Advertisement

ವಿಶ್ವಕಪ್‌ ಬಳಿಕ ಗೇಲ್‌ ಆಟ ಇಲ್ಲ

12:30 AM Feb 19, 2019 | |

ಕಿಂಗ್ಸ್‌ಟನ್‌ (ಜಮೈಕಾ): ಜಾಗತಿಕ ಕ್ರಿಕೆಟ್‌ ಕಂಡ ಸ್ಫೋಟಕ ಬ್ಯಾಟ್ಸ್‌ಮನ್‌, ವೆಸ್ಟ್‌ ಇಂಡೀಸಿನ ದೈತ್ಯ ಆಟಗಾರ ಕ್ರಿಸ್‌ ಗೇಲ್‌ ನಿವೃತ್ತಿ ಕುರಿತು ಮಾತಾಡಿದ್ದಾರೆ. 2019ರ ವಿಶ್ವಕಪ್‌ ಬಳಿಕ ತಾನು ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರ ಸರಿಯಲಿದ್ದೇನೆ ಎಂದಿದ್ದಾರೆ.

Advertisement

ಜಾಗತಿಕ ಕ್ರಿಕೆಟಿನ “ಶೋ ಮ್ಯಾನ್‌’ ಜತೆಗೆ “ಶೋಕಿ ಮ್ಯಾನ್‌’ ಕೂಡ ಆಗಿರುವ 39ರ ಹರೆಯದ ಕ್ರಿಸ್ಟೋಫ‌ರ್‌ ಹೆನ್ರಿ ಗೇಲ್‌ ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ರನ್‌ ಹೊಡೆದ ವೆಸ್ಟ್‌ ಇಂಡೀಸಿನ 2ನೇ ಆಟಗಾರನಾಗಿದ್ದಾರೆ. ಇನ್ನು 223 ರನ್‌ ಹೊಡೆದರೆ 10 ಸಾವಿರ ರನ್‌ ಕ್ಲಬ್‌ ಸೇರಲಿದ್ದಾರೆ. ಬ್ರಿಯಾನ್‌ ಲಾರಾ 10,405 ರನ್‌ ಹೊಡೆದದ್ದು ಏಕದಿನದಲ್ಲಿ ವಿಂಡೀಸಿನ ದಾಖಲೆಯಾಗಿದೆ.

ವಿಶ್ವಕಪ್‌ನಲ್ಲಿ ಮೊದಲ ದ್ವಿಶತಕ
ಕ್ರಿಸ್‌ ಗೇಲ್‌ ಅವರದು ಭರ್ತಿ 2 ದಶಕಗಳ ಏಕದಿನ ಪಯಣ. 1999ರಲ್ಲಿ ಭಾರತದ ವಿರುದ್ಧ ಏಕದಿಕ್ಕೆ ಪದಾರ್ಪಣೆ ಮಾಡಿದ ಗೇಲ್‌ ಈವರೆಗೆ 284 ಪಂದ್ಯಗಳಿಂದ 9,727 ರನ್‌ ಹೊಡೆದಿದ್ದಾರೆ.

ಏಕದಿನದಲ್ಲಿ ದ್ವಿಶತಕ ಬಾರಿಸಿದ ವೆಸ್ಟ್‌ ಇಂಡೀಸಿನ ಏಕೈಕ ಬ್ಯಾಟ್ಸ್‌ಮನ್‌ ಎಂಬುದು ಗೇಲ್‌ ಪಾಲಿನ ಹೆಗ್ಗಳಿಕೆ. ಈ ಸಾಧನೆಯನ್ನು ಅವರು ಜಿಂಬಾಬ್ವೆ ವಿರುದ್ಧದ 2015ರ ವಿಶ್ವಕಪ್‌ ಲೀಗ್‌ ಪಂದ್ಯದಲ್ಲಿ ಬಾರಿಸಿದ್ದರು. ಇದು ವಿಶ್ವಕಪ್‌ ಇತಿಹಾಸದಲ್ಲಿ ದಾಖಲಾದ ಪ್ರಪ್ರಥಮ ಡಬಲ್‌ ಸೆಂಚುರಿ ಎಂಬುದನ್ನು ಮರೆಯುವಂತಿಲ್ಲ.

ಮಂಡಳಿ ಜತೆ ಜಟಾಪಟಿ
ಕ್ರಿಕೆಟ್‌ ಮಂಡಳಿ ಜತೆಗಿನ ಜಟಾಪಟಿ, ವೇತನ ವಿವಾದ, ಇತರ ಲೀಗ್‌ಗಳಲ್ಲಿ ಹೆಚ್ಚಿನ ಆಸಕ್ತಿ… ಮುಂತಾದ ಕಾರಣಗಳಿಂದ ಕ್ರಿಸ್‌ ಗೇಲ್‌ ಇತ್ತೀಚಿನ ವರ್ಷಗಳಲ್ಲಿ ವೆಸ್ಟ್‌ ಇಂಡೀಸ್‌ ಪರ ಆಡಿದ್ದೇ ಕಡಿಮೆ. 2015ರ ಏಕದಿನ ವಿಶ್ವಕಪ್‌ ಬಳಿಕ ಗೇಲ್‌ ಕಾಣಿಸಿಕೊಂಡದ್ದು 15 ಪಂದ್ಯಗಳಲ್ಲಿ ಮಾತ್ರ. ಇದರಲ್ಲಿ ಕಳೆದ ವರ್ಷ ಜಿಂಬಾಬ್ವೆಯಲ್ಲಿ ಆಡಲಾದ ವಿಶ್ವಕಪ್‌ ಅರ್ಹತಾ ಪಂದ್ಯವೂ ಸೇರಿದೆ. ಉಳಿದಂತೆ ಗೇಲ್‌ ಸುದ್ದಿಯಲ್ಲಿರುವುದು ಐಪಿಎಲ್‌ ಮೊದಲಾದ ಟಿ20 ಲೀಗ್‌ಗಳಲ್ಲಿ ಮಾತ್ರ.

Advertisement

ತವರಿನಲ್ಲಿ ಕೊನೆಯ ಆಟ
ಬುಧವಾರದಿಂದ ಬಾರ್ಬಡಾಸ್‌ನಲ್ಲಿ ಆರಂಭವಾಗಲಿರುವ ಪ್ರವಾಸಿ ಇಂಗ್ಲೆಂಡ್‌ ವಿರುದ್ಧದ ಏಕದಿನ ಸರಣಿಗಾಗಿ ಕ್ರಿಸ್‌ ಗೇಲ್‌ ಅವರನ್ನು ಮರಳಿ ವಿಂಡೀಸ್‌ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. “ತವರಿನಂಗಳದಲ್ಲಿ ನಾನು ಕೊನೆಯ ಸಲ ಆಡುವುದನ್ನು ಅಭಿಮಾನಿಗಳು ಕಾಣಲಿದ್ದಾರೆ’ ಎಂದು ಗೇಲ್‌ ಹೇಳಿದ್ದಾರೆ.

“ಅನುಮಾನವೇ ಇಲ್ಲ, ಮುಂದಿನ ವಿಶ್ವಕಪ್‌ ಕೂಟವೇ ನನ್ನ ಏಕದಿನ ಕ್ರಿಕೆಟಿನ ಅಂತಿಮ ನಿಲ್ದಾಣ. ವಿಶ್ವಕಪ್‌ ಗೆಲುವು ಒಂದು ಸುಂದರ ಕತೆ. ತಂಡದಲ್ಲಿರುವ ಯುವ ಆಟಗಾರರು ನನಗಾಗಿ ಕಪ್‌ ಗೆದ್ದು ಕೊಡಬಹುದೆಂಬ ನಂಬಿಕೆ ಇದೆ. ಇಂಥ ಒಂದು ಕ್ಷಣಕ್ಕಾಗಿ ನಾನು ಕಾಯುತ್ತಿದ್ದೇನೆ’ ಎಂದು ಕ್ರಿಸ್‌ ಗೇಲ್‌ ಹೇಳಿದ್ದಾರೆ.

ಗೇಲ್‌ ಏಕದಿನ ಸಾಧನೆ
* 284 ಪಂದ್ಯ
* 9,727 ರನ್‌
* 23 ಶತಕ
* 49 ಅರ್ಧ ಶತಕ
* 215 ಸರ್ವಾಧಿಕ
* 85.82 ಸ್ಟ್ರೈಕ್‌ರೇಟ್‌
* 1,073 ಬೌಂಡರಿ
* 275 ಸಿಕ್ಸರ್‌

Advertisement

Udayavani is now on Telegram. Click here to join our channel and stay updated with the latest news.

Next