Advertisement

Udupi: ಲಿಫ್ಟ್ ಇಲ್ಲ , ಸೂಕ್ತ ಶೌಚಾಲಯವಿಲ್ಲ , ಎಟಿಎಂ ಇಲ್ಲ !

03:38 PM Aug 02, 2024 | Team Udayavani |

ಉಡುಪಿ: ಇಂದ್ರಾಳಿ ರೈಲು ನಿಲ್ದಾಣದ ಸಮಸ್ಯೆಗಳು ಒಂದೆರಡಲ್ಲ. ರೈಲು ನಿಲ್ದಾಣದಲ್ಲಿ ಹೊಟೇಲ್‌, ಅಂಗಡಿ, ಪಾರ್ಸೆಲ್‌ ಸೇವೆ, ಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕ ವಿಶ್ರಾಂತಿ ಕೊಠಡಿಗಳು ಇವೆಯಾದರೂ ತುರ್ತುಸಂದರ್ಭದಲ್ಲಿ ಬೇಕಾಗುವ ಸೇವೆಗಳ ಕೊರತೆ ಇಲ್ಲಿದೆ.

Advertisement

ರೈಲು ನಿಲ್ದಾಣಕ್ಕೆ ಬಂದಾಗ ಯಾವುದೋ ಕಾರಣಕ್ಕೆ ನಗದುಬೇಕೆಂದಾದರೆ ಇಲ್ಲಿ ಎಟಿಎಂ ಸೌಲಭ್ಯ ಇಲ್ಲ. ಅದು ಬೇಕೆಂದರೆ ಮತ್ತೆ ಇಂದ್ರಾಳಿಯ ಪ್ರಧಾನ ರಸ್ತೆಗೇ ಬರಬೇಕು. ರೈಲು ಪ್ರಯಾಣದ ವೇಳೆ ತುರ್ತಾಗಿ ಇಳಿದು ತೆಗೆಯೋಣ ಅಂದುಕೊಂಡವರಿಗೆ ಇಲ್ಲಿ ಸೌಲಭ್ಯವಿಲ್ಲ ಎಂದು ಮಹಿಳೆಯೊಬ್ಬರು ದೂರಿದ್ದಾರೆ. ಅದರಲ್ಲೂ ಮುಖ್ಯವಾಗಿ, ನಿಲ್ದಾಣದಲ್ಲಿರುವ ಅಂಗಡಿಗಳಲ್ಲಿ ಮಹಿಳೆಯರಿಗೆ ಅಗತ್ಯವಾದ ಸ್ಯಾನಿಟರಿ ಪ್ಯಾಡ್‌ಗಳು ಸಿಗುವುದಿಲ್ಲ. ಇಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ವಸ್ತುಗಳು ದೊರೆಯುವುದಿಲ್ಲ. ಅಗತ್ಯಬಿದ್ದರೆ ಎಲ್ಲಿ ಹೋಗುವುದು ಎನ್ನುವುದು ಅವರ ಪ್ರಶ್ನೆ.

ಅಂಗಡಿ, ಹೋಟೆಲ್‌ ಏನೇ ಇದ್ದರೂ ಅದೆಲ್ಲ ಇರುವುದು ಒಂದನೇ ಪ್ಲ್ರಾಟ್‌ ಫಾರಂನಲ್ಲಿ ಮಾತ್ರ. ಎರಡನೇ ಪ್ಲ್ರಾಟ್‌ಫಾರಂನಲ್ಲಿ ಇಂಥ ಯಾವ ವ್ಯವಸ್ಥೆಯೂ ಇಲ್ಲ. ಅದು ಬಿಡಿ, ಶೌಚಾಲಯ ವ್ಯವಸ್ಥೆ ಕೂಡಾ ಇಲ್ಲಿಲ್ಲ. ಎರಡನೇ ಪ್ಲ್ರಾಟ್‌ಫಾರಂನಲ್ಲಿದ್ದಾಗ ತುರ್ತಾಗಿ ಏನಾದರೂ ಬೇಕು ಅನಿಸಿದರೆ ಅದನ್ನು ಕೊಳ್ಳಲು ಒಂದನೇ ಪ್ಲ್ರಾಟ್‌ಫಾರಂಗೇ ಬರಬೇಕು!

ಕೆಲವೊಂದು ಬಾರಿ ಒಂದನೇ ಪ್ಲಾಟ್‌ ಫಾರಂಗೆ ಬರಬೇಕಾಗಿದ್ದ ರೈಲು ಅಚಾನಕ್‌ ಆಗಿ ಎರಡನೇ ಪ್ಲಾಟ್‌ ಫಾರಂಗೆ ಬರುವುದಿದೆ. ಇಂತಹ ಸಂದರ್ಭದಲ್ಲಿ ಪ್ರಯಾಣಿಕರು ತಮ್ಮ ಸಾಮಾನು ಸರಂಜಾಮುಗಳನ್ನು ಹಿಡಿದುಕೊಂಡು ಅಲ್ಲಿಗೆ ದೌಡಾಯಿಸುವುದು ಹರಸಾಹಸವೇ ಸರಿ.

ಪಾರ್ಕಿಂಗ್‌ ಸ್ಥಿತಿಕೇಳಲೇಬೇಡಿ
ಇಲ್ಲಿ ವಾಹನ ನಿಲ್ಲಿಸಲು ನಿಗದಿತ ಶುಲ್ಕ ಪಾವತಿ ಮಾಡಬೇಕು. ಆದರೆ ಸೂಕ್ತ ವ್ಯವಸ್ಥೆ ಮರೀಚಿಕೆಯಾಗಿದೆ. ಶಿಸ್ತುಬದ್ಧವಾಗಿ ವಾಹನ ನಿಲುಗಡೆ ಮಾಡುವಂತೆ ಸೂಚನೆ ನೀಡಲು ಯಾವುದೇ ಸಿಬಂದಿ ಇಲ್ಲಿಲ್ಲ. ಪರಿಣಾಮ ಅಡ್ಡಾದಿಡ್ಡಿಯಾಗಿ ನಿಲುಗಡೆಯಾಗಿರುತ್ತವೆ. ಇವಿಷ್ಟೇ ಅಲ್ಲದೆ ಅಲ್ಲಲ್ಲಿ ಹೊಂಡಗಳು ಉಂಟಾಗಿದ್ದು, ಪಾರ್ಕಿಂಗ್‌ ಸ್ಥಳ ಕೆಸರುಮಯವಾಗಿದೆ. ನಿರಂತರ ನೀರು ನಿಲ್ಲುವ ಕಾರಣ ರೋಗ-ರುಜಿನಗಳು ಹರಡುವ ಭೀತಿಯೂ ಇಲ್ಲಿದೆ.

Advertisement

ಬೆದರಿಕೆ ಬಂದರಷ್ಟೇ ಎಚ್ಚರ!
ಪಾರ್ಕಿಂಗ್‌ ಸ್ಥಳದಲ್ಲಿಯೇ ಎಸ್ಕಲೇಟರ್‌ ಕೆಳಭಾಗದಲ್ಲಿ ರೈಲ್ವೇ ಪೊಲೀಸರಿದ್ದಾರೆ. ಮೇಲ್ಸೇತುವೆಯ ಅಡಿಭಾಗದಲ್ಲಿ ಸಾಕಷ್ಟು ದ್ವಿಚಕ್ರ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ಇದರಲ್ಲಿ ಅನ್ಯ ರಾಜ್ಯಗಳ ವಾಹನಗಳೂ ಹಲವಾರು ದಿನಗಳಿಂದ ಠಿಕಾಣಿ ಹೂಡಿವೆ. ಇದು ಯಾರದು ಎಂಬ ಬಗ್ಗೆ ನಿಗಾ ಇರಿಸುವ ಕೆಲಸವೂ ನಡೆದಿಲ್ಲ. ರಾಷ್ಟ್ರಮಟ್ಟದಲ್ಲಿ ಉಗ್ರಗಾಮಿಗಳಿಂದ ಬೆದರಿಕೆ ಕರೆಗಳು ಬಂದಾಗ ಅಷ್ಟೇ ರೈಲ್ವೇ ನಿಲ್ದಾಣಗಳಲ್ಲಿ ಜಾಗೃತವಾಗುತ್ತಿದ್ದು, ಉಳಿದ ದಿನಗಳಲ್ಲಿ ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗುತ್ತಿಲ್ಲ. ರೈಲ್ವೇ ಪೊಲೀಸರಿಂದ ನಿಲ್ದಾಣದಲ್ಲಿ ತಪಾಸಣೆಗಳೂ ನಡೆಯುತ್ತಿಲ್ಲ.

ನಿಲ್ದಾಣದಲ್ಲಿ ಮುಗಿಯದ ಸಮಸ್ಯೆಗಳ ಗೋಳು

ಮಹಿಳೆಯರು ಮತ್ತು ಪುರುಷರಿಗಾಗಿ ಪ್ರತ್ಯೇಕ ವಿಶ್ರಾಂತಿ ಕೊಠಡಿಗಳಿವೆ. ಆದರೆ, ಇದಕ್ಕೆ ಪ್ರವೇಶಿಸಲು ಯಾವುದೇ ಮಾನದಂಡವಿಲ್ಲ.

ಯಾರು ಬೇಕಾದರೂ ಬಂದು ಹೋಗಬಹುದು. ಹೀಗಾಗಿ ಯಾರ್ಯಾರೋ ಬಂದು ಹೋಗುವುದರಿಂದ ಇಲ್ಲಿನ ಶೌಚಾಲಯಗಳು ಅಷ್ಟಾಗಿ ಶುಚಿಯಾಗಿಲ್ಲ.

ಪ್ರಯಾಣಿಕರು ತಮ್ಮ ಸಾಮಾನು ಸರಂಜಾಮುಗಳನ್ನು ಭದ್ರವಾಗಿ ಇಟ್ಟುಕೊಳ್ಳುವುದು ಕೂಡಾ ಒಂದು ಸವಾಲು.

ರೈಲಿನ ಯಾವ ಬೋಗಿ ಎಲ್ಲಿ ನಿಲ್ಲುತ್ತದೆ ಎಂದು ಇಲ್ಲಿ ನಮೂದಿಸಲಾಗಿಲ್ಲ. ಹೀಗಾಗಿ ರೈಲು ನಿಂತ ಕೂಡಲೇ ಅದನ್ನು ಹುಡುಕಿಕೊಂಡು ಓಡುವುದೇ ಒಂದು ಕೆಲಸವಾಗುತ್ತದೆ.

ಲಿಫ್ಟ್ ವ್ಯವಸ್ಥೆ ಮಾಡಲು ಏನಡ್ಡಿ?
ಅಷ್ಟೊಂದು ಎತ್ತರದ ಓವರ್‌ ಬ್ರಿಡ್ಜ್ ಅನ್ನು ಹತ್ತಲು ವಯಸ್ಸಾದವರು, ಮಕ್ಕಳು, ಬಾಣಂತಿಯರಿಗೆ ಎಷ್ಟು ತ್ರಾಸದಾಯಕವಾಗಿರುತ್ತದೆ ಅನ್ನುವುದು ಇಲಾಖೆಗೆ ಇದುವರೆಗೂ ಹೊಳೆದಂತಿಲ್ಲ. ಜಿಲ್ಲೆಯ ಕೇಂದ್ರ ನಿಲ್ದಾಣವಾದ ಇಲ್ಲಿ ಒಂದು ಲಿಫ್ಟ್ ವ್ಯವಸ್ಥೆ ಮಾಡಲು ಸಮಸ್ಯೆಯಾದರೂ ಏನು ಎಂಬುವುದು ಪ್ರಯಾಣಿಕರ ಪ್ರಶ್ನೆ. ಹಣ ತೆತ್ತು ಪ್ರಯಾಣಿಸುವ ಪ್ರಯಾಣಿಕರಿಗೆ ಅಗತ್ಯವಾದ ಮೂಲಸೌಕರ್ಯಗಳನ್ನು ಕಲ್ಪಿಸಿದರಷ್ಟೆ ಆ ನಿಲ್ದಾಣ ಮತ್ತಷ್ಟು ಖ್ಯಾತಿಗಳಿಸಲು ಸಾಧ್ಯವಿದೆ. ಆದರೆ ಇಲ್ಲಿ ಎಲ್ಲವೂ ಅದಕ್ಕೆ ತದ್ವಿರುದ್ದ ಎಂಬಂತಾಗಿದೆ.

ವರದಿ – ಪುನೀತ್‌ ಸಾಲ್ಯಾನ್‌

ಚಿತ್ರ – ಆಸ್ಟ್ರೋಮೋಹನ್‌

Advertisement

Udayavani is now on Telegram. Click here to join our channel and stay updated with the latest news.

Next