Advertisement
ಸೋಂಕು ಹರಡುವ ಬಗೆ: ಲೆಪ್ರೊಸ್ಪೈರಾ ಸೋಂಕಿರುವ ಪ್ರಾಣಿಗಳ ಮೂತ್ರದಿಂದ ಕಲುಷಿತಗೊಂಡ ನೀರಿನ ಅಥವಾ ತೇವವಾದ ಮಣ್ಣಿನ, ಕೆಸರಿನ ಸಂಪರ್ಕಕ್ಕೆ ಮನುಷ್ಯನ ದೇಹ, ಚರ್ಮ ಬಂದಾಗ ಚರ್ಮದಲ್ಲಿರಬಹುದಾದ ಒಡಕು, ಗಾಯದ ಮೂಲಕ ರೋಗಾಣುಗಳು ಮನುಷ್ಯನ ದೇಹ ಪ್ರವೇಶಿಸುತ್ತದೆ. ಅಲ್ಲದೆ ಕಲುಷಿತ ನೀರು, ಆಹಾರ ಸೇವಿಸುವ ಮೂಲಕ ಸಹ ಸೋಂಕು ತಗುಲಬಹುದು, ಕಲುಷಿತ ನೀರಿನಲ್ಲಿ ಈಜಾಡುವಾಗ ಸೋಂಕಿರುವ ನೀರು ಮೂಗು, ಕಣ್ಣಿನ ರೆಪ್ಪೆಯ ಒಳಗೆ ಹೋದಾಗ ಸಹ ವ್ಯಕ್ತಿಗೆ ಸೋಂಕು ತಗುಲುವ ಸಾಧ್ಯತೆಗಳಿವೆ. ಮನುಷ್ಯನಿಂದ-ಮನುಷ್ಯನಿಗೆ ರೋಗ ನೇರವಾಗಿ ಹರಡುವ ಸಾಧ್ಯತೆ ಬಹಳ ಕಡಿಮೆ.
ಸೋಂಕು ತಗುಲಿದ 7-12 ದಿನಗಳಲ್ಲಿ ರೋಗ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಚಳಿ ಜ್ವರ, ಮಾಂಸಖಂಡಗಳ ನೋವು, ಕಣ್ಣು ಕೆಂಪಾಗುವುದು, ತೀವ್ರವಾದ ತಲೆ ನೋವು, ಕೆಮ್ಮು, ಕಫ, ಎದೆ ನೋವು, ಕಫದಲ್ಲಿ ರಕ್ತ ಬರುವುದು, ಕೆಲವು ಸಂದರ್ಭಗಳಲ್ಲಿ ಜಾಂಡಿಸ್ ಕಂಡುಬರಬಹುದು. ಈ ಲಕ್ಷಣಗಳು 3-7 ದಿನಗಳಲ್ಲಿ ಕಡಿಮೆಯಾಗಬಹುದು ಅಥವಾ ಕೆಲವು ಸಮಯ ನಿಂತು ಪುನಃ ತೀವ್ರ ಲಕ್ಷಣಗಳೊಂದಿಗೆ ಮರುಕಳಿಸಬಹುದು. ಸೂಕ್ತ ಚಿಕಿತ್ಸೆ ಸರಿಯಾದ ಸಮಯದಲ್ಲಿ ಸಿಗದಿದ್ದರೆ ರೋಗಿಯು ಕಿಡ್ನಿ ವೈಫಲ್ಯ, ಪಿತ್ತಕೋಶದ ವೈಫಲ್ಯ, ಮೆದುಳು ಜ್ವರ, ಉಸಿರಾಟದ ತೊಂದರೆ, ರಕ್ತಸ್ರಾವಗಳಿಂದ ಮರಣ ಉಂಟಾಗಬಹುದು. ಮಲೇರಿಯಾ, ಡೆಂಗ್ಯೂ ರೋಗಗಳ ಲಕ್ಷಣಗಳು ಇದೇ ತೆರನಾಗಿ ಇರುವುದರಿಂದ ಅವುಗಳಿಗೆ ಸಹ ಸೂಕ್ತ ಪರೀಕ್ಷೆ ಮಾಡುವುದು ಅಗತ್ಯವಾಗಿದೆ. ಚಿಕಿತ್ಸೆ
ಇಲಿ ಜ್ವರ ಲಕ್ಷಣ ಕಾಣಿಸಿಕೊಂಡ ಶೀಘ್ರವೇ ತೀವ್ರಗೊಂಡು ಕಿಡ್ನಿ, ಲಿವರ್ ವೈಫಲ್ಯ, ಮತ್ತು ರಕ್ತಸ್ರಾವ ಉಂಟಾಗಿ ಜೀವಕ್ಕೆ ಅಪಾಯವಾಗುವ ಸಾಧ್ಯತೆ ಇರುವುದರಿಂದ ಕೂಡಲೇ ರೋಗ ಪತ್ತೆ ಹಚ್ಚಿ ಚಿಕಿತ್ಸೆ ಆರಂಭಿಸುವುದು ಅತೀ ಅಗತ್ಯವಾಗಿದೆ. ಕ್ರಮಬದ್ಧ ಚಿಕಿತ್ಸೆಯಿಂದ ರೋಗವನ್ನು ಸಂಪೂರ್ಣವಾಗಿ ಗುಣಪಡಿಸಬಹುದು. ಇಲಿ ಜ್ವರ ಕಂಡು ಬರುವ ಪ್ರದೇಶದಲ್ಲಿ ಯಾವುದೇ ವ್ಯಕ್ತಿಗೆ ಜ್ವರ, ಮಾಂಸಖಂಡಗಳ ತೀವ್ರ ನೋವು ಮತ್ತು ಕೆಂಪುಕಣ್ಣು ಕಂಡುಬಂದಲ್ಲಿ ಇಲಿ ಜ್ವರ ಎಂದು ಪರಿಗಣಿಸಿ ಚಿಕಿತ್ಸೆ ಪ್ರಾರಂಭಿಸಬೇಕು. ಸಾಮಾನ್ಯ ಲಕ್ಷಣ ಇರುವವರಿಗೆ ಡೋಕ್ಸಿಸೈಕ್ಲಿನ್ ಮತ್ತು ಮಕ್ಕಳಲ್ಲಿ ಎಮಾಕ್ಸಿಸಿಲಿನ್ ಮಾತ್ರೆಗಳನ್ನು, ತೀವ್ರವಾದ ಲಕ್ಷಣಗಳು ಕಂಡು ಬಂದಲ್ಲಿ ಪೆನ್ಸಿಲಿನ್, ಸೆಫಿóಓಕ್ಸನ್‌ನಂತಹ ಚುಚ್ಚುಮದ್ದು ಕೂಡ ನೀಡಬೇಕಾಗಬಹುದು. ಅಲ್ಲದೆ, ರೋಗಿಯನ್ನು ಕಿಡ್ನಿ, ಲಿವರ್, ಶ್ವಾಸಕೋಶ ವೈಫಲ್ಯಗಳನ್ನು ನಿಭಾಯಿಸಬಲ್ಲ ಆಸ್ಪತ್ರೆಗೆ ಸಾಗಿಸಬೇಕಾಗುತ್ತದೆ.
Related Articles
ಜ್ವರದ ಲಕ್ಷಣ ಕಾಣಿಸಿಕೊಂಡ 7 ದಿನಗಳ ಅನಂತರ ಐಜಿಎಂ (ಎಲಿಸಾ) ಪರೀಕ್ಷೆಯಿಂದ ಪತ್ತೆ ಮಾಡಬಹುದು. ಅಲ್ಲದೇ ಸ್ಥಳದಲ್ಲಿಯೇ ಮಾಡಬಹುದಾದ ಕಾರ್ಡ್ ಟೆಸ್ಟ್‌ಗಳು ಲಭ್ಯವಿದ್ದರೂ ಅವುಗಳ ಸೂಕ್ಷ್ಮತೆ ಕಡಿಮೆ ಇರುವುದರಿಂದ 2 ಬೇರೆ ಬೇರೆ ಕಂಪೆನಿಗಳ ಕಾರ್ಡ್ ಟೆಸ್ಟ್‌ನಲ್ಲಿ ಸಹ ಧನಾತ್ಮಕ ಫಲಿತಾಂಶ ಬಂದರೆ ರೋಗ ಇರುವುದನ್ನು ಖಚಿತಪಡಿಸಿಕೊಳ್ಳಬಹುದು. ಮ್ಯಾಟ್, ಪಿಸಿಆರ್, ಕಲ್ಚರ್ ಪರೀಕ್ಷೆಗಳು ಮತ್ತು ಇತರೆ ನಿಖರವಾಗಿ ರೋಗ ಪತ್ತೆ ಮಾಡಬಲ್ಲ ಪರೀಕ್ಷೆಗಳು ಇದ್ದರೂ ಎಲ್ಲಾ ಕಡೆಗಳಲ್ಲಿ ಲಭ್ಯವಿಲ್ಲ.
Advertisement
ರೋಗ ತಡೆಗಟ್ಟುವ ವಿಧಾನ ಇಲಿ ಜ್ವರ ಕಂಡುಬರುವ ಪ್ರದೇಶದಲ್ಲಿ ಗದ್ದೆ, ತೋಟದಲ್ಲಿ ಕೆಲಸ ಮಾಡುವ ಕೆಲಸಗಾರರು, ಕಸಾಯಿಖಾಯೆ ಕಾರ್ಮಿಕರು ಕಾಲಿಗೆ ರಬ್ಬರ್ ಬೂಟ್‌ಗಳು, ಹಾಗೂ ಕೈಗೆ ರಬ್ಬರ್ ಗ್ಲೌಸ್‌ಗಳನ್ನು ಹಾಕಿಕೊಳ್ಳಬೇಕು.
ಕೈ-ಕಾಲುಗಳಲ್ಲಿ ಒಡಕು ಗಾಯಗಳಿದ್ದರೆ ಕೆಲಸಕ್ಕೆ ಹೋಗುವ ಮೊದಲು ಹಾಗೂ ಕೆಲಸ ಆದ ಅನಂತರ ರೋಗನಿರೋಧಕ ಕ್ರೀಮ್‌ಗಳನ್ನು (ಬೆಟಡಿನ್) ಹಚ್ಚಿಕೊಳ್ಳುವುದು. ಅಥವಾ ನೀರು ಹೀರದ ಪ್ಲಾಸ್ಟರ್ ಹಾಕಿಕೊಳ್ಳುವುದು.
ರೋಗ ಸಾಂಕ್ರಾಮಿಕವಾಗಿ ಹರಡಿರುವ ಪ್ರದೇಶದಲ್ಲಿ ಯಾವುದೇ ಜ್ವರ ಅಥವಾ ಇತರ ಲಕ್ಷಣಗಳನ್ನು ನಿರ್ಲಕ್ಷಿಸದೆ ಕೂಡಲೇ ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆಯುವುದು.
ಸಾಕು ಪ್ರಾಣಿಗಳಿಗೆ ಇಲಿ ಜ್ವರ ವಿರುದ್ಧ ಲಸಿಕೆ ಹಾಕಿಸುವುದು. ಪ್ರಾಣಿಗಳ ಮೂತ್ರದ ನೇರ ಸಂಪರ್ಕ ತಡೆಯುವುದು.
ಮನೆಯ ಸುತ್ತಮುತ್ತ ನಡೆದಾಡುವಾಗ ಸಹ ಬರಿಗಾಲಿನಲ್ಲಿ ನಡೆಯಬಾರದು.
ಹಳ್ಳ, ತೋಡು ಕೆರೆಯಲ್ಲಿ ಸ್ನಾನ ಮಾಡುವುದು, ಈಜಾಡುವುದು ಸುರಕ್ಷಿತವಲ್ಲ.
ಮನೆ ಸುತ್ತ ಇಲಿ-ಹೆಗ್ಗಣಗಳ ಸಂತತಿ ಕಡಿಮೆ ಮಾಡುವುದು.
ಕುದಿಸಿ ಆರಿಸಿದ ನೀರನ್ನು ಕುಡಿಯಲು ಬಳಸುವುದು. ಡಾ| ಅಶ್ವಿನಿ ಕುಮಾರ್ ಗೋಪಾಡಿ,
ಅಡಿಶನಲ್ ಪ್ರೊಫೆಸರ್, ಕಮ್ಯೂನಿಟಿ ಮೆಡಿಸಿನ್ ವಿಭಾಗ, ಕೆಎಂಸಿ ಮಣಿಪಾಲ.