Advertisement
ವಿಟ್ಲ: ವಿಟ್ಲಮುಟ್ನೂರು ಗುಡ್ಡ ಪ್ರದೇಶ ಮತ್ತು ಕಲ್ಲುಗಳಿಂದ ತುಂಬಿದ ಗ್ರಾಮ. ಕೃಷಿಗೆ ಅನುಕೂಲವಿರುವ ಮಣ್ಣು ಕಡಿಮೆ. ಒಬ್ಬೊಬ್ಬ ಕೃಷಿಕನೂ ಹತ್ತಾರು ಕೊಳವೆಬಾವಿ ತೋಡಿದರೂ ನೀರು ಸಿಗದ ಬರಡುಭೂಮಿ. ಆದರೆ ಇದೇ ಗ್ರಾಮದಲ್ಲಿ ಮಣ್ಣ ಫಲವತ್ತತೆಯನ್ನು ಹುಡುಕಿ ಧಾರಾಳ ಉತ್ಪತ್ತಿ ಪಡೆದ ಕೃಷಿಕರೋರ್ವರು ಸರಕಾರದ ಕೃಷಿ ಪಂಡಿತ ಪುರಸ್ಕಾರ ಪಡೆ ದದ್ದೂ ಹೌದು. ಕೋರೆ, ಕ್ರಶರ್‌ಗಳು ಈ ಗ್ರಾಮದಲ್ಲಿ ಹೆಚ್ಚಾಗಿದ್ದು ಅವುಗಳ ತೆರಿಗೆಯೇ ಗಣಿ ಇಲಾಖೆಗೆ ದೊಡ್ಡ ಸಂಪತ್ತಾಗಿದೆ!
ಚಂದಳಿಕೆ, ಮಾಡತ್ತಡ್ಕ, ಅಜ್ಜಿನಡ್ಕ ರಸ್ತೆ ಡಾಮರು ಕಾಣದೆ, ಅಭಿವೃದ್ಧಿ ಹೊಂದದೆ ಎರಡು ದಶಕಗಳೇ ಕಳೆದಿತ್ತು. ಕಳೆದ ಅವಧಿಯಲ್ಲಿ ಶಕುಂತಳಾ ಟಿ.ಶೆಟ್ಟಿ ಅವರ ಅನುದಾನದಲ್ಲಿ ಕಾಮಗಾರಿ ನಡೆಯಿತು. ಆದರೆ ಮರುವಳದಿಂದ ನಾಟೆ ಕಲ್ಲುವರೆಗೆ ಸುಮಾರು 4 ಕಿ.ಮೀ. ದೂರದ ಶೋಚ ನೀಯ ರಸ್ತೆ ಅಭಿವೃದ್ಧಿಯಾಗದೆ ಉಳಿದುಕೊಂಡಿದೆ. ಇಷ್ಟರ ತನಕವೂ ಜಿ.ಪಂ. ರಸ್ತೆಯಾಗಿಯೇ ಉಳಿದಿದ್ದ ಈ ರಸ್ತೆ ಇದೀಗ ಲೋಕೋಪಯೋಗಿ ಇಲಾಖೆ ರಸ್ತೆಯಾಗಿ ಮೇಲ್ದರ್ಜೆಗೇರಿದೆ. ಸೇನೆರೆಮಜಲಿನಲ್ಲಿ ಸೇತುವೆ ನಿರ್ಮಾಣವಾಗಬೇಕಿದೆ. ಅಂದಾಜು 70 ಲಕ್ಷ ರೂ. ಅನುದಾನ ಮಂಜೂರಾಗಬೇಕಿದೆ. ಆಲಂಗಾರು-ಪ.ಪಂ. ರಸ್ತೆ ಕಾಂಕ್ರೀಟ್, ಗುಂಪಲಡ್ಕ-ಪುಳಿತ್ತಗುರಿ ರಸ್ತೆ, ಪಲ್ಲೆದಗುರಿ- ಪ.ಪಂ. ಕಾಲನಿ, ಹೊಸಕೆರೆ-ಪ.ಪಂ.ಕಾಲನಿ, ಮುಂಡೋವುಮೂಲೆ-ಪ.ಪಂ.ಕಾಲನಿ, ಚೆಕ್ಕುರಿ-ಸಂಕದಡ್ಕ- ಪ.ಪಂ. ಕಾಲನಿ, ಆಲಂಗಾರು- ಕುತ್ತಿಗುಡ್ಡೆ- ಪ.ಪಂ. ಕಾಲನಿ ರಸ್ತೆಗಳು ಅಭಿವೃದ್ಧಿಯಾ ಗಬೇಕಾಗಿದೆ. ಪೆರುವಾಜೆಯಲ್ಲಿ 10 ಲಕ್ಷ ರೂ. ವೆಚ್ಚದ ಅನುದಾನದಲ್ಲಿ ಸೇತುವೆಯ ಬೇಡಿಕೆಯೂ ಇದೆ. ಕಟ್ಟತ್ತಿಲದಲ್ಲಿ ಶಾಲೆ ಸಂಪರ್ಕ ರಸ್ತೆಯ ಸೇತುಬಂಧ ಯೋಜನೆಯಡಿ ಕಾಲುಸಂಕ ಮಂಜೂರಾಗಿದೆ. ಆದರೆ ಟೆಂಡರ್ ಕರೆಗೆ ಓಗೊಡುವವರಿಲ್ಲವಾದುದರಿಂದ ಕಾಮಗಾರಿ ಆರಂಭವಾಗಿಲ್ಲ.
Related Articles
Advertisement
3 ಕಿ.ಮೀ. ಸಂಕಷ್ಟ!ವಿಟ್ಲ ಪ.ಪಂ.ನಿಂದ 3 ಕಿ.ಮೀ. ದೂರದಲ್ಲಿ ವಿಟ್ಲಮುಟ್ನೂರು ಗ್ರಾಮವಿರುವ ಕಾರಣಕ್ಕೆ 94ಸಿಸಿ ಸೌಲಭ್ಯ ಅನುಷ್ಠಾನಗೊಳ್ಳುವುದಿಲ್ಲ. ಮನೆ ನಿವೇಶನ ಇಲ್ಲದೆ ಪರದಾಡುವ ಸಂಕಷ್ಟ ಆ ಫಲಾನುಭವಿಗಳಿಗೇ ಗೊತ್ತು. ಅದೇ ಕಾರಣಕ್ಕೆ ಗ್ರಾಮದ ರೈತರ ಕುಮ್ಕಿ ಹಕ್ಕು ರದ್ದಾಗುತ್ತದೆ. ಅಕ್ರಮ ಸಕ್ರಮ ಯೋಜನೆಯೂ ಪಾಸಾಗುವುದಿಲ್ಲ. ಇಂತಹ ಸಮಸ್ಯೆಗಳನ್ನು ಇಷ್ಟು ವರ್ಷಗಳಿಂದ ಪರಿಹರಿಸಲು ಸೂಕ್ತ ಮಾರ್ಗವನ್ನು ಅಧಿಕಾರಿಗಳು ತೋರಿಸಿಲ್ಲ. ಈ ಜ್ವಲಂತ ಸಮಸ್ಯೆಯನ್ನು ಅರ್ಥೈಸಿಕೊಂಡು, ಜನರ ಸಮಸ್ಯೆಯನ್ನು ಪರಿಹರಿಸಬೇಕಾದದ್ದು ಅತೀ ಮುಖ್ಯವಾಗಿದೆ. ಪ್ರಾಥಮಿಕ ಶಾಲೆ
ಈ ಗ್ರಾಮದಲ್ಲಿ ಮೂರು ನಾಲ್ಕು ಪ್ರಾಥಮಿಕ ಶಾಲೆಗಳಿವೆ. 8 ಅಂಗನವಾಡಿಗಳಿವೆ. ಕಂಬಳಬೆಟ್ಟು ಶಾಲೆ ಶತಮಾನ ಕಂಡಿದೆ. ಅಲ್ಲಿ 8ನೇ ತರಗತಿ ತನಕವಿದೆ. ಇಲ್ಲಿನ ವಿದ್ಯಾರ್ಥಿಗಳು ವಿಟ್ಲದ ಶಾಲೆಗಳನ್ನೇ ಅವಲಂಬಿಸಿದ್ದಾರೆ. ಇಲ್ಲಿನ ಜನತೆ ಬಿಎಸ್‌ಎನ್‌ಎಲ್ ಮರೆತುಬಿಟ್ಟಿದ್ದಾರೆ. ಖಾಸಗಿ ಸಂಪರ್ಕ ಸೌಲಭ್ಯವನ್ನು ಹೊಂದಿದ್ದಾರೆ. ಕಿಂಡಿ ಅಣೆಕಟ್ಟು
ಗ್ರಾಮಸ್ಥರು ತೋಡಿಗೆ ಅಣೆಕಟ್ಟುಗಳನ್ನು ನಿರ್ಮಿಸಿದ್ದಾರೆ. ಸರಕಾರದ ವತಿಯಿಂದ 6-7 ಕಿಂಡಿ ಅಣೆಕಟ್ಟುಗಳು ನಿರ್ಮಾಣವಾಗಿವೆ. ಇವೆಲ್ಲವೂ ತಕ್ಕಮಟ್ಟಿಗೆ ಅನುಕೂಲವಾಗಿದ್ದರೂ ಬೇಸಗೆಯ ಬಿಸಿಯನ್ನು ತಣಿಸುವುದಿಲ್ಲ. ವಿದ್ಯುತ್ ಸಮಸ್ಯೆಯಿದೆ. ಗುಡ್ಡಗಾಡು ಪ್ರದೇಶವಾದುದರಿಂದ ವಿದ್ಯುತ್, ನೀರು, ರಸ್ತೆಯ ಸಮಸ್ಯೆ ಹೆಚ್ಚು. ಅದನ್ನು ಪೂರೈಸಿದಾಗಲೇ ಗ್ರಾಮ ಸಂಪೂರ್ಣ ಯಶಸ್ಸು ಸಾಧಿಸಿದಂತಾಗುತ್ತದೆ. – ಉದಯಶಂಕರ್ ನೀರ್ಪಾಜೆ