Advertisement
ಕೋಡಿ, ಮಧ್ಯಕೋಡಿ ಭಾಗದಲ್ಲಿ ಈ ಸಮಸ್ಯೆ ಹೆಚ್ಚಾಗಿದ್ದು ಸೋನ್ಸ್ ಶಾಲೆ ಬಳಿಯೂ ಸಮಸ್ಯೆ ಇದೆ. ಕೋಡಿಯ ಸೋನ್ಸ್ ಹಿರಿಯ ಪ್ರಾಥಮಿಕ ಶಾಲೆಯ ಪೂರ್ವದಿಕ್ಕಿಗೆ ಇರುವ 25ರಿಂದ 30 ಎಕರೆ ಗದ್ದೆ 2011ರಿಂದಲೂ ಇದೇ ಪರಿಸ್ಥಿತಿ ಅನುಭವಿಸುತ್ತಿದೆ. ಕುಡಿಯುವ ನೀರಿಗೂ ಬರ ಉಂಟಾಗಿದೆ. ಪುರಸಭೆಗೆ ಮೇಲಿಂದ ಮೇಲೆ ಮನವಿ ಸಲ್ಲಿಸಿದರೂ ಪರಿಣಾಮ ಶೂನ್ಯವಾಗಿದೆ ಎನ್ನುತ್ತಾರೆ ಸ್ಥಳೀಯರು. ಪುರಸಭೆಯವರು ತತ್‌ಕ್ಷಣ ಕೇವಲ 25 ಸಾವಿರ ರೂ. ವೆಚ್ಚದಲ್ಲಿ ತಾತ್ಕಾಲಿಕವಾಗಿ ಉಪ್ಪುನೀರಿಗೆ ತಡೆ ಹಾಕಬಹುದು. ಆದರೆ ಆ ಕೆಲಸವನ್ನು ಮಾಡದೇ ಸರಕಾರದಿಂದ ಕೋಟ್ಯಂತರ ರೂ.ಗಳ ಅನುದಾನದ ಕಡೆಗೆ ಬೆರಳು ತೋರಿಸುತ್ತಿದ್ದಾರೆ ಎಂದು ಆರೋಪಿಸುತ್ತಾರೆ ಇಲ್ಲಿನ ನಿವಾಸಿಗಳು.
Related Articles
Advertisement
ಉಬ್ಬರ –ಇಳಿತ : ಕೋಡಿ ಅಳಿವೆಗೆ ಹೊಂದಿಕೊಂಡಂತಹ ಕೋಡಿ ಹಿನ್ನೀರಿನ ವಠಾರದಲ್ಲಿ ಹುಣ್ಣಿಮೆ, ಅಮಾವಾಸ್ಯೆಗೆ ಸಮುದ್ರದ ಉಬ್ಬರ- ಇಳಿತದ ಸಂದರ್ಭ ಸಮಸ್ಯೆಯಾಗುತ್ತಿದೆ. ಹುಣ್ಣಿಮೆಗೆ ನದಿ ನೀರು ಏರಿಕೆಯಾಗಿ ಕೃಷಿಭೂಮಿ, ಮನೆ ವಠಾರಕ್ಕೆ ನುಗ್ಗುತ್ತದೆ. ಇದು ಸಹಜ ಎನ್ನಬಹುದಾದರೂ ಇನ್ನೊಂದು ಹುಣ್ಣಿಮೆವರೆಗೂ ನೀರು ಇಳಿದು, ಹರಿದು ಹೋಗುವುದಿಲ್ಲ ಎನ್ನುವುದು ಸಮಸ್ಯೆ. ಇದರಿಂದಾಗಿಯೇ ಕುಡಿಯುವ ನೀರಿನ ಬಾವಿಗಳ ನೀರೂ ಕಲುಷಿತವಾಗಿದೆ, ಉಪ್ಪಾಗಿದೆ. ಕೋಡಿ ಭಾಗಕ್ಕೆ ಇನ್ನೂ ಪುರಸಭೆಯ ಕುಡಿಯುವ ನೀರಿನ ಸಂಪರ್ಕ ಆಗದೇ ಇರುವ ಕಾರಣ ಸಮಸ್ಯೆ ಮುಂದುವರಿದಿದೆ.
ಕಿಂಡಿ ಅಣೆಕಟ್ಟು : ಇಲ್ಲಿನ ದಾಸಪ್ಪ ಹವಾಲ್ದಾರ್ ಅವರ ಮನೆ ಸಮೀಪ 30 ವರ್ಷಗಳ ಹಿಂದೆ ಕಿಂಡಿ ಅಣೆಕಟ್ಟು ಒಂದನ್ನು ರಚಿಸಲಾಗಿದೆ. ಅದು ಈಗ ದುರಸ್ತಿಗೆ ಬಂದ ಕಾರಣ ಸಮಸ್ಯೆಯಾಗುತ್ತಿದೆ. ಉಪ್ಪು ನೀರು ತಡೆಗಟ್ಟಲಾಗದೆ ಮನೆಗಳಿರುವ ಜಾಗಕ್ಕೆ ಬರುತ್ತಿದೆ. ಗುತ್ತೇದಾರ್ ಮನೆ ಸಮೀಪ ಕಾಮಗಾರಿ ವೈಫಲ್ಯ ಕೂಡ ಉಪ್ಪುನೀರು ಒಳನುಗ್ಗಲು ಕಾರಣ ಎಂದು ಸ್ಥಳೀಯರು ಬೆರಳು ತೋರಿಸುತ್ತಾರೆ.
ಡಿಸಿ ಗಮನಿಸಲಿ : ಸಣ್ಣ ಮೊತ್ತದಲ್ಲಿ ಪರಿಹಾರ ಒದಗಿಸಲು ಸಾಧ್ಯವಿದ್ದರೂ ಪುರಸಭೆ ದೊಡ್ಡ ಮೊತ್ತದ ಕಾಮಗಾರಿ ಸರಕಾರದಿಂದ ಬರಬೇಕಿದೆ ಎಂದು ದಿನದೂಡುತ್ತದೆ. ಇದರಿಂದಾಗಿ ಕುಡಿಯುವ ನೀರು ಹಾಗೂ ಕೃಷಿಗೆ ಸಮಸ್ಯೆಯಾಗಿದೆ. ಜಿಲ್ಲಾಧಿಕಾರಿಗಳು ಮಧ್ಯಪ್ರವೇಶ ಮಾಡಿ ಸಮಸ್ಯೆ ಬಗೆಹರಿಸಲಿ. ತಾತ್ಕಾಲಿಕ ತುರ್ತು ಕಾಮಗಾರಿಗೆ ಆದೇಶ ನೀಡಲಿ. – ಸುಬ್ರಹ್ಮಣ್ಯ ಶೇರೆಗಾರ್ ಸಂತ್ರಸ್ತ ರೈತ, ಕೋಡಿ
ಗಮನಕ್ಕೆ ಬಂದಿದೆ : ಕೋಡಿ ನಿವಾಸಿಗಳ ಸಮಸ್ಯೆ ಗಮನಕ್ಕೆ ಬಂದಿದೆ. ಕುಡಿಯುವ ನೀರಿನ ಕಾಮಗಾರಿ ಪ್ರಗತಿಯಲ್ಲಿದೆ. ಶಾಶ್ವತ ಕಾಮಗಾರಿ ನಡೆಸಲು ಪುರಸಭೆಯಲ್ಲಿ ಅನುದಾನದ ಕೊರತೆಯಿದೆ. ಸ್ಥಳೀಯರ ಬೇಡಿಕೆಯನ್ನು ಸಂಬಂಧಪಟ್ಟ ಇಲಾಖೆ ಗಮನಕ್ಕೆ ತರಲಾಗಿದೆ. – ಗೋಪಾಲಕೃಷ್ಣ ಶೆಟ್ಟಿ ಮುಖ್ಯಾಧಿಕಾರಿ, ಪುರಸಭೆ
-ವಿಶೇಷ ವರದಿ