Advertisement

ಸಚಿವ ಸ್ಥಾನ ಬೇಕೇ ಬೇಕೆಂಬ ಆಸೆ ಇಲ್ಲ

12:09 PM May 22, 2018 | Team Udayavani |

ಬೆಂಗಳೂರು: ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಶಾಸಕ ಜಿ.ಟಿ.ದೇವೇಗೌಡ ಸೋಮವಾರ ಮಾಜಿ ಪ್ರಧಾನಿ ಹಾಗೂ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

Advertisement

ಜೆಡಿಎಸ್‌ನ ಇತರೆ ಶಾಸಕರೊಂದಿಗೆ ರೆಸಾರ್ಟ್‌ನಲ್ಲಿ ತಂಗಿರುವ ಜಿ.ಟಿ.ದೇವೇಗೌಡ ಅವರು ಬೆಳಗ್ಗೆಯೇ ಪದ್ಮನಾಭನಗರದಲ್ಲಿರುವ ದೇವೇಗೌಡರ ನಿವಾಸಕ್ಕೆ ತೆರಳಿ ಅರ್ಧ ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸೋಲಿಸಿರುವುದರಿಂದ ಜಿ.ಟಿ.ದೇವೇಗೌಡ ಅವರು ಸಹಜವಾಗಿಯೇ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದು, ಈ ಹಿನ್ನೆಲೆಯಲ್ಲಿ ಎಚ್‌.ಡಿ.ದೇವೇಗೌಡರ ಭೇಟಿ ಮಹತ್ವ ಪಡೆದಿದೆ. ದೇವೇಗೌಡರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಿ.ಟಿ.ದೇವೇಗೌಡ, ಸಂಪುಟ ರಚನೆ ಬಗ್ಗೆ ಯಾವುದೇ ತೀರ್ಮಾನವಾಗಿಲ್ಲ.

ನನಗೆ ಸಚಿವ ಸ್ಥಾನ ಬೇಕೇ ಬೇಕು ಎಂಬ ಆಸೆ ಇಲ್ಲ. ಆದರೆ, ಕ್ಷೇತ್ರದ ಜನ ನಾನು ಸಚಿವನಾಗಬೇಕು ಎಂದು ಬಯಸಿದ್ದಾರೆ. ಸಚಿವ ಸ್ಥಾನ ಕೊಟ್ಟರೆ ಪಕ್ಷಕ್ಕೆ ನಿಷ್ಠೆಯಿಂದ ಕೆಲಸ ಮಾಡುತ್ತೇನೆ. ಸಚಿವ ಸಂಪುಟದ ಕುರಿತು ಎಚ್‌.ಡಿ.ಕುಮಾರಸ್ವಾಮಿ  ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮಾತುಕತೆ ನಡೆಸಲಾಗುವುದು ಎಂದು ಹೇಳಿದರು.

ರೋಷನ್‌ಬೇಗ್‌ ಭೇಟಿ: ಈ ಮಧ್ಯೆ, ಮಾಜಿ ಸಚಿವ ಕಾಂಗ್ರೆಸ್‌ನ ರೋಷನ್‌ಬೇಗ್‌ ಸಹ ಸೋಮವಾರ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡನ್ನು ಪದ್ಮನಾಭನಗರ ನಿವಾಸದಲ್ಲಿ ಭೇಟಿ ಮಾಡಿ ಚರ್ಚಿಸಿದರು.  ಈ ಸಂದರ್ಭದಲ್ಲಿ ಕೆಲವು ಮುಸ್ಲಿಂ ಮುಖಂಡರು ಉಪಸ್ಥಿತರಿದ್ದರು.

Advertisement

ಆರ್‌.ಆರ್‌.ನಗರ ಅಭ್ಯರ್ಥಿ ಭೇಟಿ: ರಾಜರಾಜೇಶ್ವರಿನಗರ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಈ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡುವಂತೆ ಕಾಂಗ್ರೆಸ್‌ ಮೇಲೆ ಒತ್ತಡ ಹೇರಲು ಪಕ್ಷದ ಅಭ್ಯರ್ಥಿ ರಾಮಚಂದ್ರ ಮುಂದಾಗಿದ್ದು, ಈ ಕುರಿತು ಸೋಮವಾರ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಪದ್ಮನಾಭನಗರ ನಿವಾಸದಲ್ಲಿ ದೇವೇಗೌಡರ ಜತೆ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ರಾಮಚಂದ್ರ, ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡುವ ಕುರಿತು ಚರ್ಚಿಸಲಾಗಿದ್ದು, ಬೆಂಬಲ ನೀಡುವಂತೆ ಕಾಂಗ್ರೆಸ್‌ ಮನವೊಲಿಸುವಂತೆ ದೇವೇಗೌಡರಲ್ಲಿ ಮನವಿ ಮಾಡಿದ್ದೇನೆ. ಇದಕ್ಕೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.

ಜಯನಗರ ಕ್ಷೇತ್ರವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಟ್ಟು, ರಾಜರಾಜೇಶ್ವರಿ ನಗರವನ್ನು ಜೆಡಿಎಸ್‌ ತೆಗೆದುಕೊಳ್ಳುವ ಬಗ್ಗೆ ಮಾತುಕತೆ ನಡೆಯುತ್ತಿದೆ. ಕ್ಷೇತ್ರದಲ್ಲಿ ನನ್ನ ಪರ ಪ್ರಚಾರ ಮಾಡಲು ದೇವೇಗೌಡರು ಬರಲಿದ್ದಾರೆ ಎಂದೂ ಅವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next