Advertisement

ಪುಣೆ, ಗುಜರಾತ್‌ಗೆ ವಿಸ್ತರಣೆ ಇಲ್ಲ: ಶುಕ್ಲ

12:04 PM May 09, 2017 | Team Udayavani |

ಹೊಸದಿಲ್ಲಿ: ರೈಸಿಂಗ್‌ ಪುಣೆ ಸೂಪರ್‌ಜೈಂಟ್‌ ಮತ್ತು ಗುಜರಾತ್‌ ಲಯನ್ಸ್‌ ಯಾವುದೇ ಕಾರಣಕ್ಕೂ ವಿಸ್ತರಣೆ ನೀಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ ಐಪಿಎಲ್‌ ಚೇರ್ಮನ್‌ ರಾಜೀವ್‌ ಶುಕ್ಲ ಅವರು ಒಂದು ವೇಳೆ 2018ರ ಋತುವಿಗೆ ಮರಳಬೇಕಾದರೆ ಹೊಸ ಬಿಡ್ಡಿಂಗ್‌ ವಿಧಾನದ ಮೂಲಕ ಪ್ರಯತ್ನಿಸಬಹುದು ಎಂದರು. ಎರುಡು ವರ್ಷಕ್ಕೆ ನಿಷೇಧಗೊಂಡಿರುವ ಚೆನ್ನೈ ಸೂಪರ್‌ ಕಿಂಗ್ಸ್‌ ಮತ್ತು ರಾಜಸ್ಥಾನ್‌ ರಾಯಲ್ಸ್‌ ಮುಂದಿನ ವರ್ಷದ ಐಪಿಎಲ್‌ಗೆ ಮರಳಲಿದೆ. 

Advertisement

ಎರಡೂ ತಂಡಗಳಿಗೆ ವಿಸ್ತರಣೆ ನೀಡಲಾಗುವುದಿಲ್ಲ. ಎರಡು ವರ್ಷಕ್ಕೆ ಮಾತ್ರ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಒಂದು ವೇಳೆ ನಾವು 10 ತಂಡಗಳ ಲೀಗ್‌ ಮಾಡಿದರೂ ಎರಡು ಹೊಸ ತಂಡಗಳನ್ನು ಹೊಸ ಬಿಡ್‌ ಮೂಲಕವೇ ಆಯ್ಕೆ ಮಾಡಲಾಗುತ್ತದೆ. ಹಾಗಾಗಿ ಪುಣೆ ಮತ್ತು ಗುಜರಾತ್‌ಗೆ ಯಾವುದೇ ಕಾರಣಕ್ಕೂ ವಿಸ್ತರಣೆ ಅಥವಾ ಯಾವುದನ್ನೂ ನೀಡಲಾಗುವುದಿಲ್ಲ ಎಂದು ಶುಕ್ಲ ನುಡಿದರು.

ಸದ್ಯ ಐಪಿಎಲ್‌ ಆಡಳಿತ ಮಂಡಳಿ ಚಿಂತಿಸುವುದು ಎಂಟು ತಂಡಗಳ ಲೀಗ್‌ ಅನ್ನು 10 ತಂಡಗಳ ಕೂಟಕ್ಕೆ ವಿಸ್ತರಿಸುವುದು ಮತ್ತು ಪಂದ್ಯಗಳ ಸಂಖ್ಯೆಯನ್ನು 84ಕ್ಕೆ ಹೆಚ್ಚಿಸುವುದು ಆಗಿದೆ. ಸುಪ್ರೀಂ ಕೋರ್ಟ್‌ ಆದೇಶದಂತೆ ಮುಂದಿನ ವರ್ಷ ನಿಷೇಧಗೊಂಡಿರುವ ಎರಡು ತಂಡಗಳು ಮರಳಲಿವೆ. 8 ಅಥವಾ 10 ತಂಡಗಳ ವಿಷಯವನ್ನು ಮುಂದಿನ ಐಪಿಎಲ್‌ ಆಡಳಿತ ಮಂಡಳಿ ಸಭೆಯಲ್ಲಿ ಚರ್ಚಿಸಲಾಗುವುದು. ಸದ್ಯದ ಮಟ್ಟಿಗೆ 8 ತಂಡಗಳ ಲೀಗ್‌ನಂತೆ ಆಡುವುದು ಆಗಿದೆ. 10 ತಂಡಗಳ ಲೀಗ್‌ ನಡೆಸಲು ಆಡಳಿತ ಮಂಡಳಿ ಒಪ್ಪಿಗೆ ಸೂಚಿಸಬೇಕಾಗಿದೆ ಎಂದು ಶುಕ್ಲ ತಿಳಿಸಿದರು.

ಬೃಹತ್‌ ಹರಾಜು ಸಾಧ್ಯತೆ
10 ವರ್ಷಗಳ ಸರ್ಕಲ್‌ ಬಳಿಕ ಎಲ್ಲ ಆಟಗಾರರು ಹರಾಜಿನಲ್ಲಿ ಭಾಗವಹಿಸಬೇಕಾಗಿದೆ. ಆದರೆ ಫ್ರಾಂಚೈಸಿಯಲ್ಲಿ ಆಟಗಾರರನ್ನು ಉಳಿಸಿಕೊಳ್ಳುವ ನೀತಿಯನ್ನು ಪರಿಗಣಿಸ ಲಾಗುವ ಸಾಧ್ಯತೆಯಿದೆ. ಮುಂದಿನ ವರ್ಷ ಬೃಹತ್‌ ಹರಾಜು ಪ್ರಕ್ರಿಯೆ ನಡೆಯಲಿದೆ ಮತ್ತು ಆಟಗಾರರನ್ನು ಉಳಿಸಿಕೊಳ್ಳುವ ನೀತಿಯೂ ಇದೆ ಎಂದವರು ಹೇಳಿದರು.  ಬೃಹತ್‌ ಹರಾಜು ತತ್‌ಕ್ಷಣವೇ ನಡೆಯುವುದಿಲ್ಲ. ಮುಂದಿನ ಐಪಿಎಲ್‌ ಮೊದಲು ನಡೆಯಲಿದೆ. ಹಾಗಾಗಿ ಚಿಂತಿಸಲು ಬಹಳಷ್ಟು ಸಮಯವಿದೆ ಎಂದವರು ವಿವರಿಸಿದರು.

5 ವರ್ಷಕ್ಕೆ ಮಾಧ್ಯಮ ಹಕ್ಕು 
ಐಪಿಎಲ್‌ ಮಾಧ್ಯಮ ಹಕ್ಕನ್ನು (ಬ್ರಾಡ್‌ಕಾಸ್ಟ್‌/ಡಿಜಿಟಲ್‌/ಮೊಬೈಲ್‌) 10 ವರ್ಷದ ಬದಲು ಐದು ವರ್ಷಕ್ಕೆ ನೀಡಲು ಚಿಂತಿಸಲಾಗುತ್ತಿದೆ. 2017ರ ಋತುವಿನ ಬಳಿಕ ವಿವೊ ಜತೆಗಿನ ಟೈಟಲ್‌ ಪ್ರಾಯೋಜಕತ್ವ ಮುಗಿಯಲಿದೆ. ಮುಂದಿನ ವರ್ಷಕ್ಕೆ ಇ-ಹರಾಜಿನ ಮೂಲಕ ಟೈಟಲ್‌ ಪ್ರಾಯೋಜಕತ್ವಕ್ಕೆ ಟೆಂಡರು ಕರೆಯಲಾಗುತ್ತದೆ ಎಂದು ಶುಕ್ಲ ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next