Advertisement

ಚರ್ಚೆಗೇನೂ ಬರವಿಲ್ಲ ; ನಿರ್ಧಾರ ಹೇಳಲೊಲ್ಲ !

03:48 AM Apr 13, 2019 | Team Udayavani |

ಉಡುಪಿ: ಮರಳು ಕೊರತೆಯಿಂದ ಸೃಷ್ಟಿಯಾದ ಸಮಸ್ಯೆಯ ತೀವ್ರತೆಯ ಮಧ್ಯೆಯೂ ಮತದಾರ ತನ್ನ ಹಕ್ಕು ಚಲಾಯಿಸಲು ಸಿದ್ಧನಾಗು ತ್ತಿದ್ದಾನೆ. ಪ್ರಚಾರ ಅಬ್ಬರದ ಸದ್ದು ಅಡಗಿರುವಾಗ ಮತದಾರನೂ ಮೆಲ್ಲಗೆ ಮೌನದ ತೆರೆ ಎಳೆದಿದ್ದಾನೆ. ಒಂದು ವಿಶೇಷವೆಂದರೆ, ರಾಜಕೀಯ ಮುಖಂಡರು ಸಮಾವೇಶ, ಸಭೆಗಳಿಗಿಂತ ತಂಡೋಪತಂಡವಾಗಿ ಮತದಾರರ ಮನೆ ಅಂಗಳಕ್ಕೆ ಇಳಿದಿದ್ದಾರೆ. ಕೆಲವೆಡೆ ಪ್ರಶ್ನೆಗಳ ಕಾವು ಎದುರಿಸಬೇಕಾಗಿದೆ, ಇನ್ನು ಕೆಲವೆಡೆ ಸ್ವಾಗತವೂ ಸಿಗುತ್ತಿದೆ.

Advertisement

ಮುಖಂಡರು, ಕಾರ್ಯಕರ್ತರನ್ನು ಹೊರತು ಪಡಿಸಿದರೆ ಜನಸಾಮಾನ್ಯರು ತಮ್ಮ ದೈನಂದಿನ ಚಟುವಟಿಕೆಯಲ್ಲಿ ತಲ್ಲೀನರಾಗಿದ್ದಾರೆ. ಹಾಗಂತ ಬಿಡುವಿನ ವೇಳೆ ಪೇಟೆ, ಬಸ್‌ ನಿಲ್ದಾಣ, ಊರಿನ ಕಟ್ಟೆಗಳಲ್ಲಿ ಚುನಾವಣೆ ಚರ್ಚೆ ಜೋರಾಗಿದೆ.

ಮೋದಿ, ರಾಹುಲ್‌, ಕುಮಾರಸ್ವಾಮಿ, ನಿಖೀಲ್‌, ಶೋಭಾ, ಪ್ರಮೋದ್‌, ರಘುಪತಿ ಭಟ್‌, ಮರಳು, ನೀರು, ಇತರ ಪಕ್ಕಾ ಸ್ಥಳೀಯ ಪಾಲಿಟಿಕ್ಸ್‌ಗೆ ಸಂಬಂಧಿಸಿದ ವಿಷಯಗಳೇ ಹೆಚ್ಚು ಚರ್ಚೆ. ಪಕ್ಷಗಳ ಮುಖಂಡರು, ಕಾರ್ಯಕರ್ತರು ಮತ ಕೇಳಲು ಮನೆಗಳಿಗೆ ತೆರಳುವಾಗ ಸ್ಥಳೀಯ ಸಮಸ್ಯೆಗಳು ಚರ್ಚೆಗೆ ಬಂದರೂ ಒಟ್ಟಾರೆಯಾಗಿ ಚರ್ಚೆಯ ಕೇಂದ್ರಬಿಂದುವಾಗುತ್ತಿರುವುದು ರಾಷ್ಟ್ರೀಯ ವಿಷಯಗಳೇ. ಪಕ್ಷಗಳ ಬೇಕಾಬಿಟ್ಟಿ ಸಮಾವೇಶ, ರ್ಯಾಲಿಗಳಿಗೆ ಬ್ರೇಕ್‌ ಬಿದ್ದಿರುವುದರಿಂದ ಕಾರ್ಯಕರ್ತರು, ಮುಖಂಡರಿಗೂ ಜನರನ್ನು ಕಲೆ ಹಾಕುವ ಕಸರತ್ತು ಕಾಣಬರುತ್ತಿಲ್ಲ.

“ಬಹುಪಾಲು ತೀರ್ಮಾನ’
ಯಾರು ಎಷ್ಟೇ ಭಾಷಣ ಮಾಡಲಿ, ಮನೆಗೆ ಬಂದು ಮತ ಕೇಳಲಿ; ಶೇ.60ರಷ್ಟು ಮಂದಿ ಈಗಾಗಲೇ ತೀರ್ಮಾನಿಸಿದ್ದಾರೆ ಎನ್ನುತ್ತಾರೆ ಮನೋಳಿಗುಜ್ಜಿಯ ಕಾಪೆìಂಟರ್‌ ಸಂತೋಷ್‌ ಆಚಾರ್ಯ.

ಅಬ್ಬರ ಕಡಿಮೆ
ಮಲ್ಪೆ ವಡಭಾಂಡೇಶ್ವರದ ಎಲ್‌ಐಸಿ ಏಜೆಂಟ್‌ ರಾಮನಾಥ ಯಾವುದೇ ಪಕ್ಷದ ಕಾರ್ಯಕರ್ತರಲ್ಲ. ಆದರೆ ರಾಜಕೀಯ ಪಕ್ಷಗಳ ದಿನನಿತ್ಯದ ಚಟುವಟಿಕೆಗಳ ಮಾಹಿತಿ ಬರುತ್ತಲೇ ಇದೆಯಂತೆ ಅವರಿಗೆ. ವಾಟ್ಸ್‌ ಆ್ಯಪ್‌, ಫೇಸ್‌ಬುಕ್‌ನಲ್ಲಿ ಚರ್ಚೆ ಜೋರಾಗಿದೆ. ಎಲ್ಲರೂ ಮಾಡುವುದು ಅಪಪ್ರಚಾರವೇ. ನನ್ನ ಪ್ರಕಾರ ಯಾರಿಗೆ ಓಟು ಕೊಡಬೇಕು ಎಂಬುದನ್ನು ಎಲ್ಲರೂ ಈಗಾಗಲೇ ತೀರ್ಮಾನಿಸಿದ್ದಾರೆ. ನಮ್ಮಲ್ಲಿಯೂ ಇತರ ಕೆಲವು ದೇಶಗಳಲ್ಲಿರುವಂತೆ ಸರಳ ಪ್ರಚಾರ ಇರಬೇಕು. ಶಿಕ್ಷಣ ಹೆಚ್ಚಾದಂತೆ ಅದೇ ರೀತಿಯ ವ್ಯವಸ್ಥೆ ಬರಬಹುದು. ಈಗ ಆಯೋಗದ ಕಟ್ಟುನಿಟ್ಟಿ ನಿಂದಾಗಿ ಅಬ್ಬರ ಕಡಿಮೆಯಾಗಿರುವುದು ಒಳ್ಳೆ ಯದೆನಿಸುತ್ತಿದೆ ಎನ್ನುತ್ತಾರೆ ಅವರು.

Advertisement

ಮದುವೆ ಗೌಜಿ
ಕಿನ್ನಿಮೂಲ್ಕಿಯ ಸಾವಿತ್ರಿ ಅವರಿಗೆ ಹತ್ತಿರದ ಸಂಬಂಧಿಯ ಮದುವೆಯ ಬಗ್ಗೆಯೇ ಯೋಚನೆ. ಓಟ್‌ ಹಾಕಬೇಕು. ಆದರೆ ನಾವು ಮದುವೆಯ ಸಿದ್ಧತೆಯಲ್ಲೇ ಇದ್ದೇವೆ. ಸಂಬಂಧಿಕರೂ ಬರುವವರಿದ್ದಾರೆ. ಅವರಿಗೆ ಕೆಲವರಿಗೆ ಇಲ್ಲಿ ಓಟಿಲ್ಲ. ಏನು ಮಾಡುತ್ತಾರೋ ಗೊತ್ತಿಲ್ಲ. ನಮ್ಮ ಮನೆಯಲ್ಲಿ ರಾಜಕೀಯ ಚರ್ಚೆ ನಡೆ ಯದು ಎಂಬುದು ಅವರ ಪ್ರತಿಕ್ರಿಯೆ.

ಮರಳು ಮಾತು
ಗುತ್ತಿಗೆದಾರರು, ನಿರ್ಮಾಣ ಕ್ಷೇತ್ರದಲ್ಲಿ ತೊಡಗಿಸಿಕೊಂಡವರದ್ದು ಮರಳಿನದ್ದೇ ಗೋಳು. ಓಟು ಕೇಳುವವರು ಮೊದಲು ಮರಳು ಕೊಡಲಿ ಎನ್ನುತ್ತಾರೆ ಮಣಿಪಾಲದ ಗುತ್ತಿಗೆದಾರ ರವಿರಾಜ್‌ ಮತ್ತು ಕಾರ್ಮಿಕರ ಗುತ್ತಿಗೆ ವಹಿಸುವ ವೀರೇಶ್‌.

“ನಮಗೆ ಲೋಕಲ್‌ ವಿಚಾರಕ್ಕಿಂತ ರಾಷ್ಟ್ರದ ಸುದ್ದಿ ಬಗ್ಗೆ ಹೆಚ್ಚು ಆಸಕ್ತಿ’ ಎಂದು ನಗು ಸೂಸಿದವರು ನಾಲ್ಕೂರಿನ ವಿಶ್ವನಾಥ ಗಾಣಿಗ. ಇಲ್ಲಿ ಹೆಚ್ಚಿನವರದ್ದು ಕೃಷಿ ಕಾಯಕ. “ಮಳೆ ಯಾವಾಗ ಬರಬಹುದು ಎಂಬುದನ್ನು ಕಾದು ಕೂತಿದ್ದೇವೆ. ಓಟಿನವರು ಅವರ ಕೆಲಸ ಮಾಡುತ್ತಾರೆ. ನಮಗೆ ನಮ್ಮ ಕೆಲಸ’ ಎಂದು ಪಕ್ಕದಲ್ಲಿದ್ದ ಸಂಜೀವ ಪ್ರತಿಕ್ರಿಯಿಸಿದರು.

ರಾಜಕೀಯ ಆಸಕ್ತರಿರುವ ಬ್ರಹ್ಮಾವರ, ಪೇತ್ರಿ, ಕರ್ಜೆ, ಸಂತೆಕಟ್ಟೆ ಮೊದಲಾದೆಡೆ ಸ್ಥಳೀಯರನ್ನು ಮಾತನಾಡಿಸುವಾಗ ಚುನಾವಣೆಯ ಉಮೇದು ಕಂಡು ಬಂತು. “ಚುನಾವಣೆ ಬಂದಾಗ ಜನರು ಬಹಳಷ್ಟು ನಿರೀಕ್ಷಿಸುವುದು ಸಹಜ. ಬೇಡಿಕೆಯಲ್ಲಿ ಅಲ್ಪ ಸ್ವಲ್ಪ ಈಡೇರಿದರೆ ತೃಪ್ತಿ ಕಾಣುವ ಸ್ಥಿತಿ ಇದೆ. ಕೊನೆಗೆ ಎಲ್ಲವನ್ನೂ ಮರೆತು ಮತ್ತೂಂದು ಚುನಾವಣೆ ತನಕ ನಿರೀಕ್ಷೆ ಮುಂದೂಡಬೇಕು’ ಎಂದು ಪುರಂದರ್‌ ವಾರಂಬಳ್ಳಿ ಹೇಳಿದರು.

ಚುನಾವಣೆಯಲ್ಲಿ ಕೋಟ್ಯಂತರ ರೂ. ಖರ್ಚು ಮಾಡಿ ಆಯ್ಕೆಯಾದ ಮೇಲೆ ನೂರು ಪಟ್ಟು ಸಂಪಾದಿಸುವ ಕೆಟ್ಟ ಪದ್ಧತಿ ನಿರ್ಮೂಲನೆಯಾಗ ಬೇಕು ಎನ್ನುವುದು ಬ್ರಹ್ಮಾವರ ಗೂಡ್ಸ್‌ ಟೆಂಪೋ ಚಾಲಕ ಮಾಲಕರ ಸಂಘದ ಅಧ್ಯಕ್ಷ ಸದಾಶಿವ ಶೆಟ್ಟಿ ಹೇರೂರು ಅವರ ಅಭಿಪ್ರಾಯ.

ಮತದಾರರ ಹುಡುಕುತ್ತಾ…
ಬಿಜೆಪಿ 3 ಹಂತಗಳಲ್ಲಿ ಮನೆ ಮನೆ ಪ್ರಚಾರ ನಿಗದಿ ಮಾಡಿದ್ದು, ಎರಡನೇ ಹಂತ ಮುಂದುವರಿದಿದೆ. ಕಾಂಗ್ರೆಸ್‌   ಜೆಡಿಎಸ್‌ ಕೆಲವು ಕಡೆಗಳಲ್ಲಿ ಒಂದಾಗಿ ಪ್ರಚಾರಕ್ಕೆ ಹೋಗುತ್ತಿವೆ. ಕೆಲವೆಡೆ ಎರಡೂ ಪಕ್ಷಗಳ ಕಾರ್ಯಕರ್ತರು ಪ್ರತ್ಯೇಕವಾಗಿ ಮತ ಯಾಚಿಸುತ್ತಿರುವುದು ಕಂಡುಬಂತು.

ಇಲ್ಲೀ ಬಗ್ಗೆ ನಾವು ಮಾತಾಡಲ್ಲ
ಬಾಗಲಕೋಟೆ ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಿಂದ ಬಂದು ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ತಾತ್ಕಾಲಿಕ ವಾಸ್ತವ್ಯ ಹೂಡಿರುವ ಕೂಲಿಕಾರ್ಮಿಕರು ಅವರ ಪಾಡಿಗೆ ಅವರಿದ್ದಾರೆ. ಮತದಾರರ ಜಾಗೃತಿ ಕಾರ್ಯಕ್ರಮಗಳನ್ನು, ಪಕ್ಷಗಳ ಓಡಾಟವನ್ನು ನೋಡುತ್ತಿದ್ದಾರೆ. ಆದರೆ ತಮ್ಮ ಮತದ ಬಗ್ಗೆ ಅವರು ಇನ್ನೂ ಯೋಚಿಸಿಲ್ಲ. ನಾವು ಊರಿಗೆ ಹೋಗುವ ಯೋಚನೆ ಇನ್ನೂ ಮಾಡಿಲ್ಲ. “ಏನಾಗುತ್ತೋ ನೋಡ್ಬೇಕು. ನಮ್ಮತ್ರ ಯಾರೂ ಓಟು ಕೇಳಲೂ ಬರುತ್ತಿಲ್ಲ. ನಮಗೆ ಇಲ್ಲಿ ಓಟಿಲ್ಲ. ಊರಿನ ರಾಜಕೀಯದ ಆಸಕ್ತಿ ಕೆಲವರಿಗಿದೆ. ಇಲ್ಲಿಯ ಬಗ್ಗೆ ನಾವು ಮಾತಾಡಲ್ಲ’ ಎಂದರು ಕಾರ್ಮಿಕ ಶಿವರುದ್ರಪ್ಪ.

ಚಿತ್ರ: ಆಸ್ಟ್ರೋ ಮೋಹನ್‌

Advertisement

Udayavani is now on Telegram. Click here to join our channel and stay updated with the latest news.

Next