ಚಿತ್ರದುರ್ಗ: ಕೋವಿಡ್-19 ಸೋಂಕು ವಿಚಾರದಲ್ಲಿ ಸಚಿವರ ನಿರ್ಲಕ್ಷ್ಯ ಎನ್ನುವುದು ಸರಿಯಲ್ಲ. ಕೋವಿಡ್ ನಿಯಂತ್ರಣ ಯಾರ ಕೈಲಿದೆ ಹೇಳಿ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ಪ್ರಶ್ನಿಸಿದರು.
ಮುಂದಿನ ಎರಡು ತಿಂಗಳಲ್ಲಿ ಕೋವಿಡ್ ಸೋಂಕು ಮತ್ತಷ್ಟು ಹೆಚ್ಚಾಗುವುದರಲ್ಲಿ ಅನುಮಾನ ಇಲ್ಲ. ನಮ್ಮನ್ನು ದೇವರೇ ಕಾಪಾಡಬೇಕು. ಇಲ್ಲವೇ ಜನರೇ ಜಾಗೃತರಾಗಬೇಕು ಎಂದರು.
ಕಾಂಗ್ರೆಸ್ ನಾಯಕರು ಕೆಳಮಟ್ಟದ ರಾಜಕಾರಣ ಮಾಡುವುದನ್ನು ಬಿಡಬೇಕು. ಬಾಯಿಗೆ ಬಂದಂತೆ ಮಾತನಾಡಬಾರದು. ನಾವೇನಾದರು ತಪ್ಪು ಮಾಡಿದ್ದರೆ ಶಿಕ್ಷೆ, ಪ್ರಾಯಶ್ಚಿತ್ತಕ್ಕೆ ಸಿದ್ಧ ಎಂದು ರಾಮುಲು ಹೇಳಿದರು.
ಇಂತಹ ಸಂದಿಗ್ಧ ಸಮಯದಲ್ಲಿ ಕಾಂಗ್ರೆಸ್ ನಾಯಕರಲ್ಲಿ ನನ್ನ ಮನವಿ. ಯಾವುದೇ ಮಾತಾಡುವ ವೇಳೆ ಎಲ್ಲವನ್ನೂ ಬಿಗಿಯಿಡಿದು ಮಾತಾಡಬೇಕು ಎಂದು ತಿರುಗೇಟು ನೀಡಿದರು.
ಖಾಸಗಿ ಆಸ್ಪತ್ರೆಗಳಲ್ಲಿ ಲೋಪ ಆದಲ್ಲಿ ಕ್ರಿಮಿನಲ್ ಕೇಸ್ ಹಾಕುತ್ತೇವೆ. ಎರಡು ಮೂರು ಆಸ್ಪತ್ರೆಯಿಂದ ಖಾಸಗಿ ಆಸ್ಪತ್ರೆಗಳಿಗೆ ಕೆಟ್ಟ ಹೆಸರು ಬರುತ್ತದೆ. ಎರಡು ಮೂರು ಆಸ್ಪತ್ರೆಗಳನ್ನು ಲಾಕ್ ಡೌನ್ ಮಾಡಿ ಚುರುಕು ಮುಟ್ಟಿಸುತ್ತೇವೆ ಎಂದರು.
30 ನಿಮಿಷದಲ್ಲಿ ಕೋವಿಡ್ ಟೆಸ್ಟ್ ಮಾಡುವ ರ್ಯಾಪಿಡ್ ಆ್ಯಂಟಿಜನ್ 2 ಲಕ್ಷ ಕಿಟ್ ಆರ್ಡರ್ ಮಾಡಿದ್ದು ಈಗಾಗಲೇ 1 ಲಕ್ಷ ಕಿಟ್ ಬಂದಿವೆ ಎಂದು ಮಾಹಿತಿ ನೀಡಿದರು.
ಆಯುಷ್ ಇಲಾಖೆ ವೈದ್ಯರ ಬೇಡಿಕೆ ಈಡೇರಿಕೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಈ ಸಂದರ್ಭದಲ್ಲಿ ಯಾರೂ ಮುಷ್ಕರ ಮಾಡಬಾರದು. ಎಂಬಿಬಿಎಸ್ ವೈದ್ಯರಂತೆ ಆಯುಷ್ ವೈದ್ಯರಿಗೂ ವೇತನ ಹೆಚ್ಚಳಕ್ಕೆ ಕ್ರಮ ವಹಿಸುತ್ತೇವೆ ಎಂದರು.