Advertisement

ಪ್ರವಾಸ ಡೈರಿ ಸಲ್ಲಿಸದಿದ್ದರೆ ಪಗಾರ ಇಲ್ಲ!

09:40 AM Nov 29, 2017 | Team Udayavani |

ಬೆಂಗಳೂರು: ಯೋಜನೆಗಳ ಅನುಷ್ಠಾನ, ಮೇಲ್ವಿಚಾರಣೆ ನಡೆಸದೆ ರೈತರ ಸಮಸ್ಯೆಗಳಿಗೆ ಸ್ಪಂದಿಸಲು ಪ್ರವಾಸ ಕೈಗೊಳ್ಳದ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿರುವ ತೋಟಗಾರಿಕೆ ಇಲಾಖೆಯು ಮಾಸಿಕ ದಿನಚರಿ ಸಲ್ಲಿಸದ ಅಧಿಕಾರಿಗಳ ವೇತನ ತಡೆ ಹಿಡಿಯಲು
ಮುಂದಾಗಿದೆ!

Advertisement

ಸಹಾಯಕ ತೋಟಗಾರಿಕೆ ಅಧಿಕಾರಿಯಿಂದ ಆಯುಕ್ತರವರೆಗಿನ ಅಧಿಕಾರಿಗಳ ಪ್ರವಾಸ ಹಾಗೂ ದೈನಂದಿನ ಕಾರ್ಯ ಚಟುವಟಿಕೆಗಳ ದಿನಚರಿ ಸಲ್ಲಿಕೆ ಕಡ್ಡಾಯಗೊಳಿಸಿದ್ದ ಆಯುಕ್ತರು, ಅದನ್ನು ಪರಿಣಾಮಕಾರಿ ಜಾರಿಗೊಳಿಸಲು ಮುಂದಾಗಿದ್ದಾರೆ. ನಾಲ್ಕು ಮಂದಿ ವಿಭಾಗೀಯ ಜಂಟಿ ನಿರ್ದೇಶಕರಿಗೆ ಜವಾ ಬ್ದಾರಿ ನೀಡಿದ್ದು, ಡೈರಿ ಸಲ್ಲಿಸುವವರಗೆ ವೇತನ ತಡೆಹಿಡಿಯಲು ಸೂಚಿಸಿದ್ದಾರೆ. ಜತೆಗೆ ಕಳಪೆ ಸಾಧನೆ ತೋರಿದ 12 ಮಂದಿ ಅಮಾನತ್ತಿಗೆ ಶಿಫಾರಸು ಮಾಡಿದ್ದಾರೆ.

ಪ್ರಸಕ್ತ ವರ್ಷದಲ್ಲಿ 1.57 ಲಕ್ಷ ಎಕರೆಗೂ ಹೆಚ್ಚು ಪ್ರದೇಶದಲ್ಲಿ ಕ್ಷೇತ್ರ ವಿಸ್ತರಣೆ, ಹನಿ ನೀರಾವರಿಗೆ 401 ಕೋಟಿ ರೂ. ಅನುದಾನ ಮೀಸಲಿರಿಸಲಾಗಿದ್ದು, ಒಂದು ಲಕ್ಷ ಎಕರೆ ಪ್ರದೇಶಕ್ಕೆ ಸೌಲಭ್ಯ ಒದಗಿಸುವ ಗುರಿ, ಕೃಷಿಭಾಗ್ಯ ಇತ್ಯಾದಿ ಕಾರ್ಯಾನುಷ್ಠಾನಕ್ಕೆ
ಅಧಿಕಾರಿಗಳಿಗೆ ಜವಾಬ್ದಾರಿ ವಹಿಸಲಾಗಿದೆ. 

ಡೈರಿ ಸಲ್ಲಿಕೆ ಕಡ್ಡಾಯ: ಕ್ಷೇತ್ರಮಟ್ಟದ ಅಧಿಕಾರಿಗಳು ತಿಂಗಳಲ್ಲಿ ಕನಿಷ್ಠ 20 ದಿನ, ಜಿಲ್ಲಾಮಟ್ಟದ ಅಧಿಕಾರಿ  ಗಳು ಕನಿಷ್ಠ 15 ದಿನ ಹಾಗೂ ಕೇಂದ್ರ ಸ್ಥಾನದಲ್ಲಿರುವ ಅಧಿಕಾರಿಗಳು, ಹೆಚ್ಚುವರಿ ನಿರ್ದೇಶಕರು, ಜಂಟಿ ನಿರ್ದೇಶಕರು ಕನಿಷ್ಠ 12 ದಿನ ಕಡ್ಡಾಯ ಪ್ರವಾಸ
ಮಾಡಬೇಕು. ತೋಟಗಾರಿಕೆ ಇಲಾಖೆ ಆಯುಕ್ತರಿಂದ ಹಿಡಿದು ಸಹಾಯಕ ತೋಟಗಾರಿಕೆ ಅಧಿಕಾರಿವರೆಗೆ ಮಾಸಿಕ ಪ್ರವಾಸದ ದಿನಚರಿ ಸಲ್ಲಿಸುವಂತೆ ಸೂಚಿಸಿ ಆಯುಕ್ತರು ವರ್ಷದ ಹಿಂದೆಯೇ ಆದೇಶ ಹೊರಡಿಸಿದ್ದರು.

ಪ್ರತಿ ತಿಂಗಳ 10ನೇ ತಾರೀಕಿನೊಳಗೆ ದಿನಚರಿ ವಿವರ ಪಡೆದು ನಿಯಂತ್ರಣಾಧಿಕಾರಿಗಳು ಪರಿಶೀಲಿಸಬೇಕು. ಪ್ರತಿ ತಿಂಗಳ 15ರೊಳಗೆ ಸಂಬಂಧಪಟ್ಟವರಿಗೆ ಸಲ್ಲಿಸಬೇಕು. ಹಿಂದಿನ ತಿಂಗಳ ಡೈರಿ ಸಲ್ಲಿಸಿದವರಿಗೆ ವೇತನ ಡ್ರಾ ಮಾಡುವಂತೆ ಸೂಚಿಸಿದ್ದರು.
ಆದರೆ, ಇದು ಕಟ್ಟುನಿಟ್ಟಾಗಿ ಪಾಲನೆಯಾಗಿಲ್ಲ.

Advertisement

ವೇತನಕ್ಕೆ ಬ್ರೇಕ್‌!: ಇದನ್ನು ಗಂಭೀರವಾಗಿ ಪರಿಗಣಿಸಿರುವ ಆಯುಕ್ತರು, ಡೈರಿ ಸಲ್ಲಿಕೆ ಬಗ್ಗೆ ಮೇಲ್ವಿಚಾರಣೆ ನಡೆಸುವ ಜವಾಬ್ದಾರಿಯನ್ನು ವಿಭಾಗೀಯ ಜಂಟಿ ನಿರ್ದೇಶಕರಿಗೆ ವಹಿಸಿದ್ದಾರೆ. ಡೈರಿ ಸಲ್ಲಿಸುವವರೆಗೆ ವೇತನ ತಡೆಹಿಡಿಯಲು ಸೂಚಿಸಿದ್ದಾರೆ.
ತೋಟಗಾರಿಕೆ‌ ಇಲಾಖೆಯಲ್ಲಿ ಪ್ರತಿ ಆರ್ಥಿಕ ವರ್ಷದ ನಾಲ್ಕನೇ ತ್ತೈಮಾಸಿಕದಲ್ಲೇ ಬಹುತೇಕ ಚಟುವಟಿಕೆ ನಡೆದು ಬಿಲ್‌ ಪಾವತಿ ಕೂಡ ಈ ಅವಧಿಯಲ್ಲೇ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿತ್ತು. ಇದರಿಂದ ಕಳಪೆ ಕಾಮಗಾರಿ, ನಕಲಿ ಬಿಲ್‌ ಸಲ್ಲಿಕೆ ಇತ್ಯಾದಿ ಅಕ್ರಮವಾಗುವ ಹಿನ್ನೆಲೆಯಲ್ಲಿ ನಾಲ್ಕು ತ್ತೈಮಾಸಿಕದಲ್ಲೂ ಸಮಾನ ಗುರಿ ನಿಗದಿಪಡಿಸಿ ಪರಿಣಾಮಕಾರಿ ಅನುಷ್ಠಾನಕ್ಕೆ ಆದ್ಯತೆ ನೀಡಿದೆ.

12 ಅಧಿಕಾರಿಗಳ ಅಮಾನತಿಗೆ ಶಿಫಾರಸು:
ತೋಟಗಾರಿಕೆ ಇಲಾಖೆ ಚಟುವಟಿಕೆಗಳ ಅನುಷ್ಠಾನ, ಅನುದಾನ ಬಳಕೆ, ರೈತರಿಗೆ ಸ್ಪಂದನೆ ಸೇರಿದಂತೆ ಅತಿ ಕಳಪೆ ಕಾರ್ಯಸಾಧನೆ ತೋರಿದ ಪ್ರತಿ ವಿಭಾಗ ವ್ಯಾಪ್ತಿಯ ತಲಾ 4 ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಪಟ್ಟಿಯನ್ನು ವಿಭಾಗೀಯ ಜಂಟಿ ನಿರ್ದೇಶಕರು ಸಲ್ಲಿಸಿದ್ದು, ಅವರನ್ನು ಅಮಾನತುಪಡಿಸುವಂತೆ ಆಯುಕ್ತರು, ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದಾರೆ.

ಡೈರಿ ಸಲ್ಲಿಸುವವರೆಗೆ ವೇತನ ತಡೆಹಿಡಿಯುವಂತೆ ಸೂಚಿಸಲಾಗಿದೆ. ಅಕ್ಟೋಬರ್‌ವರೆಗೆ ಕಳಪೆ ಕಾರ್ಯ ಸಾಧನೆ ತೋರಿದ 12 ಮಂದಿಯ ಅಮಾನತಿಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಇಲಾಖೆ ಯೋಜನೆಗಳ ಅನುಷ್ಠಾನ, ರೈತರಿಗೆ ಪರಿಣಾಮಕಾರಿಯಾಗಿ
ಸ್ಪಂದಿಸುವ ನಿಟ್ಟಿನಲ್ಲಿ ಶಿಸ್ತು ಮೂಡಿಸಲು ಕೆಲ ಕ್ರಮಗಳನ್ನು ಕೈಗೊಳ್ಳಲಾಗಿದೆ.

 ●ಪ್ರಭಾಷ್‌ ಚಂದ್ರ ರೇ ತೋಟಗಾರಿಕೆ ಇಲಾಖೆ ಆಯುಕ್ತ

 ●ಎಂ.ಕೀರ್ತಿಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next