Advertisement
“ಉದಯವಾಣಿ’ ಕಚೇರಿಯಲ್ಲಿ ಮಂಗಳವಾರ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನಡುವೆ ಯಾವುದೇ ಹಂತದಲ್ಲೂ ಭಿನ್ನಾಭಿಪ್ರಾಯ ಬಂದೇ ಇಲ್ಲ. ಎಲ್ಲವೂ ಬಿಜೆಪಿ ಹರಡುತ್ತಿರುವ ಕಥೆಯಷ್ಟೇ ಎಂದು ಹೇಳಿದರು.
Related Articles
Advertisement
ಯಡಿಯೂರಪ್ಪ ಅವರ ಕುಟುಂಬದ ಮೇಲೆ ಇಡಿ ದಾಳಿ ನಡೆಸಲಾಗುತ್ತದೆ. ಒಂದು ರೀತಿ ಬೆದರಿಸಿ ಅವರನ್ನು ಸುಮ್ಮನಾಗಿಸಲಾಗಿದೆ. ಈಗ ಚುನಾವಣೆ ಬಂದಿದೆ ಎಂದು ಹೊಗಳುತ್ತಿದ್ದಾರೆ, ಅವರನ್ನು ಪ್ರಚಾರ ಸಮಿತಿ ಸದಸ್ಯರನ್ನಾಗಿ ಮಾಡಿದ್ದಾರೆ. ಆದರೆ ಶೋಭಾ ಕರಂದ್ಲಾಜೆ ಅವರ ಕೈ ಕೆಳಗೆ ಕೆಲಸ ಮಾಡುವ ಸ್ಥಿತಿ ಅವರದು. ಸಿ.ಟಿ.ರವಿ ಅಂತಹವರು ಅವರ ವಿರುದ್ಧ ಮಾತನಾಡುತ್ತಾರೆ. ಆದರೂ ಯಡಿಯೂರಪ್ಪ ಮೌನವಾಗಿರು ವಂತಾಗಿದೆ ಎಂದು ತಿಳಿಸಿದರು.
ಯಡಿಯೂರಪ್ಪ ಅವರನ್ನು ಬಿಜೆಪಿ ಬೇಕಾದಾಗ ಬಳಸಿ ಬೇಡದಿದ್ದಾಗ ನಿರ್ಲಕ್ಷ್ಯ ಮಾಡುವುದು ಹೊಸದಲ್ಲ. ಯಡಿಯೂರಪ್ಪ ವಿರುದ್ಧ ಸಣ್ಣ ಪುಟ್ಟ ನಾಯಕರು ಬಹಿರಂಗ ಟೀಕೆ ಮಾಡಿದರೂ ಆ ಪಕ್ಷದ ವರಿಷ್ಠರು ಜಾಣ ಮೌನ ವಹಿಸುತ್ತಾರೆ. ಇದೆಲ್ಲವೂ ರಾಜ್ಯದ ಜನತೆಗೆ ಗೊತ್ತಿರುವುದೇ ಎಂದು ಹೇಳಿದರು.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಲ್ಯಾಣ ಕರ್ನಾಟಕ, ಮುಂಬೈ ಕರ್ನಾಟಕ, ಬೆಂಗಳೂರು ಸಹಿತ ಹಳೇ ಮೈಸೂರಿನಲ್ಲಿ ನಾವು ಹೆಚ್ಚು ಸ್ಥಾನ ಪಡೆಯುತ್ತೇವೆ. ಕರಾವಳಿ, ಮಲೆನಾಡು ಭಾಗದಲ್ಲೂ ಕಳೆದ ಬಾರಿ ಸೋತಿದ್ದ ಹಲವು ಕ್ಷೇತ್ರಗಳಲ್ಲಿ ಈ ಬಾರಿ ಗೆಲ್ಲಲಿದ್ದೇವೆ ಎಂದು ಹೇಳಿದರು.
ಕರಾವಳಿಗೆ ಪ್ರತ್ಯೇಕ ಬಜೆಟ್: ರಾಜ್ಯದ ಕರಾವಳಿ ಜಿಲ್ಲೆಗಳ ಅಭಿವೃದ್ಧಿಗಾಗಿಯೇ ಕಾಂಗ್ರೆಸ್ ಪ್ರತ್ಯೇಕ ಪ್ರಣಾಳಿಕೆ ಸಿದ್ಧಪಡಿಸುತ್ತಿದ್ದು, ಈ ಭಾಗದಲ್ಲೇ ಉದ್ಯೋಗ ಸೃಷ್ಟಿ ಮಾಡುವ ಸ್ಪಷ್ಟ ಗುರಿಯನ್ನು ನಾವು ಹೊಂದಿ ದ್ದೇವೆ ಎಂದು ಸುರ್ಜೇವಾಲಾ ಭರವಸೆ ನೀಡಿದರು.
ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಪ್ರವಾಸೋದ್ಯಮ ಸಹಿತ ಹಲವು ಸಾಧ್ಯತೆಗಳು ಇವೆ. ಆದರೆ ಅದರ ಸದ್ಬಳಕೆಯಾಗಿಲ್ಲ. ಕರಾವಳಿ ಬಿಜೆಪಿಯ ಕೋಮು ರಾಜಕಾರಣದ ಕಾರ್ಖಾನೆಯಾಗಿರುವುದರಿಂದ ಇಲ್ಲಿ ಸದಾ ಕಾನೂನು-ಸುವ್ಯವಸ್ಥೆ ಸಮಸ್ಯೆ ಇದೆ. ವಾಣಿಜ್ಯೋದ್ಯಮಿಗಳು ಇಲ್ಲಿ ತಮ್ಮ ಘಟಕ ತೆರೆಯಲು ಹಿಂಜರಿಯುತ್ತಿದ್ದಾರೆ. ಧರ್ಮ ದ್ವೇಷದ ನಶೆಯಲ್ಲಿ ಅಭಿವೃದ್ಧಿ ಹಿಂದೆ ಉಳಿದಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಈ ವ್ಯವಸ್ಥೆಯನ್ನು ಬದಲಾಯಿಸುತ್ತದೆ ಎಂದು ಹೇಳಿದರು.
ಕರಾವಳಿ ಹಾಗೂ ಮಲೆನಾಡು ಜಿಲ್ಲೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ನಾವು ಪ್ರತ್ಯೇಕ ಪ್ರಣಾಳಿಕೆ ಸಿದ್ದಪಡಿಸುತ್ತಿದ್ದೇವೆ. 13 ಅಂಶಗಳನ್ನು ಪರಿಗಣಿಸಿ ಕಾರ್ಯಕ್ರಮ ರೂಪಿಸಲಾಗುತ್ತಿದೆ. ಅಧಿಕಾರಕ್ಕೆ ಬಂದು ನಾಲ್ಕು ವರ್ಷ ಕಳೆಯುವವರೆಗೆ ನಾರಾಯಣಗುರು ಅಭಿವೃದ್ಧಿ ನಿಗಮದ ಬಗ್ಗೆ ಸೊಲ್ಲೆತ್ತದ ಬಿಜೆಪಿ ಈಗ ಕಣ್ಣೊರೆಸುವ ಕೆಲಸ ಮಾಡುತ್ತಿದೆ. ಕರಾವಳಿಯ ಪ್ರತಿಯೊಂದು ಸಮುದಾಯಕ್ಕೂ ಅನ್ವಯವಾಗುವಂಥ ನೀತಿಯನ್ನು ನಾವು ರೂಪಿಸುತ್ತೇವೆ ಎಂದು ಭರವಸೆ ನೀಡಿದರು.
ಹಣಕಾಸು ಹೊಂದಾಣಿಕೆ ಕಷ್ಟವೇನಲ್ಲಕಾಂಗ್ರೆಸ್ ಘೋಷಣೆ ಮಾಡಿರುವ ಗ್ಯಾರೆಂಟಿಗ ಳಿಗೆ ಹಣ ಹೊಂದಿಸಬಹುದು. ಇದಕ್ಕೆ ನಮ್ಮ ಬಳಿ ಪರಿಹಾರಗಳೂ ಇವೆ. ಕರ್ನಾಟಕದಲ್ಲಿ ಈ ವರ್ಷ ಸುಮಾರು 42 ಸಾವಿರ ಕೋಟಿ ರೂ. ಹಣ ವಿವಿಧ ಯೋಜನೆಗಳಿಗೆ ಬಳಕೆಯಾಗದೇ ಹಿಂತಿರುಗಿಸಲಾಗಿದೆ. ಪ್ರತಿ ವರ್ಷ ಸುಮಾರು 35 ರಿಂದ 40 ಸಾವಿರ ಕೋಟಿ ರೂ. ಹಣ ಬಳಕೆಯಾ ಗುತ್ತಿಲ್ಲ. ನಾವು ಘೋಷಣೆ ಮಾಡಿದ ಯೋಜನೆಗಳ ಮೊತ್ತ ಇದಕ್ಕಿಂತಲೂ ಕಡಿಮೆ. ಜಿಎಸ್‌ಟಿ ಸೋರಿಕೆಯೇ ಕರ್ನಾಟಕದಲ್ಲಿ ಸುಮಾರು 75 ಸಾವಿರ ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಅದನ್ನು ತಡೆಗಟ್ಟಿದರೆ ಹಣಕಾಸು ಹೊಂದಿಕೆಯೇನೂ ಕಷ್ಟವಲ್ಲ ಎಂದು ಅಭಿಪ್ರಾಯಪಟ್ಟರು. ತಮಿಳುನಾಡು ಸಿಎಂ ಸ್ಟಾಲಿನ್ ಅವರು 2 ದಿನಗಳ ಹಿಂದೆ ಗೃಹಲಕ್ಷ್ಮೀ ಯೋಜನೆಯ ಮಾಹಿತಿ ತರಿಸಿ ಕೊಂಡಿದ್ದು, ಅನುಷ್ಠಾನಕ್ಕೆ ಮುಂದಾಗಿದ್ದಾರೆ. ಭವಿಷ್ಯದಲ್ಲಿ ದೇಶದ ಪ್ರತೀ ರಾಜ್ಯವೂ ಈ ಯೋಜನೆ ಜಾರಿಗೊಳಿಸುತ್ತದೆ ಎಂಬುದಕ್ಕೆ ಯಾವುದೇ ಅನುಮಾನ ಬೇಡ. ಹಿಮಾ ಚಲ ಪ್ರದೇಶ, ಛತ್ತೀಸ್‌ಗಡದಲ್ಲಿ ಕಾಂಗ್ರೆಸ್ ಕೊಟ್ಟ ಭರವಸೆ ಈಡೇರಿ ಸಿಲ್ಲ ಎಂಬುದು ಬಿಜೆಪಿ ಸೃಷ್ಟಿಸುತ್ತಿರುವ ಕುತ್ಸಿತ ಪ್ರಚಾರತಂತ್ರಎಂದು ಟೀಕಿಸಿದರು. ನಾವು ಕೊಟ್ಟಿರುವ ಭರವಸೆಗಳು “ಹಂಚಿಕೆ ನ್ಯಾಯ’ ಸಿದ್ಧಾಂತವನ್ನು ಆಧರಿಸಿದೆ. ಬಿಜೆಪಿ ಸರಕಾರದ ಅವಧಿಯಲ್ಲಿ ಸೃಷ್ಟಿಯಾದ ಬೆಲೆ ಏರಿಕೆಯಿಂದ ಬಡವರು ಬದುಕಲಾಗದಂಥ ಸ್ಥಿತಿ ನಿರ್ಮಾಣವಾಗಿದೆ. ಗೃಹಿಣಿಯರಿಗೆ ನಾವು ನೀಡುವ 2000 ರೂ. ಮತ್ತೆ ರಾಜ್ಯದ ಆರ್ಥಿಕ ಚಕ್ರಕ್ಕೆ ಮರಳುತ್ತದೆ. ಹೀಗಾಗಿ ಇದು ವ್ಯರ್ಥ ಎಂಬ ವ್ಯಾಖ್ಯಾನ ಬೇಡ ಎಂದು ಅಭಿಪ್ರಾಯಪಟ್ಟರು.