Advertisement

ಬೇಸಿಗೆಯಲ್ಲೂ ಮಡಿಕೆಗೆ ಬೇಡಿಕೆಯೇ ಇಲ್ಲ

07:26 AM Mar 15, 2019 | |

ಮಾಗಡಿ: ದಿನೇ ದಿನೆ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದೆ. ಬೇಸಿಗೆಯಲ್ಲಿ ಬಾಯಾರಿಕೆ ನಿವಾರಿಸಿಕೊಳ್ಳಲು ಫ್ರಿಡ್ಜ್ ನೀರು ಬಳಸುವುದರಿಂದ ಮಣ್ಣಿನ ಮಡಿಕೆಗೆ ಬೇಡಿಕೆ ಇಲ್ಲದಂತಾಗಿದೆ. ಮಣ್ಣಿನಿಂದ ಮಾಡಿದ ಮಡಿಕೆ ನೀರು ಕುಡಿಯುವುದರಿಂದ ಆರೋಗ್ಯವಾಗಿ ಇರಬಹುದು ಎಂಬ ನಂಬಿಕೆ ಇದ್ದರೂ ಮಡಿಕೆ ಮಾರಾಟ ಕಡಿಮೆಯಾಗಿದೆ.

Advertisement

ಮಡಿಕೆ ನೀರಿನಿಂದ ಉತ್ತಮ ಆರೋಗ್ಯ: ಬಹುತೇಕ ಹಳ್ಳಿಗಳಲ್ಲಿ ಬಡವರ ಫ್ರಿಡ್ಜ್ನಂತಿರುವ ಮಡಿಕೆಯ ನೀರನ್ನು ಈಗಲೂ ಬಳಸುತ್ತಿದ್ದಾರೆ. ಇದರಿಂದ ವಿದ್ಯುತ್‌ ಉಳಿತಾಯ, ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುತ್ತಿದ್ದಾರೆ. ಆದರೂ ಜನರು ಎಷ್ಟೇ ಬೆಲೆಯಾಗಲಿ ಮನೆಯೊಂದು ಫ್ರಿಡ್ಜ್ ಇರಲಿ ಎಂದು ಫ್ರಿಡ್ಜ್ ಮೊರೆ ಹೋಗುತ್ತಿರುವುದು ವಿಪರ್ಯಾಸ.

ಅದರಲ್ಲೂ ನಗರ ಪ್ರದೇಶದಲ್ಲಂತೂ ಬದಲಾದ ಆಧುನಿಕತೆಯ ಸನ್ನಿವೇಶದಲ್ಲಿ ಮಣ್ಣಿನ ಮಡಿಕೆ ನೀರಿನ ಸೇವನೆ ಮಾಡುವವರು ಕಡಿಮೆ ಇದ್ದಾರೆ. ಜೊತೆಗೆ ನಗರ ಪ್ರದೇಶದಲ್ಲಿ ಮಡಿಕೆ ಸಿಗುವುದು ಕಡಿಮೆಯಾಗಿದೆ. ಸಿಕ್ಕರೂ ಸಹ ಮಡಿಕೆ ನೀರಿನ ಸೇವನೆ ಕುರಿತು ಅರಿವಿಲ್ಲದೆ ಇರುವುದು ದೌರ್ಭಾಗ್ಯ. ಇದರಿಂದ ಮಡಿಕೆ ನೀರು ಕುಡಿಯುವವರೇ ಇಲ್ಲವಾಗಿದೆ.

ಒಂದು ಕಾಲದಲ್ಲಿ ಮಡಿಕೆಗೆ ಬೇಡಿಕೆ ಇತ್ತು: ಮಣ್ಣಿನಿಂದ ಮಾಡಿದ ಮಡಿಕೆ ಬಹಳ ಶ್ರೇಷ್ಠ ಎಂದು ನಂಬಿದ್ದ ಮನುಷ್ಯ ಹುಟ್ಟಿನಿಂದ ಸಾವಿನವರೆವಿಗೂ ಮಡಿಕೆ ಬೇಕು ಎಂಬ ಕಾಲವೊಂದಿತ್ತು. ಹುಟ್ಟಿದ ಮಗುವಿಗೆ ಮಣ್ಣಿನ ಒಳ್ಳೆಯಲ್ಲೇ ಹಾಲು ಕುಡಿಸುತ್ತಿದ್ದರು. ಮನುಷ್ಯ ಸತ್ತಾಗ ಮಡಿಕೆ ಬೇಕಿತ್ತು. ಮನೆಯಲ್ಲಿ ಊಟಕ್ಕೆ ರಾಗಿಮುದ್ದೆ, ಅನ್ನ, ಸಾಂಬರ್‌ ಮಾಡಲು ಮಣ್ಣಿನ ಮಡಿಕೆಯನ್ನೇ ಬಳಕೆ ಮಾಡುತ್ತಿದ್ದರು. ಅದರಲ್ಲಿ ಮಾಡಿದ ಊಟ ಬಹಳ ರುಚಿಕರವಾಗಿತ್ತು. ಆಗ ಮಡಿಕೆಗೆ ಬಹಳ ಬೇಡಿಕೆ ಇತ್ತು. ಬೇಡಿಕೆಗೆ ಅನುಗುಣವಾಗಿ ಕುಂಬಾರರು ಮಡಿಕೆ ತಯಾರಿಸಿ ಮಾರಾಟ ಮಾಡುತ್ತಿದ್ದರು. 

ಕುಂಬಾರ ಕುಟುಂಬವೇ ಕಡಿಮೆ: ಬದಲಾದ ಕಾಲ ಘಟ್ಟದಲ್ಲಿ ವಿವಿಧ ರೀತಿಯ ಪಾತ್ರೆಗಳು ಬಂದ ನಂತರ ಮಡಿಕೆಗೆ ಬೇಡಿಕೆ ಕಡಿಮೆಯಾಯಿತು. ಇದರಿಂದಾಗಿ ಮಣ್ಣಿನ ಮಡಿಕೆ ಮಾಡುವ ಕುಂಬಾರ ಕುಟುಂಬವೂ ಸಹ ಹಳ್ಳಿಗಳಲ್ಲಿ ಕಡಿಮೆಯಾದವು. ಬಹುತೇಕ ಕುಟುಂಬಗಳು ನಗರ ಪ್ರದೇಶಗಳಲ್ಲಿ ಬೇರೆ ಉದ್ಯೋಗ ಹುಡುಕಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ. ಇತ್ತೀಚೆಗೆ ಕುಕ್ಕರ್‌, ಪ್ಲಾಸ್ಟಿಕ್‌ ಮಯದಿಂದಾಗಿ ಮಣ್ಣಿನಿಂದ ತಯಾರಿಸುವ ಮಡಿಕೆ, ಕುಡಿಕೆಗಳೇ ಇಲ್ಲವಾಗಿದೆ. ಪಿಂಗಾಣಿಗೆ ಆಧುನಿಕ ಸ್ಪರ್ಶ ಹೆಚ್ಚಾಗಿದೆ. ಜನರು ಪಿಂಗಾಣಿಯನ್ನು ಮನೆಯ, ತೋಟದ ಅಲಂಕಾರಕ್ಕೆ ಬಳಸುತ್ತಿದ್ದಾರೆ.

Advertisement

ಜೀವನ ನಿರ್ವಹಣೆಗಾಗಿ ಕಡಿಮೆ ಬೆಲೆಗೆ ಮಡಿಕೆ ಮಾರಾಟ: ಅನೇಕ ವರ್ಷಗಳಿಂದ ಮಣ್ಣಿನ ಮಡಿಕೆ ಮಾರಾಟ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದೇವೆ. ಆದರೆ, ಬದಲಾದ ಕಾಲದಿಂದಾಗಿ ಮಡಿಕೆಗೆ ಬೇಡಿಕೆ ಕಡಿಮೆಯಾಗಿ ಬದುಕು ಕಷ್ಟಕರವಾಗಿದೆ. ಇದರಿಂದಾಗಿ ಮಡಿಕೆ ತಯಾರಿಕಾ ಕುಟುಂಬವೇ ಕಡಿಮೆಯಾಗುತ್ತಿದೆ.

ಆದರೂ ಇದೇ ಕುಲಕಸುಬಾಗಿರುವುದರಿಂದ ವ್ಯವಹಾರ ಮಾಡಬೇಕೆಂದು ದೂರದ ಅರಸೀಕೆರೆ ಅಥವಾ ತುರವೇಕೆರೆಯಿಂದ ಮಡಿಕೆ, ಕುಡಿಕೆಗಳನ್ನು ಹೇಳಿದಷ್ಟು ಬೆಲೆಗೆ ಖರೀದಿಸಿ, ಲಾರಿಯಲ್ಲಿ ತರುತ್ತೇವೆ. ತರುವಾಗ, ಇಳಿಸುವಾಗ ಎಷ್ಟೋ ಮಡಿಕೆಗಳು ಹೊಡೆದು ಹೋಗುತ್ತವೆ. ಅಳಿದುಳಿದ ಮಡಿಕೆಗಳನ್ನು ಮಾಗಡಿಯ ಮಾರುಕಟ್ಟೆಯಲ್ಲಿಟ್ಟು ಮಾರಾಟ ಮಾಡುತ್ತೇವೆ. ದಿನಕ್ಕೆ 1-2 ಸಾವಿರ ರೂ. ನಷ್ಟು ವ್ಯಾಪಾರವಾಗುತ್ತದೆ.

ಒಂದು ಮಡಿಕೆಗೆ 100 ರೂ. ಇರುತ್ತದೆ. ಜನ 70ರಿಂದ 80 ರೂ.ಗೆ ಖರೀದಿಸುತ್ತಾರೆ. ನಷ್ಟವಾಗುತ್ತದೆ. ಆದರೂ ವ್ಯಾಪಾರವಾಗಲೆಂದು ಕಡಿಮೆ ಬೆಲೆಗೆ ಕೊಡುತ್ತಿದ್ದೇವೆ. ಬಿಸಿಲಿನ ಝಳಕ್ಕೆ ಮಾರಾಟವಾಗಬಹುದು ಎಂಬ ನಂಬಿಕೆಯಿದೆ. ದಿನಕ್ಕೆ 3-4 ಮಂದಿ ಖರೀದಿಸುತ್ತಾರೆ. ಲಾಭ ಕಡಿಮೆ, ಜೀವನ ನಿರ್ವಹಣೆಯೂ ಕಷ್ಟವಾಗಿದೆ. ಆದರೂ, ಕುಲಕಸಬು ಬಿಟ್ಟಿಲ್ಲ. ಇದ್ದುದ್ದರಲ್ಲೇ ಜೀವನ ನಡೆಸುತ್ತಿದ್ದೇವೆ. ಸರ್ಕಾರದಿಂದಲೂ ತಮಗೆ ಯಾವುದೇ ಪ್ರೋತ್ಸಾಹವಿಲ್ಲ ಎಂದು ಮಡಿಕೆ ವ್ಯಾಪಾರಿ ಮುನಿಯಮ್ಮ ಮಾಗಡಿ ತಿಳಿಸಿದ್ದಾರೆ.

ಗುಡಿ ಕೈಗಾರಿಕೆಗೆ ಸರ್ಕಾರ ಉತ್ತೇಜನ ನೀಡಬೇಕು. ಉದ್ಯಮಿಗಳು ಕಾರ್ಖಾನೆಗಳಲ್ಲಿ ತಯಾರಿಸುವ ವಸ್ತುಗಳಿಗೆ ಹೇಗೆ ಬೆಲೆ ನಿಗದಿ ಮಾಡುತ್ತಾರೋ ಅದೇ ರೀತಿ ಕರಕುಶಲ ಗುಡಿ ಕೈಗಾರಿಕಾ ವಸ್ತುಗಳಿಗೂ ಬೆಲೆ ನಿಗದಿ ಮಾಡಲು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು.
-ಹರೀಶ್‌ಕುಮಾರ್‌, ಮುಪ್ಪೇನಹಳ್ಳಿ ನಿವಾಸಿ

ಕುಲಕಸುಬು ಉಳಿದರೆ ಮಾತ್ರ ಹಳ್ಳಿಗಳು ಜೀವಂತವಾಗಿ ಉಳಿಯುತ್ತದೆ. ಮಡಿಕೆ, ಕುಡಿಕೆಯಿಂದ ತಯಾರಾದ ಆಹಾರ ಪದಾರ್ಥ ಸೇವನೆಯಿಂದ ಆರೋಗ್ಯ ವೃದ್ಧಿ ಕುರಿತು ಜನ ಜಾಗೃತರಾಗಬೇಕು.
-ನಟರಾಜ್‌, ಮಾಗಡಿ ನಿವಾಸಿ

ಮಣ್ಣಿನ ಮಡಿಕೆಯಿಂದ ಮಾಡಿದ ರಾಗಿಮುದ್ದೆ ವಾಸನೆ ಊರಿಗೆ ಹರಡುತ್ತಿತ್ತು. ಮಡಿಕೆ, ಕುಡಿಕೆ, ಅಲಂಕಾರದ ವಸ್ತುಗಳನ್ನು ತಯಾರಿಸುವ ಕುಲಕಸುಬು ಮಾಡುವ ಕುಂಬಾರಿಕೆ ಸಂಸ್ಕೃತಿ ಉಳಿಯಬೇಕಾದರೆ ಮಣ್ಣಿನ ಮಡಿಕೆ ತಯಾರಿಸುವವರಿಗೆ ಸರ್ಕಾರ ಪ್ರೋತ್ಸಾಹ ನೀಡಬೇಕು. ಮಡಿಕೆ ತಣ್ಣನೆಯ ನೀರು ದೇಹಕ್ಕೆ ತಂಪು ಕೊಡುತ್ತದೆ. ಆರೋಗ್ಯಕ್ಕೂ ಒಳ್ಳೆಯದು, ಮಡಿಕೆ ನೀರು ಕುಡಿಯುವುದರಿಂದ ದೇಹಕ್ಕೆ ಯಾವುದೇ ಅಡ್ಡ ಪರಿಣಾಮವಿಲ್ಲ. ಮಡಿಕೆ ನೀರು ಅತಿಶ್ರೇಷ್ಠ.
-ರಾಮಕೃಷ್ಣಯ್ಯ ಕಲ್ಲೂರು, ರೈತ 

* ತಿರುಮಲೆ ಶ್ರೀನಿವಾಸ್‌

Advertisement

Udayavani is now on Telegram. Click here to join our channel and stay updated with the latest news.

Next