Advertisement

Drinking water: ಜಾತ್ರೆಗೆ ಬಂದ ರಾಸುಗಳಿಗೆ ಕುಡಿಯಲು ನೀರಿಲ!

05:00 PM Mar 09, 2024 | Team Udayavani |

ಮುಳಬಾಗಿಲು: ಪ್ರತಿವರ್ಷ ನಡೆಯುವ ಆವಣಿ ಜಾತ್ರೆಗೆ ಹೆಚ್ಚಿನ ಜಾನುವಾರುಗಳು ಹರಿದು ಬರುತ್ತಿ ದ್ದರೂ, ಅವುಗಳಿಗೆ ಕುಡಿಯುವ ನೀರನ್ನು ಒದಗಿಸಲು ಗ್ರಾಪಂ ಅಧಿಕಾರಿಗಳು ಮೀನಮೇಷ ಎಣಿಸುತ್ತಿರುವುದಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ತಾಲೂಕಿನ ಪುರಾಣ ಪ್ರಸಿದ್ಧ ಆವಣಿ ಶ್ರೀರಾಮಲಿಂಗೇಶ್ವರ ಕ್ಷೇತ್ರವು ಅತ್ಯಂತ ಪುರಾಣ ಪ್ರಸಿದ್ಧ ಸ್ಥಳವಾಗಿದ್ದು, ಗ್ರಾಮದಲ್ಲಿ ಶ್ರೀರಾಮಲಿಂಗೇಶ್ವರ ಸ್ವಾಮಿ ದೇವಾಲಯ, ಬೆಟ್ಟದ ಮೇಲೆ ಸೀತಾಮಾತೆ ದೇಗುಲ, ಬೆಟ್ಟದ ತಪ್ಪಲಿನಲ್ಲಿ ದ್ವಾದಶ ಲಿಂಗಗಳ ದೇಗುಲ, ಅಂತರಗಂಗೆ ಸೇರಿದಂತೆ ರಾಮಾಯಣಕ್ಕೆ ಪೂರಕವಾದ ಕುರುಹುಗಳನ್ನು ಕ್ಷೇತ್ರದಲ್ಲಿ ಕಾಣಬಹುದಾಗಿದೆ.

ಶುಲ್ಕ ಮುಕ್ತ ಜಾತ್ರೆ: ಕಂದಾಯ ಇಲಾಖೆಯಿಂದ ಜಾತ್ರೆಯಲ್ಲಿ ಎತ್ತು, ಗಾಡಿಗಳ ಶುಲ್ಕವನ್ನು ಆವಣಿ ಬಾಬು ಮತ್ತು ಅಂಗಡಿಗಳ ಶುಲ್ಕವನ್ನು ಕೆಜಿಎಂ ಬಳಗದ ಮುಖಂಡ ಡಾ.ನವೀನ್‌ ತಾವೇ ಭರಿಸುವ ಮೂಲಕ ಜಾತ್ರೆ ಯಲ್ಲಿರುವ ಶುಲ್ಕ ವಸೂಲಾತಿ ಮಾಡದಂತೆ ನಿರ್ಧರಿಸಿರುವುದರಿಂದ ಶುಲ್ಕ ಮುಕ್ತ ಜಾತ್ರೆಯಾಗಿ ಪರಿಣಮಿಸಿದೆ.

ಇಲ್ಲಿ 8-10 ಕಾಲ ಬಾರಿ ದನಗಳ ಜಾತ್ರೆಯು ಸೇರಲಿದ್ದು, ಜಾತ್ರೆಯಲ್ಲಿ ಹಾವೇರಿ, ಆಂಧ್ರ, ಮಂತ್ರಾಲಯ, ಕರ್ನೂಲ್‌, ಒಂಗೋಲ್‌, ಬೇರಿಕೆ, ತಮಿಳುನಾಡು ರಾಜ್ಯಗಳಿಂದ ರಾಸುಗಳನ್ನು ಮಾರಲು ರೈತರು ಗುರುವಾರ ಮತ್ತು ಶುಕ್ರವಾರವೇ ಎತ್ತುಗಳನ್ನು ಮಾರಲು ಎತ್ತಿ ನ ಗಾಡಿಗಳಲ್ಲಿ ಹುಲ್ಲನ್ನು ತುಂಬಿಕೊಂಡು ಬಂದು ಈಗಾಗಲೇ ಬಿಡಾರ ಹೂಡಿದ್ದಾರೆ. ಆದರೆ, ಇದುವರೆಗೂ ಮಾರಾಟಗಾರರು ಬರದೇ ಇರುವುದರಿಂದ ಹೆಚ್ಚಾಗಿ ವ್ಯಾಪಾರ ವಹಿವಾಟುಗಳು ಪ್ರಾರಂಭಗೊಂಡಿಲ್ಲ.

ಜಾನುವಾರಗಳ ಜಮಾವಣೆ: ಜಾನುವಾರುಗಳ ಜಾತ್ರೆ ಯಲ್ಲಿ ಕಾಲುಬಾಯಿ ಜ್ವರ ಕಡಿವಾಣಕ್ಕಾಗಿ ಪಶುವೈದ್ಯಕೀಯ ಇಲಾಖೆ ಸಹಾಯಕ ನಿರ್ದೇಶಕಿ ಅನುರಾಧ ಮಾರ್ಗದರ್ಶನದಂತೆ ವೈದ್ಯರು ಹಲವಾರು ಕ್ರಮಗಳನ್ನು ಕೈಗೊಂಡಿರುವ ಹಿನ್ನೆಲೆಯಲ್ಲಿ ತಮಿಳುನಾಡಿನ ಕೃಷ್ಣಗಿರಿ, ಕೋಲಾರ ತಾಲೂಕು ಒಡಗೂರು, ಬೂದಿ ಕೋಟೆ, ಮಾಲೂರಿನ ಸೊಣ್ಣಹಳ್ಳಿ, ಹೊಸಕೋಟೆ ತಾಲೂಕು ತಾವರೆಕೆರೆ, ಹೆಬ್ಬಣಿ, ಸೇರಿದಂತೆ ರಾಜ್ಯ ಮತ್ತು ಅಕ್ಕ ಪಕ್ಕದ ರಾಜ್ಯಗಳಿಂದ ರೈತರು ಮೇವಿ ನೊಂದಿಗೆ ಸಾವಿರಾರು ಜೊತೆಗಳ ಎತ್ತುಗಳು ಜಾತ್ರೆಗೆ ಆಗಮಿಸಿದ್ದು, ಬಿಸಿಲಿನ ಬೇಗೆಯಿಂದ ಪಾರಾಗಲು ಪೆಂಡಾಲ್‌ ಮತ್ತು ಚೆಪ್ಪರ ಹಾಕಿಕೊಂಡಿದ್ದಾರೆ.

Advertisement

ಕುಡಿಯಲು ನೀರಿಲ್ಲ: ಗುರುವಾರ ಮುಂಜಾನೆಯೇ 16 ಜತೆ ಎತ್ತುಗಳೊಂದಿಗೆ ಆವಣಿ ಜಾತ್ರೆಗೆ ಬಂದಿದ್ದು, ಇಲ್ಲಿ ಎತ್ತುಗಳು ಕುಡಿಯಲು ನೀರಿನ ವ್ಯವಸ್ಥೆಯಿಲ್ಲ. ತಾಲೂಕು ಆಡಳಿತ ಶೀಘ್ರವಾಗಿ ಜಾನುವಾರುಗಳಿಗೆ ಮತ್ತು ಜನರಿಗೆ ಕುಡಿಯಲು ನೀರಿನ ವ್ಯವಸ್ಥೆ ಕಲ್ಪಿಸ ಬೇಕೆಂದು ತಮಿಳುನಾಡಿನ ಬೇರಿಕೆ ಮುನಿರೆಡ್ಡಿ ಮತ್ತು ತೊರಲಕ್ಕಿ ಅಶ್ವತ್ಥಪ್ಪ ಮನವಿ ಮಾಡಿದರು.

ಜಾತ್ರೆಯಲ್ಲಿ ಜಾನುವಾರುಗಳಿಗೆ ನೀರಿನ ಸೌಕರ್ಯ ಕಲ್ಪಿಸಲೆಂದು ಪೂರ್ವಭಾವಿ ಸಭೆಯಲ್ಲಿ ಒಪ್ಪಿಕೊಂಡಿರುವಂತೆ ನಾವು ಮುಂಜಾನೆಯೇ ಟ್ಯಾಂಕರ್‌ ತಂದು ಜಾತ್ರೆಯ ಬಸ್‌ ನಿಲ್ದಾಣದಲ್ಲಿ ನಿಲ್ಲಿಸಲಾಗಿದೆ. ಪಿಡಿಒ ಬಂದು ಯಾವ ಕೊಳವೆ ಬಾವಿಯಿಂದ ನೀರನ್ನು ತುಂಬಿಸಲು ತಿಳಿಸಿದರೆ ಅಲ್ಲಿಂದ ತೊಟ್ಟಿಗಳಿಗೆ ಸರಬರಾಜು ಮಾಡುತ್ತೇವೆಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸಿದರು.

ಆವಣಿ ಜಾತ್ರೆ ವಿಶೇಷ ಬಸ್‌ಗಳಿಗೆ ವೇಗದೂತ ದರ : ಫೆ.10ರಂದು ನಡೆಯಲಿರುವ ಜಿಲ್ಲೆಯಲ್ಲಿಯೇ ಅತೀ ದೊಡ್ಡದಾದ ಬ್ರಹ್ಮರಥೋತ್ಸವಕ್ಕೆ ಕರ್ನಾಟಕ ಹಾಗೂ ಹೊರ ರಾಜ್ಯಗಳಿಂದ ಲಕ್ಷಾಂತರ ಜನರು ಪಾಲ್ಗೊಳ್ಳುವುದರಿಂದ ಸುಗಮ ಸಂಚಾರಕ್ಕಾಗಿ ಮುಳಬಾಗಿಲು, ಕೋಲಾರ, ಕೆಜಿಎಫ್, ಶ್ರೀನಿವಾಸಪುರ, ಮಾಲೂರು ಡಿಪೋಗಳಿಂದ ಒಂದು ವಾರ ಕಾಲ ವಿಶೇಷವಾಗಿ ಪ್ರತಿ ನಿತ್ಯ ಎಲ್ಲಾ ಮಾರ್ಗಗಳಲ್ಲಿ 75 ಬಸ್‌ಗಳನ್ನು ಆವಣಿಗೆ ಜಾತ್ರೆಗೆ ಈಗಾಗಲೇ ಹಾಕಲಾಗಿದ್ದು, ರಥೋತ್ಸವದಂದು 150 ಬಸ್‌ಗಳು ಸೇರಿದಂತೆ ಎಷ್ಟೇ ಅಗತ್ಯವಾದರೂ ಅಷ್ಟು ಬಸ್‌ಗಳನ್ನು ಹಾಕಲಾಗುವುದು. ಜಾತ್ರೆ ವಿಶೇಷ ಬಸ್‌ಗಳಲ್ಲಿ ವೇಗದೂತ ಪ್ರಯಾಣ ದರವನ್ನು ನಿಗದಿ ಮಾಡಿದೆ ಎಂದು ಕೆಎಸ್‌ಆರ್‌ಟಿಸಿ ಇಲಾಖೆಯ ವಿಭಾಗೀಯ ಸಂಚಾರ ನಿಯಂತ್ರಣಾಧಿಕಾರಿಗಳು ತಿಳಿಸಿದರು.

ನಾಳೆ ಬ್ರಹ್ಮರಥೋತ್ಸವ : ಶಿವರಾತ್ರಿ ಹಬ್ಬದ ಮಾರನೇ ದಿವಸ ಫೆ.10ರಂದು ಸರ್ಕಾರದಿಂದ ಶ್ರೀರಾಮಲಿಂಗೇಶ್ವರಸ್ವಾಮಿ ಬ್ರಹ್ಮ ರಥೋತ್ಸವವು ಅತ್ಯಂತ ವಿಜೃಂಭಣೆಯಾಗಿ ನಡೆಯಲಿದ್ದು, ರಥೋತ್ಸವದ ವೇಳೆ ಬ್ರಹ್ಮರಥದ ಮುಂಭಾಗದಲ್ಲಿ ಮಾತೆ ಕೀಲುಹೊಳಲಿ ಗ್ರಾಮದೇವತೆ ಸಲ್ಲಾಪುರಮ್ಮ ದೇವರ ಮೆರವಣಿಗೆ ಸಾಗಲಿದೆ. ರಥೋತ್ಸವಕ್ಕೆ ಲಕ್ಷಾಂತರ ಜನರು ಪಾಲ್ಗೊಳ್ಳುವರು.

ಎಂ. ನಾಗರಾಜಯ್ಯ

Advertisement

Udayavani is now on Telegram. Click here to join our channel and stay updated with the latest news.

Next