ಚನ್ನಪಟ್ಟಣ: ಸಿಎಂ ಸ್ವಕ್ಷೇತ್ರಕ್ಕೆ ಈ ಬಾರಿಯ ಬಜೆಟ್‌ನಲ್ಲಿ 10 ಕೋಟಿ ರೂ. ಅನುದಾನ ನೀಡಿರುವುದನ್ನು ಬಿಟ್ಟರೆ, ಬೇರೆ ಯಾವ ಪ್ರಮುಖ ಯೋಜನೆಗಳನ್ನು ಘೋಷಣೆ ಮಾಡಿಲ್ಲ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಪಟ್ಟಣದ ಮಂಗಳವಾರಪೇಟೆಯ ಕೆಎಸ್‌ಐಸಿ ಮಿಲ್ ಆವರಣದ ಖಾಲಿ ಸ್ಥಳದಲ್ಲಿ ರೇಷ್ಮೆ ವಲಯದ ಸಾಧನೆಗಳ ಪ್ರದರ್ಶನ ಹಾಗೂ ರೇಷ್ಮೆ ಉತ್ಪನ್ನಗಳ ಮಾರಾಟಕ್ಕೆ ಉತ್ತೇಜನ ನೀಡಲು 10 ಕೋಟಿ ರೂ. ಅನುದಾನ ಮೀಸಲಿಟ್ಟಿದ್ದಾರೆ. ಆದರೆ, ತಾಲೂಕಿನ ಜನತೆಯ ಬಹುವರ್ಷಗಳ ಬೇಡಿಕೆಯಾಗಿದ್ದ ಕೆಎಸ್‌ಐಸಿ ಮಿಲ್ ಪುನಶ್ಚೇತನಕ್ಕೆ ಯಾವುದೇ ನಿರ್ಧಾರ ಕೈಗೊಂಡಿಲ್ಲ.
ಬೊಂಬೆ ಉದ್ಯಮಕ್ಕೆ ಆದ್ಯತೆ ನೀಡಿಲ್ಲ: ತಾಲೂಕಿನಲ್ಲಿ ಬೊಂಬೆ ಉದ್ಯಮದ ಉನ್ನತಿಗೆ ಸಂಬಂಧಪಟ್ಟಂತೆ ಮೂಲ ಸೌಕರ್ಯ, ತರಬೇತಿ, ಮಾರುಕಟ್ಟೆ, ಗುಡಿ ಕೈಗಾರಿಕೆಗಳ ಸ್ಥಾಪನೆಗೆ ಉತ್ತೇಜನ ನೀಡಲು ಬಜೆಟ್‌ನಲ್ಲಿ ಪ್ರಸ್ತಾಪ ಮಾಡಿಲ್ಲ. ಇದರಿಂದ ಉದ್ಯಮ ವಲಯಕ್ಕೆ ನಷ್ಟವಾಗಿದೆ.
ಚನ್ನಪಟ್ಟಣ ಬೊಂಬೆಗಳ ಉದ್ಯಮದಲ್ಲಿ ವಿಶ್ವಖ್ಯಾತಿ ಪಡೆದಿದೆ. ಆದರೆ, ಆ ವಲಯದ ಪುನಶ್ಚೇತನಗೊಳಿಸಿ ಉತ್ತಮ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕು ಎಂಬ ಬೇಡಿಕೆ ಬಹುವರ್ಷಗಳಿಂದ ಇತ್ತು. ಆದರೆ, ಚನ್ನಪಟ್ಟಣ ಜನರ ಬೇಡಿಕೆಗೆ ಬಜೆಟ್‌ನಲ್ಲಿ ಸ್ಪಂದಿಸಿಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಪ್ರವಾಸೋದ್ಯಮಕ್ಕೆ ಅನುದಾನವಿಲ್ಲ: ತಾಲೂಕಿನಲ್ಲಿ ಪ್ರವಾಸೋದ್ಯಮ ವೃದ್ಧಿಗೆ ಈ ಬಾರಿಯ ಬಜೆಟ್‌ನಲ್ಲಿ ಅನುದಾನ ಸಿಕ್ಕಿಲ್ಲ. ಕೈಗಾರಿಕೆಗಳಿಗೆ ಉತ್ತೇಜನ ನೀಡುವ ಬಗ್ಗೆ ಪ್ರಸ್ತಾಪವಾಗಿಲ್ಲ. ನೆನೆಗುದಿಗೆ ಬಿದ್ದಿರುವ ಖಾಸಗಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಅನುದಾನ, ಸಿಎಂ ಕ್ಷೇತ್ರವಾಗಿದ್ದರಿಂದ ಸಹಜವಾಗಿ ಕ್ಷೇತ್ರದ ಅಭಿವೃದ್ಧಿಗೆ ಹಲವು ಯೋಜನೆಗಳು ಘೋಷಣೆಯಾಗುತ್ತವೆ ಎಂಬ ನಿರೀಕ್ಷೆ ಇತ್ತು. ಆದರೆ, ಕೇವಲ 10 ಕೋಟಿ ರೂ. ಅನುದಾನ ನೀಡಲಾಗಿದೆ. ಇದರಿಂದ ಜನತೆಯಲ್ಲಿ ನಿರಾಸೆ ಉಂಟಾಗಿದೆ.