ಹುಬ್ಬಳ್ಳಿ: ಹೋಟೆಲ್ ಉದ್ಯಮಿಗಳಿಗೆ ಹೋಟೆಲ್ ಎಂದರೆ ತಾಯಿ ಇದ್ದ ಹಾಗೆ. ತಾಯಿ ಮಗುವಿಗೆ ಯಾವ ರೀತಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಾಳ್ಳೋ ಅದೇ ರೀತಿ ನಾವು ಪ್ರಾಮಾಣಿಕವಾಗಿ ನಡೆದುಕೊಂಡರೆ ಜೀವನದಲ್ಲಿ ಸೋಲೆಂಬುದಿಲ್ಲವೆಂದು ಪಂಜುರ್ಲಿ ಗ್ರುಪ್ಸ್ ಮಾಲೀಕ ರಾಜೇಂದ್ರ ಶೆಟ್ಟಿ ಹೇಳಿದರು.
ಕೋರ್ಟ್ ವೃತ್ತ ಬಳಿಯ ಖಾಸಗಿ ಹೋಟೆಲ್ ನಲ್ಲಿ ಕರ್ನಾಟಕ ರಾಜ್ಯ ಎಸ್‌ಎಸ್‌ಕೆ ಸಾವಜಿ ಹೋಟೆಲ್ ಮಾಲೀಕರ ಸಂಘ (ಎಸ್‌ಎಚ್ ಎಂಎಸ್)ದಿಂದ ಮಂಗಳವಾರ ಹಮ್ಮಿಕೊಂಡಿದ್ದ ಸ್ನೇಹ ಸಮ್ಮೇಳನ ಹಾಗೂ ಸಾಲ ಮೇಳದಲ್ಲಿ ಅವರು ಮಾತನಾಡಿದರು.
ಪ್ರಾಮಾಣಿಕವಾಗಿ ನಡೆದುಕೊಂಡು ಹೋಟೆಲ್ ಉದ್ಯಮದಲ್ಲೇ ಬದುಕು ಕಟ್ಟಿಕೊಳ್ಳಬೇಕು. ಅದನ್ನೇ ಜೀವನವಾಗಿಸಿಕೊಳ್ಳಬೇಕು. ಅಹಂಕಾರ, ದುರಹಂಕಾರ ತೋರದೆ ಗ್ರಾಹಕರನ್ನೇ ದೇವರನ್ನಾಗಿ ಕಂಡು ಉತ್ತಮ ಸೇವೆ ಒದಗಿಸಬೇಕು. ನಮ್ಮ ಸ್ಪರ್ಧೆ ದುಡಿಮೆಯಲ್ಲಿರಬೇಕು. ನಮ್ಮೆಲ್ಲರ ಒಗ್ಗಟ್ಟಿನಲ್ಲೇ ಸಂಘವಿದ್ದು, ಅದಲ್ಲಿರುವಷ್ಟು ಶಕ್ತಿ ಬೇರೆಯದರಲ್ಲಿಲ್ಲ. ಅದಕ್ಕೆ ನಿಮ್ಮೆಲ್ಲರ ಬೆಂಬಲ ಬೇಕು. ಸಂಘ ಬಲಾಡ್ಯವಾದರೆ ಸಮಾಜ ಉನ್ನತಿಯಾಗುತ್ತದೆ ಎಂದರು.
ವಿಆರ್‌ಎಲ್ ಓಂಕಾರ ಮಾಲೀಕ ರವೀಂದ್ರ ಸಂಕೇಶ್ವರ ಮಾತನಾಡಿ, ಸಂಘ ಕಟ್ಟುವುದು ಹಾಗೂ ಅದನ್ನು ಮುನ್ನಡೆಸಿಕೊಂಡು ಹೋಗುವುದು ತುಂಬಾ ಕಷ್ಟದ ಕೆಲಸ. ಏಕೆಂದರೆ ಸಂಘದಲ್ಲಿನ ನೂರಾರು ಸದಸ್ಯರ ಆಲೋಚನೆಗಳು ಬೇರೆ ಬೇರೆಯಾಗಿರುತ್ತವೆ. ಅವರನ್ನೆಲ್ಲ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕಾಗುತ್ತದೆ. ಸಾವಜಿ ಹೋಟೆಲ್ ಮಾಲೀಕರ ಸಂಘ ಆ ನಿಟ್ಟಿನಲ್ಲಿ ಮುನ್ನಡೆಯುತ್ತಿರುವುದು ಶ್ಲಾಘನೀಯ ಎಂದರು.
ಸಂಘದ ರಾಜ್ಯಾಧ್ಯಕ್ಷ ರಾಮಚಂದ್ರಸಾ ಹಬೀಬ ಮಾತನಾಡಿ, ಕಳೆದ 10 ವರ್ಷಗಳಿಂದ ಹೋಟೆಲ್ ಮಾಲೀಕರ ಸಂಘಕ್ಕಾಗಿ ಶ್ರಮಿಸಲಾಗುತ್ತಿದ್ದು, ಈಗ ರಾಜ್ಯದ ವಿವಿಧೆಡೆ 10 ಶಾಖೆಗಳನ್ನು ಆರಂಭಿಸಲಾಗಿದೆ. ಸಂಘದ ಸದಸ್ಯರಿಗೆ ಒಂದು ವರ್ಷದ ಅವಧಿಗೆ 50 ಸಾವಿರ ರೂ.ದಿಂದ 2ಲಕ್ಷ ರೂ.ವರೆಗೂ ಸಾಲ ಒದಗಿಸುವ ನಿಟ್ಟಿನಲ್ಲಿ ನಗರದ ಸಿಬಿಟಿ ಬಳಿಯ ಕೆವಿಜಿ ಬ್ಯಾಂಕ್‌ನವರೊಂದಿಗೆ ಚರ್ಚಿಸಲಾಗಿದೆ. ಅದಕ್ಕೆ ಅವರು ಒಪ್ಪಿಕೊಂಡಿದ್ದಾರೆ. ಸದಸ್ಯರು ಪ್ರತಿದಿನ 100ರಿಂದ 500ರೂ. ವರೆಗೆ ಪಿಗ್ಮಿ ರೂಪದಲ್ಲಿ ಹಣ ಪಾವತಿಸಿ ಹಾಗೂ ಕೆಲ ದಾಖಲಾತಿಗಳನ್ನು ಒದಗಿಸಿ ಸಾಲ ಪಡೆಯಬಹುದಾಗಿದೆ ಎಂದರು.
ಸಮ್ಮೇಳನದಲ್ಲಿ ಶ್ರೀನಿವಾಸ ಬದ್ದಿ, ಜಗನ್ನಾಥಸಾ ಮಿಸ್ಕಿನ, ಏಕನಾಥಸಾ ಭಾಂಡಗೆ, ರಘುನಾಥಸಾ ದಲಭಂಜನ, ಯಮುನಾಸಾ ಬಾಕಳೆ, ನಾರಾಯಣಸಾ ಪವಾರ, ಯಲ್ಲಪ್ಪ ಮೆಹರವಾಡೆ, ಶ್ರೀಕಾಂತ ನಾಕೋಡ, ನಾಗೇಂದ್ರಸಾ ಇರಕಲ್, ಗೋವಿಂದಸಾ ಮಿಸ್ಕಿನ, ಅರುಣ ಬಾಕಳೆ ಹಾಗೂ ಗದಗ, ಹಾವೇರಿ, ಲಕ್ಷ್ಮೇಶ್ವರ ಸೇರಿದಂತೆ ವಿವಿಧ ಪ್ರದೇಶಗಳ ಹೋಟೆಲ್‌ಗಳ ಮಾಲೀಕರು, ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಗಣೇಶ ಪವಾರ ಸ್ವಾಗತಿಸಿದರು. ಗಣಪತಿ ಮಿಸ್ಕಿನ ನಿರೂಪಿಸಿದರು.