ಕಾರ್ಕಳ: ರಾಜ್ಯದಲ್ಲಿ ಕ್ಯಾಸಿನೋ ತೆರೆಯುವ ಉದ್ದೇಶವಿಲ್ಲ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಸ್ಪಷ್ಟನೆ ನೀಡಿದ್ದಾರೆ. ಶನಿವಾರ ಕಾರ್ಕಳದಲ್ಲಿ ಪತ್ರಕರ್ತರೊಂದಿಗೆ ಅವರು ಮಾತನಾಡಿದರು. ಅಮೆರಿಕ, ಸಿಂಗಾಪುರ, ಶ್ರೀಲಂಕಾಗಳು ಕ್ಯಾಸಿನೋದಿಂದಾಗಿ ಪ್ರಸಿದ್ಧಿಗೆ ಬಂದಿವೆ.
ಗೋವಾದ ಪ್ರವಾಸೋದ್ಯಮ ಅಭಿವೃದ್ಧಿಯಲ್ಲಿ ಕ್ಯಾಸಿನೋ, ಕ್ಲಬ್, ಪಬ್ ಸಹಕಾರಿಯಾಗಿವೆ ಎಂದು ಹೇಳಿದ್ದೇನೆಯೇ ಹೊರತು ರಾಜ್ಯದಲ್ಲಿ ಕ್ಯಾಸಿನೋ ತೆರೆಯುವ ಯೋಚನೆ ಇಲ್ಲ ಎಂದು ಸಚಿವರು ಸ್ಪಷ್ಟನೆ ನೀಡಿದರು. ನಮ್ಮ ಊರಿನಿಂದ ಬಹಳ ದೊಡ್ಡ ಪ್ರಮಾಣದಲ್ಲಿ ಬೇರೆಡೆಗೆ ಪ್ರವಾಸ ಹೋಗುತ್ತಾರೆ. ಅವರನ್ನು ತಡೆಯಲು ಸಾಧ್ಯವಿಲ್ಲ. ಲಾಸ್ ವೇಗಸ್, ಶ್ರೀಲಂಕಾ ದೇಶಕ್ಕೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯರು ಪ್ರವಾಸ ಕೈಗೊಳ್ಳುತ್ತಾರೆ.
ಅಲ್ಲಿ ಖರ್ಚಾಗುವ ದುಡ್ಡನ್ನು ಇಲ್ಲೇ ಉಳಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಬೇಕಾಗಿದೆ ಎಂದರು. ಕ್ಯಾಸಿನೋ, ಕ್ಲಬ್, ಪಬ್‌ಗ ತೆರಳುವ ಅನೇಕರು ಇಲ್ಲಿ ಮಡಿವಂತರಾಗಿ ಕಾಣುತ್ತಾರೆ. ಆದರೆ, ಇಂತಹ ಉದ್ದೇಶವಿಟ್ಟುಕೊಂಡು ವಿದೇಶಕ್ಕೆ ತೆರಳಿ, ದುಡ್ಡು ಖರ್ಚು ಮಾಡುತ್ತಾರೆಂದು ರವಿ ವಿಷಾದ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಕ್ಯಾಸಿನೊ ಬೇಡ. ಸಚಿವ ಸಿ.ಟಿ.ರವಿ ಅವರು ಯಾವ ಹಿನ್ನೆಲೆಯಲ್ಲಿ ಹಾಗೆ ಹೇಳಿದ್ದಾರೋ ಗೊತ್ತಿಲ್ಲ. ಆದರೆ, ಕ್ಯಾಸಿನೋ ನಮ್ಮಲ್ಲಿ ಬರುವುದು ಬೇಡ. ಗೋವಾದಲ್ಲಿದೆ. ಅದು ಅಲ್ಲೇ ಇರಲಿ. ಪ್ರವಾಸೋದ್ಯಮಕ್ಕಾಗಿ ಯಾರನ್ನೂ ಚಟಗಾರರನ್ನಾಗಿ ಮಾಡಬಾರದು. ರವಿ ಅವರಿಗೆ ತಿಳಿವಳಿಕೆ ಹೇಳುತ್ತೇನೆ.
-ಪ್ರಹ್ಲಾದ ಜೋಶಿ, ಕೇಂದ್ರ ಸಚಿವ