ಚಿಕ್ಕನಾಯಕನಹಳ್ಳಿ: ತಾಲೂಕಿನಲ್ಲಿನ ಗೋಡೆಕೆರೆ ಗೊಲ್ಲರಹಟ್ಟಿ ಸೀಲ್‌ಡೌನ್ ಮಾಡಲಾಗಿದ್ದು, ಅಲ್ಲಿನ ಜನರಿಗೆ ಮೂಲಭೂತ ಸೌಕರ್ಯ ಸಿಗದೇ ತೀವ್ರ ಸಂಕಷ್ಟ ಎದುರಿಸುತ್ತಿದ್ದು, ಜಾನುವಾರುಗಳ ನಿರ್ವ ಹಣೆಗೆ ರೈತರು ಹರ ಸಾಹಸಪಡುವಂತಾಗಿದೆ.
ಗೋಡೆಕೆರೆ ಗೊಲ್ಲರಹಟ್ಟಿ ಪ್ರದೇಶದಲ್ಲಿ ಜೂ.23 ರಂದು ಯುವಕನಿಗೆ ಕೋವಿಡ್ 19 ಪಾಸಿಟಿವ್ ಬಂದ ಹಿನ್ನೆಲೆ ಇಡೀ ಗ್ರಾಮವನ್ನು ಸೀಲ್‌ಡೌನ್ ಮಾಡಿದ್ದು, ಈ ಪ್ರದೇಶದಲ್ಲಿನ ಜನರು ಹೈನುಗಾರಿಕೆ ಹಾಗೂ ಕುರಿ ಸಾಕಾಣಿಕೆ ಮಾಡುತ್ತಿದ್ದು, ಜಾನುವಾರುಗಳಿಗೆ ಮೇವು , ನೀರಿನ ಸಮಸ್ಯೆ ಉಂಟಾಗಿದೆ. ಪ್ರದೇಶದಲ್ಲಿ ಉತ್ಪಾದನೆ ಯಾದ ಹಾಲನ್ನು ಡೇರಿಗಳಿಗೂ ಹಾಕಲು ಸಾಧ್ಯವಾಗುತ್ತಿಲ್ಲ.
ದಿನಸಿ ಸಮಸ್ಯೆ: ಸೀಲ್‌ಡೌನ್ ಆಗಿ ನಾಲ್ಕು ದಿನ ಕಳೆದಿದೆ. ಇನ್ನೂ ಕೆಲ ದಿನಗಳಲ್ಲಿ ಇಲ್ಲಿನ ನಿವಾಸಿಗಳಿಗೆ ದಿನಸಿ ಸಮಸ್ಯೆ ಉಂಟಾಗಲಿದ್ದು, ಈಗಾಗಲೇ ಪ್ರದೇಶ ದಲ್ಲಿನ ಮಕ್ಕಳಿಗೆ ಸಮಸ್ಯೆ ಹಾಗೂ ಶುದ್ಧ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ.
ಅಧಿಕಾರಿಗಳ ಸಹಕಾರ ಮುಖ್ಯ: ಈ ಪ್ರದೇಶದಲ್ಲಿ ನಿತ್ಯ ಉತ್ಪಾದನೆಯಾಗುವ ಹಾಲನ್ನು ಮಾರಾಟ ಮಾಡಲು ವ್ಯವಸ್ಥೆ ಆಗಬೇಕು. ಜಾನುವಾರುಗಳಿಗೆ ಮೇವಿನ ವ್ಯವಸ್ಥೆ, ಇಲ್ಲಿನ ನಿವಾಸಿಗಳಿಗೆ ಸೀಲ್‌ಡೌನ್ ಅವಧಿ ಮುಗಿಯುವವರೆಗೂ ದಿನಸಿ ಸಾಮಗ್ರಿ ನೀಡಬೇಕು. ಶುದ್ಧ ಕುಡಿಯುವ ನೀರು, ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ನಿಯೋಜನೆಗೊಂಡ ಅಧಿಕಾರಿಗಳು ಇಲ್ಲಿನ ನಿವಾಸಿಗಳಿಗೆ ಒದಗಿಸಬೇಕು ಹಾಗೂ ದಾನಿಗಳು ತಮ್ಮ ಉದಾರತೆ ತೋರಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಡಿವೈಎಸ್‌ಪಿ ಬಂದಾಗ ಅಧಿಕಾರಿಗಳೇ ಇಲ್ಲ: ಸೀಲ್ ಡೌನ್ ಪ್ರದೇಶಕ್ಕೆ ಡಿವೈಎಸ್‌ಪಿ ಭೇಟಿ ನೀಡಿದ ಸಂದರ್ಭ ದಲ್ಲಿ ಪ್ರದೇಶಕ್ಕೆ ನಿಯೋಜನೆಯಾದ ಯಾವ ಅಧಿಕಾರಿ ಗಳು ಸಹ ಇರಲಿಲ್ಲ ಎಂದು ಇಲ್ಲಿನ ನಿವಾಸಿಗಳು ತಿಳಿಸಿ ದ್ದಾರೆ. ಅವಶ್ಯಕತೆಗಿಂತ ಹೆಚ್ಚು ಪ್ರದೇಶವನ್ನು ಲಾಕ್ ಡೌನ್ ಮಾಡಿರುವುದರಿಂದ ಹತ್ತಾರು ಸಮಸ್ಯೆಗಳು ಉದ್ಭವಿಸುತ್ತಿವೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.