ಗುಬ್ಬಿ: ನೀರಿನ ಮೌಲ್ಯ ಅರಿಯದೇ ಅಭಿವೃದ್ಧಿ ನೆಪದಲ್ಲಿ ಅಂತರ್ಜಲ ಕುಸಿತಕ್ಕೆ ಎಡೆ ಮಾಡಿಕೊಡ ಲಾಗಿದೆ. ಇದರಿಂದಾಗಿ ನೀರಿ ಗಾಗಿ ಪರಿತಪಿಸುವ ದುಸ್ಥಿತಿ ಎದುರಾಗಿದೆ. ತಾಲೂಕಿನಲ್ಲಿ ಪ್ರತಿ ವರ್ಷ ಜನವರಿಯಿಂದ ಮೇ ತಿಂಗಳವರೆಗೆ ನೀರಿಗಾಗಿ ಹಾತೊರೆಯುವ ರೈತರು ಮಳೆಗಾಲದಲ್ಲಿ ಪೋಲಾ ಗುವ ನೀರನ್ನು ಉಳಿಸಲು ಯಾವುದೇ ಕ್ರಮ ಕೈಗೊಳ್ಳು ತ್ತಿಲ್ಲ. ಅಲ್ಲದೇ, ಮಾಹಿತಿ ನೀಡ ಬೇಕಾದ ಕೃಷಿ- ತೋಟಗಾರಿಕೆ ಇಲಾಖೆ ಕಣ್ಮುಚ್ಚಿಕೊಂಡು ಕುಳಿ ತಿವೆ. ಇದರಿಂದಾಗಿ ರೈತರು ನೀರಿನ ಅರಿವಿಲ್ಲದೆ ಸದ್ಬಳಕೆ ಮಾಡಿಕೊಳ್ಳುವಲ್ಲಿ ವಿಫಲರಾಗಿದ್ದಾರೆ.
ಪ್ರತಿನಿತ್ಯ ಅಂತರ್ಜಲ ಹೆಚ್ಚಿಸುವಂತಹ ನೀರಿನ ಮೂಲಗಳು ಮರೆಯಾಗುತ್ತಿದ್ದರೂ ಅಂತರ್ಜಲ ಹೆಚ್ಚಿಸಲು ಸರ್ಕಾರದಿಂದ ಕೋಟಿ ಕೋಟಿ ರೂ. ಹಣ ವೆಚ್ಚ ಮಾಡುತ್ತಿದ್ದರೂ ಅಂತರ್ಜಲ ಮಾತ್ರ ಮೇಲೇ ರುತ್ತಿಲ್ಲ. ನೀರಿಗಾಗಿ ಸಾವಿರಾರು ಕೊಳವೆ ಬಾವಿಗಳನ್ನು ಕೊರೆಸಿದರೂ ವಿಫಲರಾಗುತ್ತಿದ್ದಾರೆ. ಬೇಸಿಗೆಯಲ್ಲಿ ನೀರಿಗಾಗಿ ರೈತನ ಕಷ್ಟ ಅಧಿಕಾರಿಗಳಿಗೆ ಹೇಗೆ ತಾನೇ ಗೊತ್ತಾದೀತು. ತಾಲೂಕಿನ ಎಲ್ಲಾ ಭಾಗಗಳಲ್ಲಿ ನೀರಿನ ಅಭಾವ ಉಂಟಾಗಿದೆ. ಏಕಾ ಏಕಿ ಅಂತರ್ಜಲ ಕುಸಿದಿರುವುದ ರಿಂದ ಸಾವಿರಾರು ಕೊಳವೆ ಬಾವಿಗಳು ಬತ್ತಿ ಹೋಗಿವೆ. ಅಲ್ಲದೆ ಈಗ ಕೊರೆಸುತ್ತಿರುವ ಕೊಳವೆ ಬಾವಿಗಳು ಶೇ.50 ಮಾತ್ರ ಯಶಸ್ವಿಯಾಗುತ್ತಿವೆ.
ಕೈಕಟ್ಟಿ ಕುಳಿತ ಕೃಷಿ ಇಲಾಖೆ: ಅಂತರ್ಜಲ ಹೆಚ್ಚುವ ಕೆಲಸ ನಿರ್ವಹಿಸಬೇಕಾದ ಕೃಷಿ ಇಲಾಖೆ ಕೈಕಟ್ಟಿ ಕುಳಿತಿದೆ. ಕೇವಲ ಹಾಗಲವಾಡಿ, ಚೇಳೂರು ಭಾಗಗಳನ್ನು ಮಾತ್ರ ಗಮನದಲ್ಲಿಟ್ಟುಕೊಂಡು ಕೆಲಸ ಮಾಡುತ್ತಿದೆ. ತಾಲೂಕಿನ ಕಸಬಾ, ನಿಟ್ಟೂರು, ಸಿ.ಎಸ್.ಪುರ, ಕಡಬ, ಹೋಬಳಿಗಳಲ್ಲಿ ಮಳೆ ನೀರು ಸಂಗ್ರಹವಾಗುವ ಚೆಕ್ ಡ್ಯಾಂ, ಕೃಷಿ ಹೊಂಡಗಳು ಯಾವ ಭಾಗದಲ್ಲೂ ಕಾಣಸಿಗುವುದಿಲ್ಲ.
ಮಳೆ ವೈಫಲ್ಯದಿಂದ ದಿಢೀರ್ ಅಂತರ್ಜಲ ಕುಸಿಯುತ್ತಿದೆ. ರೈತರ ಭೂಮಿಯಲ್ಲಿ ಮಳೆ ನೀರು ಸಂಗ್ರಹವಾಗದೆ ಹರಿದು ಹೋಗುವುದೇ ಇದಕ್ಕೆ ಮುಖ್ಯ ಕಾರಣ. ಇನ್ನು ಮಳೆಯ ನೀರು ಪೋಲಾಗ ದಂತೆ ಶೇಖರಿಸುವ ಹಳೆಯ ಪದ್ದತಿಗಳು ಈಗ ರೈತರಿಂದ ದೂರವಾಗಿದೆ. ಇದರ ಬಗ್ಗೆ ತಲೆ ಕೆಡಿಸಿ ಕೊಳ್ಳದ ಇಲಾಖೆ ಸರ್ಕಾರದಿಂದ ಬರುವ ಹಣದಿಂದ ಚೆಕ್ ಡ್ಯಾಂ, ಕೃಷಿ ಹೊಂಡ ನಿರ್ಮಿಸುವ ಕಾರ್ಯದಲ್ಲಿ ತೊಡಗಿವೆ.
ನಗರ ಪಟ್ಟಣಗಳಲ್ಲಿ ರಾಜ ಕಾಲುವೆ ಗಳು, ದೊಡ್ಡ ಹಳ್ಳಗಳು ಮಾಯಾ : ನಗರ ಪಟ್ಟಣಗಳಲ್ಲಿ ಅಭಿವೃದ್ಧಿ ಹೆಸರಿನಲ್ಲಿ ದೊಡ್ಡ ಕಾಲುವೆಗಳು ಹಾಗೂ ಹಳ್ಳಗಳನ್ನು ಮುಚ್ಚಿರುವುದರಿಂದ ಮಳೆ ಬಂದಾಗ ಬರುವ ನೀರು ಕಾಲುವೆ ಹಾಗೂ ಹಳ್ಳಗಳ ಮೂಲಕ ಕೆರೆಗಳಿಗೆ ಸೇರದೆ ವ್ಯರ್ಥವಾಗುತ್ತಿದೆ. ಈ ಸಮಸ್ಯೆಯಿಂದಲೂ ಅಂತರ್ಜಲದ ಮಟ್ಟ ಕಡಿಮೆ ಯಾಗುತ್ತಿದೆ.
62 ಗ್ರಾಮಗಳಲ್ಲಿ ನೀರಿನ ಸಮಸ್ಯೆ: ತಾಲೂಕಿನಲ್ಲಿ ಜನವರಿಯಿಂದ ಮಾರ್ಚ್‌ವರೆಗೆ 37 ಕೊಳವೆ ಬಾವಿ ಕೊರೆಸಲಾಗಿದೆ. 31 ಸಫಲವಾಗಿದ್ದರೆ, 6 ವಿಫಲ ವಾಗಿವೆ. ತಾಲೂಕಿನಲ್ಲಿ 21 ಗ್ರಾಪಂ ವ್ಯಾಪ್ತಿಯ 62 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಎದುರಾಗಿದೆ. 12 ಗ್ರಾಪಂ ವ್ಯಾಪ್ತಿಯ 14 ಗ್ರಾಮಗಳಿಗೆ ಟ್ಯಾಂಕರ್ ನೀರು ಸರಬರಾಜು ಮಾಡಲಾಗುತ್ತಿದೆ. ತಾಲೂಕಿಗೆ 137 ಶುದ್ದ ಕುಡಿಯುವ ನೀರಿನ ಘಟಕಗಳು ಆನು ಮೋದನೆಯಾಗಿದ್ದು ಪ್ರಸ್ತುತ 127 ಘಟಕಗಳನ್ನು ಅಳವಡಿಸಲಾಗಿದೆ. 2019-20ನೇ ಎನ್‌ಆರ್‌ಡಬ್ಲ್ಯೂಪಿ ಯೋಜನೆಯಡಿ 50 ಲಕ್ಷ ರೂ. ವೆಚ್ಚದ ಕಾಮಗಾರಿಗೆ ಕ್ರಿಯಾಯೋಜನೆ ಮಾಡಲಾಗಿದೆ.
● ಕೆಂಪರಾಜು ಗುಬ್ಬಿ