ಬೆಂಗಳೂರು: ಕೋವಿಡ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಈ ಬಾರಿ ಸಾರ್ವಜನಿಕ ಪ್ರದೇಶಗಳಲ್ಲಿ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಗೆ ಅವಕಾಶ ಇರುವುದಿಲ್ಲ ಎಂದು ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.
ಈ ಸಂಬಂಧ ಸುದ್ದಿಗಾರರ ಜತೆ ಮಾತನಾಡಿ, ಸೋಂಕು ಭೀತಿ ಇರುವ ಹಿನ್ನೆಲೆಯಲ್ಲಿ ಈ ಬಾರಿ ಮನೆಯಲ್ಲೇ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನಿಟ್ಟು ಪೂಜಿಸಿ, ಮನೆಯಲ್ಲೇ ವಿಸರ್ಜನೆ ಮಾಡಿಕೊಳ್ಳಬೇಕು ಎಂದರು. ಕೇಂದ್ರ ಸರ್ಕಾರ ಅನ್‌ಲಾಕ್ 3 ಮಾರ್ಗ ಸೂಚಿಗಳನ್ನು ಹೊರಡಿಸಿದ್ದು, ಇದರಲ್ಲಿ ಸ್ಪಷ್ಟವಾಗಿ ಗುಂಪು ಸೇರಿ ಹಬ್ಬ ಆಚರಣೆ ಮಾಡದಂತೆ ಸೂಚನೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಆ.21-22ರ ಗೌರಿ-ಗಣೇಶ ಹಬ್ಬವನ್ನು ಸಾರ್ವಜನಿಕವಾಗಿ ಆಚರಣೆ ಮಾಡದಿರಲು ರಾಜ್ಯ ಸರ್ಕಾರವೂ ನಿರ್ದೇಶನ ನೀಡಿದೆ ಎಂದರು.
ವಿಸರ್ಜನೆಗೂ ವಿಶೇಷ ವ್ಯವಸ್ಥೆಯಿಲ್ಲ: ನಗರದಲ್ಲಿ ಗಣೇಶ ಮೂರ್ತಿಗಳನ್ನು ಸಾರ್ವಜನಿಕ ಪ್ರದೇಶಗಳಲ್ಲಿ ಪ್ರತಿಷ್ಠಾಪನೆಗೆ ಅವಕಾಶ ನೀಡದಿರುವ ಜತೆಗೆ ಈ ಬಾರಿ ನಗರದ ಯಾವುದೇ ಕರೆ, ಕಲ್ಯಾಣಿ, ಟ್ಯಾಂಕ್‌ಗಳಲ್ಲಿ ಗಣೇಶ ಮೂರ್ತಿ ವಿಸರ್ಜನೆ ಮಾಡಲು ಅನುಮತಿ ನೀಡುವುದಿಲ್ಲ. ಗಣೇಶ ಮೂರ್ತಿಗಳ ವಿಸರ್ಜನೆಗೆ ಬಿಬಿಎಂಪಿ ಮೊಬೈಲ್ ಟ್ಯಾಂಕರ್‌ಗಳನ್ನೂ ವ್ಯವಸ್ಥೆ ಮಾಡುವುದಿಲ್ಲ . ಸಾರ್ವಜನಿಕರು ಅವರ ಮನೆಗಳಲ್ಲೇ ಗಣೇಶ ಮೂರ್ತಿಗಳನ್ನಿಟ್ಟು ವಿಸರ್ಜನೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ವ್ಯಾಪಾರಕ್ಕೆ ಅವಕಾಶ: ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ನೀಡಿಲ್ಲವಾದರೂ, ಮನೆಗಳಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆಗೆ ಮುಕ್ತ ಅವಕಾಶ ನೀಡಲಾಗಿದೆ. ಹೀಗಾಗಿ, ವ್ಯಾಪಾರಿಗಳು ಸಣ್ಣ ಗೌರಿ ಮತ್ತು ಗಣೇಶ ಮೂರ್ತಿಗಳನ್ನು ಹಾಗೂ ಮುಖ್ಯವಾಗಿ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಮಾರಾಟ ಮಾಡಬಹುದು. ಎಂದಿನಂತೆ ಪ್ಲಾಸ್ಟರ್ ಆಫ್ ಪ್ಯಾರೀಸ್ ಮೂರ್ತಿಗಳ ಮಾರಾಟಕ್ಕೆ ಅವಕಾಶ ಇರುವುದಿಲ್ಲ. ಉಳಿದಂತೆ ಹಬ್ಬಕ್ಕೆ ಅಗತ್ಯವಿರುವ ವಸ್ತುಗಳ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಆದರೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಮೂಲಕ ವ್ಯಾಪಾರ-ವಹಿವಾಟು ನಡೆಸಬಹುದು ಎಂದು ನಿರ್ದೇಶನ ನೀಡಲಾಗಿದೆ.
ವಿಪತ್ತು ನಿರ್ವಹಣಾಕಾಯ್ದೆಯಡಿ ಕ್ರಮ : ನಿಯಮ ಉಲ್ಲಂಘನೆ ಮಾಡಿ ಸಾರ್ವಜನಿಕ ಪ್ರದೇಶಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿದರೆ ಅಥವಾ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಮಾಡಿದರೆ ಹಾಗೂ ಸಾರ್ವಜನಿಕ ಪ್ರದೇಶಗಳಲ್ಲಿ ಗುಂಪು ಸೇರಿದರೆ ಅಂತವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ ಅಡಿ ಕ್ರಮ ಕೈಗೊಳ್ಳುತ್ತೇವೆ ಎಂದು ಆಯುಕ್ತರು ಎಚ್ಚರಿಕೆ ನೀಡಿದರು.