಣ ಪದ್ಧತಿಯಲ್ಲಿ ಬದಲಾವಣೆ ತರುವುದು ಅತಿ ಅವಶ್ಯವಾಗಿದೆ. ಇಲ್ಲಿರುವ ಪರೀಕ್ಷಾ ಪದ್ಧತಿ ಕೇವಲ ಅಂಕ ಗಳಿಕೆ ಹಿಂದೆ ಹೋಗುವಂತಾಗಿದೆ. ಅದನ್ನು ತೊರೆದು ತಾವು ಸಂಗ್ರಹಿಸಿದ ಜ್ಞಾನದ ಪರೀಕ್ಷೆಗೆ ಸಿದ್ಧರಾಗಬೇಕು. ವಿಜ್ಞಾನ ಕ್ಷೇತ್ರದಲ್ಲಿ ನಿತ್ಯ ನಡೆಯುತ್ತಿರುವಂತಹ ನೂತನ ಪ್ರಯೋಗಗಳ ಬಗ್ಗೆ ಮಾಹಿತಿ ಸಂಗ್ರಹಿಸುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂದು ಹೇಳಿದರು.
ಸ್ವತಂತ್ರ ಪೂರ್ವ ಭಾರತಕ್ಕೂ ಈಗಿನ ಭಾರತಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಸ್ವತಂತ್ರ ಪೂರ್ವದಲ್ಲಿ ಸಂಶೋಧನೆಗೆ ಪೂರಕವಾದ ವಾತಾವರಣ ಇರದ ಕಾರಣ ವಿಜ್ಞಾನ ಕ್ಷೇತ್ರದಲ್ಲಿ ಹಿನ್ನಡೆಯಾಗಿತ್ತು. ಆದರೆ, ಪ್ರಸ್ತುತ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಮುಂಚೂಣಿಯಲ್ಲಿದ್ದು, ಅದರ ಸದ್ಬಳಕೆಯನ್ನು ಯುವ ಪೀಳಿಗೆ ಮಾಡಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.
ಕೆ.ಇ. ಬೋರ್ಡ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ| ಅಶೋಕ ಚಚಡಿ ಅಧ್ಯಕ್ಷತೆ ವಹಿಸಿದ್ದರು. ವಿಜ್ಞಾನಿ ಡಾ| ಗಿರಿಧರ ಕುಲಕರ್ಣಿ ಮಾತನಾಡಿದರು. ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಪ್ರಶಸ್ತಿ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಶಿಕ್ಷಣ ಇಲಾಖೆ ಅಪರ ಆಯುಕ್ತ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ, ಡಾ| ಇಂದುಮತಿ ರಾವ್, ಅರುಣ ನಾಡಿಗೇರ, ಮೀರಾ ನಾವಳ್ಳಿ, ಸಂತೋಷ ಶೆಟ್ಟಿ, ಡಾ| ಪ್ರಕಾಶ ರಾಮನಗೌಡರ ಇನ್ನಿತರರಿದ್ದರು. ನಂತರ ವಿದ್ಯಾರ್ಥಿಗಳೊಂದಿಗೆ ಪ್ರೊ| ಸಿ.ಎನ್.ಆರ್. ರಾವ್ ಸಂವಾದ ನಡೆಸಿದರು. ಕಲಾವಿದ ಡಾ| ಬಾಬುರಾವ್ ವೇದಿಕೆ ಮುಂಭಾಗದಲ್ಲಿ ನಿಂತು ಪ್ರೊ|ರಾವ್ ಅವರ ಉಪನ್ಯಾಸ ಮುಗಿಯುವಷ್ಟರಲ್ಲಿ ಅವರ ಚಿತ್ರ ರಚಿಸಿ ನೀಡಿದ್ದು ಗಮನ ಸೆಳೆಯಿತು.