Advertisement

ಆಯುಷ್‌ ಆಸ್ಪತ್ರೆಯಲ್ಲಿ ವೈದ್ಯರೇ ಇಲ್ಲ !

02:25 PM Jul 24, 2019 | Suhan S |

ಮಂಡ್ಯ: ಜಿಲ್ಲಾ ಕೇಂದ್ರದಲ್ಲಿರುವ ಸರ್ಕಾರಿ ಆಯುರ್ವೇದ ಆಸ್ಪತ್ರೆಯಲ್ಲಿ ರೋಗಿಗಳಿಗೆ ಬರವಿಲ್ಲ. ವೈದ್ಯರು ಹಾಗೂ ಸಿಬ್ಬಂದಿ ಬರ ಬೆಂಬಿಡದೆ ಕಾಡುತ್ತಿದೆ. ಮೂರು ವೈದ್ಯಾಧಿಕಾರಿ ಹುದ್ದೆಗಳಲ್ಲಿ ಒಂದು ಹುದ್ದೆಯೂ ಭರ್ತಿಯಾಗಿಲ್ಲ. ರೋಸ್ಟರ್‌ ಪದ್ಧತಿಯಡಿ ತಾಲೂಕು ಆಸ್ಪತ್ರೆ ವೈದ್ಯರನ್ನೇ ಜಿಲ್ಲಾ ಆಸ್ಪತ್ರೆಗೆ ನೇಮಕ ಮಾಡಿಕೊಂಡು ಹೊರ ಮತ್ತು ಒಳ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.

Advertisement

ನಗರದ ಹೊಸಹಳ್ಳಿಯಲ್ಲಿರುವ ಜಿಲ್ಲಾ ಸರ್ಕಾರಿ ಆಯುರ್ವೇದ ಆಸ್ಪತ್ರೆಗೆ ಬಡವರು-ಶ್ರೀಮಂತರೆನ್ನದೆ ನಿತ್ಯವೂ 70ರಿಂದ 80 ಮಂದಿ ಹೊರರೋಗಿಗಳಾಗಿ ಚಿಕಿತ್ಸೆ ಪಡೆಯಲು ಬರುತ್ತಿದ್ದಾರೆ. ಆಯುರ್ವೇದ ಆಸ್ಪತ್ರೆಯಲ್ಲಿ ಸಂಧಿನೋವು, ಕೀಲು ನೋವು, ತಲೆನೋವು, ರಕ್ತದ ಒತ್ತಡ, ಪಾರ್ಶ್ವವಾಯು, ತೈಲ ಮಸಾಜ್‌, ಪಂಚಕರ್ಮ ಚಿಕಿತ್ಸೆ ಸೇರಿದಂತೆ ವಿವಿಧ ರೀತಿಯ ದೈಹಿಕ ತೊಂದರೆಗಳ ಉಪಶಮನಕ್ಕಾಗಿ ಒಳರೋಗಿಗಳಾಗಿಯೂ ದಾಖಲಾಗುತ್ತಿದ್ದಾರೆ. ಹಾಲಿ ಆಸ್ಪತ್ರೆಯಲ್ಲಿ 6 ಪುರುಷರು, 7 ಮಂದಿ ಮಹಿಳೆಯರು ಒಳರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರೋಗಿ ಗಳಿಗೆ ತಕ್ಕಷ್ಟು ವೈದ್ಯರು-ಸಿಬ್ಬಂದಿ ಮಾತ್ರ ಇಲ್ಲವಾಗಿದೆ.

ಮೂರು ಹುದ್ದೆಗಳೂ ಖಾಲಿ: ಜಿಲ್ಲಾ ಸರ್ಕಾರಿ ಆಯುರ್ವೇದ ಆಸ್ಪತ್ರೆಯಲ್ಲಿರುವ ಮೂರು ವೈದ್ಯ ಹುದ್ದೆಗಳು ಖಾಲಿ ಬಿದ್ದಿವೆ. ಇಲ್ಲಿ ಕಾರ್ಯನಿರ್ವ ಹಿಸುತ್ತಿದ್ದ ವೈದ್ಯರೆಲ್ಲಾ ನಿವೃತ್ತರಾಗಿದ್ದಾರೆ. ಖಾಲಿಯಾದ ಸ್ಥಾನಗಳಿಗೆ ಇದುವರೆಗೂ ವೈದ್ಯರನ್ನು ನೇಮಕ ಮಾಡಿಲ್ಲ. ಕಳೆದೊಂದು ವರ್ಷದಿಂದ ಆಸ್ಪತ್ರೆಯಲ್ಲಿ ವೈದ್ಯರಿಲ್ಲದೆ ರೋಗಿಗಳಿಗೆ ಚಿಕಿತ್ಸೆ ನೀಡಲು ತೀವ್ರ ತೊಂದರೆಯಾಗುತ್ತಿದೆ.

ಗ್ರಾಮೀಣ ಪ್ರದೇಶದಲ್ಲಿ ಕೆಲಸದ ಒತ್ತಡ ಹೆಚ್ಚಿಲ್ಲದ ಕಾರಣ ಅಲ್ಲಿನ ವೈದ್ಯರನ್ನೇ ಜಿಲ್ಲಾ ಆಯುರ್ವೇದ ಆಸ್ಪತ್ರೆಗೆ ರೋಸ್ಟರ್‌ ಪದ್ಧತಿಯಡಿ ನಿಯೋಜನೆ ಮಾಡಲಾಗಿದ್ದು, ದಿನಕ್ಕೊಬ್ಬರಂತೆ ಕಾರ್ಯನಿರ್ವ ಹಿಸುತ್ತಿದ್ದಾರೆ. ಆಸ್ಪತ್ರೆಯಲ್ಲಿರುವ ಒಬ್ಬ ವೈದ್ಯರಿಂದ ಎಲ್ಲಾ ರೋಗಿಗಳಿಗೆ ಚಿಕಿತ್ಸೆ ನೀಡುವುದು ಕಷ್ಟವಾಗಿದೆ.

ನರ್ಸ್‌ಗಳೂ ಇಲ್ಲ: ಜಿಲ್ಲಾ ಕೇಂದ್ರದ ಆಯುರ್ವೇದ ಆಸ್ಪತ್ರೆಯಲ್ಲಿ ಇಬ್ಬರು ನರ್ಸ್‌ಗಳನ್ನು ಹೊರತು ಪಡಿಸಿದರೆ ತಾಲೂಕು ಆಸ್ಪತ್ರೆಗಳಲ್ಲಿ ನರ್ಸ್‌ಗಳ ಕೊರತೆ ಇದೆ. ಮದ್ದೂರು ಹಾಗೂ ಮದ್ದೂರು ತಾಲೂಕಿನ ಹಳೇಹಳ್ಳಿ, ಮಳವಳ್ಳಿ, ಶ್ರೀರಂಗಪಟ್ಟಣ ಆಸ್ಪತ್ರೆಗಳಲ್ಲಿ ನರ್ಸ್‌ಗಳಿಲ್ಲ. ಇದರಿಂದ ಈ ಭಾಗದಲ್ಲಿ ಮಹಿಳೆ ಯರಿಗೆ ಚಿಕಿತ್ಸೆ ನೀಡುವುದಕ್ಕೆ ತೊಂದರೆಯಾಗುತ್ತಿದೆ.

Advertisement

80ಕ್ಕೂ ಹೆಚ್ಚು ರೋಗಿಗಳು: ನಿತ್ಯವೂ ಜಿಲ್ಲಾ ಆಯುರ್ವೇದ ಆಸ್ಪತ್ರೆಗೆ 80ಕ್ಕೂ ಹೆಚ್ಚು ಮಂದಿ ಹೊರರೋಗಿಗಳಾಗಿ ಚಿಕಿತ್ಸೆ ಪಡೆಯಲು ಬರುತ್ತಿದ್ದಾರೆ. ಇದರಲ್ಲಿ 20 ರಿಂದ 30 ಮಂದಿ ಮಹಿಳೆಯರೂ ಇರುತ್ತಾರೆ. ಬೆಳಗ್ಗೆ 8 ಗಂಟೆಯಿಂದ 1.30 ಗಂಟೆಯ ವರೆಗೆ ಮತ್ತೆ ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಕನಿಷ್ಠ 40 ಮಂದಿ ವಿವಿಧ ಚಿಕಿತ್ಸೆಗಳಿಗೆ ನಿತ್ಯವೂ ಬಂದು ಹೋಗುತ್ತಾರೆ. ಮಂಡಿ ನೋವು, ಕೀಲು ನೋವು, ತಲೆನೋವು ನಿವಾರಕ ಚಿಕಿತ್ಸೆಗಳಿಗೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಬರುತ್ತಾರೆ. ಮಧುಮೇಹ, ಚಿಕ್ಕ ವಯಸ್ಸಿನಲ್ಲೇ ಮಧುಮೇಹಕ್ಕೆ ತುತ್ತಾದವರಿಗೂ ಆಸ್ಪತ್ರೆಯಲ್ಲಿ ಪೂರಕವಾದ ಚಿಕಿತ್ಸೆಗಳನ್ನು ನೀಡಲಾಗುತ್ತಿದೆ. ಆದರೆ, ವೈದ್ಯರ ಕೊರತೆಯಿಂದಾಗಿ ಕೆಲಸ ಒತ್ತಡ ಆಸ್ಪತ್ರೆಯಲ್ಲಿ ಹೆಚ್ಚಾಗಿದ್ದು, ಒಬ್ಬ ವೈದ್ಯರಿಂದ ಎಲ್ಲವನ್ನೂ ನಿಭಾಯಿಸುವುದಕ್ಕೆ ಸಾಧ್ಯವಾಗದಂತಾಗಿದೆ.

ಆಸ್ಪತ್ರೆಯಲ್ಲಿ ದೊರೆಯುವ ಚಿಕಿತ್ಸೆಗಳು: ನೇತ್ರರೋಗ, ಕಿವಿನೋವು, ಕಿವುಡು, ಕಿವಿ ಸೋರುವುದು, ನೇತ್ರರೋಗ, ಬಸ್ತಿ ಚಿಕಿತ್ಸೆಯಡಿ ಆಮವಾತ, ಸಂಧಿವಾತ, ವಾತರಕ್ತ, ಹೊಟ್ಟೆ ಕರುಳು ಹುಣ್ಣು, ಪೋಲಿಯೋ, ಅರ್ಧಾಂಗ ವಾತ, ಬೆನ್ನುಹುರಿ ಸವೆತಕ್ಕೆ ಚಿಕಿತ್ಸೆ ನೀಡಲಾಗುವುದು. ತಲೆನೋವು, ಸತತ ನೆಗಡಿ, ಭುಜ-ಕತ್ತಿನ ನೋವು, ಮುಖದ ಪಕ್ಷವಾತಕ್ಕೆ ನಸ್ಯಕರ್ಮ ಚಿಕಿತ್ಸೆಯಲ್ಲಿ ಉಪಶಮನ ಮಾಡಲಾಗುತ್ತಿದೆ.

ಇಸುಬು, ಚರ್ಮರೋಗ, ವಾತ ರೋಗಗಳಿಗೆ ರಕ್ತ ಮೋಕ್ಷಣದಡಿ ಪರಿಹಾರ ದೊರಕಿಸಲಾಗುತ್ತಿದೆ. ಅಭ್ಯಂಗ ಚಿಕಿತ್ಸೆಯಡಿ ತ್ವಚೆಯ ಮೃದುತ್ವ, ಸ್ನಿಗ್ಧತೆ, ಶರೀರದ ದೃಢತೆ ಮತ್ತು ಶಕ್ತಿ, ಸುಗಮ ರಕ್ತ ಸಂಚಾರ, ಜರಾ ನಿಗ್ರಹಣೆ, ಆಯಾಸ ನಿವಾರಣೆ, ನಿದ್ರಾದೋಷ ನಿವಾರಣೆ, ತ್ವಚೆಯ ಕಾಂತಿ ಹೆಚ್ಚಿಸುವಂತೆ ಮಾಡಲಾಗುವುದು. ಜಡತ್ವ, ಆಲಸ್ಯ, ಶೀತತ್ವ, ನೋವು, ನಿವಾರಣೆಗೆ ಸ್ವೇದನ ಚಿಕಿತ್ಸೆ ನೀಡಲಾಗುತ್ತಿದೆ.

ಪಂಚಕರ್ಮ ಚಿಕಿತ್ಸೆಗೆ ಪ್ರತ್ಯೇಕ ಯೂನಿಟ್ ಅವಶ್ಯ: ಜಿಲ್ಲಾ ಸರ್ಕಾರಿ ಆಯುರ್ವೇದ ಆಸ್ಪತ್ರೆಯಲ್ಲಿ ಪಂಚಕರ್ಮ ಚಿಕಿತ್ಸೆಗೆ ಪ್ರತ್ಯೇಕವಾದ ಕಟ್ಟಡ ನಿರ್ಮಿಸುವ ಅವಶ್ಯಕತೆ ಇದೆ. ಪಾರ್ಶ್ವವಾಯು ಪೀಡಿತರನ್ನು ಪಂಚಕರ್ಮ ಚಿಕಿತ್ಸೆಗೆ ಮೇಲಂತಸ್ತಿನ ಕಟ್ಟಡಕ್ಕೆ ಕರೆದೊಯ್ಯುವುದಕ್ಕೆ ತುಂಬಾ ತೊಂದರೆಯಾಗುತ್ತಿದೆ. ಅವರನ್ನು ಕರೆದುಕೊಂಡು ಹೋಗುವುದಕ್ಕೆ ಪೂರಕವಾದ ಸೌಲಭ್ಯಗಳೂ ಇಲ್ಲ.

ಇದಕ್ಕಾಗಿ ಆಸ್ಪತ್ರೆ ಕಟ್ಟಡದ ಪಕ್ಕ ಇರುವ ಖಾಲಿ ಜಾಗದಲ್ಲೇ ಪಂಚಕರ್ಮ ಚಿಕಿತ್ಸಾ ಕಟ್ಟಡ ನಿರ್ಮಾಣಕ್ಕೆ ಅಂದಾಜುವೆಚ್ಚ ಸಿದ್ಧಪಡಿಸಲಾಗಿದೆ. 30 ಲಕ್ಷ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಿಸಿದರೆ ರೋಗಿಗಳಿಗೆ ಚಿಕಿತ್ಸೆ ನೀಡಲು ನೆರವಾಗುತ್ತದೆ. ಇದಕ್ಕಾಗಿ ಶಾಸಕರು ಹಾಗೂ ಆಯುಷ್‌ ನಿರ್ದೇಶಕರ ಗಮನ ಸೆಳೆಯಲಾಗಿದೆ. ಆದರೆ, ಹೊಸ ಕಟ್ಟಡಕ್ಕೆ ಅನುದಾನ ನೀಡಲು ಯಾರೂ ಮುಂದಾಗದಿರುವುದರಿಂದ ಇರುವ ವ್ಯವಸ್ಥೆಯಲ್ಲೇ ಚಿಕಿತ್ಸೆ ನೀಡುವುದು ಆಯುಷ್‌ ಅಧಿಕಾರಿಗಳಿಗೂ ಅನಿವಾರ್ಯವಾಗಿದೆ.

ಕಟ್ಟಡಗಳೂ ಸುಸ್ಥಿತಿಯಲ್ಲಿಲ್ಲ: ಗ್ರಾಮಾಂತರ ಪ್ರದೇಶದಲ್ಲಿರುವ ಆಯುಷ್‌ ಆಸ್ಪತ್ರೆ ಕಟ್ಟಡಗಳೂ ದುರಸ್ತಿಯಾಗಬೇಕಿದೆ. ಮದ್ದೂರು ತಾಲೂಕು ಹಳೇಹಳ್ಳಿಯಲ್ಲಿರುವ ಆಯುಷ್‌ ಆಸ್ಪತ್ರೆ ಕಟ್ಟಡವನ್ನು ಹಳೇ ಶಾಲಾ ಕಟ್ಟಡದಲ್ಲಿ ನಡೆಸಲಾಗುತ್ತಿದೆ. ಅದಕ್ಕೆ 40 ಲಕ್ಷ ರೂ. ವೆಚ್ಚದಲ್ಲಿ ಹೊಸ ಕಟ್ಟಡ ನಿರ್ಮಿಸುವ ಅಗತ್ಯವಿದ್ದರೂ ಅದಕ್ಕೆ ಬೇಕಾದ ಅನುದಾನ ಯಾವ ಮೂಲದಿಂದಲೂ ಸಿಗುತ್ತಿಲ್ಲ. ರಾಜ್ಯಸರ್ಕಾರವೂ ಆಯುಷ್‌ ಆಸ್ಪತ್ರೆಗಳ ಬಲವರ್ಧನೆಗೆ ಪರ್ಯಾಯ ಯೋಜನೆಗಳನ್ನು ರೂಪಿಸದಿರುವುದು ಪ್ರಗತಿಗೆ ಹಿನ್ನಡೆ ಉಂಟುಮಾಡಿದೆ.

ಕೆ.ಆರ್‌.ಪೇಟೆ ತಾಲೂಕು ಬಲ್ಲೇನಹಳ್ಳಿ ಹಾಗೂ ಮದ್ದೂರು ತಾಲೂಕಿನ ಹಳೇಹಳ್ಳಿ ಗ್ರಾಮದಲ್ಲಿರುವ ಆಯುಷ್‌ ಆಸ್ಪತ್ರೆ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿದ್ದು, ಇವೆರಡಕ್ಕೆ ತುರ್ತಾಗಿ ಹೊಸ ಕಟ್ಟಡ ನಿರ್ಮಿಸುವ ಅವಶ್ಯಕತೆ ಇದೆ.

24 ಡಿ-ಗ್ರೂಪ್‌ ನೌಕರ ಹುದ್ದೆ ಖಾಲಿ: ಜಿಲ್ಲೆಯಲ್ಲಿರುವ ಒಟ್ಟು 34 ಡಿ-ಗ್ರೂಪ್‌ ಹುದ್ದೆಗಳ ಪೈಕಿ 24 ಖಾಲಿ ಉಳಿದಿವೆ. ಆಯುರ್ವೇದ ಆಸ್ಪತ್ರೆಯಲ್ಲಿ ಡಿ-ಗ್ರೂಪ್‌ ನೌಕರರ ಅವಶ್ಯಕತೆ ಹೆಚ್ಚು ಅಗತ್ಯವಾಗಿದೆ. ಪಂಚಕರ್ಮ ಚಿಕಿತ್ಸೆ, ಸಂಧಿವಾತ, ಮಂಡಿನೋವು, ಕುತ್ತಿಗೆ ನೋವು, ಕೀಲು ನೋವು, ತೈಲ ಮಸಾಜ್‌ಗಳು ಸೇರಿದಂತೆ ಹಲವು ಚಿಕಿತ್ಸೆಗಳಿಗೆ ಡಿ-ಗ್ರೂಪ್‌ ನೌಕರರ ಅವಶ್ಯಕತೆ ತುಂಬಾ ಇದೆ. ಹುದ್ದೆಗಳು ಭರ್ತಿಯಾದ ಹಿನ್ನೆಲೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ 18 ಮಂದಿ ನೌಕರರನ್ನು ನೇಮಕ ಮಾಡಿಕೊಳ್ಳಲಾಗಿದೆ.

ನಾಲ್ಕು ತಿಂಗಳಿಂದ ಸಂಬಳವಿಲ್ಲ: ಹೊರಗುತ್ತಿಗೆ ಆಧಾರದ ಮೇಲೆ ನೇಮಕಗೊಂಡಿರುವ 18 ಮಂದಿ ನೌಕರರಿಗೆ ನಾಲ್ಕು ತಿಂಗಳಿಂದ ಸಂಬಳ ಕೊಟ್ಟಿಲ್ಲ. ವೇತನ ಬಾಕಿ 34 ಲಕ್ಷ ರೂ. ಇದೆ. ವೇತನ ವಿಳಂಬದಿಂದ ಗುತ್ತಿಗೆ ನೌಕರರು ಕೆಲಸಕ್ಕೆ ಸರಿಯಾಗಿ ಹಾಜರಾಗುತ್ತಿಲ್ಲ. ಇದರಿಂದ ರೋಗಿಗಳಿಗೆ ಚಿಕಿತ್ಸೆ ನೀಡಲು ತೊಂದರೆಯಾಗುತ್ತಿದೆ ಎನ್ನುವುದು ಜಿಲ್ಲಾ ಸರ್ಕಾರಿ ಆಯುರ್ವೇದ ಆಸ್ಪತ್ರೆ ಆರೋಗ್ಯಾಧಿಕಾರಿಗಳು ಹೇಳುವ ಮಾತಾಗಿದೆ. ವೈದ್ಯರು, ನರ್ಸ್‌ ಹಾಗೂ ಡಿ-ಗ್ರೂಪ್‌ ನೌಕರರ ಕೊರತೆ ಇರುವ ಬಗ್ಗೆ ಹಲವಾರು ಬಾರಿ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದ್ದರೂ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಆಸ್ಪತ್ರೆಗೆ ಅಗತ್ಯವಿರುವಷ್ಟು ಸಿಬ್ಬಂದಿ ಹಾಗೂ ವೈದ್ಯರನ್ನು ನೇಮಕ ಮಾಡು ವುದಕ್ಕೆ ಆಯುಷ್‌ ಇಲಾಖೆ ಆಸಕ್ತಿಯನ್ನೇ ವಹಿಸದಿ ರುವುದು ಆಸ್ಪತ್ರೆ ಜೀವಕಳೆ ಪಡೆದುಕೊಳ್ಳದಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next